ಭಾನುವಾರ, ಏಪ್ರಿಲ್ 18, 2021
33 °C

ಕನ್ನಡ ತಂತ್ರಾಂಶ ಅಭಿವೃದ್ಧಿ: ಶೀಘ್ರವೇ ಸಂಪುಟದ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಸಂಬಂಧಪಟ್ಟ ವಿಚಾರಗಳಿಗೆ ಸದ್ಯದಲ್ಲೇ ಸಚಿವ ಸಂಪುಟದ ಅನುಮೋದನೆ ದೊರೆಯಲಿದೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಹಲವು ವರ್ಷಗಳಿಂದ ಕನ್ನಡ ತಂತ್ರಾಂಶಗಳ ಅಭಿವೃದ್ಧಿಗಾಗಿ ಅನೇಕ ಮಹನೀಯರು ದುಡಿಯುತ್ತಿದ್ದಾರೆ. ಪ್ರೊ.ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ತಂತ್ರಾಂಶ ಅಭಿವೃದ್ಧಿಗೆ ಸರ್ಕಾರ ಮುಂದಡಿ ಇಟ್ಟರೆ ಮಾತ್ರ ರಾಜ್ಯ ಸರ್ಕಾರದ ಸನ್ಮಾನ ಸ್ವೀಕರಿಸುವುದಾಗಿ ಹೇಳಿದ್ದರು. ಈಗ ಇಲಾಖೆ ಸಂಬಂಧಪಟ್ಟ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಒಪ್ಪಿಗೆಗಾಗಿ ಸಂಪುಟದ ಮುಂದೆ ಇಟ್ಟಿದೆ~ ಎಂದು ತಿಳಿಸಿದರು.ಇದಕ್ಕೂ ಮುನ್ನ ಮಾತನಾಡಿದ ಚಂದ್ರಶೇಖರ ಕಂಬಾರ, `ಇಂಗ್ಲಿಷ್ ಭಾಷೆಯಿಂದ ಸಾಮಾಜಿಕ ಮತ್ತು ಔದ್ಯೋಗಿಕ ಸ್ಥಾನಮಾನಗಳನ್ನು ಪಡೆಯಬಹುದು ಎಂಬ ಭ್ರಮೆ ಆವರಿಸಿರುವುದರಿಂದ ಮಾತೃ ಭಾಷೆಯನ್ನು ಮರೆಯುವಂತಾಯಿತು. ಅಭಿಮಾನ ಶೂನ್ಯ ಮನೋಭಾವದಿಂದಲೇ ಕನ್ನಡ ಭಾಷೆ ಸೊರಗಿದೆ~ ಎಂದು ತಿಳಿಸಿದರು.

 

ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್, `ಒಂದು ಭಾಷೆ ಪ್ರಭುತ್ವದ ಆಶ್ರಯ ಪಡೆಯದೇ ಹೋದರೆ ಸ್ವಯಂ ಆಗಿ ಬೆಳೆಯಲು ಅಥವಾ ಉಳಿಯಲು ಸಾಧ್ಯವಿಲ್ಲ. ಪ್ರಸ್ತುತ ದೇಶದಾದ್ಯಂತ ಹೆಚ್ಚಿರುವ ಭಾಷಾ ಮೂಲಭೂತವಾದವನ್ನು ಕೂಡ ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ~ ಎಂದರು. ಕವಿಗಳಾದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಮತ್ತು ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.