ಶನಿವಾರ, ಏಪ್ರಿಲ್ 17, 2021
30 °C

ಕನ್ನಡ ತೇರಿಗೆ ಕೈ ಕೊಟ್ಟಿದ್ದೇ ಹೆಗ್ಗಳಿಕೆ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ನಗರದಿಂದ ಪ್ರಯಾಣ ಬೆಳೆಸಿದ ವಿಶ್ವ ಕನ್ನಡ ತೇರಿಗೆ ಅವಮಾನಿಸುವ ರೀತಿಯಲ್ಲಿ ನಡೆದ ವಿದ್ಯಮಾನಗಳಿಗೆ ಸೋಮವಾರ ಗವಿಮಠದ ಆವರಣ ಸಾಕ್ಷಿಯಾಯಿತು.ಬೆಳಿಗ್ಗೆ 10 ಗಂಟೆಗೆ ತೇರು ಪ್ರಯಾಣ ಬೆಳೆಸುವುದು ನಿಗದಿಯಾಗಿತ್ತು. ಆದರೆ, ಗವಿಮಠದ ಆವರಣಕ್ಕೆ ಬಂದಿದ್ದು ಮಧ್ಯಾಹ್ನ 1.15 ಗಂಟೆಗೆ!

ಆದರೆ, ಗವಿಮಠದ ಆವರಣದಲ್ಲಿ ಜಮಾಯಿಸಿದ್ದ ಕೆಲವೇ ಕೆಲವು ಗಣ್ಯರಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಈ ಸಂಬಂಧ ಮಾಹಿತಿ ನೀಡಲು ಯಾವ ಅಧಿಕಾರಿಯೂ ಸ್ಥಳದಲ್ಲಿ ಇರಲಿಲ್ಲ. ತೇರು ಎಲ್ಲಿದೆ, ಸ್ಥಳಕ್ಕೆ ಬಾರದೇ ಇರಲು ಕಾರಣವೇನು ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡಿದವು. ತಮಗೂ ಈ ವಿಷಯ ಕುರಿತು ಬೇಸರವಾಗಿದೆ. ಹೀಗಾಗಬಾರದು ಎಂದು ಸ್ಥಳಕ್ಕೆ ಮೂರನೇ ಬಾರಿ ಆಗಮಿಸಿದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು ಮಾಧ್ಯಮ ಪ್ರತಿನಿಧಿಗಳಿಗೆ ಎದುರು ಅಸಮಾಧಾನ ವ್ಯಕ್ತಪಡಿಸಿದರು.ಅಲ್ಲದೆ, ತೇರು ನಗರದಲ್ಲಿ ಸಂಚರಿಸುವ ಸಂದರ್ಭದಲ್ಲಿ ‘ಲಂಕಾ ದಹನ’ ಹಾಗೂ ಇತರ ಪೌರಾಣಿಕ ಸನ್ನಿವೇಶಗಳನ್ನು ಅಭಿನಯಿಸಲು ಸ್ಥಳೀಯ ಗವಿಸಿದ್ಧೇಶ್ವರ ಬುಡ್ಗಜಂಗಮ ಕಲಾವಿದರ ಸಂಘದ ಸದಸ್ಯರನ್ನು ಆಹ್ವಾನಿಸಲಾಗಿತ್ತು. ಈ ಕಲಾವಿದರು ಬೆಳಿಗ್ಗೆ 9 ಗಂಟೆಗೇ ಶ್ರೀಮಠದ ಆವರಣಕ್ಕೆ ಆಗಮಿಸಿ, ಮೇಕಪ್ ಮಾಡಿಕೊಂಡು ಸಿದ್ಧರಾಗಿದ್ದರು. ಆದರೆ, ಮಧ್ಯಾಹ್ನ 12 ಗಂಟೆಯಾದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಇತರೇ ಸಂಬಂಧಪಟ್ಟ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಸಂಘದ ಮುಖಂಡ ಬಸವರಾಜ ವಿಭೂತಿ ಬೇಸರ ವ್ಯಕ್ತಪಡಿಸಿದರು.ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯರಾದ ಡಾ.ಉಪೇಂದ್ರ, ವಿರೂಪಾಕ್ಷಪ್ಪ ಮೋರನಾಳ, ಮಹಿಬೂಬ ಹುಸೇನ್ ನಾಲಬಂದ್ ಹಾಜರಿದ್ದರು, ಒಂದೂವರೆ ಗಂಟೆ ಕಾಯ್ದು ಸ್ಥಳದಿಂದ ಕಾಲ್ಕಿತ್ತರು.ಇನ್ನು, ಕಾರ್ಯಕ್ರಮದ ಸಾನಿಧ್ಯ ವಹಿಸಬೇಕಿದ್ದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಸಹ ಕಾದು, ಬೇಸತ್ತು ಕೊನೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ತಾಲ್ಲೂಕಿನ ಲಾಚನಕೇರಿ ಗ್ರಾಮಕ್ಕೆ ತೆರಳಿದರು.ಗವಿಮಠ ಆವರಣಕ್ಕೆ ವಿಶ್ವ ಕನ್ನಡ ತೇರು ಆಗಮಿಸಿದಾಗ ಮಧ್ಯಾಹ್ನ 1.15 ಗಂಟೆ! ತರಾತರಿಯಲ್ಲಿ ಪೂಜೆ ನೆರವೇರಿಸಿ, ಗಡಿಯಾರ ಕಂಬ, ಜವಾಹರ್ ರಸ್ತೆ, ಅಶೋಕ ವೃತ್ತದ ಮೂಲಕ ತೇರು ಸಂಚರಿಸಿ ಆನೆಗೊಂದಿಗೆ ಪ್ರಯಾಣ ಬೆಳೆಸಿತು.ಆದರೆ, ಗವಿಮಠದಿಂದ ಹೊರಟ ತೇರಿನ ಮುಂದೆ ಕೆಲ ದೂರದವರೆಗೆ ಸಾಗಿದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮೂರ್ತಿ, ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರ, ನಗರಸಭೆ ಸದಸ್ಯ ವೀರಣ್ಣ ಹಂಚಿನಾಳ ಹಾಗೂ ಇತರ ಕೆಲ ಅಧಿಕಾರಿಗಳು ನಂತರ ತಮ್ಮ ಕಚೇರಿಗೆ-ಊರಿಗೆ ತೆರಳಿದರು.ತೇರಿನ ಮುಂದೆ ಕೈ ಬೆರಳೆಣಿಕೆಯಷ್ಟು ಜನರನ್ನು ಬಿಟ್ಟರೆ ಯಾರೂ ಇಲ್ಲರಲಿ!ಅಸಮಾಧಾನ: ನಗರ ಸೇರಿದಂತೆ ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆಗಳು ಸಾಕಷ್ಟಿವೆ. ಅದರಲ್ಲೂ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡ ಪರ ಸಂಘಟನೆಗಳ ಸದಸ್ಯರು ಈ ಕಾರ್ಯಕ್ರಮದಿಂದ ದೂರ ಉಳಿದಿದ್ದು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ, 78ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ಜಿಲ್ಲೆಗೆ ಲಭಿಸಿರುವ ಸಂದರ್ಭದಲ್ಲಿ ವಿಶ್ವ ಕನ್ನಡ ತೇರಿನ ಮೆರವಣಿಗೆಗೆ ಪರಿಷತ್ತಿನ ಸದಸ್ಯರು, ಸಾಹಿತಿಗಳು ಹಾಜರಿರದೇ ಇದ್ದುದು ಟೀಕೆಗೆ ಗುರಿಯಾಗಿದೆ.ಈ ಕಾರ್ಯಕ್ರಮ ಕುರಿತಂತೆ ಪೂರ್ವಭಾವಿಯಾಗಿ ಯಾವ ಸಂಘಟನೆಗಳೊಂದಿಗೂ ಸಮಾಲೋಚನೆ ನಡೆಸಿಲ್ಲ ಹಾಗೂ ಆಹ್ವಾನ ಪತ್ರಿಕೆಯನ್ನೂ ನೀಡಿಲ್ಲ ಎಂದು ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು ದೂರಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.