ಬುಧವಾರ, ಏಪ್ರಿಲ್ 21, 2021
30 °C

ಕನ್ನಡ ಥೀಮ್ ಪಾರ್ಕ್ ನಿರ್ಮಾಣ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣಿ ಚನ್ನಮ್ಮ ವೇದಿಕೆ (ಬೆಳಗಾವಿ): ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿ ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನದ ನೆನಪನ್ನು ಚಿರಸ್ಥಾಯಿಯಾಗಿಸುವ ಸಂಕಲ್ಪವನ್ನು ಸರ್ಕಾರ ಮಾಡಿದೆ. ಇದಕ್ಕಾಗಿ ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಸಂದರ್ಭದವರೆಗಿನ ಸಮಗ್ರ ಕರ್ನಾಟಕ ವಿಕಾಸ ಹೊಂದಿದ ಚಿತ್ರಣ ಮತ್ತು ಭವಿಷ್ಯದ ಮಾರ್ಗಸೂಚಕ ವಸ್ತು ಸಂಗ್ರಹಾಲಯ-ಪ್ರಾತ್ಯಕ್ಷಿಕೆಗಳ ಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತದೆ.ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಮಾಡಿದ ಘೋಷಣೆ ಇದು. ‘ಕರ್ನಾಟಕದ ಸಮಗ್ರ ಇತಿಹಾಸ, ಕನ್ನಡ ಭಾಷೆಯ ಉಗಮ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರಂಗಭೂಮಿ, ರಾಜಕೀಯ ಸಾಮಾಜಿಕ ಬೆಳವಣಿಗೆ, ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ, ಸ್ವಾತಂತ್ರ್ಯಾನಂತರದ ಆರು ದಶಕಗಳಲ್ಲಿ ಮಾಡಿದ ಸಾಧನೆ ಮೊದಲಾದವನ್ನು ಈ ಥೀಮ್ ಪಾರ್ಕ್‌ನಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಯುವಪೀಳಿಗೆಗೆ ನಮ್ಮ ನಾಡಿನ ಸಮಗ್ರ ಚಿತ್ರಣವನ್ನು ಹಾಗೂ ಭವಿಷ್ಯದ ಬಗ್ಗೆ ಸುಂದರ ಮುನ್ನೋಟವನ್ನು ಪಾರ್ಕ್ ನೀಡಲಿದೆ’ ಎಂದು ಅವರು ವಿವರಿಸಿದರು.ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆ ಸಂಗಮಿಸುವ ಮಧ್ಯ ಕರ್ನಾಟಕದ ಸ್ಥಳದಲ್ಲಿ ಈ ಪಾರ್ಕ್ ರೂಪುಗೊಳ್ಳಲಿದೆ. ಪಾರ್ಕ್ ರೂಪುರೇಷೆಗಳನ್ನು ಸಿದ್ಧಪಡಿಸಲು ಆಯಾ ಕ್ಷೇತ್ರದ ಪರಿಣಿತರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಯಡಿಯೂರಪ್ಪ ಪ್ರಕಟಿಸಿದರು. ಈ ಪ್ರದರ್ಶನ ಕೇಂದ್ರಕ್ಕೆ ಸಾಕಷ್ಟು ಹಣ ಬೇಕು. ಆದರೆ ಕನ್ನಡದ ಕೆಲಸಕ್ಕೆ ಹಣದ ಕೊರತೆ ಇಲ್ಲ. ಇನ್ನೆರಡು ವರ್ಷಗಳಲ್ಲಿ ಥೀಮ್ ಪಾರ್ಕ್ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.ಕನ್ನಡ ನಾಡು ನುಡಿಗೆ ಸರ್ಕಾರ ಸದಾ ಬದ್ಧ ಎಂದು ಹೇಳಿದ ಅವರು, ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡುವ ಪಣ ತೊಟ್ಟಿರುವುದಾಗಿ ನುಡಿದರು. ಇದುವರೆಗೆ ರಾಜ್ಯದ ಯಾವ ಪ್ರದೇಶಗಳು ಅಭಿವೃದ್ಧಿ ಆಗಿಲ್ಲವೋ ಆ ಪ್ರದೇಶಗಳಿಗೆ ಹೆಚ್ಚಿನ ಮೂಲ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಅವರು ತಿಳಿಸಿದರು.‘ಕನ್ನಡದ, ಕನ್ನಡ ನಾಡಿನ ಹಾಗೂ ಕನ್ನಡಿಗರ ಹಿತ ಕಾಪಾಡುವುದು ನನ್ನ ಆಜೀವ ಧ್ಯೇಯ. ನಾಡಿನ ಭವಿಷ್ಯ ಉತ್ತಮಗೊಳ್ಳಬೇಕು ಎಂಬ ಕನಸನ್ನು ನನಸುಮಾಡುವುದು ನನ್ನ ಜವಾಬ್ದಾರಿ. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಯಾವುದೇ ದಾಕ್ಷಿಣ್ಯಕ್ಕೂ ಬಲಿಯಾಗುವ ವ್ಯಕ್ತಿ ನಾನಲ್ಲ’ ಎಂದು ಮುಖ್ಯಮಂತ್ರಿಗಳು ಭಾವುಕರಾಗಿ ನುಡಿದರು.‘ಕನ್ನಡತ್ವದ ಗರಿಮೆ ಮತ್ತು ನಾಡಿನ ಹಿರಿಮೆ ಬಗ್ಗೆ ಎಲ್ಲರಿಗೂ ಎಚ್ಚರಿಕೆಯ ಪ್ರಜ್ಞೆ ಬೇಕು. ಅನ್ಯಪ್ರಭಾವದ ಬಿರುಗಾಳಿಗೆ ಕನ್ನಡದ ದೀಪ ಆರದಂತೆ ಕಾಪಾಡುವ ಸಂಕಲ್ಪ ತೊಡುವುದರ ಜೊತೆಗೆ ಮುಂದಿನ ಹೆಜ್ಜೆಗಳ ಕುರಿತು ಚಿಂತನೆಯು ನಮಗೆ ಮುಖ್ಯವಾಗಿದೆ. ಕನ್ನಡ ಪ್ರಜ್ಞೆ ಒಂದು ಅಂತಃಶಕ್ತಿಯಾಗಬೇಕು. ಇದು ಕನ್ನಡಿಗರಿಗೆ ಬೇಕಾದುದನ್ನು ಗಳಿಸಿಕೊಡುವ ಕಾಮಧೇನು ಆಗಬೇಕು. ಈ ಹಿನ್ನೆಲೆಯಲ್ಲಿ ಕನ್ನಡದ ಎಲ್ಲ ಮನಸ್ಸುಗಳು ಒಂದಾಗುವಂತೆ ಪ್ರೇರೇಪಿಸುವುದು ವಿಶ್ವ ಕನ್ನಡ ಸಮ್ಮೇಳನದ ಗುರಿ’ ಎಂದು ಅವರು ಒತ್ತಿ ಹೇಳಿದರು.‘ಕನ್ನಡ ಪರಂಪರೆಯ ಹೆಗ್ಗುರುತುಗಳಾದ ಸಹನೆ, ಸಂಯಮ ಮತ್ತು ಸಮಾಧಾನವನ್ನು ಕೈಬಿಡದೇ ಸ್ವಾಭಿಮಾನದಿಂದ ಎಲ್ಲರನ್ನೂ ಒಳಗೊಳ್ಳುವ ಹಾಗೂ ಎಲ್ಲರೊಂದಿಗೂ ಬೆಳೆದು ಬದುಕುವ ಉದಾರ- ವಿಶಾಲ ಮನಸ್ಸಿನೊಂದಿಗೆ ನಮ್ಮತನವನ್ನು ಕಾಯ್ದುಕೊಳ್ಳಬೇಕು’ ಎಂದು ಯಡಿಯೂರಪ್ಪ ಕಳಕಳಿಯಿಂದ ನುಡಿದರು. ಗಂಡು ಮೆಟ್ಟಿನ ನೆಲ ಬೆಳಗಾವಿಯಲ್ಲಿ ನಡೆಯುತ್ತಿರುವ ಮಹಾ ಯಜ್ಞ ಈ ವಿಶ್ವ ಕನ್ನಡ ಸಮ್ಮೇಳನ ಎಂದು ಅವರು ವರ್ಣಿಸಿದರು.ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನ ನೆನಪಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಲಾಲ್‌ಬಾಗ್ ಮಾದರಿಯ ಸುಂದರ ಉದ್ಯಾನವನ್ನು ನಗರದಲ್ಲಿ ನಿರ್ಮಿಸಲಾಗುವುದು. ಇದಕ್ಕೆ ಸಮ್ಮೇಳನ ಪಾರ್ಕ್ ಎಂದೇ ಹೆಸರಿಡಲಾಗುವುದು ಎಂದು ಅವರು ಪ್ರಕಟಿಸಿದರು.ಬೆಳಗಾವಿಯಲ್ಲಿ ನಿರ್ಮಾಣ ಆಗುತ್ತಿರುವ ಸುವರ್ಣ ವಿಧಾನಸೌಧ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ನಂತರ ಪ್ರತಿ ವರ್ಷ ಈ ನಗರದಲ್ಲಿ ವಿಧಾನ ಮಂಡಲ ಅಧಿವೇಶನವನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

ಬಿಡುಗಡೆ: ಸಮ್ಮೇಳನದ ಅಂಗವಾಗಿ ‘ಪುನರಾವಲೋಕನ’, ವೈದ್ಯ ಸಾಹಿತ್ಯ, ಕಾದಂಬರಿಗಳು, ಪ್ರಭುದೇವರ ಶೂನ್ಯ ಸಂಪಾದನೆ, ವಿಚಾರ ಸಾಹಿತ್ಯ ಮಾಲಿಕೆ, ಕಥಾ ಸಂಕಲನ, ಪ್ರಬಂಧಗಳು, ನಾಟಕಗಳು, ಜಾನಪದ ಕೃತಿಗಳು, ಜಾನಪದ ಕಥನ, ಯಕ್ಷಗಾನ, ಬೆಳಗಾವಿ ಸಂಸ್ಕೃತಿ, ಕನ್ನಡ ಬೆಳ್ಳಿಪರದೆ ಕಥೆ, ದಿನದರ್ಶಿಕೆ, ಹಚ್ಚೇವು ಕನ್ನಡದ ದೀಪ ಗೀತೆಗಳ ಸಿ,ಡಿ., ದಿನದರ್ಶಿಕೆ, ಕಾದಂಬರಿಗಳ ಆಡಿಯೊ ಬಿಡುಗಡೆಗೊಂಡವು.ಇವುಗಳನ್ನು ಡಾ. ಯು.ಆರ್. ಅನಂತಮೂರ್ತಿ, ಡಾ. ಸುದರ್ಶನ, ಸುಧಾ ಮೂರ್ತಿ, ಕ್ಯಾಪ್ಟನ್ ಗೋಪಿನಾಥ, ಕೆ.ಎಸ್. ನಿಸಾರ್ ಅಹಮದ್, ಬಿ.ಸರೋಜಾದೇವಿ, ಚನ್ನವೀರ ಕಣವಿ, ಏಣಗಿ ಬಾಳಪ್ಪ, ಚಂದ್ರಶೇಖರ ಕಂಬಾರ, ಸಿದ್ದರಾಮಯ್ಯ, ಅಮರನಾಥಗೌಡ, ಬಿ.ಆರ್. ಶೆಟ್ಟಿ, ಗಿರೀಶ ಕಾಸರವಳ್ಳಿ, ಜಯಂತಿ, ಡಾ. ನೀರಜ್ ಪಾಟೀಲ, ಭಾರತಿ ವಿಷ್ಣುವರ್ಧನ ಬಿಡುಗಡೆಗೊಳಿಸಿದರು. ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಧ್ಯಕ್ಷ ಪ್ರಭಾಕರ ಕೋರೆ ಪ್ರಾಸ್ತಾವಿಕ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ಸಚಿವರಾದ ಉಮೇಶ ಕತ್ತಿ, ಗೋವಿಂದ ಕಾರಜೋಳ, ಜಿಲ್ಲೆಯ ಶಾಸಕರು ಮೊದಲಾದವರು ಹಾಜರಿದ್ದರು.‘ಕನ್ನಡಿಗರ ಅಭಿವೃದ್ಧಿ ಆದಾಗ ಸಮ್ಮೇಳನಕ್ಕೆ ಅರ್ಥ’

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದು ಇನ್ನೂ ಘೋಷಣೆಯ ರೂಪದಲ್ಲೇ ಉಳಿದಿದೆ. ಎಲ್ಲ ಕನ್ನಡಿಗರ ಬದುಕು ಹಸನಾಗಬೇಕು ಎಂಬುದು ಆಶಯ ರೂಪದಲ್ಲೇ ಇದೆ. ಹೀಗೆಂದು ಅತ್ಯಂತ ನೋವಿನಿಂದ ಹೇಳಿದವರು ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ.ವಿಶ್ವ ಕನ್ನಡ ಸಮ್ಮೇಳನದಲ್ಲಿ ನೂರ ಒಂದು ಮೇರು ಕೃತಿಗಳನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು ಯುವ ಪೀಳಿಗೆಯಲ್ಲಿ ಕನ್ನಡ ಉಳಿಯುತ್ತಿಲ್ಲ ಎಂಬ ವಿಷಾದವನ್ನೂ ವ್ಯಕ್ತಪಡಿಸಿದರು.ಜಾಗತೀಕರಣ, ಕೋಮುವಾದ, ಭ್ರಷ್ಟಾಚಾರ ಮೊದಲಾದ ನಕಾರಾತ್ಮಕ ಸಂಗತಿಗಳು ಹೆಚ್ಚುತ್ತಿವೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ. ಬಡವರ ಗೋಳನ್ನು ಕೇಳುವರಿಲ್ಲದಂತಾಗಿದೆ. ಎಲ್ಲ ಕನ್ನಡಿಗರಿಗೂ ಧ್ವನಿ ಬಂದ ನಂತರ, ಸಹನೀಯ ಬದುಕು ದೊರೆತ ನಂತರ ಕನ್ನಡದ ಸಂಪೂರ್ಣ ಅಭಿವೃದ್ಧಿ ಸಾಧ್ಯ. ಕನ್ನಡದ ಹಾಗೂ ಮುಖ್ಯವಾಗಿ ಕನ್ನಡಿಗರ ಸಮಗ್ರ ಅಭಿವೃದ್ಧಿ ಆಗುವಂತಾದರೆ ಮಾತ್ರ ವಿಶ್ವ ಕನ್ನಡ ಸಮ್ಮೇಳನದ ಆಶಯಕ್ಕೆ ಅರ್ಥ ಬರುತ್ತದೆ. ಇಲ್ಲವಾದರೆ ಇದೂ ಒಂದು ಸಮ್ಮೇಳನವಾಗಿ ಮಾತ್ರ ಉಳಿದು ಬಿಡುತ್ತದೆ. ವಿಶ್ವ ಎಂಬುದು ಭಾಷೆಯಲ್ಲಿ ಮಾತ್ರ ಉಳಿಯುವಂತಾಗುತ್ತದೆ ಎಂದು ಶಿವರುದ್ರಪ್ಪ ಕಳಕಳಿ ವ್ಯಕ್ತಪಡಿಸಿದರು.

‘ಕನ್ನಡಿಗರ ರಾಜಕೀಯ ಪಕ್ಷ ಬೇಕು’

ರಾಣಿ ಚನ್ನಮ್ಮ ವೇದಿಕೆ (ಬೆಳಗಾವಿ): ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರೋಕ್ಷವಾಗಿ ಕನ್ನಡಿಗರದ್ದೇ ಆದ ಪ್ರಾದೇಶಿಕ ಪಕ್ಷ ರಚನೆಯ ಪ್ರಸ್ತಾಪವನ್ನು ಮಾಡಿದ್ದು ವಿಶೇಷ.‘ಕನ್ನಡವೇ ಒಂದು ರಾಜಕೀಯ ಶಕ್ತಿ ಆಗಬೇಕು. ರಾಜಕೀಯ ತತ್ವ ಸಿದ್ಧಾಂತಗಳನ್ನು ಮೀರಿ ಕನ್ನಡ ಮತ್ತು ಕನ್ನಡತನ ಒಂದೇ ಪಕ್ಷಾತೀತ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವ ಅಗತ್ಯವಿದೆ. ಕನ್ನಡವು ಒಂದು ರಾಜಕೀಯ ಸಂಕೇತವಾಗದ ಹೊರತು, ಒಂದು ರಾಜಕೀಯ ಶಕ್ತಿಯಾಗಿ ಬೆಳೆಯದ ಹೊರತು ಕನ್ನಡಿಗರಿಗೆ ಪೂರ್ಣವಾಗಿ ನ್ಯಾಯ ಲಭಿಸುವುದಿಲ್ಲ.ಈ ಅರಿವು ಎಲ್ಲರಲ್ಲೂ ಮೂಡಬೇಕಾಗಿದೆ. ಇದನ್ನು ಮನಗಾಣಿಸಲು ವಿಶ್ವ ಕನ್ನಡ ಸಮ್ಮೇಳನ ತಕ್ಕ ವೇದಿಕೆ. ರಾಜ್ಯದ ಆಡಳಿತ ಸೂತ್ರ ಹಿಡಿದವರು ಇದಕ್ಕಾಗಿ ದೂರದೃಷ್ಟಿ ಮತ್ತು ಮುತ್ಸದ್ದಿತನ ಪ್ರದರ್ಶನ ಮಾಡಬೇಕು. ಇದುವರೆಗೆ ಇಂತಹ ಮುತ್ಸದ್ದಿತನ ನಿರೀಕ್ಷಿತ ಮಟ್ಟದಲ್ಲಿ ಕಂಡು ಬಂದಿಲ್ಲ. ನಾನು ಹೀಗೆ ಪ್ರಸ್ತಾಪಿಸಿದಾಗ ಯಾರೂ ರಾಜಕೀಯ ಬಣ್ಣ ನೀಡಬೇಡಿ’ ಎಂದು ಮುಖ್ಯಮಂತ್ರಿ ಹೇಳಿದರು.ಕರ್ನಾಟಕದಲ್ಲಿ ಈಗ ಅಭಿವೃದ್ಧಿಯ ಹೊಸ ಗಾಳಿ ಬೀಸುತ್ತಿದೆ. ರೈತರು ಹಾಗೂ ನಾಡಿನೆಲ್ಲರ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿಯಾಗಿದೆ. ಹಿಂದಿನ ಸರ್ಕಾರಗಳು ಕೈಗೊಂಡಿದ್ದ ಎಲ್ಲ ಜನಪರ ಕೆಲಸಗಳನ್ನೂ ಮುಂದುವರಿಸಲಾಗುತ್ತಿದೆ ಎಂದು ಅವರು ನುಡಿದರು.ಹೊಸದೊಂದ ನಾಡು ಕಟ್ಟುವೆವು ತಾಯಿ, ಬೆನ್ನು ತಟ್ಟಿ ನಮ್ಮನ್ನು ಮುಂದೆ ಕಳಿಸು ಎಂದು ಅವರು ಕನ್ನಡಾಂಬೆಗೆ ಪ್ರಾರ್ಥಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.