ಶುಕ್ರವಾರ, ಡಿಸೆಂಬರ್ 6, 2019
24 °C

ಕನ್ನಡ ನುಡಿತೇರು

Published:
Updated:
ಕನ್ನಡ ನುಡಿತೇರು

ನರಕಕ್ಕಿಳ್ಸಿ ನಾಲ್ಗೇ ಸೀಳ್ಸಿ ಬಾಯ್  ಒಲ್ಸಾಕಿದ್ರೂನೆ

ಮೂಗ್ನಲ್ ಕನ್ನಡ್ ಪದವಾಡ್ತೀನಿ ನನ್ ಮನ್‌ಸನ್ನೀಕಾಣೆ

ಎಂಡಾ ಓಗ್ಲಿ ಎಂಡತಿ ಓಗ್ಲಿ ಎಲ್ಲಾ ಕೊಚ್‌ಕೊಂಡ್ ಓಗ್ಲಿ

ಪರಪಂಚ್ ಇರೋತನ್ಕಾ ಮುಂದೆ ಕನ್ನಡ್ ಪದಗೋಳ್ ನುಗ್ಲಿ...

ಮುಕ್ಕಾಲು ಶತಮಾನದ ಹಿಂದೆ  ಜಿ. ಪಿ. ರಾಜರತ್ನಂ ಈ ಪದ್ಯ ಬರೆಯುವಾಗ ಯಾವ ಸಂಕಟ ಅನುಭವಿಸಿದ್ದರೋ..? ಸರ್ವಂ ಇಂಗ್ಲಿಷ್‌ಮಯವಾಗಿರುವ ಬೆಂಗಳೂರಿನಲ್ಲಿ ಅಚ್ಚ ಕನ್ನಡದ ಮನಸ್ಸು ಒಮ್ಮೆಯಾದರೂ ಇಂಥ ಸಂಕಟಕ್ಕೆ ಸಿಲುಕುತ್ತದೆ. ಇನ್ನೇನು ಕೆಲವೇ ಶತಮಾನಗಳಲ್ಲಿ ಕನ್ನಡ ಗತ ಭಾಷೆಯಾದೀತೆ ಎಂಬ ಆತಂಕ ಎದೆ ನಡುಗಿಸುತ್ತದೆ.

ಆದರೆ, ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನುಗ್ಗುವ ಕನ್ನಡಿಗರನ್ನು, ಕನ್ನಡ ಪುಸ್ತಕಗಳನ್ನು ಮುಗಿಬಿದ್ದು ಖರೀದಿಸುವವರನ್ನು, ಬ್ಲಾಗ್‌ಗಳಲ್ಲಿ ಪುಂಖಾನುಪುಂಖವಾಗಿ ಬರೆಯುತ್ತಿರುವವರನ್ನು ನೋಡಿದಾಗ ‘ಕನ್ನಡ ಇನ್ನೂ ಹಸಿರಾಗಿದೆ, ಹಲವರ ಉಸಿರಾಗಿದೆ’ ಎಂಬ ನೆಮ್ಮದಿಯೂ ಮೂಡುತ್ತದೆ.

ಕನ್ನಡದ ಮೇಲಿನ ಈ ಅಭಿಮಾನವನ್ನು ಮನೆಯೊಳಗೆ ಮಾತ್ರ ಪ್ರಕಟಿಸಬೇಡಿ. ಕನ್ನಡ ಕೇವಲ ಮನೆಭಾಷೆಯಾಗಿ ಉಳಿಯುವುದು ಬೇಡ. ಅದು ನಿಮ್ಮ ಬೀದಿ ಭಾಷೆಯಾಗಲಿ. ಬಡಾವಣೆಯ ಭಾಷೆಯಾಗಲಿ ಅನ್ನುತ್ತಿದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ. ಅದಕ್ಕಾಗಿ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ಕನ್ನಡ ನುಡಿತೇರು’ ಎಳೆಯಲು ಹೊರಟಿದೆ. ಈ ಜಾಗೃತಿ ಜಾಥಾ ಜ. 15ರಿಂದ 21ರವರೆಗೆ ಅಂದರೆ  ಶನಿವಾರದಿಂದ ಮುಂದಿನ ಶುಕ್ರವಾರದವರೆಗೆ ವಿವಿಧ ಬಡಾವಣೆಗಳಲ್ಲಿ  ಸಂಚರಿಸಲಿದೆ.

ಏನೇನಿದೆ?

ಕನ್ನಡದ ನುಡಿತೇರಿನಲ್ಲಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಹಿರಿಮೆಯನ್ನು ಸಾರುವ ಅಂಶಗಳಿವೆ. ನುಡಿತೇರಿನ ಮುಂಭಾಗದಲ್ಲಿ ಭುವನೇಶ್ವರಿ ದೇವಿ ಆಸೀನಳಾಗಿರುತ್ತಾಳೆ. ಮೇಲೆ ರಾಜ್ಯ ಸರ್ಕಾರದ ಲಾಂಛನ. ಅದರ ಇಕ್ಕೆಲಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನಗಳು. ಕನ್ನಡದ ಬಾವುಟ ತೇರಿನ ಮೇಲೆ ಹಾರಾಡುತ್ತಿರುತ್ತದೆ. ಕರ್ನಾಟಕವನ್ನು ಆಳಿದ ಕದಂಬ, ಗಂಗ, ಚಾಲುಕ್ಯ, ಕಲಚೂರ್ಯ, ಸೇವುಣ, ಹೊಯ್ಸಳ, ವಿಜಯನಗರ, ಮೈಸೂರು ರಾಜಮನೆತನಗಳ ಲಾಂಛನಗಳನ್ನು ನುಡಿತೇರಿಗೆ ಗಾಲಿಯಂದದಿ ಕಾಣುವಂತೆ ಅಳವಡಿಸಲಾಗಿದೆ. ತೇರಿನ ಮಧ್ಯದ ಮಂಟಪದಲ್ಲಿ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನದ ಪ್ರತಿಕೃತಿ. ಅದರ ಮುಂಭಾಗದಲ್ಲಿ 30 ಜಿಲ್ಲೆಗಳನ್ನೊಳಗೊಂಡ ಕರ್ನಾಟಕದ ಭೂಪಟ. ಈ ಫಲಕದ ಹಿಂಭಾಗದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಪ್ತ ಸೂತ್ರಗಳನ್ನು ಬರೆಯಲಾಗಿದೆ.

ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ ಇತ್ಯಾದಿ ಜಾನಪದ ಕಲಾ ತಂಡಗಳನ್ನು ಕರೆಯಿಸಲಾಗಿದೆ. ಈ ಕಲಾ ತಂಡಗಳು ನುಡಿತೇರಿನ ಮುಂದೆ ತಮ್ಮ ಕಲೆ ಪ್ರದರ್ಶಿಸುತ್ತ ಮೆರವಣಿಗೆ ಹೊರಟಿರುತ್ತವೆ. ತೇರಿನ ಹಿಂದೆ ಎರಡು ವಾಹನಗಳ ಮೇಲೆ ವೇದಿಕೆಗಳು ಇರುತ್ತವೆ. ಒಂದರಲ್ಲಿ ಕನ್ನಡ ಸಾಹಿತಿಗಳು, ರಂಗಕರ್ಮಿಗಳು, ಸಿನಿಮಾ, ಕಿರುತರೆ ತಾರೆಯರು ಇರುತ್ತಾರೆ. ಮತ್ತೊಂದರಲ್ಲಿ ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳು ಇರುತ್ತಾರೆ. ಪ್ರತಿ ಕ್ಷೇತ್ರದ ಪ್ರಮುಖ ವೃತ್ತಗಳಲ್ಲಿ ಈ ನುಡಿತೇರು ನಿಲ್ಲುತ್ತದೆ. ಅಲ್ಲಿ  ಉಪನ್ಯಾಸ, ಸಂಗೀತ ಕಾರ್ಯಕ್ರಮ.

ಬೆಂಗಳೂರಿನಲ್ಲಿ ಕಾರ್ಯಕ್ರಮ ಮುಗಿದ ತಕ್ಷಣ. ವಿಶ್ವ ಕನ್ನಡ ಸಮ್ಮೇಳನ ನಡೆಯಲಿರುವ ಬೆಳಗಾವಿಯಲ್ಲಿ ನುಡಿತೇರು ಸಂಚರಿಸಲಿದೆ. ಆನಂತರ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಕೊಂಡೊಯ್ಯುವ ಆಶಯವಿದೆ ಎನ್ನುತ್ತಾರೆ ಕನ್ನಡ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು.

ನುಡಿತೇರಿನ ಹಾದಿ

ಕನ್ನಡ ನುಡಿಯ ಇಂಪನ್ನು ಅನ್ಯಭಾಷಿಕರಿಗೆ ಮುಟ್ಟಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ನಗರದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರಕವಾಗಿ ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದಿನಿಂದ ಏಳು ದಿನಗಳ ಕಾಲ ಕನ್ನಡದ ನುಡಿ ತೇರು ಸಂಚರಿಸಲಿದೆ.

 ಕಾಸ್ಮೋಪಾಲಿಟನ್ ನಗರವಾದ ಬೆಂಗಳೂರಿನಲ್ಲಿ ಕನ್ನಡ ಹೊರತುಪಡಿಸಿ 68 ಭಾಷೆಗಳನ್ನಾಡುವ ಜನರಿದ್ದಾರೆ. ಪಕ್ಕದ ತಮಿಳು, ತೆಲುಗು, ಮಲಯಾಳಂ ಅಥವಾ ಇತರ ದೇಶೀಯ ಭಾಷೆಗಳಾದ ಮರಾಠಿ, ಹಿಂದಿ, ಬಿಹಾರಿ ಗುಜರಾತಿ ಅಷ್ಟೇ ಅಲ್ಲ, ಜರ್ಮನಿ, ಫ್ರೆಂಚ್, ಚೀನಿ, ಟಿಬೆಟಿಯನ್, ಅರೆಬಿಕ್ ಇತ್ಯಾದಿ ಜಗತ್ತಿನ ಹಲವು ಭಾಷೆ ಆಡುವವರು ಇಲ್ಲಿನ ಜನಸಾಗರದಲ್ಲಿ ಬೆರೆತುಹೋಗಿದ್ದಾರೆ.

‘ಆದರೆ, ಇವರೆಲ್ಲ ಕನ್ನಡ ಕಲಿಯುವುದು ಹೋಗಲಿ, ಈ ನೆಲದ ಭಾಷೆಯ ಬಗ್ಗೆ ಅರಿಯುವ ಅಲ್ಪ ಪ್ರಯತ್ನವನ್ನೂ ಮಾಡುವುದಿಲ್ಲ. ಕನ್ನಡ ಬರದೇ ಇದ್ದರೂ ಅವರ ಬದುಕು ನಿರಾತಂಕವಾಗಿ ಸಾಗಿ ಹೋಗುತ್ತದೆ. ಬೇರೆ ಭಾಷೆಯನ್ನು, ಭಾಷೆಯವರನ್ನು ನಾವು ದ್ವೇಷಿಸುವುದು ಬೇಡ. ಆದರೆ, ಅವರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಬೇಕು. ಅದರ ಜತೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು. ನಿಮ್ಮ ಬಡಾವಣೆಯಲ್ಲಿ ಯಾವುದೋ ಅಂಗಡಿಯಲ್ಲಿ ಕನ್ನಡ ನಾಮಫಲಕ ಇಲ್ಲದಿದ್ದಲ್ಲಿ ಸುಮ್ಮನೇ ಕುಳಿತುಕೊಳ್ಳಬೇಡಿ. ಆ ಅಂಗಡಿಯವನನ್ನು ಪ್ರಶ್ನಿಸಿ. ಅಂಗಡಿಯಾತ ಕನ್ನಡದಲ್ಲಿ ಮಾತನಾಡದಿದ್ದಲ್ಲಿ ಸಾಮಗ್ರಿ ಕೊಳ್ಳಬೇಡಿ. ಆಗ ಕನ್ನಡ ಚಿಗುರುತ್ತದೆ’ ಎನ್ನುತ್ತಾರೆ ಈ ಯಾತ್ರೆಯ ರೂವಾರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು.

ಶನಿವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಂದ ‘ನುಡಿತೇರು’ ಜಾಗೃತಿ ಜಾಥಾ ಉದ್ಘಾಟನೆ. ನೇತೃತ್ವ: ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಮತ್ತು ನಾಡೋಜ ಜಿ. ವೆಂಕಟಸುಬ್ಬಯ್ಯ. ಸಮ್ಮುಖ: ಡಿ. ಎಚ್. ಶಂಕರಮೂರ್ತಿ, ಕೆ.ಜಿ. ಬೋಪಯ್ಯ.

ಸ್ಥಳ: ವಿಧಾನಸೌಧದ ಮುಂಭಾಗ. ಮಧ್ಯಾಹ್ನ 3.30.

ಗಾಂಧಿನಗರ ಕ್ಷೇತ್ರ: ಮಧ್ಯಾಹ್ನ 4ರಿಂದ ಜಾಥಾ. ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಜಿ.ರಸ್ತೆ ಮೂಲಕ ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಕೆ. ಆರ್. ಮಾರ್ಕೆಟ್ ವೃತ್ತ.

ಚಿಕ್ಕಪೇಟೆ ಕ್ಷೇತ್ರ: ಸಂಜೆ 5ರಿಂದ ಜಾಥಾ. ಕೆ. ಆರ್. ಮಾರ್ಕೆಟ್‌ನಿಂದ ಹೈದರಾಲಿ ಖಾನ್ ರಸ್ತೆ, ಸಜ್ಜನರಾವ್ ಸರ್ಕಲ್, ವಿವಿ ಪುರಂ ಕಾಲೇಜು, ಬುಲ್‌ಟೆಂಪಲ್ ರಸ್ತೆ (ಉಮಾ ಟಾಕೀಸ್), ರಾಮಕೃಷ್ಣ ಆಶ್ರಮ, ಗಾಂಧಿಬಜಾರ್ ಮುಖ್ಯ ರಸ್ತೆ, ಡಿವಿಜಿ ರಸ್ತೆ. ನೆಟ್ಟಕಲ್ಲಪ್ಪ ವೃತ್ತದಲ್ಲಿ ಜಾಥಾ ಮುಕ್ತಾಯ, ಸಭೆ.

ಭಾನುವಾರ ರಾಜಾಜಿನಗರ ಕ್ಷೇತ್ರ: ಬೆಳಿಗ್ಗೆ 10ರಿಂದ ಜಾಥಾ. ರಾಮಮಂದಿರದಿಂದ ಭಾಷ್ಯಂ ವೃತ್ತ, ಇಎಸ್‌ಐ ಆಸ್ಪತ್ರೆ, ಶಿವನಹಳ್ಳಿ, ಮಂಜುನಾಥನಗರ, ಬಸವೇಶ್ವರನಗರ, ಶಂಕರಮಠ. ಸಭೆ: ಮಂಜುನಾಥನಗರ ಪುಷ್ಪಾಂಜಲಿ ಚಿತ್ರಮಂದಿರದ ಬಳಿ.

ಮಹಾಲಕ್ಷ್ಮೀ ಲೇಔಟ್: ಬೆಳಿಗ್ಗೆ 11.30ರಿಂದ ಜಾಥಾ. ಶಂಕರಮಠ, ವೃಷಭಾವತಿನಗರ ಆಂಜನೇಯ ದೇವಸ್ಥಾನ, ಕಮಲಾನಗರ ಮಾರ್ಕೆಟ್, ಕುರುಬರಹಳ್ಳಿ ಸರ್ಕಲ್, ನಂದಿನಿ ಬಡಾವಣೆ, ಮಾರಪ್ಪನಪಾಳ್ಯ, ಮಹಾಲಕ್ಷ್ಮಿ ಲೇಔಟ್, ಪಂಚಮುಖಿ ನಗರ, ನಾಗಪುರ 1ನೇ ಬ್ಲಾಕ್, ಮೋದಿ ಆಸ್ಪತ್ರೆ ರಸ್ತೆ. ಜಿ.ಡಿ. ನಾಯ್ಡು ಹಾಲ್. ಸಭೆ: ಕುರುಬರಹಳ್ಳಿ ಸರ್ಕಲ್.

ಮಲ್ಲೇಶ್ವರಂ ಕ್ಷೇತ್ರ: ಮಧ್ಯಾಹ್ನ 3.30ರಿಂದ ಜಾಥಾ. ಮಲ್ಲೇಶ್ವರಂ ವೃತ್ತದಿಂದ ಸಂಪಿಗೆ ರಸ್ತೆ ಮೂಲಕ ಯಶವಂತಪುರ ಸರ್ಕಲ್, ಮತ್ತಿಕೆರೆ 1ನೇ ಮುಖ್ಯರಸ್ತೆ

ಸಭೆ: ಮತ್ತಿಕೆರೆ ಬಸ್ ನಿಲ್ದಾಣ.

ಹೆಬ್ಬಾಳ ಕ್ಷೇತ್ರ: ಸಂಜೆ 5ರಿಂದ ಜಾಥಾ. ಬಿ.ಇ.ಎಲ್. ರಸ್ತೆ, ರಾಮಯ್ಯ ಆಸ್ಪತ್ರೆ ಎದುರು ರಸ್ತೆ, ಅಶ್ವತ್ಥ ನಗರ, ಬಳ್ಳಾರಿ ರಸ್ತೆ, ಗಂಗಾನಗರ. ಸಭೆ: ಅಶ್ವತ್ಥನಗರ.

ಪ್ರತಿಕ್ರಿಯಿಸಿ (+)