ಕನ್ನಡ ಪಿಎಚ್‌ಡಿ ಪ್ರವೇಶ ಗೊಂದಲ

ಭಾನುವಾರ, ಮೇ 19, 2019
32 °C

ಕನ್ನಡ ಪಿಎಚ್‌ಡಿ ಪ್ರವೇಶ ಗೊಂದಲ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗುವ ಆಶಯದೊಂದಿಗೆ ಸ್ಥಾಪನೆಯಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕುಲಪತಿ ಹುದ್ದೆ ಖಾಲಿಯಾಗಿ ತಿಂಗಳು ಕಳೆಯಿತು. ಇದೀಗ ವಿವಿಧ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದ್ದು, ಪ್ರತಿ ಹಂತದಲ್ಲೂ ಪಾರದರ್ಶಕತೆಯನ್ನು ಪ್ರತಿ ವಿಭಾಗಗಳು ಕಾಯ್ದುಕೊಂಡಿವೆ. ಆದರೆ ಕನ್ನಡ ವಿಭಾಗ ಮಾತ್ರ ವಿಭಿನ್ನ ನಿಲುವು ತಾಳುವ ಮೂಲಕ ಪಿಎಚ್‌ಡಿ ಸ್ಥಾನ ಹಂಚಿಕೆಯಲ್ಲಿ ಗೊಂದಲ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ!ಕನ್ನಡ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ಪ್ರವೇಶ ಪರೀಕ್ಷೆ ಮೂಲಕ ಒಟ್ಟು ಆರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಸ್ನಾತಕೋತ್ತರದಲ್ಲಿ ಪಡೆದುಕೊಂಡ ಅಂಕ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ವಿವರವನ್ನು ನೋಟಿಸ್ ಬೋರ್ಡ್‌ಗೆ ಅಳವಡಿಸಿ ಪಾರದರ್ಶಕತೆ ಮೆರೆದಿರುವ ವಿಭಾಗವು, ಮೌಖಿಕ ಸಂದರ್ಶನಕ್ಕೆ ಮೀಸಲಾಗಿದ್ದ 50 ಅಂಕಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡದೆ, ಆಯ್ಕೆಯಲ್ಲಿ ವ್ಯತ್ಯಾಸ ಮಾಡಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದೆ. `ಸ್ನಾತಕೋತ್ತರ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರನ್ನು ಆಯ್ಕೆಯಿಂದ ಕೈಬಿಟ್ಟಿರುವ ವಿಭಾಗದ ಪ್ರಮುಖರು, ಕಡಿಮೆ ಅಂಕಗಳಿಸಿದವರನ್ನು ಆಯ್ಕೆಮಾಡಿಕೊಂಡಿದೆ. ಈ ಮೂಲಕ ಕೇಂದ್ರೀಯ ವಿವಿ ಪಾರದರ್ಶಕ ನೀತಿಯನ್ನು ಕನ್ನಡ ವಿಭಾಗದ ಮುಖ್ಯಸ್ಥರು ಗಾಳಿಗೆ ತೂರಿದ್ದಾರೆ~ ಎಂದು ಸ್ಥಾನ ವಂಚಿತ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.ವಿದ್ಯಾರ್ಥಿ ಸ್ನಾತಕೋತ್ತರದಲ್ಲಿ ಪಡೆದ ಅಂಕಗಳ ಶೇ 50ರಷ್ಟು, ಪ್ರವೇಶ ಪರೀಕ್ಷೆಯಲ್ಲಿನ ಅಂಕಗಳು ಮತ್ತು ಮೌಖಿಕ ಸಂದರ್ಶನದ ಅಂಕಗಳನ್ನು ಒಟ್ಟುಗೂಡಿಸಿ ಅಭ್ಯರ್ಥಿಗಳ ಆಯ್ಕೆ ನಡೆಸಲಾಗಿದೆ.ಒಟ್ಟು ಆರು ಪಿಎಚ್‌ಡಿಗೆ ಸ್ಥಾನಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ ಮೂರು ಸ್ಥಾನ, ಮೀಸಲಾತಿ ನಿಯಮದ ಪ್ರಕಾರ ಓಬಿಸಿ, ಎಸ್‌ಟಿ ಹಾಗೂ ಎಸ್‌ಸಿಗೆ ತಲಾ ಒಂದು ಸ್ಥಾನ ಹಂಚಿಕೆ ಮಾಡಲಾಗಿದೆ. ಇದೀಗ ಸಾಮಾನ್ಯ ಸ್ಥಾನದಲ್ಲಿ ಎರಡು ಓಬಿಸಿ, ಒಂದು ಎಸ್‌ಸಿ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಲಾಗಿದೆ.ವಿವಾದದ ಮೂಲ: ಅಂಕಪಟ್ಟಿ, ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸದ ಪರಿಶಿಷ್ಟ ಜಾತಿ ಅಭ್ಯರ್ಥಿಯೊಬ್ಬರನ್ನು ಸಾಮಾನ್ಯ ಕೋಟಾದಲ್ಲಿ ಆಯ್ಕೆಮಾಡಿರುವುದು ಪ್ರಶ್ನಾರ್ಹ.ಅಲ್ಲದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿಯಲ್ಲಿ ಆಯ್ಕೆಗೊಳಿಸಲಾದ ಅಭ್ಯರ್ಥಿಗಳಿಬ್ಬರು ಸ್ನಾತಕೋತ್ತರ ಮತ್ತು ಪ್ರವೇಶ ಪರೀಕ್ಷೆ ಅಂಕಗಳನ್ನು ಒಟ್ಟುಗೂಡಿಸಿದಾಗ, ಸಾಮಾನ್ಯ ಕೋಟಾದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗಿಂತಲೂ ಗರಿಷ್ಠ ಅಂಕ ಪಡೆದಿದ್ದಾರೆ.ಪ್ರಮಾಣಪತ್ರ ಸಲ್ಲಿಸದ ಅಭ್ಯರ್ಥಿಯನ್ನು ಹೊರತುಪಡಿಸಿ ಸಾಮಾನ್ಯ ಕೋಟಾದಡಿಯಲ್ಲಿ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳು 79.9 ಮತ್ತು 86.3 ಅಂಕಗಳನ್ನು ಪಡೆದಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಅನುಕ್ರಮವಾಗಿ 81.9 ಮತ್ತು 83.9ರಷ್ಟು ಅಂಕಗಳನ್ನು ಪಡೆದಿದ್ದಾರೆ.

 ಮೌಖಿಕ ಸಂದರ್ಶನ ಅಂಕಗಳನ್ನು ಹೊರತುಪಡಿಸಿ ಪರಿಗಣಿಸಿದರೆ ಈ ವ್ಯತ್ಯಾಸ ಕಾಣುತ್ತದೆ.ಇದನ್ನು ಪರಿಗಣಿಸುವುದಾದರೆ ಎಸ್‌ಸಿ ಹಾಗೂ ಎಸ್‌ಟಿ ಮೀಸಲಾತಿಯಲ್ಲಿ ಆಯ್ಕೆಗೊಳಿಸಲಾದ ಇಬ್ಬರು ಅಭ್ಯರ್ಥಿಗಳು ಸಾಮಾನ್ಯ ಕೋಟಾದಲ್ಲಿ ಆಯ್ಕೆಯಾಗಿ, ಎಸ್‌ಸಿ ಮೀಸಲಾತಿಗೆ ನಂತರ 75ರಷ್ಟು ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಯನ್ನು ಮತ್ತು ಎಸ್‌ಟಿ ಮೀಸಲಾತಿಗೆ ನಂತರದ ಸ್ಥಾನದಲ್ಲಿ 75.7 ಗರಿಷ್ಠ ಅಂಕಪಡೆದ ವಿದ್ಯಾರ್ಥಿಯನ್ನು ಆಯ್ಕೆ ಮಾಡಬೇಕಿತ್ತು.ಎಸ್‌ಸಿ ಹಾಗೂ ಎಸ್‌ಟಿ ಮೀಸಲಾತಿಯಲ್ಲಿ ಎರಡನೇ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಬ್ಬರಿಗೂ ಅನ್ಯಾಯವಾದಂತಾಗಿದೆ.ಗಮನಾರ್ಹ ಸಂಗತಿಯೆಂದರೆ, ಈ ಇಬ್ಬರು ವಿದ್ಯಾರ್ಥಿಗಳು ಇದೇ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ  ಪೂರೈಸಿದ್ದಾರೆ.ವಿಭಾಗದ ಮುಖ್ಯಸ್ಥರಿಂದ ಗೊಂದಲ:

ಕೇಂದ್ರೀಯ ವಿವಿ ಕನ್ನಡ ವಿಭಾಗದಲ್ಲಿ ಅಧ್ಯಯನ ಮಾಡಿ ಸ್ನಾತಕೋತ್ತರದಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳು ಮೌಖಿಕ ಸಂದರ್ಶನ ಸಮರ್ಪಕವಾಗಿ ನೀಡಿಲ್ಲ ಎಂದು ಕೈಬಿಟ್ಟಿರುವುದು ಒಂದು ಕಡೆಯಾದರೆ, ಬೇರೆ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ಸ್ನಾತಕೋತ್ತರ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದ್ದರೂ ಮೌಖಿಕ ಸಂದರ್ಶನದಲ್ಲಿ ಗರಿಷ್ಠ ಅಂಕನೀಡಿ ಪಿಎಚ್‌ಡಿಗೆ ಪ್ರವೇಶ ನೀಡಲಾಗಿದೆ.  ಈ ಅಂಶ ಹಲವು  ಅನುಮಾನಕ್ಕೆ ಎಡೆಮಾಡಿದೆ.ಮೌಖಿಕ ಸಂದರ್ಶನದ ಅಂಕಗಳನ್ನು ಬಹಿರಂಗಗೊಳಿಸುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದುಕೊಳ್ಳಿರಿ ಎಂದು ಹೇಳುತ್ತಿರುವ ಕನ್ನಡ ವಿಭಾಗದ ಮುಖ್ಯಸ್ಥೆ    ಡಾ. ಶಿವಗಂಗಾ ರುಮ್ಮಾ ಅವರು, ಪಿಎಚ್‌ಡಿಗಾಗಿ ಆಯ್ಕೆ ಮಾಡಲಾದ ಅಭ್ಯರ್ಥಿಗಳ ಬಗ್ಗೆ ಹಾಗೂ ಕೈಬಿಡಲಾದ ವಿದ್ಯಾರ್ಥಿಗಳ ಬಗ್ಗೆ ಗೊಂದಲದ  ಹೇಳಿಕೆ ನೀಡುವ ಮೂಲಕ ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಕೇಂದ್ರೀಯ    ವಿವಿ ಪಾರದರ್ಶಕ ನೀತಿಯನ್ನು ಗಾಳಿಗೆ ತೂರುತ್ತಿರುವುದು   ಸ್ಪಷ್ಟವಾಗಿದೆ.ಯಾವುದೇ ಪ್ರಮಾಣಪತ್ರ ಸಲ್ಲಿಸದಿದ್ದರೂ ಸಾಮಾನ್ಯ ಕೋಟಾದಲ್ಲಿ ಪಿಎಚ್‌ಡಿಗೆ ಆಯ್ಕೆಯಾದ ಅಭ್ಯರ್ಥಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು `ಪ್ರಜಾವಾಣಿ~ಗೆ ತಿಳಿಸಿದ್ದರು. ವಾಸ್ತವದಲ್ಲಿ ಆಯ್ಕೆ ಪಟ್ಟಿಯಿಂದ ಹೆಸರು ತೆಗೆದುಹಾಕಿಲ್ಲ. ಕುಲಪತಿ ಹುದ್ದೆ ಖಾಲಿ ಇರುವುದರಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಯಜಮಾನನಿಲ್ಲದ ಮನೆಯಂತಾಗಿದೆ.ಕನ್ನಡ ವಿಭಾಗದಲ್ಲಿ ಸೃಷ್ಟಿಯಾಗಿರುವ ಪಿಎಚ್‌ಡಿಗಾಗಿ ವಿದ್ಯಾರ್ಥಿಗಳ ಆಯ್ಕೆ ಗೊಂದಲವನ್ನು ಹೆಚ್ಚುವರಿ ಕುಲಪತಿ ಪ್ರೊ. ಚಂದ್ರಶೇಖರ್ ಸರಿಪಡಿವರೇ ಎಂಬುದನ್ನು ಎಲ್ಲರೂ ಕಾದು ನೋಡುತ್ತಿದ್ದಾರೆ.ಒಂದು ವೇಳೆ ನ್ಯಾಯ ಸಿಗದಿದ್ದರೆ ಹೋರಾಟ ಅನಿವಾರ್ಯ ಎಂಬುದನ್ನು ಆಯ್ಕೆವಂಚನೆಗೊಳಗಾದ    ವಿದ್ಯಾರ್ಥಿಗಳು ತಿಳಿಸಿದ್ದಾರೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry