ಸೋಮವಾರ, ಮಾರ್ಚ್ 8, 2021
24 °C

ಕನ್ನಡ ಪುಸ್ತಕೋದ್ಯಮಕ್ಕೆ ಬೇಕು ಚೈತನ್ಯ

ರೂಪಾ ಕೆ.ಎಂ. / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಪುಸ್ತಕೋದ್ಯಮಕ್ಕೆ ಬೇಕು ಚೈತನ್ಯಬೆಂಗಳೂರು: ಕನ್ನಡ ಪುಸ್ತಕ ಸಂಸ್ಕೃತಿಯು ಕನ್ನಡ ಪುಸ್ತಕೋದ್ಯಮವಾಗಿ ರೂಪುಗೊಂಡು ಹಲವು ವರ್ಷಗಳೇ ಕಳೆದಿವೆ. ಪರಿಣಾಮ ಕನ್ನಡ ಪುಸ್ತಕ ಪ್ರಕಟಣೆಯ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ ಕನ್ನಡ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಮಾತ್ರ ಕಡಿಮೆಯಾಗಿದೆ.ಇಂದು ವಿಶ್ವ ಪುಸ್ತಕ ದಿನಾಚರಣೆ. ಸದಭಿರುಚಿಯ ಪುಸ್ತಕಗಳು ಪ್ರಕಟಗೊಳ್ಳುತ್ತಿದ್ದರೂ ಕನ್ನಡ ಪುಸ್ತಕೋದ್ಯಮದಲ್ಲಿ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರು ತಮ್ಮದೇ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕನ್ನಡ ಪುಸ್ತಕೋದ್ಯಮವು ಯುವ ಪೀಳಿಗೆಯ ಓದುಗರನ್ನು ಹಿಡಿದಿಡುವಲ್ಲಿ ಸಾಕಷ್ಟು ಪ್ರಯತ್ನ ನಡೆಸಬೇಕಿದೆ.ಬರಹಗಾರರ ಸಂಖ್ಯೆ ಗಣನೀಯ:  ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಲೋಹಿಯಾ ಪ್ರಕಾಶನದ ಚನ್ನಬಸವಣ್ಣ, `ದಶಕಗಳ ಹಿಂದೆ ಇದ್ದ ಪುಸ್ತಕೋದ್ಯಮಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷವೊಂದಕ್ಕೆ ಆರು ಸಾವಿರ ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಇಂಟರ್‌ನೆಟ್ ಮತ್ತು ಬ್ಲಾಗ್‌ಗಳ ಅಬ್ಬರದ ನಡುವೆಯೂ ಕನ್ನಡ ಪುಸ್ತಕಗಳ ಪ್ರಕಟಣೆಯ ಪ್ರಮಾಣ ದೊಡ್ಡದಾಗಿಯೇ ಇದೆ~ ಎಂದರು.  `ಕನ್ನಡ ಸಾರಸ್ವತ ಲೋಕದಲ್ಲಿ ಕತೆ, ಕವನ, ವೈಚಾರಿಕ ಲೇಖನಗಳು ರಚಿಸುವವರ ಸಂಖ್ಯೆ ದ್ವಿಗುಣಗೊಂಡಿದೆ. ಸತತವಾಗಿ ಬ್ಲಾಗಿಂಗ್ ಮಾಡುತ್ತಿರುವವರು ಸಹ ಲೇಖಕರಾಗಿಯೇ ಗುರುತಿಸಿಕೊಳ್ಳುತ್ತಿದ್ದಾರೆ. ಶೇ 6ರಷ್ಟು ಪ್ರಮಾಣದಲ್ಲಿ ಮಾತ್ರ ಇ-ಪುಸ್ತಕಗಳು ಜನರನ್ನು ತಲುಪುತ್ತಿವೆ.ಇಂಗ್ಲಿಷ್ ಪುಸ್ತಕೋದ್ಯಮದಲ್ಲಿ ಯುವ ಬರಹಗಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಕನ್ನಡದಲ್ಲಿ ಮಾತ್ರ ಈ ಪ್ರಕ್ರಿಯೆ ನಿಧಾನವಾಗಿಯೇ ಇದೆ. ಆದರೆ ಕನ್ನಡ ಪುಸ್ತಕೋದ್ಯಮ ಮತ್ತು ಪ್ರಕಾಶಕರ ಸ್ಥಿತಿ ಮಾತ್ರ ಆಶಾದಾಯಕವಾಗಿಲ್ಲ~ ಎಂದು ಅಳಲು ತೋಡಿಕೊಂಡರು.`ನವೆಂಬರ್ ತಿಂಗಳಿನಲ್ಲಿ ಜಾಗೃತರಾಗುವ ಕನ್ನಡಿಗರಂತೆ, ಡಿಸೆಂಬರ್ ತಿಂಗಳ ಪ್ರಕಾಶಕರಿದ್ದಾರೆ. ಪ್ರಕಾಶಕರು, ಲೇಖಕ ಮತ್ತು ಲೇಖನ ಗುಣಮಟ್ಟವನ್ನು ಪರಿಗಣಿಸದೆ, ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯು ಜನವರಿ ತಿಂಗಳಿನಲ್ಲಿ ಪುಸ್ತಕಗಳನ್ನು ಖರೀದಿಸುತ್ತದೆ ಎಂಬ ಉದ್ದೇಶದಿಂದಲೇ ಪ್ರಕಟಿಸುವುದು ಅಪಾಯಕಾರಿ ಬೆಳವಣಿಗೆ. ಇದನ್ನು ದಾಸ್ತಾನು ಸಾಹಿತ್ಯ ಎನ್ನಬಹುದು. ಇನ್ನು ಪ್ರಕಾಶಕರು ಪುಸ್ತಕಗಳನ್ನು ಸಾಮಾನ್ಯ ಓದುಗನಿಗೆ ತಲುಪಿಸಲು ಸಮರ್ಪಕ ಪುಸ್ತಕ ಮಾರಾಟ ಜಾಲವೆಂಬುದಿಲ್ಲ~ ಎಂದು ಅವರು ಹೇಳಿದರು.ಕನ್ನಡ ಪುಸ್ತಕಗಳೆಡೆಗೆ ನಿರಾಸಕ್ತಿ?: ಲಡಾಯಿ ಪ್ರಕಾಶನದ ಬಸವರಾಜು ಸೂಳಿಭಾವಿ, `ಕನ್ನಡ ಪುಸ್ತಕೋದ್ಯಮದ ಬೇರುಗಳಾಗಿ ಮಧ್ಯವಯಸ್ಸಿನವರು ಮತ್ತು ಹಿರಿಯ ನಾಗರಿಕ ಓದುಗರಿದ್ದಾರೆ. ಆದರೆ 10ರಿಂದ 30 ವಯೋಮಿತಿಯಲ್ಲಿರುವ ಯುವ ಪೀಳಿಗೆ ಕನ್ನಡ ಪುಸ್ತಕೋದ್ಯಮದಿಂದ ವಿಮುಖವಾಗಿದೆ.

 

ಅದರಲ್ಲೂ ಯುವ ಲೇಖಕರು ಒಂದೆರಡು ಪುಸ್ತಕಗಳನ್ನು ರಚಿಸಿದ ನಂತರ ಇತರೆ ಪುಸ್ತಕಗಳನ್ನು ಓದುವ ಹವಣಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆಯು ಕಡಿಮೆ ಪ್ರಮಾಣದಲ್ಲಿರುವುದರಿಂದ ಕನ್ನಡ ಸಾರಸ್ವತ ಲೋಕವು ಮುಂದಿನ ದಿನಗಳಲ್ಲಿ ಓದುಗರ ಕೊರತೆ ಎದುರಿಸಲಿದೆ~ ಎಂದು ಅಭಿಪ್ರಾಯಪಟ್ಟರು.`ಇಂಗ್ಲಿಷ್ ಪುಸ್ತಕೋದ್ಯಮದಲ್ಲಿ ಕಲ್ಪನಾ ಶಕ್ತಿಯನ್ನು ತೀಡುವಂತಹ ಶಿಶು ಸಾಹಿತ್ಯ ಪುಸ್ತಕಗಳು ಹೆಚ್ಚು ಪ್ರಕಟಗೊಳ್ಳುತ್ತಿವೆ ಮತ್ತು ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಬಹುತೇಕ ಕನ್ನಡ ನೆಲದ ಪುಟಾಣಿಗಳು ಹಾಗೂ ಹದಿ ಹರೆಯದ ಓದುಗರು ಇಂಗ್ಲಿಷ್ ಸಾಹಿತ್ಯಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.ಪ್ರಕಟವಾಗುತ್ತಿರುವ ಕನ್ನಡ ಪುಸ್ತಕಗಳನ್ನು ಸಾಮಾನ್ಯ ಓದುಗರಿಗೆ ತಲುಪಿಸುವಲ್ಲಿ ಬೆರಳೆಣಿಕೆಯಷ್ಟೆ ಮಳಿಗೆಗಳಿವೆ. ಕೆಲವು ಪ್ರಕಾಶನ ಸಂಸ್ಥೆಗಳೇ ಮಳಿಗೆಗಳನ್ನು ಹೊಂದಿರುವುದರಿಂದ ರಾಜ್ಯದ ಮೂಲೆ ಮೂಲೆಯಲ್ಲಿರುವ ವಿವಿಧ ಪ್ರಕಾಶನಗಳು ಪ್ರಕಟಿಸುವ ಪುಸ್ತಕಗಳನ್ನು ಕೆಲವೇ ಮಳಿಗೆಗಳಲ್ಲಿ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ~ ಎಂದು ತಿಳಿಸಿದರು.`ಪ್ರಕಾಶಕರು ಧನಸಹಾಯದ ಆಮಿಷಕ್ಕೆ ಒಳಗಾಗಿ ವರ್ಷದಲ್ಲಿ ಭಾರಿ ಪ್ರಮಾಣದಲ್ಲಿ ಪುಸ್ತಕಗಳು ಪ್ರಕಟಿಸುತ್ತಿದ್ದಾರೆ. ಆದರೆ ಅವೆಲ್ಲವೂ ಜಿಲ್ಲಾ ಮತ್ತು ವಲಯ ಗ್ರಂಥಾಲಯಗಳಲ್ಲಿ ಧೂಳು ತಿನ್ನುತ್ತಿವೆ. ಇನ್ನು ಕೆಲವು ಪ್ರಕಾಶನ ಸಂಸ್ಥೆಗಳು ಬೇನಾಮಿ ಹೆಸರಿನಲ್ಲಿ ಪುಸ್ತಕ ಪ್ರಕಟಿಸಿ ಸರ್ಕಾರದಿಂದ ಹಣ ದೋಚುತ್ತಿದೆ. ಇದರಿಂದ ಸಾಮಾನ್ಯ ಪ್ರಕಾಶಕನಿಗೆ ಹೊಡೆತ ಬೀಳುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಸ್ಪಷ್ಟ ನೀತಿಯೊಂದನ್ನು ಜಾರಿಗೊಳಿಸಬೇಕು~ ಎಂದು ಒತ್ತಾಯಿಸಿದರು.ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, `ಈಚಿನ ದಿನಗಳಲ್ಲಿ ಕನ್ನಡ ಪುಸ್ತಕೋದ್ಯಮವು ಶ್ರೀಮಂತವಾಗಿದೆ. ಅದಕ್ಕೆ ಸರ್ಕಾರದ ಒತ್ತಾಸೆಯು ಇದೆ. ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಂಡಿರುವ ಪೆಂಗ್ವಿನ್ ಪ್ರಕಾಶನ ಪ್ರಕಟಿಸುವ ಪುಸ್ತಕಗಳ ಗುಣಮಟ್ಟದ  ಮಾದರಿಯಲ್ಲೇ ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ರಾಜ್ಯದಲ್ಲಿ ಕನ್ನಡದ ಇತರೆ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿದಂತೆ ಕನ್ನಡ ಪುಸ್ತಕಗಳ ಬಗ್ಗೆಯೂ ಜಾಗೃತಿ ಮೂಡುತ್ತಿರುವುದಕ್ಕೆ ಸಂತಸವಾಗಿದೆ~ ಎಂದು ಹೇಳಿದರು.`ಇನ್ನು ಪ್ರಕಾಶಕ ಮತ್ತು ಓದುಗರ ನಡುವೆ ಒಂದು ಮಾರಾಟ ಜಾಲ ರೂಪಿಸುವ ವೇದಿಕೆಯಾಗಿಯೇ ಈವರೆಗೆ ಆರು ಪುಸ್ತಕ ಮೇಳಗಳನ್ನು ಆಯೋಜಿಸಲಾಗಿದೆ. ಮೇಳಗಳಿಂದ ಒಟ್ಟು ಹತ್ತೂವರೆ ಕೋಟಿ ರೂಪಾಯಿ ಲಾಭ ಗಳಿಕೆಯಾಗಿದೆ. ಐಟಿ ಬಿಟಿಯ ವಿದ್ಯಾವಂತರೂ ಸಹ ಕನ್ನಡ ಪುಸ್ತಕ ಮೇಳದತ್ತ ಮುಖಮಾಡಿದ್ದಾರೆ.ಆದರೂ ಈ ಉದ್ಯಮ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಪ್ರಕಾಶಕ, ಪುಸ್ತಕ ಮಾರಾಟಗಾರ ಮತ್ತು ಓದುಗರನ್ನು ಗಮನದಲ್ಲಿಟ್ಟುಕೊಂಡೇ ಈಗಾಗಲೇ ಪುಸ್ತಕ ನೀತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅದು ಅಂಗೀಕಾರದ ಹಂತದಲ್ಲಿದೆ~ ಎಂದರು.

1. ಪುಸ್ತಕಗಳ ಪ್ರಕಟಣೆ ಜಾಸ್ತಿಯಾಗಿದೆ ಎನ್ನುವುದಕ್ಕಿಂತಲೂ ಓದುಗರ ಆಯ್ಕೆಯ ಸಾಧ್ಯತೆ ಹೆಚ್ಚಾಗಿದೆ. ಮೊದಲಿನಿಂದಲೂ ಸಾಹಿತ್ಯ ಓದುಗರು ಅಲ್ಪಸಂಖ್ಯಾತರೇ. ಆದರೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಕನ್ನಡ ಪುಸ್ತಕೋದ್ಯಮಕ್ಕೆ ಒಂದು ಸವಾಲೇ. ಈಗಿನ ಯುವ ಪೀಳಿಗೆಗೆ ಕನ್ನಡದ ಉತ್ಕೃಷ್ಟ ಪುಸ್ತಕಗಳನ್ನು ತಲುಪಿಸುವ ಪ್ರಯತ್ನಗಳು ನಡೆಯಬೇಕಿದೆ.

- ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ

2. ಪುಸ್ತಕಗಳು ಎಷ್ಟು ಪ್ರಮಾಣದಲ್ಲಿ ಪ್ರಕಟವಾಗುತ್ತವೆ. ಅದನ್ನು ಓದುವವರ ಸಂಖ್ಯೆ ಎಷ್ಟು ಎಂಬುದು ಮುಖ್ಯವಲ್ಲ. ಕನ್ನಡ ನೆಲದ ಸಮಸ್ಯೆಗಳನ್ನು ಕೇಂದ್ರಿಕರಿಸಿ ಬರೆಯುವವರ ಸಂಖ್ಯೆ ಮಾತ್ರ ಹೆಚ್ಚಾಗಿದೆ ಎನ್ನುವುದು ಸಂತಸದ ಸಂಗತಿ

-ಯುವ ಬರಹಗಾರ ವೀರಣ್ಣ ಮಡಿವಾಳರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.