ಶನಿವಾರ, ಮೇ 21, 2022
28 °C

ಕನ್ನಡ ಬೆಳೆಯಲು ಸಂಸ್ಕೃತ ಜ್ಞಾನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ‘ಸಂಸ್ಕೃತ ಭಾಷೆ ಬೇಡ ಎನ್ನುವವರು ಆ ಭಾಷೆಯನ್ನು ಅರ್ಥಮಾಡಿಕೊಳ್ಳದೇ ಅವಿವೇಕದಿಂದ ಮಾತಾಡುತ್ತಾರೆ’ ಎಂದು ಸಾಹಿತಿಡಾ.ಎಸ್.ಎಲ್. ಭೈರಪ್ಪ ಹೇಳಿದರು.

ತೀರ್ಥಹಳ್ಳಿ ಸಾಹಿತ್ಯಾಭಿಮಾನಿಗಳ ಬಳಗ ಭಾನುವಾರ ಏರ್ಪಡಿಸಿದ್ದ ‘ಸಂವಾದ’ದಲ್ಲಿ ಅವರು ಮಾತನಾಡಿದರು.ನಮ್ಮ ಕನ್ನಡ ಭಾಷೆ ಬೆಳೆಯಬೇಕಾದರೆ ಒಂದು ಮಟ್ಟದ ಸಂಸ್ಕೃತದ ಜ್ಞಾನ ಅಗತ್ಯ. ಈಗ ನಮಗೆ ಕಂಠಕವಾಗಿದ್ದು, ಇಂಗ್ಲಿಷ್. ಇಂದು ಕನ್ನಡ ಉಪನ್ಯಾಸಕರಿಗೆ ಸಂಸ್ಕೃತದ ಜ್ಞಾನ ಇಲ್ಲ. ಸಂಸ್ಕೃತದಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದಿರುವುದರಿಂದ ಆ ವ್ಯಾಕರಣ ಗೊತ್ತಿಲ್ಲದ ಕಾರಣ ಕನ್ನಡ ಸರಿಯಾಗಿ ಬರೆಯಲು ಆಗುತ್ತಿಲ್ಲ ಎಂದು ಹೇಳಿದರು.ಸಂಸ್ಕೃತ ಬಲ್ಲವರಿಗೆ ತಮಗೆ ಬೇಕಾದಂತೆ ಕನ್ನಡ ಶಬ್ದಗಳನ್ನು ವಿನ್ಯಾಸಗೊಳಿಬಹುದು ಎಂಬುದರ ಅರಿವಿತ್ತು. ಹಾಗಾಗಿಯೇ, ಎ.ಆರ್. ಕೃಷ್ಣಶಾಸ್ತ್ರಿ, ಟಿ.ಎಸ್. ವೆಂಕಣ್ಣಯ್ಯ ಸಂಸ್ಕೃತದಲ್ಲಿ ಪಂಡಿತರಾಗಿದ್ದೂ, ಕನ್ನಡದಲ್ಲಿ ಸಂಸ್ಕೃತಕ್ಕಿಂತ ಹೆಚ್ಚಿನದ್ದನ್ನು ಮಾಡಿ ತೋರಿಸುತ್ತೇವೆ ಎಂದಿದ್ದರು ಎಂದರು. ಕನ್ನಡ ಸಾಹಿತ್ಯದ ವಿಮರ್ಶೆ ಹೆಚ್ಚಾಗಿ ಇಂಗ್ಲಿಷ್ ಉಪಾಧ್ಯಾಯರ ಕೈಯಲ್ಲಿದೆ. ಇದರಿಂದ ಸುಲಭವಾಗಿ ವಿಮರ್ಶೆ ಬರೆಯುತ್ತಾರೆ. ನಮ್ಮ ಕನ್ನಡ ಉಪನ್ಯಾಸಕರು ಅವರು ಬರೆದದನ್ನು ಅನುಸರಿಸುವ ಪರಿಸ್ಥಿತಿ ಇದೆ. ಓದುಗರಿಗೆ ಸ್ವಾತಂತ್ರ್ಯ ಬೇಕು. ಸಂವಾದ, ಸೆಮಿನಾರ್‌ಗಳು ನಡೆಯಬೇಕು ಎಂದು ಹೇಳಿದರು.ಹಿರಿಯ ಸಂಶೋಧಕ ಚಿದಾನಂದಮೂರ್ತಿ ಅವರಿಗೆ ಇದೇ ಮೊದಲ ಡಾಕ್ಟರೇಟ್ ಅಲ್ಲ. ಅವರು ಈಚೆಗೆ ಹೊಸ ಲೇಖನ ಬರೆಯುತ್ತಿಲ್ಲ. ಹಿಂದಿನ ರಾಜ್ಯಪಾಲರು ಮಾಡದ ಕೆಲಸವನ್ನು ಈಗಿನ ರಾಜ್ಯಪಾಲರು ಯಾಕೆ ಮಾಡಿದರು. ತಮ್ಮ ಹುದ್ದೆಗೆ ಅರ್ಹವಾದ ಕೆಲಸವನ್ನು ಅವರು ಮಾಡಿಲ್ಲ. ರಾಜಕೀಯ ಕ್ಷೇತ್ರದ ವರ್ತನೆಯನ್ನು ಅವರು ಶೈಕ್ಷಣಿಕ ಕ್ಷೇತ್ರಕ್ಕೆ ವಿಸ್ತರಿಸಿದ್ದು, ವಿಪರ್ಯಾಸ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸತ್ಯದ ಆಧಾರವಿಲ್ಲದೇ ಗಟ್ಟಿರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ‘ಸೆಕ್ಯುಲರ್’ ಎಂಬ ಪದವನ್ನು ನಮ್ಮಲ್ಲಿ ಬಳಕೆ ಮಾಡಲಾಗುತ್ತಿದೆ ಎಂದ ಅವರು ‘ಭಾಷಣಗಳು, ಲೇಖನಗಳು ಮತ್ತು ಚರ್ಚೆಗಳು’ ಎಂಬ ತಮ್ಮ ಕೃತಿ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಹೇಳಿದರು.ಸಂವಾದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ. ಓಂಕಾರಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ರಾಜೇಂದ್ರ ಬುರುಡಿಕಟ್ಟಿ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಪ್ರೊ.ಕೆ. ಗಂಗಾಧರ್ ವಹಿಸಿದ್ದರು.ಭಾಗ್ಯಲಕ್ಷ್ಮೀ ಪ್ರಾರ್ಥಿಸಿದರು. ಎಚ್.ಎನ್. ಸತೀಶ್ ವಂದಿಸಿದರು. ಆಡಿನಸರ ಸತೀಶ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.