ಕನ್ನಡ ಭವಿಷ್ಯ ರೂಪಿಸುವ ಭಾಷೆಯಾಗಲಿ

7

ಕನ್ನಡ ಭವಿಷ್ಯ ರೂಪಿಸುವ ಭಾಷೆಯಾಗಲಿ

Published:
Updated:

ಮಂಡ್ಯ: ಉದ್ಯೋಗ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ಸಿಗುವಂತೆ ಹಾಗೂ ಅಲ್ಲಿ ಸಮಗ್ರ ಅನುಷ್ಠಾನ ಮಾಡುವ ಮೂಲಕ ಕನ್ನಡವನ್ನು ಭವಿಷ್ಯ ರೂಪಿಸುವ ಭಾಷೆಯಾಗಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಸಂಘ ಏರ್ಪಡಿಸಿದ್ದ ಕನ್ನಡ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.   ಭಾಷೆಯು ಉದ್ಯೋಗ, ಬದುಕು ರೂಪಿಸುವ ಕೆಲಸ ಮಾಡದಿದ್ದರೆ, ಅದು ಕ್ರಮೇಣ ಅವರಿಂದ ದೂರವಾಗುತ್ತದೆ. ಭಾಷೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದರು.ಕನ್ನಡ ಭಾಷೆಯನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದರಷ್ಟೇ ಸಾಲದು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೂ ಉದ್ಯೋಗ ಸಿಗುತ್ತದೆ ಎಂಬ ಆತ್ಮವಿಶ್ವಾಸ ಮೂಡಿಸಬೇಕು. ಆಗ ಭಾಷೆಗೊಂದು ಬೆಲೆ ಮತ್ತು ಅದರ ಉಳಿವು ಸಾಧ್ಯವಾಗುತ್ತದೆ ಎಂದು ಹೇಳಿದರು.ಕರ್ನಾಟಕದಲ್ಲೆೀ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಅನಿವಾರ್ಯತೆ ಇದೆ ಎಂದರೆ ಅದಕ್ಕಿಂತ ದುರಂತ ಸ್ಥಿತಿ ಮತ್ತೊಂದಿಲ್ಲ. ರಾಜ್ಯದಲ್ಲಿರುವ 19 ಜಿಲ್ಲೆಗಳಲ್ಲಿ ದ್ವಿಭಾಷಾ, ತ್ರಿಭಾಷೆಗಳ ಬಳಕೆ ಇದೆ. ಉಳಿದ 11 ಜಿಲ್ಲೆಗಳಲ್ಲಿ ಮಾತ್ರ ಅಪ್ಪಟ ಕನ್ನಡ ಭಾಷೆಯನ್ನು ಬಳಸುತ್ತಾರೆ ಎಂದರು.ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿ ಬರೆದಿರುವ `ಗಾಂಧಿ ಸಿರಿ~ ಎಂಬ ಕವನ ಸಂಕಲನವನ್ನು ಅವರು ಬಿಡುಗಡೆ ಮಾಡಿದರು. ಪ್ರಾಚಾರ್ಯರಾದ ಡಾ.ಲೀಲಾ ಅಪ್ಪಾಜಿ ಅಧ್ಯಕ್ಷತೆ ವಹಿಸಿದ್ದರು, ಸಾಹಿತಿ ಡಾ.ಅರ್ಜುನಪುರಿ ಅಪ್ಪಾಜಿಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry