ಭಾನುವಾರ, ಫೆಬ್ರವರಿ 23, 2020
19 °C

ಕನ್ನಡ ಭಾಷೆಗೆ ಅಗ್ರಸ್ಥಾನ ದೊರೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಭಾಷೆಗೆ ಅಗ್ರಸ್ಥಾನ ದೊರೆಯಲಿ

ಶ್ರೀನಿವಾಸಪುರ: ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಸ್ವಾಭಿಮಾನಿಗಳಾಗಬೇಕು. ಬೇರಾವುದೇ ಭಾಷೆಯನ್ನು ಕಲಿತರೂ ಮಾತೃ ಭಾಷೆಯಾದ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  `ಮುಖ್ಯಮಂತ್ರಿ~ ಚಂದ್ರು ಹೇಳಿದರು.

ಇಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ನುಡಿತೇರು ಜಾಗೃತಿ ಜಾಥಾದ ಅಂಗವಾಗಿ ಬುಧವಾರ ನಡೆದ ಸಮಾರಂಭದಲ್ಲಿ ಮಾತನಾ ಡಿದ ಅವರು, ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆಯಿಂದ ಕನ್ನಡ ನಿರೀಕ್ಷಿತ ಪ್ರಮಾಣದಲ್ಲಿ ಆಡಳಿತ ಭಾಷೆಯಾಗಿ ಬಳಕೆಯಾಗುತ್ತಿಲ್ಲ.

ಜನರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಜಾನಪದ ಕಲೆ ಮತ್ತು ಸಾಹಿತ್ಯ ನಶಿಸಿಹೋಗುತ್ತಿದೆ. ಪ್ರಾದೇಶಿಕ ಸೊಗಡು ಮಾಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

 ಜಾಗತೀಕರಣದ ಸಂದರ್ಭದಲ್ಲಿ ದೇಸಿ ಭಾಷೆಗಳು ಸಂಕಷ್ಟದಲ್ಲಿವೆ. ಆದರೆ ಕನ್ನಡ ಹಳ್ಳಿಗಳಿಂದ ಉಳಿದುಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಶೇ. 60 ಮಂದಿ ಕನ್ನಡೇತರರು ಇದ್ದಾರೆ. ಕೋಲಾರ ಜಿಲ್ಲೆಯಲ್ಲಿ ಭಾಷಾ ಸಾಮರಸ್ಯ ಇದೆ. ಆದರೆ ಮಹಾರಾಷ್ಟ್ರ ರಾಜಕೀಯ ದುರುದ್ದೇಶದಿಂದ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಅದಕ್ಕೆ ಕನ್ನಡಿಗರು ಸುಮ್ಮನೆ ಕೂರುವುದಿಲ್ಲ.
 
ಮುಂಬೈ, ಖಾನಾಪುರ ಮತ್ತಿತರ ಕಡೆಗಳಲ್ಲಿ ಕನ್ನಡಿಗರು ಬಹುಸಂಖ್ಯಾತ ರಾಗಿದ್ದಾರೆ. ಅವುಗಳನ್ನೂ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲು ಒತ್ತಾಯಿಸಲಾ ಗುವುದು ಎಂದು ಹೇಳಿದರು.

ಸಾಹಿತಿ ಸ.ರಘುನಾಥ ಮಾತನಾಡಿ, ಕೋಲಾರ ಜಿಲ್ಲೆ ಗಡಿ ಭಾಗದಲ್ಲಿ ಕನ್ನಡ ಭಾಷೆ ಬೆಳೆಯುತ್ತದೆ. ಇಲ್ಲಿನ ಜನ ಕನ್ನಡ ಕಲಿಕೆಯ ಅನಿವಾರ್ಯತೆ ಯನ್ನು ಕಂಡುಕೊಂಡಿದ್ದಾರೆ. ಇಲ್ಲಿನ ಶಾಲೆಗಳು, ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಕನ್ನಡ ಭಾಷೆಯನ್ನು ಬೆಳೆಸುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳು ಹೊಂದಿಕೊಂಡು ಹೋಗುತ್ತಿವೆ. ಹೊಟ್ಟೆಪಾಡಿನ ಭಾಷೆ ಕನ್ನಡವಾಗಿ ಮುಂದುವರಿದಿದೆ.
 
ಬೇರೆ ರಾಜ್ಯಗಳಲ್ಲಿ ಆಯಾ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಮಾಡಲು ಸಾಧ್ಯವಾಗಿದೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಾಗದಿರುವುದು ವಿಷಾದದ ಸಂಗತಿ ಎಂದು ಹೇಳಿದರು.

 ಪಠ್ಯ ಪುಸ್ತಗಳಲ್ಲಿ ಸರಳ ಕನ್ನಡವನ್ನು ಜಾರಿಗೆ ತರಬೇಕು. ಆಡಳಿತದಲ್ಲಿ ಕನ್ನಡ ಭಾಷೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಬೇಕು. ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಯತ್ನಿಸಬೇಕು. ಕನ್ನಡಿಗರು ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡು ಅಳುವುದನ್ನು ಬಿಡಬೇಕು ಎಂದು ಹೇಳಿದರು.

ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿ ಪಟ್ಟಣದಲ್ಲಿ ಕನ್ನಡ ನುಡಿತೇರು ಜಾಗೃತಿ ಜಾಥಾ ಯಶಸ್ವಿಯಾಗಿ ನಡೆದಿದೆ. ಈ ಕಾರ್ಯಕ್ರಮ ಗಡಿ ಪ್ರದೇಶದಲ್ಲಿ ಕನ್ನಡ ಕಾಳಜಿ ಬಿತ್ತಲು ಸಹಕಾರಿ ಯಾಗಿದೆ. ಇಂಥ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವುದರ ಮೂಲಕ ಕನ್ನಡ ಜಾಗೃತಿ ಎಚ್ಚರದ ಸ್ಥಿತಿಯಲ್ಲಿ ಇರುವಂತೆ ಮಾಡಬೇಕು ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಎಂ.ಶ್ರೀನಿವಾಸನ್, ತಹಶೀಲ್ದಾರ್ ಪಿ.ವಿ.ಪೂರ್ಣಿಮಾ, ಪುರಸಭಾಧ್ಯಕ್ಷ ಎಸ್.ಶ್ರೀನಿವಾಸಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ನಾಗರಾಜ್, ತಾ.ಪಂ. ಇಒ ಬಸವರಾಜಪ್ಪ, ಬಿ.ಜಿ. ಸೈಯದ್‌ಖಾದರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾ.ವೆಂಕೋಬರಾವ್, ಶ್ರೀನಿವಾಸ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಲಾವಿದ ಚೆತೂರಿ ಜಾನಪದ ಗೀತೆಗಳನ್ನು ಹಾಡಿದರು. ರಾಜಸ್ವ ನಿರೀಕ್ಷಕರಾದ ರಾಮಚಂದ್ರಪ್ಪ ಸ್ವಾಗತಿಸಿದರು. ಉಮಾ ರಮಣಯ್ಯ ವಂದಿಸಿದರು.

ಮೆರವಣಿಗೆ: ಕನ್ನಡ ನುಡಿತೇರು ಜಾಗೃತಿ ಜಾಥಾ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಕಲಾವಿದರು ನಡೆಸಿಕೊಟ್ಟ ಕಾರ್ಯಕ್ರಮಗಳು ಗಮನ ಸೆಳೆದವು, ಡೊಳ್ಳು ಕುಣಿತ, ನಂದಿಕೋಲು ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಪಟನೃತ್ಯ, ವೀರಗಾಸೆ ಕುಣಿತ, ಹಲಗೆ ವಾದನ ಮತ್ತಿತರ ಕಲೆಗಳ ಪ್ರದರ್ಶನ ನೋಡುಗರನ್ನು ಪುಳಕಗೊಳಿಸಿದವು. ನುಡಿತೇರು ಮೆರವಣಿಗೆ ಮುಂಚೂಣಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನೆರೆದು ಮೆರವಣಿಗೆಯನ್ನು ವೀಕ್ಷಿಸಿದರು.

ಕನ್ನಡ ವಾತಾವರಣ ಅಗತ್ಯ
ಮುಳಬಾಗಲು: ಗಡಿ ಪ್ರದೇಶಗಳಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಪಟ್ಟಣದ ಡಿವಿಜಿ ರಂಗಮಂದಿರದಲ್ಲಿ ನುಡಿ ತೇರು ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆ ಗಳಲ್ಲಿ ಕನ್ನಡ ಮಾತನಾಡಿದರೆ ಕೀಳರಿಮೆ ಎಂಬ ಮನೋಭಾವನೆಯನ್ನು ಕೆಲವು ಖಾಸಗಿ ಶಾಲೆ ಗಳು ಬಿತ್ತರಿಸುತ್ತಿವೆ ಎಂದು ಆರೋಪಿಸಿದರು.

ಶಾಸಕ ಅಮರೇಶ್, ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಆರ್.ನರಸಿಂಹನ್, ಗೌರವಾಧ್ಯಕ್ಷ ಯು.ವಿ. ನಾರಾಯಣಾಚಾರ್, ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಎನ್.ವೆಂಕಟೇಶಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡಭಟ ವೆಂಕಟಪ್ಪ, ಗಡಿನಾಡು ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ವಿ.ವಿ.ವೆಂಕಟೇಶಪ್ಪ ಮುಂತಾದವರು ಭಾಗವಹಿಸಿದ್ದರು.

ಕನ್ನಡ ಶಾಲೆಗೆ ಮೂಲಸೌಲಭ್ಯ
ಮಾಲೂರು: ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಬಿಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದೊರೆಯುವ ಮೂಲಸೌಲಭ್ಯಗಳನ್ನು ಒದಗಿಸುವತ್ತ ಸರ್ಕಾರ ಚಿಂತಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಪಟ್ಟಣದ ಮಹಾರಾಜ ವೃತ್ತದ ಬಳಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ನುಡಿ ತೇರು ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾ ಡಿದ ಅವರು, ಸಂವಿಧಾನ ಬದ್ಧವಾಗಿ ಒಂದರಿಂದ ಹತ್ತನೇ ತರಗತಿವರೆಗೂ ಆಯಾ ಮಾತೃ ಭಾಷೆಯಲ್ಲಿ ಕಡ್ಡಾಯ ಶಿಕ್ಷಣ ನೀಡುವ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಪ್ರಯತ್ನಿಸಬೇಕೆಂದು ತಿಳಿಸಿದರು.

ಗಡಿಭಾಗಗಳಲ್ಲಿ ವಾಸಿಸುವ ಅನ್ಯ ಭಾಷಿಕರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗರು ಮಾಡ ಬೇಕಾಗಿದೆ. ಗ್ರಾಮೀಣ ಭಾಗದ ತಾಯಂದಿರ ಮತ್ತು ರೈತಾಪಿ ವರ್ಗದ ಜನರಿಂದ ಕನ್ನಡ ಭಾಷೆ ಉಳಿದಿದೆ ಎಂದರು.

ಪಟ್ಟಣದ ಬಾಲಾಜಿ ವೃತ್ತಕ್ಕೆ ಸಂಜೆ ಕನ್ನಡ ನುಡಿತೇರು ಆಗಮಿಸಿತು. ಕನ್ನಡ ನಾಡಿನ ಪರಂಪರೆ ಪ್ರತಿಬಿಂಬಿಸುವ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಂಜುಳಾ ವೆಂಕಟೇಶ್, ಸದಸ್ಯರಾದ ರಾಮ ಸ್ವಾಮಿರೆಡ್ಡಿ, ಯಲ್ಲಮ್ಮ, ಸಾಹಿತಿಗಳಾದ ಡಾ. ಜಯಪ್ರಕಾಶ್ ಗೌಡ, ರಂಗಾರೆಡ್ಡಿ, ರಂಗಭೂಮಿ ಕಲಾವಿದ  ಕೆ.ವಿ. ನಾಗರಾಜಮೂರ್ತಿ, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ತಹಶೀಲ್ದಾರ್ ಎಚ್.ಅಮರೇಶ್, ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕ ವೆಂಕಟಾಚಲಪತಿ, ನುಡಿತೇರು ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನಯ್ಯ, ಪದ್ಮ ಚಂದ್ರು, ಕಸಾಪ ಅಧ್ಯಕ್ಷ ಎ.ಅಶ್ವಥರೆಡ್ಡಿ, ಪುರಸಭಾ ಅಧ್ಯಕ್ಷೆ ಗುಲಾಬ್ ಜಾನ್, ಉಪಾಧ್ಯಕ್ಷ ಎ.ರಾಜಪ್ಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ಆಂಜಿನಪ್ಪ, ತಾ.ಪಂ. ಉಪಾಧ್ಯಕ್ಷೆ ಪಾರ್ವತಮ್ಮ ಸ್ವಾಮಿ, ಸದಸ್ಯರಾದ ಎಸ್.ವಿ. ಲೋಕೇಶ್, ಅಮರಾವತಿ, ಕುಡಿಯನೂರು ಶಶಿಧರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)