ಕನ್ನಡ ಭಾಷೆ ಸಂಸ್ಕೃತಿ, ಪ್ರಗತಿಯ ದ್ಯೋತಕ

7

ಕನ್ನಡ ಭಾಷೆ ಸಂಸ್ಕೃತಿ, ಪ್ರಗತಿಯ ದ್ಯೋತಕ

Published:
Updated:
ಕನ್ನಡ ಭಾಷೆ ಸಂಸ್ಕೃತಿ, ಪ್ರಗತಿಯ ದ್ಯೋತಕ

ಶಾಂತಲಾ ವೇದಿಕೆ, ಅರೇಹಳ್ಳಿ(ಬೇಲೂರು): `ಕನ್ನಡವೆಂದರೆ ಅದು ಕೇವಲ ಅಕ್ಷರ ಜೋಡಣೆ ಮಾತ್ರವಲ್ಲ ಅಥವಾ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾದ ಸಂಪರ್ಕ ಭಾಷೆಯಲ್ಲ. ಕನ್ನಡ ಎಂದರೆ ಒಂದು ಸಂಸ್ಕೃತಿ, ಪ್ರಗತಿ ಪಥದ ದ್ಯೋತಕ, ಬದುಕಿನ ವೈವಿಧ್ಯತೆಯ ಸೂಚಕ~ ಎಂದು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹಾಗೂ  ಸಂಶೋಧಕ ನಾರ್ವೆ ರಾಜಶೇಖರ್ ಬಣ್ಣಿಸಿದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುಭಾಷ್ ಯುವಕ ಸಂಘ ಅರೇಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಶ್ರಿವಿನಾಯಕ ಭವನದ ಆವರಣದಲ್ಲಿ ಏರ್ಪಡಿಸಿದ್ದ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕನ್ನಡ ಹಾಗೂ ಕರ್ನಾಟಕ ಇಂದು ಒಂದು ಭಾಷೆ ಅಥವಾ ಸಂಪ್ರದಾಯಕ್ಕೆ ಸೀಮಿತವಾಗಿಲ್ಲ.

 

ಜಾಗತಿಕ ಮಟ್ಟದಲ್ಲಿ ಜನರು ಕರ್ನಾಟಕವನ್ನು ಮೆಚ್ಚಿ ಅಲ್ಲಿ ತಮ್ಮ ನೆಲೆ ಸ್ಥಾಪಿಸಲು ಆಶಿಸುತ್ತಿದ್ದಾರೆ. ಅನೇಕರು ಕನ್ನಡ ಕಲಿತು, ಈಗಾಗಲೇ ಕನ್ನಡದವರಾಗಿ ಬೆರೆತು ಹೋಗಿದ್ದಾರೆ. ಇದು ನಮ್ಮ ಅಗ್ರಮಾನ್ಯ ನೆಲದ ಗುಣ, ಕನ್ನಡ ಭಾಷಾ ಸಮೃದ್ಧಿಯ ದ್ಯೋತಕ ಎಂದು ಹೇಳಿದರು.ಕನ್ನಡ ನಾಡಿನಲ್ಲಿ ಇಪ್ಪತ್ತೈದು ಸಾವಿರಕ್ಕೂ ಮಿಗಿಲಾಗಿ ಶಿಲಾಶಾಸನಗಳಿವೆ. ಇವುಗಳು ಕನ್ನಡಿಗರ ಉದಾತ್ತ ಮೌಲ್ಯಗಳನ್ನು ಪ್ರತಿಪಾದಿಸುವ ವಿಷಯಗಳಿವೆ. ಕನ್ನಡ ನಾಡಿನ ಜನರ ಸಾಮಾಜಿಕ ಕಳಕಳಿಯು ನಮ್ಮ ನಾಡಿನ ಬಹು ಪ್ರಾಚೀನ ಸಂಪ್ರದಾಯವಾಗಿದೆ.ಹಲ್ಮಿಡಿ ಶಾಸನವು ಉಂಟು ಮಾಡಿದ ಕನ್ನಡ ಪುಳಕ ಗಮನಾರ್ಹವಾಗಿದೆ. ಕಿ.ಶ. 450ರ ವೇಳೆಗೆ ಕನ್ನಡವು ಒಂದು ಶಾಸನೋಕ್ತ ಭಾಷೆಯಾಗಿ ಪ್ರಬುದ್ಧವಾಗಿ ಗ್ರಂಥಸ್ಥ ಭಾಷೆಯಾಗಿದ್ದ ಸಂಸ್ಕೃತಿದೊಂದಿಗೆ ಸ್ಪರ್ಧಿಸುವಷ್ಟರ ಮಟ್ಟಿಗೆ ಪ್ರೌಢತೆ ಪಡೆದಿತ್ತು. ಅದುವರೆವಿಗೂ ಮೌರ್ಯ, ಶಾತವಾಹನ ಹಾಗೂ ಕದಂಬರ ಕಾಕುಸ್ಥವರ್ಮನ ಕಾಲದವರೆಗೂ ಪ್ರಾಕೃತವು ಕರ್ನಾಟಕದ ಅಧಿಕೃತ ಶಾಸನ ಭಾಷೆಯಾಗಿತ್ತು.ಆದರೆ ಆ ಸ್ಥಾನಕ್ಕಾಗಿ ಸಂಸ್ಕೃತವು ಸ್ಪರ್ಧಿಸಿತು. ಕಾಕುಸ್ಥವರ್ಮನ ಮಗ ಶಾಂತಿವರ್ಮನ ತಾಳಗುಂದ ಶಾಸನವೇ ಕರ್ನಾಟಕದ ಮೊದಲ ಸಂಸ್ಕೃತ ಶಾಸನವೆಂದು ಹೇಳಬಹುದು. ಇದಕ್ಕೂ ಮೊದಲು ಕಾಕುಸ್ಥವರ್ಮನ ಕಾಲದಲ್ಲಿ ಹಲ್ಮಿಡಿ ಶಾಸನದ ಮೂಲಕ ತನ್ನ ಸ್ಥಾನವನ್ನು ಪಡೆಯಲು ಸಂಸ್ಕೃತದೊಂದಿಗೆ ಸ್ಪರ್ಧೆಗಿಳಿದು, ಕನ್ನಡದ ಮೊದಲ ಶಾಸನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಮಾತ್ರವಲ್ಲ ಹಲ್ಮಿಡಿ ಶಾಸನ ಬೇಲೂರು ತಾಲ್ಲೂಕಿನಲ್ಲೇ ರೂಪುಗೊಂಡಿರುವುದು ಹೆಮ್ಮೆ ಎನಿಸಿದೆ. ಇದರಿಂದ ಈ ತಾಲ್ಲೂಕಿನ ಜನರು ಅಭಿನಂದನಾರ್ಹರಾಗಿದ್ದಾರೆ ಎಂದರು.ಕನ್ನಡವನ್ನು ಉಳಿಸಿ ಬೆಳೆಸಿಕೊಳ್ಳುವತ್ತ ಹೆಚ್ಚು ಚಿಂತಿಸ ಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಕನ್ನಡವನ್ನು ಎಷ್ಟು ಪ್ರೀತಿಸುತ್ತಿದ್ದೇವೆ, ಅದರ ಪ್ರಗತಿಗಾಗಿ ಎಷ್ಟು ಪ್ರಯತ್ನಿಸುತ್ತಿದ್ದೇವೆ ಎಂಬುದನ್ನು ಪ್ರಶ್ನಿಸಿ ಕೊಳ್ಳ ಬೇಕಾಗಿದೆ.ಕನ್ನಡವು ಗಣಕದ ತತ್ರಾಂಶಗಳಿಗೆ ಚೆನ್ನಾಗಿ ಹೊಂದಿಕೊಳ್ಳುವ ಭಾಷೆಯಾಗಿದೆ ಎಂದು ಹೇಳಿದ ರಾಜಶೇಖರ್, ಕನ್ನಡವನ್ನು ಮಾತನಾಡ ಬೇಕು. ಅದರ ಭಾವ ಸೌಂದರ್ಯವನ್ನು ಅರ್ಥಮಾಡಿಕೊಳ್ಳಬೇಕು. ಅದರ ಮಾಧುರ್ಯವನ್ನು ಸವಿದು ಕೃತಾರ್ಥರಾಗಬೇಕು ಎಂದು ತಿಳಿಸಿದರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ವೈ.ಸಿ.ಭಾನುಮತಿ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ ವಿಶಿಷ್ಟ ಶೈಲಿಯ ಬದುಕು, ಸಂಸ್ಕೃತಿಯಾಗಿದೆ. ನಾಡಿನ ಎಲ್ಲಾ ಜನ ಸಮಾನತೆಯಿಂದ ಬುದುಕಿದಾಗ ಏಕೀಕರಣಕ್ಕೆ ಅರ್ಥ ಬರುತ್ತದೆ. ಹಿಂದಿನ ಎಲ್ಲಾ ಸಾಹಿತಿಗಳು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ವರ್ಣ ಮಾಲೆಯಲ್ಲಿನ ಕೆಲವು ಕ್ಲಿಷ್ಟಕರ ಅಕ್ಷರಗಳನ್ನು ಕೈ ಬಿಡುವುದು ಭಾಷೆಯ ಬೆಳವಣಿಗೆಗೆ ಸೂಕ್ತವಾಗಿದೆ. ರಾಷ್ಟ್ರಧ್ವಜದಂತೆ ಕನ್ನಡ ಧ್ವಜಕ್ಕೂ ಧ್ವಜ ಸಂಹಿತೆಯನ್ನು ಜಾರಿಗೆ ತರುವುದು ಅವಶ್ಯಕವಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry