ಕನ್ನಡ ಮಕ್ಕಳ ಹೆಮ್ಮೆಯ ಕ್ಷಣಗಳು

7

ಕನ್ನಡ ಮಕ್ಕಳ ಹೆಮ್ಮೆಯ ಕ್ಷಣಗಳು

Published:
Updated:
ಕನ್ನಡ ಮಕ್ಕಳ ಹೆಮ್ಮೆಯ ಕ್ಷಣಗಳು

ಅಣ್ಣ (ಕುವೆಂಪು) ಹೇಳಿದ ಮಾತು ನೆನಪಿಗೆ ಬರುತ್ತಿದೆ. ಅದು ಅರವತ್ತರ ದಶಕದ `ಉದಯ ರವಿ~ಯಲ್ಲಿನ ಒಂದು ಮುಂಜಾನೆ. `ಅಣ್ಣ~ ಆಗಿನ ಬೆಳಗಿನ ಸಂಚಾರ ಮುಗಿಸಿ ಬಂದಿದ್ದರು.

 

ಕೈಕಾಲು ತೊಳೆದು ಕಾಫಿಗೆ ಕುಳಿತಾಗ ಹೇಳಿದರು, `ಈ ದಿನ ಗಂಗೋತ್ರಿಯ ರೀಜನಲ್ ಕಾಲೇಜಿನ ಹತ್ತಿರ ಸಂಚಾರ ಹೋಗುತ್ತಿದ್ದಾಗ, ಇಬ್ಬರು ಹುಡುಗಿಯರು ಬಂದು `ಸರಸ್ವತಿಪುರಂಗೆ ದಾರಿ ಯಾವುದು?~ ಎಂದು ಇಂಗ್ಲಿಷಿನಲ್ಲಿ ಕೇಳಿದರು.ಕರ್ನಾಟಕದ ಪರಿಸ್ಥಿತಿ ಹೇಗಿದೆ, ನೋಡಿ. ಅದೇನು ಕನ್ನಡ ತಿಳಿಯದ ಉತ್ತರದವರೋ ಅಥವಾ ಇಂಗ್ಲಿಷ್ ಭ್ರಮೆ ಹಿಡಿದ ಕನ್ನಡಿಗರೋ ಗೊತ್ತಾಗಲಿಲ್ಲ. ಅಲ್ಲಿಂದ ನನ್ನ ಸಂಚಾರ ಮುಂದುವರಿಸಿ ಸ್ನಾತಕೋತ್ತರ ವಿದ್ಯಾರ್ಥಿನಿಲಯದ ಹತ್ತಿರ ಬಂದಾಗ ನೋಡಿದರೆ, ಕನ್ನಡದಲ್ಲಿ ಬರೆದಿದ್ದ ಮರದ ಬೋರ‌್ಡು ಕಿತ್ತು ನೇತಾಡುತ್ತಿತ್ತು.ಅದನ್ನು ನೋಡಿ ತುಂಬಾ ಸಂಕಟವಾಯಿತು. ಬೋರ‌್ಡಿನ ಸ್ಕ್ರೂ ಉದ್ದೇಶಪೂರ್ವಕ ತೆಗೆದಂತೆ ಇತ್ತು. ಇದೇನು ಕಿರಾತ ಕರ‌್ಮವೋ! ಕನ್ನಡ ವಿರೋಧಿ ಕರ‌್ಮವೋ ತಿಳಿಯಲಿಲ್ಲ~ ಎಂದರು (ಇದನ್ನು ತಾರಿಣಿ ತಮ್ಮ `ಮಗಳು ಕಂಡ ಕುವೆಂಪು~ ಪುಸ್ತಕದಲ್ಲಿ ನೆನೆದಿದ್ದಾರೆ).ಈಚೆಗೆ ಅಂದರೆ 2011ರ ರಾಜ್ಯೋತ್ಸವದ ದಿನದಂದು ಧಡ್ ಅಂತ ನಾಲ್ಕು ಜನ ನಮ್ಮ ಮನೆಗೆ ಬಂದರು. ಯಾರಿವರು ಎಂದುಕೊಳ್ಳುತ್ತಲೇ ಬಾಗಿಲು ತೆರೆದು ವಿಚಾರಿಸಿದೆ. `ನಾವು ಹೈಸ್ಕೂಲಿನ ಮೇಷ್ಟ್ರುಗಳು.

 

ಚರಿತ್ರೆ, ಇಂಗ್ಲಿಷು, ಕನ್ನಡ, ಸಮಾಜ ಪಾಠ ಮಾಡುವವರು, ಬೇಲೂರಿನ ಕುಗ್ರಾಮದಲ್ಲಿ ನಿಮ್ಮಟ್ಟಿಗೆ ನಮ್ಮ ಮಾತನ್ನು ಹಂಚಿಕೊಂಡು ಈ ದಿನವನ್ನು ಅರ್ಥಪೂರ್ಣವಾಗಿ ಕಳೆಯಬೇಕೆಂದು ಬಂದೆವು~ ಎಂದರು.ಯಾರೋ ಏನೋ ಎಂದು ತಲೆ ಕೆರೆದುಕೊಳ್ಳುವಂತಾಯಿತು ನನಗೆ. ಅವರೆಲ್ಲರೂ ತೇಜಸ್ವಿಯವರ ಪುಸ್ತಕಗಳನ್ನು ಓದಿಕೊಂಡಿದ್ದರು. `ನನ್ನ ತೇಜಸ್ವಿ~ ಪುಸ್ತಕವನ್ನು ಮನನ ಮಾಡಿಕೊಂಡಿದ್ದರು. ನೇರವಾಗಿ ತೇಜಸ್ವಿಯ ಕಾಡಿನ ವಿಸ್ಮಯದೊಳಗೇ ಪ್ರವೇಶಿಸಿದರು.ಆನಂತರ, `ಮೇಡಂ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ, ಅದೂ ಹುಡುಕಿಕೊಂಡು ಹೋಗಿ ಆ ಸ್ಕೂಲುಗಳಿಗೇ ಸೇರಿಸಿದಿರಿ ಎಂದು ಬರೆದಿದ್ದೀರಿ. ಮಕ್ಕಳಿಗೆ ಸಮಸ್ಯೆಯಾಗಲಿಲ್ಲವೇ?~ ಎಂದು ಕೇಳಿದರು. `ಯಾಕೀ ಪ್ರಶ್ನೆ? ನೀವು ಮೇಷ್ಟ್ರಾಗಿ ನಿಮ್ಮ ಸಮಸ್ಯೆ ಏನು?~ ಎಂದೆ.

 

`ನಾವು ಕನ್ನಡ ಮೀಡಿಯಂನಲ್ಲಿ ಓದಿದವರು ಮತ್ತು ಕಲಿಸುತ್ತಿರುವವರು. ಗ್ರಾಮೀಣ ಪ್ರದೇಶದಿಂದ ಬಂದವರು. ಎಂ.ಇಡಿ ಡಿಗ್ರಿ ಮಾಡಿದವರು. ಕನ್ನಡ ಶಾಲೆಗಳನ್ನು ಮುಚ್ಚುವುದೆಂದು ಸರ್ಕಾರದಿಂದ ಸರ್ಕ್ಯುಲರ್ ಬಂದಿದೆ. ಇದು ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತೆ. ಅವರಿಗೆ ಕಲಿಯುವ ಆಸಕ್ತಿ ಇದೆ. ಶ್ರದ್ಧೆ ಇದೆ. ಸ್ಕೂಲು ಮುಚ್ಚಿದರೆ ನಮ್ಮ ಮಕ್ಕಳಿಗೆ ವಿದ್ಯಾರ್ಜನೆ ಹೇಗೆ? ಅವರು ಉದ್ಧಾರವಾಗುವುದಾದರೂ ಹೇಗೆ?~ ಎಂದು ಅಲವತ್ತುಕೊಂಡರು.ನಮ್ಮ ಹಿರಿಯ ಮಗಳು ಸುಸ್ಮಿತಾಳನ್ನು ನಮ್ಮ ಮೊದಲ ತೋಟ `ಚಿತ್ರಕೂಟ~ದ ಬೇಲಿ ಪಕ್ಕದ ಸಣ್ಣ ಕುಗ್ರಾಮ ಹೊಸೊಳ್ಳುವಿನ `ಒಂದೇ ಕೊಠಡಿಯಲ್ಲಿ ನಾಲ್ಕು ತರಗತಿ~ ಇರುವ ಶಾಲೆಗೆ ಸೇರಿಸಿದ್ದೆವು.ಆನಂತರ ಮೈಸೂರಿನಲ್ಲಿ ಜಿ.ಎಚ್.ನಾಯಕರ ಮನೆಯಲ್ಲಿದ್ದುಕೊಂಡು ಮಾನಸಗಂಗೋತ್ರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಳು. ನಾವು ಮೂಡಿಗೆರೆ ಸಮೀಪ `ನಿರುತ್ತರ~ ತೋಟಕ್ಕೆ ಬಂದಾಗ ಕನ್ನಡ ಮಾಧ್ಯಮದ ಕಾನ್ವೆಂಟು ಹುಡುಕಿಕೊಂಡು ಹೋಗಿ ಐದನೇ ತರಗತಿಗೆ ಸೇರಿಸಿದೆ.

 

ಅಲ್ಲಿನ ಉಪಾಧ್ಯಾಯಿನಿ ಕೇಳಿದರು: `ಇಷ್ಟು ಒಳ್ಳೆ ಅಂಕ ಗಳಿಸಿರುವ ಇವಳನ್ನು ಕನ್ನಡ ಮಾಧ್ಯಮಕ್ಕೆ ಏಕೆ ಸೇರಿಸಿದಿರಿ?~ ನಾನು, `ನಮ್ಮ ಭಾಷೆ ಕನ್ನಡ ಅದಕ್ಕೆ~ ಎಂದೆ.

ಮುಂದೆ ನನ್ನ ಅತ್ತೆಯವರ ಅನಾರೋಗ್ಯದ ಕಾರಣದಿಂದ ನಾವು ಮೈಸೂರಿನಲ್ಲಿದ್ದೆವು. ಅಲ್ಲಿ ಇವಳು ಗಂಗೋತ್ರಿ ಶಾಲೆಯಲ್ಲೇ ಓದು ಮುಂದುವರಿಸಿದಳು.

 

ಗಂಗೋತ್ರಿ ಸ್ಕೂಲು ಚೆನ್ನಾಗಿತ್ತು. ಟೀಚರುಗಳು ತುಂಬಾ ಶ್ರದ್ಧೆ ವಹಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಆರೋಗ್ಯಪೂರ್ಣ ವಾತಾವರಣವಿತ್ತು. ಮಕ್ಕಳಲ್ಲಿದ್ದ ಸುಪ್ತ ಪ್ರತಿಭೆ ಅರಳಲು ಆಸ್ಪದವಿರುವ ವಾತಾವರಣವಿತ್ತು.ಸುಸ್ಮಿತಾ ಬಲು ಚತುರೆ. ಲೆಕ್ಕದಲ್ಲಿ ಯಾವಾಗಲು ನೂರು ನಂಬರು ತೆಗೆಯುತ್ತಿದ್ದಳು. ಇವಳ ಸೋದರತ್ತೆ (ತಾರಿಣಿ) ಅಮೆರಿಕದಿಂದ ಕೈಮುಷ್ಠಿಯಷ್ಟು ಪುಟ್ಟದಾದ ಗಡಿಯಾರ ತಂದುಕೊಟ್ಟಿದ್ದರು. ಅದಕ್ಕೆ ದೊಡ್ಡಗಂಟಲಿನ ಧ್ವನಿ.

 

ಒಮ್ಮೆ ಗಡಿಯಾರವನ್ನು ಪೂರ್ತಿ ಬಿಚ್ಚಿಟ್ಟಿದ್ದಳು. ಅದರ ಗಂಟಲನ್ನು ನೋಡಲು ಈ ಪರಿಯ ಮನೋಲಹರಿ ಇವಳದ್ದು. `ನಾನು ಎಂಜಿನಿಯರಿಂಗ್ ಓದ್ತೀನಿ~ ಎನ್ನುತ್ತಿದ್ದಳು.ಹೈಸ್ಕೂಲಿಗೆ ಸೇರಿಸುವ ಸಂದರ್ಭ. ಇವಳ ಇಂಜಿನಿಯರಿಂಗ್ ಓದುವ ಬಯಕೆಗೆ ಇಂಬುಕೊಡುತ್ತೆ ಎಂದು ತಿಳಿದು ಮಹಾರಾಜ ಸ್ಕೂಲಿನ ಇಂಗ್ಲಿಷ್ ಮಾಧ್ಯಮದ ಸ್ಕೂಲಿಗೆ ಸೇರಿಸಿ ತೋಟಕ್ಕೆ ಹಿಂತಿರುಗಿದೆ. ತೇಜಸ್ವಿ ತೋಟದಲ್ಲೇ ಇದ್ದರು. `ಇಂಗ್ಲಿಷ್ ಮೀಡಿಯಂಗೆ ಸೇರಿಸಿದೆ~ ಎಂದು ಹೇಳುತ್ತಿದ್ದಂತೆ ಕೆಂಡಾಮಂಡಲವಾದರು.

 

`ಬೆನ್ನಿಗೆ ಚೂರಿ ಹಾಕಿದೆ~ ಎಂದರು. ಆಘಾತವಾಯ್ತು ನನಗೆ. ಇವಳ ಆಯ್ಕೆ ಎಂಜಿನಿಯರಿಂಗ್- ಇಂತಿರುವಾಗ ನನ್ನ ತಪ್ಪಾದರೂ ಎಲ್ಲಿ ಎಂದು ಚಿಂತಿಸಿದೆ. ಏಳರವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದಳು. ಮುಂದೆ ಎಂಜಿನಿಯರಿಂಗ್ ಪದವಿ ಗಳಿಸಿದಳು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆದಳು.ಡಾಯಿಟ್ಚ್ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರುವಾಗ ವಿದೇಶಿಯರನ್ನೊಳಗೊಂಡ ಸಂದರ್ಶಕರು `ನೀನು ಏಕೆ ಕನ್ನಡ ಮೀಡಿಯಂ ಆಯ್ಕೆ ಮಾಡಿಕೊಂಡೆ?~ ಎಂಬುದು ಅವಳಿಗೆ ಕೇಳಿದ ಮೊದಲ ಪ್ರಶ್ನೆ ಆಗಿತ್ತಂತೆ. `ನನ್ನ ತಂದೆ-ತಾಯಿಯರ ಅಭಿಪ್ರಾಯ; ಚಿಕ್ಕಂದಿನಲ್ಲಿ ಮಾತೃಭಾಷೆಯಲ್ಲಿ ಕಲಿತರೆ ವಿಷಯ ಗ್ರಹಿಕೆ ಸುಲಭವಾಗುತ್ತೆ, ಸ್ಪಷ್ಟವಾಗಿರುತ್ತದೆ ಅಂತ.

 

ಈಗ ನನ್ನ ಅಭಿಪ್ರಾಯವೂ ಅದೇ~ ಎಂದಳಂತೆ. ಈವತ್ತಿಗೆ ಹಾರ್ವರ್ಡ್‌ನ ಬಿಸಿನೆಸ್ ಸ್ಕೂಲ್ `ಎಂಜಿನಿಯರಿಂಗ್ ಲೀಡರ್ ಪ್ರೋಗ್ರಾಂ~ ಅನ್ನು ಮಾಡಿಕೊಂಡಿದ್ದಾಳೆ. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಇನ್ಸ್‌ಟಿಟ್ಯೂಟ್ ಸರ್ಟಿಫೈಡ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದಾಳೆ.

 

ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಯಾವುದೇ ರೀತಿಯ ಅಡಚಣೆಯಾಗಲಿ ಕಷ್ಟವಾಗಲಿ ಕಾಣುವುದಿಲ್ಲವಂತೆ. ಸಹೋದ್ಯೋಗಿಗಳು ಇವಳ ಇಂಗ್ಲಿಷ್ ಭಾಷೆಯ ಬಗ್ಗೆ, ವಿಷಯ ಗ್ರಹಿಸುವ ಸ್ಪಷ್ಟತೆ, ಸಾಮರ್ಥ್ಯದ ಬಗ್ಗೆಯೂ  ಅಚ್ಚರಿ ವ್ಯಕ್ತಪಡಿಸುತ್ತಾರಂತೆ.ಇದು ಹೇಗೆ ಸಾಧ್ಯವಾಯಿತೆಂದು ಕೇಳುತ್ತಾರಂತೆ. `ಸಂದರ್ಭಕ್ಕೆ ತಕ್ಕಂತೆ ಕನ್ನಡದಲ್ಲಿಯೂ ಇಂಗ್ಲಿಷಿನಲ್ಲಿಯೂ ಯೋಚಿಸುತ್ತೇನೆ~ ಎನ್ನುತ್ತಾಳೆ ಈಗ ಸುಸ್ಮಿತ.ವೃತ್ತಿ ನಿಮಿತ್ತ ಹಲವು ಬಾರಿ ನ್ಯೂಯಾರ್ಕ್‌ಗೆ ಮತ್ತು ಜರ್ಮನಿಗೂ ಹೋಗಿ ಬಂದಿದ್ದಾಳೆ. ಯುರೋಪ್ ಪೂರ್ತಿ ಸುತ್ತಾಡಿದ್ದಾಳೆ. ಆಲ್ಫ್ಸ್ ಪರ್ವತದ ಮೇಲೂ ಓಡಾಡಿದ್ದಾಳೆ. ಈಜಿಪ್ಟ್ ಒಳಹೊಕ್ಕು ಬಂದಿದ್ದಾಳೆ. ಗಂಡನ ಜತೆಯಲ್ಲಿ ಮಲೇಶಿಯಾ, ಶ್ರೀಲಂಕಾ ಪ್ರವಾಸ ಮಾಡಿದ್ದಾಳೆ. ಸಾಹಿತ್ಯದ ಪುಸ್ತಕಗಳನ್ನೂ ಓದುತ್ತಾಳೆ.ಅಳಿಯ ದೀಪಕ್ ಶೆಣೈ ಅವರೂ ಕನ್ನಡ ಮೀಡಿಯಂನಲ್ಲಿ ಹೈಸ್ಕೂಲು ಪೂರ್ತಿ ಓದಿರುವುದು. ಇವರೂ ಸಾಫ್ಟ್‌ವೇರ್ ಎಂಜಿನಿಯರ್. ಕನ್ನಡ, ಇಂಗ್ಲಿಷ್ ಸಾಹಿತ್ಯದ ತುಂಬಾ ಪುಸ್ತಕಗಳನ್ನು ಓದುತ್ತಾರೆ.ಎರಡನೇ ಮಗಳು ಈಶಾನ್ಯೆ, ಮೂಡಿಗೆರೆ ಕಾನ್ವೆಂಟಿನಲ್ಲಿ ಮೂರನೇ ತರಗತಿಯಲ್ಲಿದ್ದಾಗ ಒಮ್ಮೆ ಮೈಸೂರಿಗೆ ಹೋಗಿದ್ದೆವು. ಅವಳ ಅಜ್ಜಿ ಈಶಾನ್ಯೆಯನ್ನು ಎಷ್ಟು ಕರೆದರೂ ಓಗೊಡಲಿಲ್ಲ. ಹುಡುಕುತ್ತಾ ಹೋದರು.

 

ಅಜ್ಜಯ್ಯನ ಸ್ಟಡಿ ರೂಂ ಮೂಲೆಯಲ್ಲಿ `ನಾ ಕಂಡ ಜರ‌್ಮನಿ~ ಪುಸ್ತಕ ಪುಸ್ತಕ ಓದುತ್ತಾ ಕೂತಿದ್ದಾಳೆ! ಏಳನೇ ತರಗತಿಯಲ್ಲಿದ್ದಾಗ ಒಂದು ದಿನ ಜೋರಾಗಿ ಅಳುತ್ತಾ ಅಳುತ್ತಿದ್ದಳು, `ಅಜ್ಜಿ ಹೀಗೆ ಮಾಡಬಹುದಾ? (ಆವಾಗ ಅವರು ತೀರಿಕೊಂಡಿದ್ದರು). ಸುಸ್ಮಿತಳ ಹೆಸರನ್ನು ಮಾತ್ರ ಬರೆದಿದ್ದಾರೆ.

 

ನನಗೆ ವಾಲ್ಮೀಕಿ ರಾಮಾಯಣ ಪುಸ್ತಕ ಕೊಟ್ಟಿಲ್ಲ~ ಎಂದಳು. `ನೀನು ಹುಟ್ಟುವೆ ಎಂದು ಎರಡು ವರ್ಷಕ್ಕೆ ಮೊದಲೇ ಅಜ್ಜಿಗೆ ಹೇಗೆ ಗೊತ್ತಾಗಬೇಕು ಹೇಳೆ~ ಎಂದೆ. ನಕ್ಕಿದ್ದಳು. 8ನೇ ತರಗತಿಯಲ್ಲಿದ್ದಾಗ `ಕಾನೂರು ಹೆಗ್ಗಡತಿ~, ಒಂಬತ್ತನೇ ತರಗತಿಯಲ್ಲಿದ್ದಾಗ `ಮಲೆಗಳಲ್ಲಿ ಮದುಮಗಳು~, ಎಸ್ಸೆಸ್ಸೆಲ್ಸಿಯಲ್ಲಿದ್ದಾಗ `ನೆನಪಿನ ದೋಣಿಯಲ್ಲಿ~ ಓದಿದ್ದಳು.

 

ಅಜ್ಜಯ್ಯನಿಗೆ ಆಗಾಗ್ಗೆ ಕಾಗದ ಬರೆಯುತ್ತಿದ್ದಳು. `ನೀನು ಬೆಳೆಯುತ್ತಾ ಅನುಭವ ಹೆಚ್ಚಾದಂತೆ ಅರಿವಿನ ವಿಸ್ತಾರ ದೊಡ್ಡಗಾಗುತ್ತೆ~ ಎಂದು ಬರೆದಿದ್ದರು ಅವರು. ಇವಳ ಓದಿನ ಭರಾಟೆ ಹೀಗೆ.ಮೈಸೂರಿನ ಮಾನಸಗಂಗೋತ್ರಿ ಕನ್ನಡ ಮಾಧ್ಯಮ ಶಾಲೆಯಲ್ಲೇ ಪ್ರೌಢಶಾಲೆ ಪೂರೈಸಿದಳು. ಹತ್ತನೇ ತರಗತಿಯಲ್ಲೂ ಮೊದಲಿಗಳಾಗಿ ತೇರ್ಗಡೆಯಾದಳು. ಪಿಯುಸಿಯಲ್ಲಿ ಇಂಗ್ಲಿಷು ಮಾಧ್ಯಮಕ್ಕೆ ಬದಲಿಸಿದಾಗ ಮೊದಲೆರಡು ತಿಂಗಳು ತುಂಬಾ ಕಷ್ಟಪಟ್ಟಳು. ಕಾಲೇಜಿನಿಂದ ಸಪ್ಪೆಮೋರೆ ಹಾಕಿಕೊಂಡೇ ಬರುತ್ತಿದ್ದಳು.

 

`ಪಾಠ ಅರ್ಥವಾಗುತ್ತಿಲ್ಲ~ ಎನ್ನುತ್ತಿದ್ದಳು. ನಾನು ಧೈರ್ಯ ತುಂಬಿಕೊಡುತ್ತಿದ್ದೆ. ಈ ಸಂದರ್ಭದಲ್ಲಿ (1989ರಲ್ಲಿ) ತೇಜಸ್ವಿ `ಈಶಾ ಬೇಗ ಇಂಗ್ಲಿಷ್ ಮಾಧ್ಯಮವನ್ನು ಪಿಕಪ್ ಮಾಡಿಕೊಳ್ಳುತ್ತಾಳೆಂದು ನನ್ನ ಬಲವಾದ ನಂಬಿಕೆ.ಅವಳು ಒಂದಲ್ಲ ಒಂದು ಹಂತದಲ್ಲಿ ಈ ಸಂದಿಗ್ಧ ಪರಿಸ್ಥಿತಿ ಎದುರಿಸಲೇ ಬೇಕಾಗುತ್ತಿತ್ತು. ನಮ್ಮ ದೇಶದಲ್ಲಿಯಂತೂ ಇಂಗ್ಲಿಷ್ ಜ್ಞಾನ ಅನಿವಾರ್ಯವಾಗಿದೆ~ ಎಂದು ಕಾಗದ ಬರೆದಿದ್ದರು.ಇವಳೂ ಸೇರಿ ನಾಲ್ಕು ಹುಡುಗಿಯರು ಮಾತ್ರ ಕನ್ನಡ ಮಾಧ್ಯಮದಿಂದ ಬಂದವರು. ಒಂದು ದಿನ ಫಿಸಿಕ್ಸ್ ಕ್ಲಾಸಿನಲ್ಲಿ ಇಡೀ ತರಗತಿಗೆ ತಾನೊಬ್ಬಳೆ ವಿಷಯ ಸರಿಯಾಗಿ ಗ್ರಹಿಸಿದ್ದಳಾದ್ದರಿಂದ ಉತ್ತರ ಕೊಡಲು ಸಾಧ್ಯವಾಯ್ತೆಂದು ಹೆಮ್ಮೆಯಿಂದ ಹೇಳಿದ್ದಳು. `ಇದು ಕನ್ನಡದಲ್ಲಿ ಓದಿದ್ದರಿಂದ~ ಎಂದು ಅವಳ ಅನಿಸಿಕೆ.ಯಾವ ಮಾಧ್ಯಮದಲ್ಲಿ ಓದಿದರೂ ತರಗತಿಯಲ್ಲಿ ಮುಂದಿರಬೇಕಾದರೆ ಪರಿಶ್ರಮ ಬೇಕೇ ಬೇಕು. ಇವಳ ಅಪೇಕ್ಷೆಯಂತೆಯೇ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿ ಡಿಸ್ಟಿಂಕ್ಷನ್‌ನಲ್ಲೇ ಪದವಿ ಪಡೆದು ಸಂತೋಷಪಟ್ಟಳು. ಪೋಸ್ಟಲ್ ಕೋರ್ಸ್‌ನಲ್ಲಿನ ಎಂ.ಎಸ್. ನಲ್ಲಿ ಶೇ 98 ಫಲಿತಾಂಶ ಪಡೆದಳು.

 

ಮುಂದೆ ಹದಿನೈದು ದಿನಗಳಲ್ಲಿ `ಲಾರಾ ಇಂಗಲ್ಸ್~ ಪುಸ್ತಕಗಳ ಕೊನೆಯ ಭಾಗವನ್ನು ಕನ್ನಡಕ್ಕೆ ಭಾಷಾಂತರಿಸಿದಳು. ಅದು `ಪುಸ್ತಕ ಪ್ರಕಾಶನ~ದಿಂದ ಪ್ರಕಟಗೊಂಡು ಎರಡನೇ ಮುದ್ರಣಕ್ಕೂ ಬಂತು. ಎಲ್ಲರ ಮೆಚ್ಚುಗೆಯೂ ಸಿಕ್ಕಿತು. ಜೆರಾಲ್ಡ್ ಡ್ಯುರಲ್ ಇವಳ ನೆಚ್ಚಿನ ಲೇಖಕ. ಇವನನ್ನು ಗ್ರಹಿಸುವುದೇ ಕಷ್ಟ. ಇವನ ಪುಸ್ತಕದ ಭಾಷಾಂತರಕ್ಕೂ ಕೈಹಚ್ಚಿದ್ದಾಳೆ.ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಸೇರಿದಳು. ಅಮೆರಿಕಕ್ಕೂ ಹೋಗಿ ಬಂದಳು. ಒಂದು ಬಾರಿ ಕ್ಯಾಲಿಪೋರ್ನಿಯಾಕ್ಕೆ ಹೋಗಿದ್ದಾಗ ಅಲ್ಲಿ ಮಕ್ಕಳ ಹಬ್ಬ ಇತ್ತಂತೆ. ಆ ದಿನ ಸಹೋದ್ಯೋಗಿಗಳು ತಮ್ಮ ಮಕ್ಕಳ ಜತೆಗೆ ನೆರೆ ಮಕ್ಕಳನ್ನು ಕರೆತಂದಿದ್ದರಂತೆ. ಆಫೀಸಿನ ತುಂಬಾ ಮಕ್ಕಳ ಕಲರವ.

 

ಅವರಿಗೆ ಇವಳನ್ನು ಪರಿಚಯಿಸಿದ ಪರಿ; `ಇವಳು ಸಾಫ್ಟ್‌ವೇರ್ ಎಂಜಿನಿಯರ್, ಇಂಡಿಯಾದಿಂದ ಒಬ್ಬಳೇ ಬಂದಿದ್ದಾಳೆ, ಒಬ್ಬಳೇ ಜಗತ್ತು ಸುತ್ತಬಲ್ಲಳು, ಎಲ್ಲ ಕೆಲಸಗಳನ್ನು ಪ್ರೀತಿಯಿಂದ ಮಾಡಬಲ್ಲಳು, ಇವಳಂತೆ ನೀವು ಆಗಬಲ್ಲಿರಿ~ ಎಂದರಂತೆ.`ಆ ಅಮೆರಿಕನ್ ಮಕ್ಕಳಿಗೆ ಈ ಕನಸು ಬಿತ್ತಿದಾಗ ಪುಟ್ಟ ಮಕ್ಕಳ ಅರಳಿದ ಕಣ್ಣುಗಳು ನನ್ನನ್ನು ನೋಡುತ್ತಾ ಕಣ್ಣು ತುಂಬಿಕೊಳ್ಳುವಾಗ ನನ್ಮ ಬಾಲ್ಯದ ಕನ್ನಡ ಗಂಗೋತ್ರಿ ಸ್ಕೂಲು ನೆನಪಾಗಿ, ನನ್ನ ಕಣ್ಣಾಲಿ ತುಂಬಿ ಬಂದಿತು~ ಎಂದಳು ಈಶಾನ್ಯೆ.ಇದೆಲ್ಲ ನಮ್ಮ ಕುಟುಂಬದ ಹೆಮ್ಮೆಯ ಕ್ಷಣಗಳು. ನಮ್ಮ ಕನ್ನಡ ಮಕ್ಕಳ ಹೆಮ್ಮೆಯ ಕ್ಷಣಗಳು ಆಗಬಹುದಲ್ಲ. ಮೊದಲು ಗುಣಮಟ್ಟದ ಶಿಕ್ಷಣ ಕಲಿಸುವ ಶಾಲೆ ಇರಬೇಕು. ಜತೆಗೆ ಆರೋಗ್ಯ ಪೂರ್ಣ ಸ್ವಚ್ಛ ವಾತಾವರಣ ಅನಿವಾರ್ಯ. ಇದು ಬರೀ ಕನಸಾಗದೆ ನನಸಾಗಲಿ.

ಮಕ್ಕಳು ಬರುತ್ತಿಲ್ಲವೆಂದು ಕನ್ನಡ ಶಾಲೆಗಳನ್ನು ಸರ್ಕಾರವೇ ಮುಚ್ಚಲು ಹೊರಟಿದೆ. ಇಂಗ್ಲಿಷ್ ಇಲ್ಲದಿದ್ದರೆ ಮುಂದೆ ಭವಿಷ್ಯವೇ ಇಲ್ಲವೆಂದು ಹೆತ್ತವರು ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಮುಗಿಬೀಳುತ್ತಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣ ಎಂಬುದು ಜಾಗತಿಕ ಚಿಂತನೆಯಾಗಿದ್ದರೆ ಇಂಗ್ಲಿಷ್ ಮಾಧ್ಯಮದಿಂದಲೇ ಭವಿಷ್ಯ ಎಂಬ ಗೀಳು ರಾಜ್ಯದಲ್ಲಿ ಕನ್ನಡದಲ್ಲಿ ಕಲಿಕೆಗೆ ಅಡ್ಡಿಯಾಗಿದೆ.

 

ಮಕ್ಕಳು ಇಂಗ್ಲಿಷ್ ಶಾಲೆಗೆ ಸೇರುವುದಕ್ಕಿಂತ ಕಲಿಯುವುದು ಮುಖ್ಯ ಎಂಬುದನ್ನು ಹೆತ್ತವರು ಅರ್ಥಮಾಡಿಕೊಳ್ಳಬೇಕು. ಸರ್ಕಾರದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತವರು ಯಾವ ಎತ್ತರಕ್ಕೆ ಏರಬಲ್ಲರು ಎಂಬುದಕ್ಕೆ ಇಲ್ಲಿವೆ ಕೆಲವು ನಿದರ್ಶನ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry