ಕನ್ನಡ ಮಧುಬಾಲಾ

7

ಕನ್ನಡ ಮಧುಬಾಲಾ

Published:
Updated:
ಕನ್ನಡ ಮಧುಬಾಲಾ

ಕಪ್ಪು-ಬಿಳುಪು ಯುಗದ ಹಿಂದಿ ಚಿತ್ರರಂಗದಲ್ಲಿ ತಾರೆಯಾಗಿ ಮಿನುಗಿದ್ದರು ನಟಿ ಮಧುಬಾಲಾ. ಎಂಥವರನ್ನೂ ಮೋಡಿ ಮಾಡಬಲ್ಲ ಚೆಲುವು ಅವರದು. ಅವರಂತೆಯೇ ತೆರೆಮೇಲೆ ಸಹಜ ಸುಂದರಿಯಾಗಿ ಮಿನುಗಬೇಕು ಎಂಬ ಬಯಕೆಯುಳ್ಳ ನಟಿ ಕನ್ನಡದ ಮಧುಬಾಲಾ.ಇಂದು (ಅ.12) ಬಿಡುಗಡೆಯಾಗುತ್ತಿರುವ `ಕಾಲಾಯ ತಸ್ಮೈ ನಮಃ~ ಮಧುಬಾಲಾರಿಗೆ ನಾಯಕಿಯಾಗಿ ಮೊದಲ ಚಿತ್ರ. ಹಾಗಂತ ಬಣ್ಣದ ಲೋಕ ಅವರಿಗೆ ಹೊಸತಲ್ಲ.ಮೈಸೂರು ಮೂಲದ ಈ ಬೆಡಗಿಗೆ ಹೈಸ್ಕೂಲು ದಿನಗಳಲ್ಲಿಯೇ ನಟನೆಯ ನಂಟು ಬೆಸೆದಿತ್ತು. `ಹಾಯ್~ ಅವರು ನಟಿಸಿದ ಮೊದಲ ಚಿತ್ರ. ಆಗಿನ್ನೂ ಅವರು ಒಂಬತ್ತನೇ ತರಗತಿ ಓದುತ್ತಿದ್ದರು. ಆ ಚಿತ್ರಕ್ಕಿನ್ನೂ ಬಿಡುಗಡೆಯ ಭಾಗ್ಯ ಕೂಡಿಬಂದಿಲ್ಲ. ಬಳಿಕ `ಸಿದ್ಲಿಂಗು~ ಚಿತ್ರದಲ್ಲಿ ಹೈಸ್ಕೂಲು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡರು.`ಮದುವೆಮನೆ~ ಚಿತ್ರದಲ್ಲಿ ಪುಟ್ಟ ಪಾತ್ರ ಅವರದು. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ `ನಾಗಮಣಿ~ ಧಾರಾವಾಹಿಯ ಮುಖ್ಯಪಾತ್ರದಲ್ಲಿ ನಟಿಸುವ ಅವಕಾಶವೂ ಒಲಿದು ಬಂತು.`ಕಾಲಾಯ ತಸ್ಮೈ ನಮಃ~- ಚಿತ್ರದ ಶೀರ್ಷಿಕೆ ಅವರ ಬದುಕಿಗೂ ಸರಿಹೊಂದುತ್ತದೆ. ನಾಯಕಿಯಾಗುವ ಅದೃಷ್ಟ ಕೂಡಿಬಂದರೆ, ಅತ್ತ ಸಿನಿಮಾಕ್ಕಾಗಿ ಪರೀಕ್ಷೆಯನ್ನೇ `ತ್ಯಾಗ~ ಮಾಡುವ ಅನಿವಾರ್ಯ ಸಂಕಟವೂ ಎದುರಾಗಿತ್ತು. ಚಿತ್ರ ಸೆಟ್ಟೇರುವುದು ಸ್ವಲ್ಪ ತಡವಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯೂ ಸಮೀಪಿಸಿತ್ತು. ಓದಲು ಸಮಯ ಸಿಗದ ಕಾರಣ ಮಧುಬಾಲಾ ಪರೀಕ್ಷೆಗೇ ಕುಳಿತುಕೊಳ್ಳಲಿಲ್ಲ. ಸಿನಿಮಾ ಮುಗಿದ ಬಳಿಕ ಅವರು ಪರೀಕ್ಷೆ ತೆಗೆದುಕೊಂಡಿದ್ದಾರೆ.ಉತ್ತಮ ಅಂಕ ಗಳಿಸಬೇಕು ಎನ್ನುವುದು ಅವರ ಮುಂದಿರುವ ಗುರಿ. ಸಿನಿಮಾ ಯಾನದ ಆರಂಭ ಚೆನ್ನಾಗಿಯೇ ಇದ್ದರೂ ಮಧುಬಾಲಾ ಮುಂದೆ ಓದಿನ ಮೇಲೆಯೇ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಅರಸಿ ಬಂದ ಕನ್ನಡ ಮತ್ತು ತೆಲುಗು ಚಿತ್ರಗಳ ಹಲವು ಅವಕಾಶಗಳನ್ನು ಒಲ್ಲೆ ಎಂದಿದ್ದಾರೆ.ಎಂಬಿಎ ಮಾಡುವ ಕನಸು ಅವರಲ್ಲಿ ಗೂಡು ಕಟ್ಟಿದೆ. `ಎರಡು ದೋಣಿಯ ಮೇಲೆ ಕಾಲಿಡಲು ಸಾಧ್ಯವಿಲ್ಲ. ಓದು ಅಥವಾ ಸಿನಿಮಾ ಎರಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕು. ಪಿಯುಸಿ ಮುಗಿಯುವವರೆಗೂ ಬಣ್ಣ ಹಚ್ಚುವುದಿಲ್ಲ. ಬಳಿಕವಷ್ಟೇ ಅದರ ಬಗ್ಗೆ ಯೋಚಿಸುತ್ತೇನೆ~ ಎನ್ನುತ್ತಾರೆ ಮಧುಬಾಲಾ. ಮಗಳು ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂಬ ತಂದೆ ತಾಯಿಯ ಆಶಯವನ್ನು  ಪೂರೈಸುವ ತೀರ್ಮಾನವನ್ನು ಅವರು ತೆಗೆದುಕೊಂಡಿದ್ದಾರೆ.`ಕಾಲಾಯ ತಸ್ಮೈ ನಮಃ~ ಚಿತ್ರದ ಬಗ್ಗೆ ಮಧುಬಾಲಾ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೊದಲ ಚಿತ್ರದ ಫಲಿತಾಂಶದ ಬಗ್ಗೆ ತುಸು ಭಯ ಕಾಡುತ್ತಿದ್ದರೂ, ಸಿನಿಮಾ ಮೂಡಿಬಂದಿರುವ ಬಗೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.ತಮ್ಮನ್ನು ತಮ್ಮಂತೆಯೇ ತೋರಿಸಿದ್ದಾರೆ ಎಂಬ ಖುಷಿ ಅವರದು. ಮಧ್ಯಮವರ್ಗ ಕುಟುಂಬದ ಸರಳ ಹುಡುಗಿಯಾಗಿ ಕಾಣಿಸಿಕೊಂಡಿರುವ ಮಧುಬಾಲಾ ನಿಜಜೀವನದಲ್ಲಿ ಇರುವಂತೆಯೇ ತೆರೆ ಮೇಲೆ ಕಾಣಿಸಿಕೊಂಡಿದ್ದಾರಂತೆ.ಮೇಕಪ್, ಉಡುಗೆ ತೊಡುಗೆ ಎಲ್ಲವೂ ಸಹಜ ಜೀವನದಲ್ಲಿ ಇದ್ದಂತೆ ಇದೆ. ಚಿತ್ರವೂ ರಿಯಾಲಿಸ್ಟಿಕ್ ಆಗಿದೆ ಎನ್ನುತ್ತಾರೆ ಅವರು. ಸಂಪ್ರದಾಯಸ್ಥ ಕುಟುಂಬದಿಂದ ಬಂದ ಅವರು ಸಿನಿಮಾವನ್ನು ವೃತ್ತಿಯಾಗಿ ತೆಗೆದುಕೊಂಡರೂ ಸಾಂಪ್ರದಾಯಿಕ ದಿರಿಸುಗಳಲ್ಲಿ ಕಾಣಿಸಿಕೊಳ್ಳುವಂಥ ಪಾತ್ರಗಳಲ್ಲಿ ಮಾತ್ರ ನಟಿಸುವ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಗ್ಲಾಮರಸ್ ಪಾತ್ರಗಳತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಎಂಬ ಅಚಲ ನಿರ್ಧಾರ ಅವರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry