`ಕನ್ನಡ- ಮರಾಠಿ ಸಾಮರಸ್ಯ ಪ್ರಕಟಿಸಿ'

7

`ಕನ್ನಡ- ಮರಾಠಿ ಸಾಮರಸ್ಯ ಪ್ರಕಟಿಸಿ'

Published:
Updated:

ಬೆಳಗಾವಿ: `ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಪರಸ್ಪರ ಸ್ವೀಕರಣೆ ಆಗಬೇಕು. ಇವೆರಡರ ನಡುವಿನ ಸಾಮರಸ್ಯವನ್ನು ಪ್ರಕಟಿಸಬೇಕು' ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಶಾಂತಿನಾಥ ದಿಬ್ಬದ ಅಭಿಪ್ರಾಯಪಟ್ಟರು.ನಗರದ ಮರಾಠಾ ಮಂಡಳ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಚಕ್ಷುರ್ವೈಸತ್ಯಮ' ಮರಾಠಿ ಕೃತಿಯ ಕನ್ನಡಾನುವಾದ `ಕಣ್ಣು ಕಂಡ ಸತ್ಯಗಳು' ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಕೃತಿಯನ್ನು ವಿಮರ್ಶಿಸಿದರು.`ಮರಾಠಿ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳುತ್ತಿವೆ. ಅದೇ ರೀತಿ ಬೆಳಗಾವಿ ಪರಿಸರದಲ್ಲಿ ಕನ್ನಡ ಕೃತಿ ಮರಾಠಿ ಭಾಷೆಗೆ ಯಾವ ಪ್ರಮಾಣದಲ್ಲಿ ತುರ್ಜುಮೆ ಆಗಿವೆ ಎಂಬುದರ ಅಧ್ಯಯನ ನಡೆಯಬೇಕು' ಎಂದರು.`ಮನುಷ್ಯ ಜಾತಿ ಒಂದೇ ಇರುವಾಗ ಭಾಷೆಗಳ ನಡುವೆ ಗೊಂದಲ ಏಕೆ? ಮನುಷ್ಯನ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕಬೇಕು' ಎಂದು ಹೇಳಿದರು.`ಕಣ್ಣು ಕಂಡ ಸತ್ಯಗಳು' ಕೃತಿಯು ಬೆಳಗಾವಿಯ ಗ್ರಾಮ್ಯ ಭಾಷೆಯಲ್ಲಿ ಪ್ರಕಟಗೊಂಡಿದೆ. ಸಾಹಿತ್ಯವು ಶಿಕ್ಷಣ ಹಾಗೂ ಮನೋರಂಜನೆ ನೀಡಬೇಕು. ಈ ಕೃತಿಯಲ್ಲಿ ಇವೆರಡೂ ಅಂಶಗಳು ಇವೆ' ಎಂದು ವಿಶ್ಲೇಷಿಸಿದರು.ಕೃತಿಯನ್ನು ಬಿಡುಗಡೆ ಮಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಮಹೇಶಪ್ಪ, `ನ್ಯಾಯಕ್ಕಾಗಿ ಹೋರಾಟ ನಡೆಸುವುದು ಇಂದು ಅನಿವಾರ್ಯವಾಗಿದೆ. ಹೋರಾಟ ನಡೆಸದಿದ್ದರೆ, ನ್ಯಾಯವೇ ಸಿಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದರು.`ಸಾಹಿತ್ಯಕ್ಕೆ ಯಾವುದೇ ಜಾತಿ-ಭೇದ ಭಾವ ಇಲ್ಲ. ಎಲ್ಲ ಸಂವೇದನೆ, ಭಾವನೆಗಳನ್ನು ಇದು ಹೊಂದಿರುತ್ತವೆ. ಹೀಗಾಗಿ ಸಾಹಿತ್ಯದಲ್ಲಿ ಅನರ್ಥ ಕಲ್ಪಿಸುವುದಕ್ಕೆ ಅವಕಾಶ ನೀಡಬಾರದು. ಈ ಕೃತಿಯು ಕನ್ನಡ ಮತ್ತು ಮರಾಠಿ ಬಾಂಧವ್ಯವನ್ನು ಬೆಸೆಯಲು ಅನುಕೂಲವಾಗಿದೆ' ಎಂದು ಹೇಳಿದರು.`ಈ ಕೃತಿಯು ಕಣ್ಣು ಕಂಡ ಸತ್ಯಗಳ ಆಧಾರದಲ್ಲಿ ರಚನೆಗೊಂಡಿದೆ. ನ್ಯಾಯಾಲಯದಲ್ಲಿ ಕಣ್ಣಿಗೆ ಕಾಣದ ಇನ್ನೂ ಹಲವು ಸತ್ಯ ಘಟನೆಗಳನ್ನು ಬೆಳಕಿಗೆ ತರಬೇಕಾದ ಕೆಲಸಗಳನ್ನು ಸಾಹಿತಿಗಳು ಮಾಡಬೇಕು' ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮರಾಠಿ ವಿಭಾಗದ ಮುಖ್ಯಸ್ಥ ಡಾ. ವಿನೋದ ಗಾಯಕ ವಾಡ, `ಸತ್ಯದ ಶೋಧ ಬಹಳ ಕಠಿಣ. ಈ ಕೃತಿಯಲ್ಲಿ ಅಂಥ ಪ್ರಯತ್ನವನ್ನು ಮಾಡಿರುವುದು ಶ್ಲಾಘನೀಯ'  ಎಂದರು. ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ರಮಾ ಮರಾಠೆ, ಪತ್ರಕರ್ತ ಸರಜೂ ಕಾಟ್ಕರ್, ಲೇಖಕ ಡಾ. ಸಿದ್ರಾಮ ಕಾರ್ಣಿಕ, ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡ ಮಠ, ಮರಾಠಾ ಮಂಡಳದ ಅಧ್ಯಕ್ಷೆ ರಾಜಶ್ರೀ ಹಲಗೇಕರ, ಹಿರಿಯ ವಕೀಲ ಕೆ.ಬಿ. ಹನ್ನುರಕರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry