ಕನ್ನಡ ಮಾಧ್ಯಮ ಕಡ್ಡಾಯವಾಗಲಿ

7

ಕನ್ನಡ ಮಾಧ್ಯಮ ಕಡ್ಡಾಯವಾಗಲಿ

Published:
Updated:
ಕನ್ನಡ ಮಾಧ್ಯಮ ಕಡ್ಡಾಯವಾಗಲಿ

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ (ಬೆಂಗಳೂರು): ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವುದು, ಹಿಂದುಳಿದ ಪ್ರದೇಶವಾದ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವುದು ಸೇರಿದಂತೆ ಒಂಬತ್ತು ನಿರ್ಣಯಗಳನ್ನು ಕೈಗೊಂಡ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅವುಗಳ ಜಾರಿಗೆ ಆಗ್ರಹಿಸಿತು.

ಭಾನುವಾರ ನಡೆದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಮಂಡಿಸಿದ ನಿರ್ಣಯಗಳನ್ನು ಸಮ್ಮೇಳನದಲ್ಲಿ ಪಾಲ್ಗೊಂಡ ಸಹಸ್ರ ಸಹಸ್ರ ಕನ್ನಡ ಪ್ರೇಮಿಗಳು ಒಕ್ಕೊರಲಿನಿಂದ ಅನುಮೋದಿಸಿದರು.

ಸರ್ಕಾರ 1ರಿಂದ 4ನೇ ತರಗತಿಯವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಬೇಕು. ತಾರತಮ್ಯವಿಲ್ಲದ ಶಿಕ್ಷಣವನ್ನು ಪ್ರತಿಪಾದಿಸುವ ಸಮಾನ ಶಿಕ್ಷಣ ನೀತಿಯನ್ನು ಸರ್ಕಾರ ಜಾರಿಗೆ ತರಬೇಕು. ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೋರ್ಟ್ ತೀರ್ಪಿನ ಅನ್ವಯ ತ್ರಿಭಾಷಾ ಸೂತ್ರದಂತೆ ಒಂದು ವಿಷಯವಾಗಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಸಮ್ಮೇಳನ ಒತ್ತಾಯಿಸಿತು.

ಜೀವನ ನಿರ್ವಹಣೆಗಾಗಿ ಬೆಂಗಳೂರು ಹಾಗೂ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ನೆಲೆಸಿರುವ ಅನ್ಯಭಾಷಿಗರು ಕನ್ನಡವನ್ನು ಕಡ್ಡಾಯವಾಗಿ ಕಲಿತು ವ್ಯಾವಹಾರಿಕ ಭಾಷೆಯಾಗಿ ಬಳಸಬೇಕು ಎಂದು ಸಮ್ಮೇಳನ ಸಲಹೆ ನೀಡಿತು.

ಸ್ವಾತಂತ್ರ್ಯ ಬಂದು ಅನೇಕ ದಶಕಗಳೇ ಕಳೆದರೂ ಹೈದರಾಬಾದ್ ಕರ್ನಾಟಕ ಪ್ರದೇಶ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಈ ಭಾಗದ ಸ್ಥಳೀಯರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ 371ನೇ ವಿಧಿಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸುವ ನಿರ್ಣಯ ಅಂಗೀಕರಿಸಲಾಯಿತು.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಡಬ್ಬಿಂಗ್‌ನಿಂದ ದೂರವಿದ್ದ ಕನ್ನಡ ಚಿತ್ರರಂಗ ಮತ್ತೆ ಡಬ್ಬಿಂಗ್ ಸಂಸ್ಕೃತಿಯ ಮೋಹಕ್ಕೆ ಒಳಗಾಗುತ್ತಿರುವುದನ್ನು ವಿರೋಧಿಸಿದ ಸಮ್ಮೇಳನ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಮಾರಕವಾದ ಡಬ್ಬಿಂಗ್ ಚಿತ್ರ ನಿರ್ಮಾಣಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿತು.

ಉಪಸಮಿತಿ ರಚಿಸಿ ಪದೇ ಪದೇ ಸರ್ಕಾರದ ಮೇಳೆ ಒತ್ತಡ ತಂದರೂ ಹಿಂದಿನ ಸಮ್ಮೇಳನಗಳ ನಿರ್ಣಯಗಳು ಜಾರಿಗೆ ಬಂದಿಲ್ಲ. ಇನ್ನಾದರೂ ಹಳೆಯ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಶ್ರಮಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿತು.

ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರಾಕರಿಸಿರುವ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರ ಕ್ರಮವನ್ನು 77ನೇ ಕನ್ನಡ ಸಾಹಿತ್ಯ ಸಮ್ಮೇಳನ ಒಕ್ಕೊರಲಿನಿಂದ ಖಂಡಿಸಿತು. ಕನ್ನಡಿಗರನ್ನು ಅವಮಾನಿಸಿದವರು ಎಂತಹ ಉನ್ನತ ಸ್ಥಾನದಲ್ಲಿದ್ದರೂ ಅವರ ನಿಲುವನ್ನು ವಿರೋಧಿಸುತ್ತದೆ ಎಂದು ಸಾರಿ ಹೇಳಿತು.

ಇದೇ ವೇಳೆ ಚಿದಾನಂದ ಮೂರ್ತಿ ಅವರಿಗೆ ನ್ಯಾಯ ದೊರೆಯದೇ ಇದ್ದರೆ ಚಳವಳಿ ಹೂಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಎಚ್ಚರಿಕೆ ನೀಡಿತು. ಕನ್ನಡಕ್ಕಾಗಿ ದುಡಿದವರ ಪರವಾಗಿ ಸಾಹಿತ್ಯ ಪರಿಷತ್ತು ನಿಲ್ಲಲಿದೆ. ಸಂಬಂಧಪಟ್ಟವರು ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪರಿಷತ್ತು ಆಗ್ರಹಿಸಿತು.

‘ಈ ನಾಡಿನ ಸಾರಸ್ವತ ಪ್ರಪಂಚವನ್ನು ಯಾರೇ ಅಪಮಾನ ಮಾಡಿದ್ದರೂ ಅದನ್ನು ಸಹಿಸುವುದಿಲ್ಲ. ಇದು ಕನ್ನಡ ಸಾಹಿತ್ಯ ಪರಿಷತ್ತಿನ ನಿಲುವು ಕೂಡ ಆಗಿದೆ’ ಎಂದು ಹಾಲಂಬಿ ಅವರು ಭಾವೋದ್ವೇಗದೊಂದಿಗೆ ತಿಳಿಸಿದರು.

ತುಂಬಿದ ಅಧಿವೇಶನದಲ್ಲಿ ಮಂಡಿಸಲಾದ ಈ ನಿರ್ಣಯವನ್ನು ಸಭಿಕರು ಅಪಾರ ಕರತಾಡನದೊಂದಿಗೆ ಸ್ವಾಗತಿಸಿದರು. ಕೆಲವರು ಎದ್ದು ನಿಂತು ರಾಜ್ಯಪಾಲರು ಅಧಿಕಾರ ತೊರೆಯಲಿ ಎಂದು ಆಗ್ರಹಿಸಿದರು.

ಪ್ರತಿವರ್ಷ ಪಂಪ ಪ್ರಶಸ್ತಿಯನ್ನು ಪಂಪನ ಜನ್ಮಸ್ಥಳವಾದ ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿಯೇ ನೀಡಬೇಕು. ಸರ್ಕಾರ ಅಣ್ಣಿಗೇರಿಯಲ್ಲಿ ಸಮಾರಂಭ ಏರ್ಪಡಿಸಿ ಸಾಹಿತಿಗಳನ್ನು ಸನ್ಮಾನಿಸಬೇಕು. ಕನ್ನಡಪರ ಹೋರಾಟಗಾರರ ವಿರುದ್ಧ ಹೂಡಲಾಗಿರುವ ಪೊಲೀಸ್ ಮೊಕದ್ದಮೆಗಳನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಲಾಯಿತು.

ಜಿಲ್ಲೆ ಮತ್ತು ತಾಲ್ಲೂಕು ಸಾಹಿತ್ಯ ಪರಿಷತ್ತುಗಳಿಗೆ ಸರ್ಕಾರ ಆಯಾ ನಗರಗಳ ಕೇಂದ್ರ ಭಾಗದಲ್ಲಿ ಉಚಿತ ನಿವೇಶನ ನೀಡಬೇಕು. ಸಾಹಿತ್ಯ ಭವನ ನಿರ್ಮಾಣ ಯೋಜನೆಗೆ ಸರ್ಕಾರ ಧನ ಸಹಾಯ ಒದಗಿಸಬೇಕು ಎಂಬ ನಿರ್ಣಯ ಸಮ್ಮೇಳನದಲ್ಲಿ ಮಂಡನೆಯಾಯಿತು.

77ನೇ ಅಖಿಲ ಭಾರತ ಸಮ್ಮೇಳನವನ್ನು ಯಶಸ್ವಿಗೊಳಿಸಿದವರನ್ನು ಬಹಿರಂಗ ಅಧಿವೇಶನದಲ್ಲಿ ಸನ್ಮಾನಿಸಲಾಯಿತು. 76ನೇ ಸಾಹಿತ್ಯ ಸಮ್ಮೇಳನದಿಂದ ಈಚೆಗೆ ನಿಧನ ಹೊಂದಿದ ನಾಡಿನ ಅನೇಕ ಗಣ್ಯರಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್, ಗೌರವ ಕಾರ್ಯದರ್ಶಿಗಳಾದ ಸಂಗಮೇಶ ಬಾದವಾಡಗಿ, ಪ್ರೊ. ಎಚ್.ಕೆ. ಮಳಲಿಗೌಡ ಮತ್ತಿತರರು ಉಪಸ್ಥಿತರಿದ್ದರು. 

 

ನಿರ್ಣಯಗಳು...

ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ.

ಹಿಂದಿನ ನಿರ್ಣಯಗಳು ಅನುಷ್ಠಾನಗೊಳ್ಳಲಿ.

ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಕಸಾಪಗೆ ನಿವೇಶನ ಬೇಕು.

ಡಬ್ಬಿಂಗ್ ಸಂಸ್ಕೃತಿಗೆ ಅವಕಾಶ ಬೇಡ.4ಅಣ್ಣಿಗೇರಿಯಲ್ಲೇ ಪಂಪ ಪ್ರಶಸ್ತಿ ನೀಡಿ.

ಚಿಮೂಗೆ ಅಗೌರವ ಖಂಡನೀಯ.

ಸಂವಿಧಾನದ 371ನೇ ವಿಧಿಗೆ ತಿದ್ದುಪಡಿಯಾಗಲಿ.

ಅನ್ಯಭಾಷಿಗರು ಕನ್ನಡ ಕಲಿಯಬೇಕು.

ವಿಷ್ಣು, ಅಶ್ವತ್ಥರನ್ನು ಮರೆತರು...

ಸಮ್ಮೇಳನದ ನಿರ್ಣಯ ಮಂಡನೆಗೂ  ಮುನ್ನ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಾಲಂಬಿ ಅವರು ಅಗಲಿದ ಗಣ್ಯರ ಪಟ್ಟಿ ಓದಿದರು. ಆದರೆ ಅದರಲ್ಲಿ ನಟ ವಿಷ್ಣುವರ್ಧನ್, ಗಾಯಕ ಸಿ. ಅಶ್ವತ್ಥ್ ಅವರ ಹೆಸರು ಬಿಟ್ಟು ಹೋಗಿತ್ತು. ಇದನ್ನು ಸಭಿಕರು ನೆನಪಿಸಿದಾಗ ಅವರ ಹೆಸರನ್ನು ಸ್ಮರಿಸಲಾಯಿತು.

ಇನ್ನೂ ಕೆಲವರು ಕೈ ಎತ್ತಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಅವರು ‘ಹೆಸರಿಸಲು ಸಾಧ್ಯವಾಗದ ಅನೇಕ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ’ ಎಂದು ಹೇಳಿದರು.

ಚಿಮೂ ಪರ ನಿಂತ ಸಮ್ಮೇಳನ

ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರಾಕರಿಸಿರುವ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರ ಕ್ರಮವನ್ನು 77ನೇ ಕನ್ನಡ ಸಾಹಿತ್ಯ ಸಮ್ಮೇಳನ ಒಕ್ಕೊರಲಿನಿಂದ ಖಂಡಿಸಿತು. ಈ ಸಂಬಂಧ ನಿರ್ಣಯವನ್ನು ಅಂಗೀಕರಿಸಿದ ಸಮ್ಮೇಳನದ ಬಹಿರಂಗ ಅಧಿವೇಶನ, ಕನ್ನಡಿಗರನ್ನು ಅವಮಾನಿಸಿದವರು ಎಂತಹ ಉನ್ನತ ಸ್ಥಾನದಲ್ಲಿದ್ದರೂ ಅವರ ನಿಲುವನ್ನು ವಿರೋಧಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry