ಬುಧವಾರ, ಜನವರಿ 22, 2020
25 °C
ಚಿತ್ರದುರ್ಗ ಕೋಟೆ ಪ್ರವೇಶ ಟಿಕೆಟ್‌ನಲ್ಲಿ ಆಂಗ್ಲ, ಹಿಂದಿ ಭಾಷೆ

ಕನ್ನಡ ಮಾಹಿತಿ ಮುದ್ರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರದ ಕೋಟೆ ವೀಕ್ಷಣೆಗೆ ಪ್ರವಾಸಿಗರಿಂದ ಪ್ರವೇಶಕ್ಕಾಗಿ ಶುಲ್ಕ ಪಡೆದು ನೀಡುವ ಟಿಕೆಟ್‌ನಲ್ಲಿ ಕನ್ನಡದಲ್ಲೇ ಮಾಹಿತಿಯನ್ನು ಮುದ್ರಿಸುವಂತೆ ಒತ್ತಾಯಿಸಿ ವಂದೇ ಮಾತರಂ ಜಾಗೃತಿ ವೇದಿಕೆ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.‘ಪ್ರಸ್ತುತ ಟಿಕೆಟ್‌ನ ಎರಡೂ ಕಡೆಯಲ್ಲಿ ಆಂಗ್ಲ ಭಾಷೆ ಮತ್ತು ಹಿಂದಿಯಲ್ಲಿ ಮಾಹಿತಿ ಮುದ್ರಿಸಲಾಗಿದೆ. ಜೊತೆಗೆ ಐತಿಹಾಸಿಕ ಚಿತ್ರದುರ್ಗದ ಕೋಟೆಗೆ ಸಂಬಂಧಿಸಿದ ಯಾವುದೇ ಚಿತ್ರಗಳಿಲ್ಲ. ಇರುವ ಚಿತ್ರಗಳೆಲ್ಲ ಬೇರೆ ಬೇರೆ ರಾಜ್ಯದ ಐತಿಹಾಸಿಕ ತಾಣಗಳದ್ದಾಗಿದೆ. ಇದರಿಂದಾಗಿ ಕನ್ನಡಿಗರಿಗೆ ಮಾತೃಭಾಷೆಯಲ್ಲಿ ಮಾಹಿತಿ ದೊರೆಯುತ್ತಿಲ್ಲ, ಜೊತೆಗೆ ಕೋಟೆ ನಾಡಿನ ಪ್ರವಾಸೋದ್ಯಮ ಪ್ರಚಾರಕ್ಕೂ ತಡೆಯಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.‘ಕೋಟೆ ಪ್ರವಾಸಕ್ಕೆ ಬರುವವರೆಲ್ಲ ನಮ್ಮ ರಾಜ್ಯದವರೇ ಆಗಿರುತ್ತಾರೆ. ಹೀಗಿದ್ದಾಗ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾಹಿತಿ ನೀಡುವ ಅಗತ್ಯವಾದರೂ  ಏನಿದೆ? ಪ್ರವಾಸೋದ್ಯಮ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದರೂ, ಅಭಿವೃದ್ಧಿಯಲ್ಲಿ ರಾಜ್ಯದ ಪಾಲೂ ಇದೆ. ಆ ದೃಷ್ಟಿಯಿಂದಲಾದರೂ ಕನ್ನಡದಲ್ಲಿ ಮಾಹಿತಿ ಹಾಗೂ ಕರ್ನಾಟಕದ ಪ್ರವಾಸಿ ತಾಣಗಳ ಚಿತ್ರಗಳನ್ನು ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.ಹೊಂಡಕ್ಕೆ ಬೇಲಿ ಹಾಕಿ: ಕೋಟೆಯ ಮೇಲ್ಭಾಗದಲ್ಲಿರುವ ಗೋಪಾಲಸ್ವಾಮಿ ಹೊಂಡದಲ್ಲಿ ಒಂದು ವರ್ಷದಲ್ಲಿ 15ಕ್ಕೂ ಹೆಚ್ಚು ಯುವಕರು ಈಜಲು ಹೋಗಿ ಪ್ರಾಣ ತೆತ್ತಿದ್ದಾರೆ. ಇಷ್ಟಾದರೂ ಪ್ರವಾಸೋದ್ಯಮ ಇಲಾಖೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಗೋಪಾಲಸ್ವಾಮಿ ಹೊಂಡಕ್ಕೆ ಬೇಲಿ ಹಾಕಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಶಿವಕುಮಾರ್ ತಿಳಿಸಿದರು.ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾ ಘಟಕದ ಗೌರವ ಉಪಾಧ್ಯಕ್ಷ ಪುರುಷೋತ್ತಮ, ಸೈಯದ್ ಇಸ್ಮಾಯಿಲ್, ಹುಚ್ಚವ್ವನಹಳ್ಳಿ ಪ್ರಸನ್ನ, ಎಚ್.ಇ.ಮಾರುತಿ, ಭರತ್ ಠಾಕೂರ್, ಅಂಜನಮೂರ್ತಿ, ಎಂ.ಡಿ.ಅಶ್ರಫ್, ಪ್ರಸಾದ್, ಆರ್.ಕೆ.ಕೋಟೇಶ್ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)