ಸೋಮವಾರ, ಮೇ 10, 2021
21 °C

ಕನ್ನಡ ರಥೋತ್ಸವ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಕ್ಷಿಣ ಭಾರತದಲ್ಲಿ ಅಪರೂಪವಾದ ಪಂಚ ರಥೋತ್ಸವ ಜಿಲ್ಲೆಯ ನಂಜನಗೂಡಿನಲ್ಲಿ ಪ್ರತಿ ವರ್ಷ ನಡೆಯುತ್ತದೆ. ಈ ವರ್ಷ ಆರನೇ ರಥೋತ್ಸವಕ್ಕೆ ನಂಜನಗೂಡು ಸಿದ್ಧಗೊಂಡಿದೆ. ಸಾಮಾನ್ಯವಾಗಿ ಅಲ್ಲಿ ಚಿಕ್ಕ ಜಾತ್ರೆ ಹಾಗೂ ದೊಡ್ಡ ಜಾತ್ರೆ ನಡೆಯುತ್ತವೆ. ಮಾರ್ಚ್ ತಿಂಗಳಲ್ಲಿ ದೊಡ್ಡ ಜಾತ್ರೆ ಹಾಗೂ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಚಿಕ್ಕ ಜಾತ್ರೆ ಜರುಗುತ್ತವೆ. ಈ ವರ್ಷ ದೊಡ್ಡ ಜಾತ್ರೆಯ ನಂತರ ನಂಜನಗೂಡಿನ, ತಾಲ್ಲೂಕಿನ ಹಾಗೂ ಜಿಲ್ಲೆಯ ಜನರಿಗೆ ಬೋನಸ್ ರೂಪದಲ್ಲಿ ಕನ್ನಡದ ರಥೋತ್ಸವ ಜೂನ್ 15 ಹಾಗೂ 16ರಂದು ಅಲ್ಲಿ ನಡೆಯಲಿದೆ. ಅದು ಮೈಸೂರು ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನ.

ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಸಡಗರದಿಂದ ಪಾಲ್ಗೊಳ್ಳಲು ಜಿಲ್ಲೆಯ ಜನತೆ ಸಜ್ಜಾಗಿದ್ದಾರೆ.ಶುಕ್ರವಾರ ಬೆಳಿಗ್ಗೆಯಿಂದ ಸಮ್ಮೇಳನಕ್ಕೆ ಸಂಬಂಧಿಸಿದ ಬಂಟಿಂಗ್ಸ್, ಫ್ಲೆಕ್ಸ್, ಕನ್ನಡ ಬಾವುಟಗಳನ್ನು ಅಲ್ಲಲ್ಲಿ ಕಟ್ಟಲಾಗಿದೆ. ಸರ್ವಾಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ ಅವರ ಮೆರವಣಿಗೆ ನಡೆಯುವ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅವರನ್ನು ಕರೆದೊಯ್ಯುವ ತೆರೆದ ಜೀಪು ಸಜ್ಜಾಗಿದೆ. ಸಮ್ಮೇಳನ ನಡೆಯುವ ಶ್ರೀಕಂಠೇಶ್ವರ ಸ್ವಾಮಿ ಕಲಾಮಂದಿರದ ಸುತ್ತಮುತ್ತ ತಳಿರುಗಳನ್ನು ಕಟ್ಟಲಾಗಿದೆ. ಇದಕ್ಕೆ ಸಂಬಂಧಿಸಿ ಪಟ್ಟಣದ ಗಣ್ಯರು ಶುಕ್ರವಾರ ಸಂಜೆಯಿಂದ ಕಲಾಮಂದಿರದಲ್ಲಿ ನೆರೆದು ಸಲಹೆ-ಸೂಚನೆಗಳನ್ನು ನೀಡಿದರು.ಉಚಿತ ಸಿಹಿ ವಿತರಣೆ

ಸಮ್ಮೇಳನದಲ್ಲಿ ಭಾಗವಹಿಸುವ ಸುಮಾರು 5 ಸಾವಿರ ಜನರಿಗೆ ಶನಿವಾರ ಮಧ್ಯಾಹ್ನದ ಊಟಕ್ಕೆ ನಂಜನಗೂಡಿನ ಹೋಟೆಲ್ ಮಾಲೀಕರ ಸಂಘದಿಂದ ಉಚಿತವಾಗಿ ಜಿಲೇಬಿಗಳನ್ನು ನೀಡಲಾಗುತ್ತದೆ.ಭಾನುವಾರ ಮಧ್ಯಾಹ್ನದ ಊಟಕ್ಕೆ ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕ ಮಹಾದೇವ ಅವರು 5 ಸಾವಿರ ಲಾಡುಗಳನ್ನು ನೀಡಲು ಸಜ್ಜಾಗುತ್ತಿದ್ದಾರೆ.ಮತ್ತೆ ವೈಭವ?:

`ನಂಜನಗೂಡಿನಲ್ಲಿ ಕಪಿಲಾ ನದಿಯಿದೆ. ರೈಲ್ವೆ ವ್ಯವಸ್ಥೆ ಚೆನ್ನಾಗಿದೆ. ಮಂಡಕಳ್ಳಿ ವಿಮಾನ ನಿಲ್ದಾಣವಿದೆ. ಹೀಗಾಗಿ ತಾಲ್ಲೂಕಿನಲ್ಲಿ ಸುಮಾರು 76 ಕಾರ್ಖಾನೆಗಳಿವೆ.ಆದರೆ ಸಾಂಸ್ಕೃತಿಕವಾಗಿ ಹಾಗೂ ಸಾಹಿತ್ಯಿಕವಾಗಿ ಕಳೆದುಹೋಗಿರುವ ನಂಜನಗೂಡು ಮತ್ತೆ ವೈಭವ ಪಡೆಯಬೇಕಿದೆ' ಎಂದು ಪ್ರತಿಪಾದಿಸುತ್ತಾರೆ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮೊರಬದ ಮಲ್ಲಿಕಾರ್ಜುನ.ದಲಿತ ಸಂಘಟನೆ ಕಡೆಗಣನೆ:  ಸಮ್ಮೇಳನಕ್ಕೆ ಬಹಿಷ್ಕಾರ

ನಂಜನಗೂಡು: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಂಘಟನೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ತಾಲ್ಲೂಕು ದಲಿತ ಸಂಘರ್ಷ ಸಮಿತಿಯು, ಸಮ್ಮೇಳನ ಬಹಿಷ್ಕರಿಸುವುದಾಗಿ ತಿಳಿಸಿದೆ. ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದಸಂಸ ತಾಲ್ಲೂಕು ಸಂಚಾಲಕ ಬೊಕ್ಕಹಳ್ಳಿ ಮಹದೇವಸ್ವಾಮಿ, ಸುಮಾರು 20 ವರ್ಷಗಳಿಂದ ದಲಿತರು, ಶೋಷಿತರ ಪರವಾಗಿ ಚಳವಳಿ ನಡೆಸುವ ಮೂಲಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ದಸಂಸ ಪ್ರಮುಖ ಪಾತ್ರ ವಹಿಸಿದೆ. ಈ ನಾಡಿಗೆ ಸೇವೆ ಸಲ್ಲಿಸಿ ಹೋರಾಟವನ್ನೇ ತಮ್ಮ ಬದುಕಾಗಿಸಿಕೊಂಡಿದ್ದ ಇದೇ  ತಾಲ್ಲೂಕಿನ ಖ್ಯಾತ ಸಾಹಿತಿ  ಮುಳ್ಳೂರು ನಾಗರಾಜು ಅವರನ್ನು ಸ್ಮರಿಸದ ಜಿಲ್ಲಾ ಕಸಾಪ ಅವರನ್ನು ಅಪಮಾನಿಸಿದೆ.ಆದರೆ, ಕಾರ್ಯಕ್ರಮಕ್ಕೆ ದಲಿತ ಸಂಘಟನೆಗಳನ್ನು ಕಡೆಗಣಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕರಿಸುತ್ತೇವೆ ಎಂದು ವಿವರಿಸಿದರು. ಜಿಲ್ಲಾ  ಖಜಾಂಚಿ ಮಲ್ಲಹಳ್ಳಿ ನಾರಾಯಣ ಹಾಗೂ ಪಟ್ಟಣ ಸಂಚಾಲಕ ಶ್ರೀರಾಂಪುರ ರಾಜಶೇಖರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.