ಕನ್ನಡ ಶಾಲೆ ಉನ್ನತೀಕರಿಸಿ: ಸಿದ್ದಲಿಂಗಯ್ಯ

ಬೆಂಗಳೂರು: ‘ಕನ್ನಡ ಶಾಲೆಗಳನ್ನು ಉನ್ನತೀಕರಣ ಮಾಡುವುದರ ಜತೆಗೆ ಶಿಕ್ಷಕರ ಕಲಿಕಾ ಕ್ರಮವನ್ನು ಬದಲಿಸುವ ಅಗತ್ಯವಿದೆ’ ಎಂದು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.
ಅಂಕಿತ ಪುಸ್ತಕ ಪ್ರಕಾಶನ ಹೊರತಂದಿರುವ ವಿವಿಧ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕನ್ನಡ ಅಥವಾ ಸರ್ಕಾರಿ ಶಾಲೆಗಳು ಎಂದರೆ ಕಳಪೆ ಎಂಬ ಭಾವನೆ ಜನರಲ್ಲಿದೆ. ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಸರ್ಕಾರ ಕನ್ನಡ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು’ ಎಂದರು.
‘ಸುಪ್ರೀಂಕೋರ್ಟ್ ಕನ್ನಡ ಕಲಿಸಬೇಡಿ ಎಂದು ಹೇಳಿಲ್ಲ. ಮಾತೃಭಾಷೆಯೆಡೆಗೆ ಅಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರವೇ ಜಾಗೃತಿ ಕಾರ್ಯಕ್ರಮವನ್ನು ಮೂಡಿಸಬೇಕು. ಈ ಮೂಲಕ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಎದುರಾಗಿರುವ ಆಪತ್ತನ್ನು ನಿವಾರಿಸಬೇಕು’ ಎಂದು ಒತ್ತಾಯಿಸಿದರು.
‘ಸುಪ್ರೀಂ ಕೋರ್ಟ್ನ ಈ ತೀರ್ಪಿನಿಂದ ಕನ್ನಡ ಭಾಷೆಗೆ ದೊಡ್ಡ ಆತಂಕ ಎದುರಾಗಿದೆ. ತೀರ್ಪು ನೀಡುವಾಗ ಭಾಷಾವಾರು ಪ್ರಾಂತ್ಯ ರಚನೆ ಹಾಗೂ ಒಕ್ಕೂಟ ವ್ಯವಸ್ಥೆ ಪರಿಕಲ್ಪನೆಯನ್ನು ಪರಿಗಣಿಸಿಲ್ಲ. ಮಹಾತ್ಮಗಾಂಧೀಜಿಯಿಂದ ಹಿಡಿದು ಶಿಕ್ಷಣತಜ್ಞರು ಮಂಡಿಸಿದ ಮಾತೃಭಾಷಾ ಮಾಧ್ಯಮದ ನಿಲುವನ್ನು ಗೌರವಿಸಿಲ್ಲ. ಇದು ನಿಜಕ್ಕೂ ದುರದೃಷ್ಟ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.
‘ಒಂದೆಡೆ ಕನ್ನಡ ಸಾಹಿತ್ಯದೆಡೆಗೆ ಯುವ ಸಮೂಹ ತೀವ್ರ ನಿರ್ಲಕ್ಷ್ಯ ತೋರುತ್ತಿದೆ. ಇನ್ನೊಂದೆಡೆ ಐಟಿ ವಲಯದಲ್ಲಿ ಹೊಸ ಓದುಗರು ಸೃಷ್ಟಿಯಾಗಿದ್ದಾರೆ. ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ದಿಕ್ಕಿನಲ್ಲಿ ಕನ್ನಡ ಸಾಹಿತ್ಯ ಇರಬೇಕಿದೆ’ ಎಂದು ತಿಳಿಸಿದರು.
ವೈದ್ಯ ಸಾಹಿತಿ ಡಾ.ನಾ. ಸೋಮೇಶ್ವರ, ‘ಹಲವು ಮಾನಸಿಕ ಕ್ಲೇಶಗಳಿಗೆ ಪ್ರೀತಿಯ ಕೊರತೆಯೇ ಕಾರಣ. ಸಮರ್ಪಕವಾಗಿ ಪ್ರೀತಿ ದೊರೆಯದೇ ಹೋದರೆ ಬದುಕು ದುಸ್ತರವಾಗುತ್ತದೆ. ಚಂದ್ರಶೇಖರ್ ಅವರು ಮಾನಸಿಕ ಸವಾಲುಗಳನ್ನು ಬಹಳವಾಗಿ ನಾಜೂಕಾಗಿ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
ಡಾ.ಜಿ.ಪುರುಷೋತ್ತಮ ಅವರ ‘ಮಾತಿನ ತೊಡಕು– ವಿಶ್ಲೇಷಣೆ ಮತ್ತು ಪರಿಹಾರ’, ಗಂಗಾಧರ ಬೆಳ್ಳಾರೆ ಅವರ ‘ಮೌನಗರ್ಭ’, ಡಾ.ಸಿ.ಆರ್. ಚಂದ್ರಶೇಖರ್ ಅವರ ‘ಇಂದಿನ ಬದುಕಿನ ಮಾನಸಿಕ ಸವಾಲುಗಳು’, ವೈ.ಎನ್. ಗುಂಡೂರಾವ್ ಅವರು ಸಂಪಾದಿಸಿ
ರುವ ‘ರಾಮಾಯಣದ ಉಪಕಥೆಗಳು’, ‘ಸಾಹಿತಿಗಳು ರಸಪ್ರಸಂಗಗಳು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.