ಶುಕ್ರವಾರ, ಏಪ್ರಿಲ್ 16, 2021
21 °C

ಕನ್ನಡ ಸರ್ಕಾರಗಳೇ ಬಂದಿಲ್ಲ: ಕಣವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ರಾಜ್ಯದಲ್ಲಿ ಕರ್ನಾಟಕ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆಯೇ ಹೊರತು ಪೂರ್ಣ ಪ್ರಮಾಣದ ಕನ್ನಡ ಸರ್ಕಾರಗಳು ಬಂದಿಲ್ಲದಿರುವುದು ನೋವಿನ ಸಂಗತಿ’ ಎಂದು ಹಿರಿಯ ಕವಿ ಚನ್ನವೀರ ಕಣವಿ ವಿಷಾದಿಸಿದರು. ಜಿಲ್ಲೆಯ ಹನೂರು ಪಟ್ಟಣದಲ್ಲಿ ಗುರುವಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಗಡಿನಾಡ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನೆರೆಹೊರೆಯ ರಾಜ್ಯಗಳಲ್ಲಿ ಅಲ್ಲಿನ ಜನಭಾಷೆಯೇ ಸರ್ಕಾರಿ ಆಡಳಿತ ಯಂತ್ರದ ಸಹಜ ಶೈಲಿಯಾಗಿದೆ. ರಾಜ್ಯದಲ್ಲಿ ಅಂಥ ವಾತಾವರಣವಿಲ್ಲ. ಇಲ್ಲಿನ ಕಾವಲು ಸಮಿತಿ, ಅಭಿವೃದ್ಧಿ ಪ್ರಾಧಿಕಾರಗಳ ಕಾರ್ಯವೈಖರಿಯಲ್ಲಿ ಭಿನ್ನತೆಯಿದೆ. ಅನ್ಯರಾಜ್ಯದಲ್ಲಿ ಈ ಪರಿಸ್ಥಿತಿಯಿಲ್ಲ ಎಂದರು. ಶಿಕ್ಷಣ, ಆಡಳಿತ, ಕಾನೂನು ಸೇರಿದಂತೆ ಎಲ್ಲ ರಂಗದಲ್ಲಿಯೂ ಕನ್ನಡವೇ ಮುಖ್ಯವಾಗಬೇಕು. ಏಕೀಕರಣ ಚಳವಳಿ ಮತ್ತು ಭಾಷಾವಾರು ಪ್ರಾಂತ್ಯದ ಆಶಯ ಇಂದಿಗೂ ಈಡೇರಿಲ್ಲ. ಹೀಗಾಗಿ, ಪ್ರಾದೇಶಿಕ ಅಸಮಾನತೆಯ ಕೂಗು ಕೇಳಿಬರುತ್ತಿರುವುದು ಸಹಜ ಎಂದು ಅಭಿಪ್ರಾಯಪಟ್ಟರು.ರಾಜಧಾನಿ ಬೆಂಗಳೂರಿಗೆ ದಿನನಿತ್ಯವೂ ತಮಿಳುನಾಡಿನಿಂದ ನೂರಾರು ಮಂದಿ ಬಂದು ನೆಲೆಯೂರುತ್ತಾರೆ. ಈಗಾಗಲೇ, ಸಾವಿರಾರು ಕುಟುಂಬ ಬೀಡುಬಿಟ್ಟಿವೆ. ಪ್ರಸ್ತುತ ಗಡಿ ಜಿಲ್ಲೆಗಳ ಅಂಚಿನ ಪ್ರದೇಶಗಳು ರಾಜ್ಯದ ಸ್ವತ್ತಾಗಿ ಉಳಿದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಾಧಿಕಾರ ಎಂಬುದು ಮುಖ್ಯಮಂತ್ರಿ ಮತ್ತು ಜನರ ಅಂಚೆಕಚೇರಿಯಾಗಿ ಕೆಲಸ ಮಾಡುವ ಪ್ರಮೇಯವಿಲ್ಲ. ಅದರ ಕೈಗೆ ಬಂದೂಕಿನ ಆವಶ್ಯಕತೆಯಿಲ್ಲ. ಆದರೆ, ಬಾರುಕೋಲು ಇದ್ದೇ ಇದೆ. ಸರ್ಕಾರದ ಮೇಲೆ ಅದನ್ನು ಬೀಸುವ ಧಾಡಸೀತನ ಮಾತ್ರ ಬೇಕಿದೆ ಎಂದರು.ಕನ್ನಡ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಪ್ರಾಧಿಕಾರಕ್ಕೆ ನೇರವಾಗಿ ಕ್ರಮಕೈಗೊಳ್ಳುವ ಅಧಿಕಾರವಿಲ್ಲ. ಆದರೆ, ಸರ್ಕಾರಿ ಯಂತ್ರವನ್ನು ದುರಸ್ತಿಗೊಳಿಸುವ ಅವಕಾಶವಿದೆ. ಮಾಧ್ಯಮಗಳ ಮೂಲಕ ಲೋಪ ಎಸಗುವ ಅಧಿಕಾರಿಗಳ ಬಣ್ಣಬಯಲು ಮಾಡಬಹುದು. ಎಚ್ಚರಿಕೆ ನೋಟಿಸ್ ನೀಡುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ್, ಸದಸ್ಯರಾದ ಜಿ.ಎಸ್. ಜಯದೇವ, ಎಸ್. ಶಿವಪ್ರಸಾದ್, ಮೋಹನ್ ನಾಗಮ್ಮನವರ್, ಪ್ರೊ.ಸುಬ್ರಾವ ಎಂಟೆತ್ತಿನವರ, ವಿಮರ್ಶಕ ಗಿರಡ್ಡಿ ಗೋವಿಂದರಾಜು, ಶಾಸಕ ಆರ್. ನರೇಂದ್ರ ಇತರರು ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.