ಶನಿವಾರ, ಜನವರಿ 18, 2020
19 °C

ಕನ್ನಡ ಸಾಹಿತ್ಯದಲ್ಲಿ ಅರ್ಧ ಸತ್ಯದ ವೈಭವೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಗೌರವಿಸಬೇಕಾದ ವಿಚಾರಗಳನ್ನು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ತಳ್ಳುವ ಮೂಲಕ ಅರ್ಧ ಸತ್ಯಗಳನ್ನು ವೈಭವೀಕರಿಸಲಾಗುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಹಿ.ಚಿ.­ಬೋರಲಿಂಗಯ್ಯ ಇಲ್ಲಿ ಭಾನುವಾರ ಅಭಿಪ್ರಾಯಪಟ್ಟರು.ಜಾತ್ಯತೀತ ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕವಿ ಡಾ.ಕೆ.ಬಿ.ಸಿದ್ದಯ್ಯ ಅವರ ಕಾವ್ಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ದಲಿತರೇ ಮೂಲನಿವಾಸಿಗಳು. ವಲಸೆ ಬಂದ ಮೇಲ್ವರ್ಗದ ಜನರು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ದೇಸಿ ಪರಂಪರೆಯಲ್ಲಿ ರೂಢಿಗತವಾಗಿ ಬಂದ ಮೌಲ್ಯಗಳನ್ನು ಪುನರ್‌ ಸ್ಥಾಪಿಸುವುದು ಇಂದು ಹೆಚ್ಚು ಅಗತ್ಯವಾಗಿದೆ ಎಂದು ಹೇಳಿದರು.ಕನ್ನಡದಲ್ಲಿ ದೊರೆತಿರುವಷ್ಟು ಜನಪದ ಸಾಹಿತ್ಯ ದೇಶದಲ್ಲಿ ಬೇರೆ ಎಲ್ಲೂ ದೊರೆತಿಲ್ಲ. ಕನ್ನಡ ವಿಶ್ವವಿದ್ಯಾಲಯವೇ 14 ಜನಪದ  ಸಾಹಿತ್ಯಗಳನ್ನು ಸಂಗ್ರಹಿಸಿದೆ. ಸಿದ್ದಯ್ಯ ಅವರ ‘ಬಕಾಲ’ (ಜಾಂಬವನ ನಂತರದ ಮುನಿ) ಕಾವ್ಯವನ್ನು ಅಲ್ಲಮನ ಮುಂದುವರಿಕೆ ಭಾಗವನ್ನಾಗಿ ರೂಪಕಗಳ ಮೂಲಕ ವರ್ಣಿಸಿರುವುದು ದಲಿತ ಸಾಹಿತ್ಯ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದರು.ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಹೊಸ ಧಾರೆಯ ವಿಚಾರಗಳನ್ನು ದಲಿತ ಸಾಹಿತ್ಯ ಹರಡುತ್ತಿದೆ. 70ರ ದಶಕದ ನಂತರದಲ್ಲಿ ಎಲ್ಲಾ ಸಾಹಿತ್ಯಗಳ ಮೇಲೂ ದಲಿತ ಸಾಹಿತ್ಯ ಪರಂಪರೆ ಪ್ರಭಾವ ಬೀರಿದೆ ಎಂದರು.

ಅನುವಾದಕ ಪ್ರೊ.ಸಿ.ನಾಗಣ್ಣ ಮಾತನಾಡಿ, ಕವಿಗಳು ಅಘೋಷಿತ ಶಾಸಕರು. ಸಿದ್ದಯ್ಯ ಕೂಡ ಇದೇ ಮಾರ್ಗದಲ್ಲಿ ನಡೆಯುತ್ತಿರುವುದು ಚೇತೋಹಾರಿ ಸಂಗತಿ ಎಂದರು.ಸಮಾರೋಪ: ಸಂಜೆ ನಡೆದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಸಂಸ್ಕೃತಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಮಾತನಾಡಿ, ಸಿದ್ದಯ್ಯ ಅವರ ಬಕಾಲ, ಗಲ್ಲೆಬಾನಿ, ಅನಾತ್ಮ, ದಕ್ಕಲಕಥಾದೇವಿ ಕಾವ್ಯಗಳು ರೂಪಾಂತರ ಜಗತ್ತನೇ ಸೃಷ್ಟಿಸಿವೆ. ತಳಸಮುದಾಯದ ಅನುಭವಗಳನ್ನು ಕಾವ್ಯದಲ್ಲಿ ಕಟ್ಟಿರುವ ಅವರ ಸಾಧನೆ ಸಾಹಿತ್ಯ ಲೋಕದಲ್ಲಿ ವಿಶಿಷ್ಟವಾಗಿದೆ ಎಂದು ಶ್ಲಾಘಿಸಿದರು.ವಿಚಾರ ಸಂಕಿರಣದಲ್ಲಿ ಜಾತ್ಯತೀತ ವಿಚಾರ ವೇದಿಕೆ ಅಧ್ಯಕ್ಷ ಡಿ.ಶ್ರೀನಿವಾಸ್‌, ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಬಿ.ಗಂಗಾಧರ್‌, ಸಾಹಿತಿಗಳಾದ ಎಚ್‌.ಎಲ್‌.ಪುಷ್ಪಾ, ಅನ್ನಪೂರ್ಣ ವೆಂಕಟನಂಜಪ್ಪ, ಬಾ.ಹ.ರಮಾಕುಮಾರಿ ಇತರರು ಇದ್ದರು.

ಪ್ರತಿಕ್ರಿಯಿಸಿ (+)