ಬುಧವಾರ, ನವೆಂಬರ್ 20, 2019
26 °C

ಕನ್ನಡ ಸಾಹಿತ್ಯದಲ್ಲಿ ಉತ್ಪ್ರೇಕ್ಷಿತ ವಿಮರ್ಶೆ: ವಿಷಾದ

Published:
Updated:

ಬೆಂಗಳೂರು: `ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕೃತಿನಿಷ್ಠ ವಿಮರ್ಶೆ ಕಣ್ಮರೆಯಾಗುತ್ತಿದ್ದು, ಉತ್ಪ್ರೇಕ್ಷೆ ಹಾಗೂ ಉಪೇಕ್ಷೆಯ ವಿಮರ್ಶೆ ಹೆಚ್ಚಾಗಿದೆ' ಎಂದು ಹಿರಿಯ ಕವಿ ಕೆ.ಎಸ್.ನಿಸಾರ್ ಅಹಮದ್ ವಿಷಾದಿಸಿದರು.ಇಂದಿರಾತನಯ ಸಾಹಿತ್ಯ ಸಮಿತಿ ಹಾಗೂ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ನೇಮಿಚಂದ್ರ ಅವರಿಗೆ `ಇಂದಿರಾತನಯ ಕಥಾ ಸಾಹಿತ್ಯ ಪ್ರಶಸ್ತಿ' ಪ್ರದಾನ ಮಾಡಿ ಅವರು ಮಾತನಾಡಿದರು.`ಇಂದಿರಾತನಯ ಕನ್ನಡದ ಕಾದಂಬರಿ ಲೋಕಕ್ಕೆ ಅಪರೂಪದ ಕೃತಿಗಳನ್ನು ನೀಡಿದವರು. ವಿಶಿಷ್ಟ ವ್ಯಕ್ತಿತ್ವದ ಇಂದಿರಾತನಯ ಅವರು ತಂತ್ರವಿದ್ಯೆಯನ್ನು ಮುಖ್ಯವಸ್ತುವಾಗಿಟ್ಟುಕೊಂಡು ಕಾದಂಬರಿಗಳನ್ನು ರಚಿಸಿದವರು. ಸರಳ ನಿರೂಪಣೆಯ ಮೂಲಕ ತಂತ್ರವಿದ್ಯೆಯ ಕಥಾವಸ್ತುವನ್ನು ಹೆಣೆದ ಅನನ್ಯ ಪ್ರತಿಭೆ ಅವರದ್ದು. ಅವರ ಈ ಬಗೆಯ ಸಾಹಿತ್ಯ ಸೃಷ್ಟಿಯನ್ನು ವಿಮರ್ಶಕರು ಉಪೇಕ್ಷಿಸಿದ್ದು ವಿಷಾದನೀಯ' ಎಂದು ಅವರು ಬೇಸರ ವ್ಯಕ್ತಪಡಿಸದರು.`ತಂತ್ರವಿದ್ಯೆಯ ಒಳನೋಟಗಳು, ವಿವರಣೆ ಇಂದಿರಾತನಯ ಅವರ ಕಾದಂಬರಿಗಳಲ್ಲಿ ಹೆಚ್ಚಾಗಿವೆ. ಅವರ ಕೃತಿಗಳಲ್ಲಿ ತಂತ್ರವಿದ್ಯೆಯ ಸ್ವಾನುಭವ ಹೆಚ್ಚಾಗಿದೆ. ಮನೆ ಬಿಟ್ಟು ತಿಂಗಳುಗಟ್ಟಲೆ ಯಾರ ಕಣ್ಣುಗೂ ಬೀಳದಂತೆ ಸುತ್ತಾಡುತ್ತಿದ್ದ ಅವರು ತಂತ್ರವಿದ್ಯೆಯ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದರು. ಹೀಗಾಗಿಯೇ ಅವರ ಕೃತಿಗಳಲ್ಲಿ ಆತ್ಮಕಥನದ ರೀತಿಯ ನಿರೂಪಣೆ ಕಾಣುತ್ತದೆ' ಎಂದು ನುಡಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೇಮಿಚಂದ್ರ, ಪ್ರಶಸ್ತಿ ಮೊತ್ತ ರೂ 10 ಸಾವಿರವನ್ನು ಅಸಹಾಯಕ ಮಕ್ಕಳಿಗಾಗಿ ಕೆಲಸ ಮಾಡುವ ಸ್ವಯಂಸೇವಾ ಸಂಸ್ಥೆಗೆ ನೀಡುವುದಾಗಿ ತಿಳಿಸಿದರು.ಅಂಕಿತ ಪುಸ್ತಕ ಮರುಮುದ್ರಣ ಮಾಡಿರುವ ಇಂದಿರಾತನಯ ಅವರ `ಚಕ್ರಾಯಣ', `ಮಂತ್ರಶಕ್ತಿ', `ಶಕ್ತಿಪೂಜೆ', `ಸೇಡಿನಕಿಡಿ' ಮತ್ತು `ಪೂಜಾತಂತ್ರ' ಕಾದಂಬರಿಗಳನ್ನು ನಿಸಾರ್ ಅಹಮದ್ ಬಿಡುಗಡೆಗೊಳಿಸಿದರು. ಪುಸ್ತಕಗಳ ಬೆಲೆ ತಲಾ ರೂ 150.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥರಾವ್ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)