ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಪೂರ್ಣ

7

ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಪೂರ್ಣ

Published:
Updated:ಬೆಂಗಳೂರು: ‘ನಗರದಲ್ಲಿ ಶುಕ್ರವಾರ ಆರಂಭವಾಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಪ್ರತಿದಿನ 60 ಸಾವಿರ ಜನರಿಗೆ ಊಟ ಹಾಗೂ 5 ಸಾವಿರ ಪ್ರತಿನಿಧಿಗಳು ಹಾಗೂ ಆಹ್ವಾನಿತರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ’ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಗೃಹ ಸಚಿವ ಆರ್. ಅಶೋಕ ತಿಳಿಸಿದರು.ಸಮ್ಮೇಳನ ನಡೆಯಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬುಧವಾರ ಪೂರ್ವಸಿದ್ಧತಾ ಪರಿಶೀಲನೆ ನಡೆಸಿದ ಅವರು ‘ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ನೆನಪಿನಲ್ಲಿ ಉಳಿಯುವಂತಹ ಅದ್ದೂರಿ ಸಮ್ಮೇಳನ ಆಯೋಜಿಸುವುದು ಸಮ್ಮೇಳನ ಸ್ವಾಗತ ಸಮಿತಿ ಉದ್ದೇಶವಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.‘ಸಮ್ಮೇಳನಕ್ಕಾಗಿ ಸರ್ಕಾರ ಒಂದು ಕೋಟಿ ರೂಪಾಯಿ ನೀಡಿದ್ದು, ಇನ್ನೂ 50 ಲಕ್ಷ ರೂಪಾಯಿ ಬಿಡುಗಡೆಯಾಗಲಿದೆ. ನಗರದ ಎಲ್ಲಾ 28 ಶಾಸಕರು ಹಾಗೂ ಬಿಬಿಎಂಪಿ ಸರ್ವ ಸದಸ್ಯರು ತಮ್ಮ ಒಂದು ತಿಂಗಳ ಸಂಬಳವನ್ನು ಸಮ್ಮೇಳನಕ್ಕೆ ನೀಡುತ್ತಿದ್ದಾರೆ.ರಾಜ್ಯ ಸರ್ಕಾರಿ ನೌಕರರು ಒಂದು ದಿನದ ಸಂಬಳವನ್ನು ದೇಣಿಗೆ ನೀಡುತ್ತಿದ್ದಾರೆ. ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಕೂಡ ಒಂದು ದಿನದ ಸಂಬಳವನ್ನು ನೀಡುವಂತೆ ಕೋರಲಾಗಿದೆ’ ಎಂದರು.‘ಇದು ಕೇವಲ ಸಾಹಿತಿಗಳ ಸಮ್ಮೇಳನವಾಗಿರದೇ ಸಮಸ್ತ ಕನ್ನಡಿಗರ ಹಬ್ಬವಾಗಿದೆ. ಹೀಗಾಗಿ ರಾಜ್ಯದ ಸಮಸ್ತ ಕನ್ನಡಿಗರೂ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅನ್ಯಭಾಷಿಕರೂ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು. ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಮನೆ, ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ಬಾವುಟ ಹಾರಿಸಿ ಹಬ್ಬದ ವಾತಾವರಣ ಮೂಡಿಸಬೇಕು’ ಎಂದು ಕರೆ ನೀಡಿದರು.ಕನ್ನಡ ಚಿತ್ರ ಪ್ರದರ್ಶನಕ್ಕೆ ಮನವಿ

‘40 ವರ್ಷಗಳ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಕನ್ನಡಾಭಿಮಾನಿಗಳು ಸಾಹಿತ್ಯ ಜಾತ್ರೆಗೆ ಬರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬೆಂಗಳೂರಿನ ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಮೂರು ದಿನಗಳ ಕಾಲ ಕನ್ನಡ ಚಿತ್ರಗಳನ್ನೇ ಪ್ರದರ್ಶನ ಮಾಡಬೇಕು’ ಎಂದು ಸಚಿವ ಆರ್. ಅಶೋಕ ಮನವಿ ಮಾಡಿದರು.‘ಈ ಸಂಬಂಧ ಎಲ್ಲಾ ಚಿತ್ರ ಮಂದಿರ ಮಾಲಿಕರುಗಳಿಗೂ ಪತ್ರ ಬರೆಯಲಾಗುವುದು. ಚಿತ್ರಪ್ರದರ್ಶಕರು, ವಿತರಕರು ಹಾಗೂ ಚಿತ್ರ ಮಂದಿರಗಳ ಮಾಲಿಕರು ಸಮ್ಮೇಳನದ ನಡೆಯುವ ಸಂದರ್ಭದಲ್ಲಿ ಕನ್ನಡ ಚಿತ್ರ ಪ್ರದರ್ಶಿಸುವ ಮೂಲಕ ಬದ್ಧತೆ ತೋರಬೇಕು’ ಎಂದು ಕರೆ ನೀಡಿದರು.ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಮಿತಿ ಅಧ್ಯಕ್ಷ ಟಿ.ಎ. ನಾರಾಯಣಗೌಡ ಇದ್ದರು.ಬ್ಯಾನರ್ ತೆರವುಗೊಳಿಸದಿದ್ದರೆ ಪ್ರತಿಭಟನೆ

ಬೆಂಗಳೂರು: ‘ಕನ್ನಡ ಸಾಹಿತ್ಯ ಸಮ್ಮೇಳನದ ಬ್ಯಾನರ್‌ಗಳಲ್ಲಿ ರಾಜಕಾರಣಿಗಳು ರಾರಾಜಿಸುತ್ತಿದ್ದು ಸಮ್ಮೇಳನ ಆರಂಭವಾಗುವುದರ ಒಳಗಾಗಿ ಅವುಗಳನ್ನು ತೆರವುಗೊಳಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರಕಾಶಕ ಆರ್.ಜಿ.ಹಳ್ಳಿ ನಾಗರಾಜ್ ಎಚ್ಚರಿಕೆ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಾಂಸ್ಕೃತಿಕ ಕೊಡುಗೆ ನೀಡಿದ ಶ್ರೇಷ್ಠ ವ್ಯಕ್ತಿಗಳು ರಾರಾಜಿಸಬೇಕಿದೆ. ಆದರೆ ಸಾಹಿತ್ಯಕ್ಕೆ ಕೊಡುಗೆ ನೀಡಿದವರಿಗಿಂತಲೂ ಹೆಚ್ಚಾಗಿ ರಾಜಕಾರಣಿಗಳು ಬ್ಯಾನರ್ ಫ್ಲೆಕ್ಸ್‌ಗಳಲ್ಲಿ ಮಿಂಚುತ್ತಿದ್ದಾರೆ. ಅಭಿಮಾನದ ಹೆಸರಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ರೂಪಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.‘ಸಾಹಿತ್ಯ ಪರಿಷತ್ತಿನಲ್ಲಿ ವಿದ್ಯುದ್ದೀಪಾಲಂಕಾರ ಹೊರತು ಪಡಿಸಿದರೆ ಇನ್ನಾವ ಕೆಲಸವನ್ನೂ ಮಾಡಿಲ್ಲ. 40 ವರ್ಷದ ನಂತರ ನಗರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಕನಿಷ್ಠ ಪಕ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಮೂರು ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುವ ಸೌಜನ್ಯವನ್ನೂ ತೋರಿಲ್ಲ. ಪ್ರತಿಭಟನೆಯ ಸುಳಿವು ದೊರೆತಾಗ ಹಳೆಯ ಕನ್ನಡ ಬಾವುಟ ಬದಲಿಸಿ ಹೊಸದು ನೆಟ್ಟಿದ್ದಾರೆ’ ಎಂದು ಹೇಳಿದರು.ವಚನಜ್ಯೋತಿ ಪತ್ರಿಕೆಯ ಸಂಪಾದಕ ಎಸ್. ಪಿನಾಕಪಾಣಿ ಮಾತನಾಡಿ ‘ಕೇವಲ ಒಂದು ವರ್ಗ ಹಾಗೂ ಒಂದು ಪಕ್ಷದ ಪರವಾಗಿ ಸಾಹಿತ್ಯ ಪರಿಷತ್ತು ಕಾರ್ಯ ನಿರ್ವಹಿಸುತ್ತಿದೆ. ರಾಜಕಾರಣಿಗಳು ಪ್ರಚಾರ ಪಡೆಯುತ್ತಿರುವುದರಿಂದ ಸಾಹಿತ್ಯ ಸಂಸ್ಕೃತಿಗೆ ಧಕ್ಕೆ ಒದಗಿದೆ’ ಎಂದು ಹೇಳಿದರು.ಶಾಲೆ ಕಾಲೇಜಿಗೆ ರಜೆ

ಬೆಂಗಳೂರು: ‘ಸಮ್ಮೇಳನದ ಅಂಗವಾಗಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಉತ್ತರ ಜಿಲ್ಲೆಯ ಎಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಫೆ.4 ಮತ್ತು 5ರಂದು ರಜೆ ನೀಡಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇದರಿಂದ ಅನುಕೂಲವಾಗಲಿದೆ’ ಎಂದು ಗೃಹ ಸಚಿವ ಆರ್.ಅಶೋಕ್ ತಿಳಿಸಿದರು.ಬೀದರ್, ಬೆಳಗಾವಿಯಿಂದ ಬೆಂಗಳೂರಿನವರೆಗೆ, ಕೊಳ್ಳೇಗಾಲದಿಂದ ಕೋಲಾರದವರೆಗೆ ನಾಡಿನ ಉದ್ದಗಲದಿಂದ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಮ್ಮೇಳನದ ಬ್ಯಾಡ್ಜ್ ಹಾಗೂ ಆಹ್ವಾನ ಪತ್ರಿಕೆ ಹೊಂದಿದವರಿಗೆ ಉಚಿತವಾಗಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯೊಂದರಲ್ಲೇ ಕನಿಷ್ಠ 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು ಸಂಚಾರದ ಒತ್ತಡ ನಿಭಾಯಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಒಂದುವೇಳೆ ಸಂಚಾರದಲ್ಲಿ ಅಡಚಣೆ ಉಂಟಾದರೆ ಬೆಂಗಳೂರಿನ ನಿವಾಸಿಗಳು ಪೊಲೀಸರೊಂದಿಗೆ ಸಹಕರಿಸಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry