ಶುಕ್ರವಾರ, ಮೇ 7, 2021
22 °C

ಕನ್ನಿಹಳ್ಳಿಯಲ್ಲಿ ಕೃಷಿ ಚಟುವಟಿಕೆಗಳ ಕಲರವ

ಪ್ರಜಾವಾಣಿ ವಾರ್ತೆ/ಬಿ.ಲಕ್ಷ್ಮೀಕಾಂತಸಾ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಗ್ರಾಮದ ಕೆರೆ ಸಹಿತ ನೂತನವಾಗಿ ನಿರ್ಮಾಣಗೊಂಡಿರುವ ಚೆಕ್‌ಡ್ಯಾಂನಲ್ಲಿ ಸಮೃದ್ಧ ನೀರು, ಗ್ರಾಮದ 300ಕ್ಕೂ ಹೆಚ್ಚು ಕೊಳವೆ ಬಾವಿಗಳ ಅಂತರ್ಜಲ ಮಟ್ಟದಲ್ಲಿ ಏರಿಕೆ, ಹರ್ಷಚಿತ್ತರಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರೈತ ಸಮುದಾಯ.ಸಮರ್ಪಕವಾಗಿ ಮಳೆಯಾಗದೇ ಕೃಷಿ ಚಟುವಟಿಕೆಗಳ ಮಾತಿರಲಿ, ಜನ ಜಾನುವಾರುಗಳಿಗೇ ಕುಡಿಯುವ ನೀರು ಇಲ್ಲ ಎಂಬ ದುಸ್ಥಿತಿಯಲ್ಲಿ ಸತತ ಎರಡು ವರ್ಷಗಳ ಬರಗಾಲ ಎದುರಿಸಿರುವ ತಾಲ್ಲೂಕಿನ ಕನ್ನಿಹಳ್ಳಿ ಗ್ರಾಮದ ಬದಲಾದ ಚಿತ್ರಣವಿದು. ಕಳೆದ ವಾರ ಸುರಿದ ರೋಹಿಣಿ ಮಳೆ ಗ್ರಾಮದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಹಗರಿಬೊಮ್ಮನಹಳ್ಳಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಕೃಷಿಕರೇ ಹೆಚ್ಚಾಗಿರುವ ಈ ಗ್ರಾಮದ ರೈತರ ಕೃಷಿ ಚಟುವಟಿಕೆಗಳಿಗೆ ಆಧಾರವೆಂದರೆ ಗ್ರಾಮದ ಪಕ್ಕದಲ್ಲಿಯೇ ಹರಿಯುವ ಗೋವಿನಹಳ್ಳ ಮತ್ತು ಹರಪನಹಳ್ಳಿ ಪಾಳೇಗಾರರಾಗಿದ್ದ ಸೋಮಶೇಖರನಾಯಕ ಕಟ್ಟಿಸಿರುವ ಕೆರೆ.ಹಡಗಲಿ ತಾಲ್ಲೂಕಿನ ತಳಕಲ್ಲು ಕೆರೆ ಕೋಡಿ ಬಿದ್ದರೆ ಇದೇ ಗೋವಿನಹಳ್ಳ ತುಂಬಿ ಹರಿಯುವುದಲ್ಲದೇ ಹಳ್ಳಕ್ಕೆ ಕಟ್ಟಲಾಗಿರುವ ಚೆಕ್‌ಡ್ಯಾಂನಲ್ಲಿ ನೀರು ಸಂಗ್ರಹವಾಗುತ್ತದೆ. ಚೆಕ್‌ಡ್ಯಾಂನಿಂದ ಹೊರ ಹರಿಯುವ ನೀರು ಕೆರೆಯಲ್ಲಿ ಸಂಗ್ರಹವಾಗುವ ಮೂಲಕ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಕೊಳವೆಬಾವಿಗಳಲ್ಲಿ ಭರಪೂರ ನೀರಿನ ಮರುಪೂರಣ. ಕೊಳವೆಬಾವಿಗಳ ಮೂಲಕ ನೀರೆತ್ತಿ ಬೆಳೆ ಬೆಳೆಯುತ್ತಿದ್ದ ರೈತರ ಸುಗ್ಗಿಯ ಸಂಭ್ರಮಕ್ಕೆ ಮಿತಿ ಇರುತ್ತಿರಲಿಲ್ಲ.ಆದರೆ, ಎರಡು ವರ್ಷಗಳ ಕಾಲದ ಬರಗಾಲದ ಪರಿಣಾಮವಾಗಿ ಗೋವಿನಹಳ್ಳದಲ್ಲಿ ನೀರೇ ಹರಿಯಲಿಲ್ಲ. ಜೊತೆಗೆ ಕಾಲನ ದಾಳಿಗೆ ಸಿಲುಕಿ ಚೆಕ್‌ಡ್ಯಾಂ ಕೂಡಾ ಶಿಥಿಲಗೊಂಡಾಗ ಗ್ರಾಮದ ಪ್ರಗತಿಪರ ರೈತರಾದ ಅಬ್ದುಲ್ ಖಾದರ್, ಕುರುಬರ ಮಲ್ಲೇಶಪ್ಪ, ಜಿ.ಫಕೀರರೆಡ್ಡಿ, ವಸಂತಕುಮಾರ್ ಕೆ.ಬಿ.ಫಕೀರರೆಡ್ಡಿ ಆಗಿನ ಶಾಸಕರಾಗಿದ್ದ ನೇಮಿರಾಜ್‌ನಾಯ್ಕ ಅವರಿಗೆ ಚೆಕ್‌ಡ್ಯಾಂ ದುರಸ್ತಿಗೆ ಅನುದಾನ ನೀಡುವಂತೆ ಒತ್ತಾಯಿಸಿದ್ದರು.ಶಾಸಕರಾಗಿದ್ದ ಆವಧಿಯುದ್ದಕ್ಕೂ ಹತ್ತು ಹಲವು ರೈತ ಪರ ಯೋಜನೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದ ನೇಮಿರಾಜ್‌ನಾಯ್ಕ ರೂ.44.50ಲಕ್ಷ ಅನುದಾನ ಒದಗಿಸಿ ದುರಸ್ತಿ ಬದಲಾಗಿ ನೂತನ ಚೆಕ್‌ಡ್ಯಾಂ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದರು. ಗ್ರಾಮದ ಶಿಕ್ಷಕರಾದ ಅಂಜಿನಪ್ಪ ಮತ್ತು ಎಚ್.ಎಂ.ಪಾಲಾಕ್ಷ ಚೆಕ್‌ಡ್ಯಾಂ ನಿರ್ಮಾಣಕ್ಕಾಗಿ ಹಳ್ಳದ ಪಕ್ಕದ ತಮ್ಮ 1.50ಎಕರೆ ಜಮೀನು ನೀಡಿ ಸಹಕರಿಸಿದರು ಎಂದು ರೈತರು ಸಂತಸ ವ್ಯಕ್ತಪಡಿಸುತ್ತಾರೆ.ನೀರಿನ ಹರಿವು ಮತ್ತು ಸಂಗ್ರಹದ ನಿಟ್ಟಿನಲ್ಲಿ ಹಳ್ಳದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಗಲವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಚೆಕ್‌ಡ್ಯಾಂ, ಸಣ್ಣ ನೀರಾವರಿ ಇಲಾಖೆಯವರು ನೀಡಿರುವ ಮಾನದಂಡಕ್ಕನುಗುಣವಾಗಿ ಗುತ್ತಿಗೆದಾರರು ನಿರ್ಮಿಸಿದ್ದಾರೆ. ಚೆಕ್‌ಡ್ಯಾಂ ಕಾಮಗಾರಿಯ ಪ್ರತಿ ಹಂತದಲ್ಲೂ ರೈತರು ಹದ್ದಿನ ಕಣ್ಣಿನಿಂದ ಕಾದಿದ್ದಾರೆ. ಚೆಕ್ ಡ್ಯಾಂ ಕಾಮಗಾರಿಯ ಎಲ್ಲಾ ಹಂತದಲ್ಲಿ ಗುತ್ತಿಗೆದಾರರ ರೈತ ಪರ ಕಾಳಜಿ ಮತ್ತು ಪರಿಶ್ರಮವೂ ಎದ್ದು ಕಾಣುತ್ತದೆ ಎಂದು ಪಿ.ವೆಂಕಟೇಶ್ ಮತ್ತಿತರರು ಅಭಿಪ್ರಾಯಪಟ್ಟಿದ್ದಾರೆ.ಚೆಕ್‌ಡ್ಯಾಂನ ಎರಡೂ ಬದಿಯಲ್ಲಿ 40 ಅಡಿ ಅಗಲ ಸಮರ್ಪಕವಾಗಿ ಸ್ಟೋನ್ ಪಿಚ್ಚಿಂಗ್ ಮಾಡಲಾಗಿದೆ. ಚೆಕ್‌ಡ್ಯಾಂ ಎರಡೂ ಬದಿಯ 150 ಅಡಿ ಉದ್ದದ ಏರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ರೈತರು ಮಣ್ಣಿನಿಂದ ಎತ್ತರಿಸುವ ಮೂಲಕ ಚೆಕ್‌ಡ್ಯಾಂ ಭದ್ರತೆಗೆ ಕ್ರಮ ಕೈಗೊಂಡಿದ್ದಾರೆ.ಇತ್ತೀಚಿಗೆ ಒಂದೇ ದಿನದ ಸುರಿದ ಮಳೆಗೆ ಗೋವಿನಹಳ್ಳಕ್ಕೆ ಮತ್ತೆ ಜೀವಕಳೆ ಬಂದಿದೆ. ಚೆಕ್‌ಡ್ಯಾಂ ತುಂಬಿ ಕೋಡಿ ಬಿದ್ದು, ಪಾಳೇಗಾರ ಕಟ್ಟಿಸಿರುವ ಕೆರೆಯಲ್ಲಿ ಕೂಡಾ ನೀರು ಸಂಗ್ರಹವಾಗಿದೆ. ಗ್ರಾಮದ ಕೊಳವೆ ಬಾವಿ ರೈತರ ಮುಖಗಳು ಹಿಗ್ಗಿ ಹೀರೇಕಾಯಿಯಾಗಿವೆ.ಚೆಕ್‌ಡ್ಯಾಂನಲ್ಲಿ ಸಂಗ್ರಹವಾಗಿರುವ ನೀರಿನಿಂದ ಗ್ರಾಮದ ಅಕ್ಕ ಪಕ್ಕ ಏನಿಲ್ಲವೆಂದರೂ 300 ಕೊಳವೆ ಬಾವಿಗಳಿಂದ ಒಟ್ಟಾರೆ 1000 ಎಕರೆ ಜಮೀನು ನೀರಾವರಿ ಸೌಲಭ್ಯ ಪಡೆದಿದೆ. ಸಾವಿರಾರು ಎಕರೆ ಜಮೀನಿನಲ್ಲಿ ಈರುಳ್ಳಿ, ಸೂರ್ಯಕಾಂತಿ, ಜೋಳ ಮತ್ತು ಹತ್ತಿ ಬೆಳೆ ಬಿತ್ತಿರುವ ರೈತರು ಆರಿದ್ರ, ಪುನರ್ವಸು, ಪುಷ್ಯ ಮತ್ತು ಅಸಲೀ(ಆಶ್ಲೇಷ) ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈ ಮಳೆಗಳು ರೈತರ ನಿರೀಕ್ಷಗೆ ತಕ್ಕಂತೆ ಸುರಿದರೆ ಗ್ರಾಮದ ಸಾಮಾಜಿಕ ಮತ್ತು ಆರ್ಥಿಕ ಸ್ವರೂಪವೇ ಬದಲಾಗುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.