ಗುರುವಾರ , ಮೇ 13, 2021
36 °C

ಕಪಾಡಿಯಾಗೆ ಗಾಂಧಿ ತಿರುಗೇಟು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಮಾಹಿತಿ ಹಕ್ಕು ಕಾಯ್ದೆ ಅಡಿಯ ಅಸಂಬದ್ಧ ಪ್ರಶ್ನೆಗಳು ನ್ಯಾಯಾಂಗದ ಕೆಲಸ, ಕಾರ್ಯಗಳಿಗೆ ತಡೆಯೊಡ್ಡುತ್ತಿವೆ ಎಂಬ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಅವರ ಆಕ್ಷೇಪಕ್ಕೆ ಕೇಂದ್ರ ಮಾಹಿತಿ ಆಯೋಗದ ಆಯುಕ್ತ ಶೈಲೇಶ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿರುವ ಅವರು, `ನಿಮ್ಮ ಈ ಹೇಳಿಕೆ ಮಾಹಿತಿ ಹಕ್ಕು ಕಾಯ್ದೆಯ ಆಶಯ, ಉಮೇದಿಗೆ ತಣ್ಣೀರು ಎರಚಿದೆ. ನಿಮ್ಮ ಅಭಿಪ್ರಾಯದ ಒಟ್ಟಾರೆ ಆಶಯ ಜನರಿಗೆ ತಪ್ಪು ಸಂದೇಶ ಕಳುಹಿಸುವ ಮತ್ತು ಮಾಹಿತಿ ಹಕ್ಕು ಕಾಯ್ದೆಯ ವಿಶ್ವಾಸಾರ್ಹತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ~ ಎಂದು ತಿರುಗೇಟು ನೀಡಿದ್ದಾರೆ.`ಎಲ್ಲ ಹಂತದ ಆಡಳಿತದಲ್ಲಿ ಪಾರದರ್ಶಕತೆ ತರುವ ಸದುದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಜಾರಿಗೆ ತರಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ತರುವುದಕ್ಕೆ ಪೂರಕವಾಗಿ ಸರ್ಕಾರದ ಎಲ್ಲ ಅಂಗಗಳೂ ಕಾರ್ಯ ನಿರ್ವಹಿಸಬೇಕು. ಆದರೆ, ನಿಮ್ಮ ಹೇಳಿಕೆ ಆರ್‌ಟಿಐ ಕಾರ್ಯ ನಿರ್ವಹಣೆಗೆ ಭಂಗ ತಂದಿದೆ~ ಎಂದು ಪತ್ರದಲ್ಲಿ ಹೇಳಿದ್ದಾರೆ.`ಮಾಹಿತಿ ಹಕ್ಕು ಕಾಯ್ದೆ ನಿಜವಾಗಲೂ ಒಳ್ಳೆಯದೇ. ಆದರೆ, ಔತಣಕೂಟಕ್ಕೆ ಹಾಜರಾದಂಥ ವಿಷಯಗಳ ಕುರಿತು ಕೆಲವು ಅಸಹನೀಯ ಪ್ರಶ್ನೆಗಳು ಕಿರಿಕಿರಿಯನ್ನು ಉಂಟು ಮಾಡುತ್ತವೆ. ಎಲ್ಲದಕ್ಕೂ ಒಂದು ಮಿತಿ ಇರಬೇಕು~ ಎಂದು ಕಪಾಡಿಯಾ ಅಸಮಾಧಾನ ವ್ಯಕ್ತಪಡಿಸಿದ್ದರು.ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಗಾಂಧಿ `ಪ್ರಜೆಗಳ ಸಂವಿಧಾನದತ್ತ ಹಕ್ಕುಗಳನ್ನು ನಿಯಂತ್ರಿಸಲು ಇರುವ ಮಿತಿಗಳು ಕೆಲವೇ ಕೆಲವು. ಈ ಮಿತಿಗಳನ್ನು ಶಾಸನಸಭೆಗಳು ಮಾತ್ರ ರೂಪಿಸಲು ಸಾಧ್ಯ. ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಹಕ್ಕು ಮತ್ತು ಮಿತಿಗಳನ್ನು ಈಗಾಗಲೇ ಸಂಸತ್ ರೂಪಿಸಿದೆ~ ಎಂದು ಮಾರುತ್ತರ ನೀಡಿದ್ದಾರೆ.`ಆರ್‌ಟಿಐ ಜಾರಿಯಾದ ನಂತರ ಆಡಳಿತ ಯಂತ್ರದಲ್ಲಿ ಬದಲಾವಣೆ ಕಾಣತೊಡಗಿದೆ. ಪ್ರಜೆಗಳು ಸರ್ಕಾರಿ ಅಂಗಗಳ ಕಾರ್ಯ ನಿರ್ವಹಣೆಯ ಮೇಲೆ ಕಣ್ಣಿಡಲು ನೆರವಾಗಿದೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ಜಾರಿಯಾಗಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಆರ್‌ಟಿಐ ಫಲ~ ಎಂದು ಗಾಂಧಿ ಸಮರ್ಥಿಸಿಕೊಂಡಿದ್ದಾರೆ.ಇಂಥ ಪ್ರಬಲ ಅಸ್ತ್ರವನ್ನು ಕೆಲವರು ಕೆಲಸಕ್ಕೆ ಬಾರದ ಚಿಕ್ಕಪುಟ್ಟ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿರುವ ಅವರು, `ಇದು ಸಹಜ. ಬಹುತೇಕ ಎಲ್ಲ ಕಾಯ್ದೆ, ಕಾನೂನುಗಳ ಅಲ್ಪ ಪ್ರಮಾಣದ ದುರ್ಬಳಕೆ ಸಾಮಾನ್ಯ. ದೌರ್ಜನ್ಯ ತಡೆ, ವರದಕ್ಷಿಣೆ ನಿಷೇಧ ಕಾಯ್ದೆಗಳೂ ದುರುಪಯೋಗವಾಗುತ್ತಿವೆ. ಈ ಕಾನೂನಿನ ಉದ್ದೇಶ ಒಳ್ಳೆಯದಾದರೂ ಅಮಾಯಕರ ವಿರುದ್ಧ ಬಳಸಿದ ನಿದರ್ಶನಗಳಿವೆ. ಆದರೆ, ನಾವು ಧನಾತ್ಮಕ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳಬೇಕು~ ಎಂದು ಹೇಳಿದ್ದಾರೆ.ಮಾಹಿತಿ ಹಕ್ಕು ಆಯೋಗ ಮತ್ತು ನ್ಯಾಯಾಲಯಗಳು ಸೇರಿದಂತೆ ಬಹುತೇಕ ಸರ್ಕಾರಿ ಆಡಳಿತ ಯಂತ್ರಗಳು ಆರ್‌ಟಿಐ ಕಾಯ್ದೆಯ ನಾಲ್ಕು ಉದ್ದೇಶಗಳನ್ನು ಈಡೇರಿಸಲು ಇದುವರೆಗೂ ಸಾಧ್ಯವಾಗಿಲ್ಲ. ಬಹುತೇಕ ಕಚೇರಿ ಮತ್ತು ಅಧಿಕಾರಿಗಳು ಜನರಿಗೆ ಸ್ವಯಂಪ್ರೇರಿತವಾಗಿ ಮಾಹಿತಿ ನೀಡದ ಕಾರಣ ಆರ್‌ಟಿಐ ಮೂಲಕ ಮಾಹಿತಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಸಹಜ ಪ್ರಕ್ರಿಯೆ ಎಂದು ಗಾಂಧಿ, ನ್ಯಾಯಮೂರ್ತಿಗಳ ಆಕ್ಷೇಪಕ್ಕೆ ಸಮಜಾಯಿಷಿ ನೀಡಿದ್ದಾರೆ.ನ್ಯಾಯಾಲಯ ಕಲಾಪಗಳ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಸೂಕ್ತ ಮಾರ್ಗಸೂಚಿ ರೂಪಿಸಬೇಕು ಎಂಬ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವೇಳೆ ಕಪಾಡಿಯಾ ಆರ್‌ಟಿಐ ಮೂಲಕ ಕೇಳುವ ಅನಗತ್ಯ ಪ್ರಶ್ನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ಗೋಪ್ಯ ಮಾಹಿತಿಗಳ ಹೊರತಾಗಿ ನ್ಯಾಯಾಂಗಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಮಾಹಿತಿ ನೀಡಿದ್ದೇನೆ, ಆದರೂ ಮಾಹಿತಿ ಕೋರಿ ಇನ್ನೂ ಅರ್ಜಿಗಳು ಬರುತ್ತಲೇ ಇವೆ ಎಂದು ಅಸಮಾಧಾನ ಹೊರ ಹಾಕಿದ್ದರು.ತಮಗೆ ಬರುವ ಔತಣಕೂಟದ ಆಹ್ವಾನ ಮತ್ತು ಪ್ರಸಿದ್ಧ ವಕೀಲ ನಾನಿ ಪಾಲ್ಕಿವಾಲಾ ಅವರೊಂದಿಗೆ ತಮ್ಮ ಒಡನಾಟದ ಕುರಿತು ಮಾಹಿತಿ ಕೋರಿ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಇದು ಅತಿಯಾಯಿತು, ಇದರಿಂದ ನ್ಯಾಯಾಂಗವನ್ನು ರಕ್ಷಿಸಬೇಕಿದೆ ಎಂದು ಅವರು ಹೇಳಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.