ಬುಧವಾರ, ಡಿಸೆಂಬರ್ 11, 2019
25 °C

ಕಪಾಳಮೋಕ್ಷ ಅನಿವಾರ್ಯ - ಅಣ್ಣಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಪಾಳಮೋಕ್ಷ ಅನಿವಾರ್ಯ - ಅಣ್ಣಾ

ರಾಳೇಗಣಸಿದ್ಧಿ (ಪಿಟಿಐ): ಭ್ರಷ್ಟಾಚಾರ ಮೇರೆ ಮೀರಿದಾಗ ಸಹನೆ ಕಳೆದುಕೊಳ್ಳುವ ಯಾವುದೇ ವ್ಯಕ್ತಿಗೆ ಕಪಾಳಮೋಕ್ಷ ನಡೆಸದೇ ಬೇರೆ ವಿಧಿಯಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬುಧವಾರ ಗುಡುಗಿದ್ದಾರೆ.



ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರಿಗೆ ಯುವಕನೊಬ್ಬ ಈಚೆಗೆ ಕಪಾಳಮೋಕ್ಷ ಮಾಡಿದ್ದ ಸಂದರ್ಭದ್ಲ್ಲಲಿ `ಕೇವಲ ಒಂದೇ ಏಟು ಬಿತ್ತೇ~ ಎಂದು ಪ್ರಶ್ನಿಸಿ ವಿವಾದಕ್ಕೆ ಕಾರಣರಾಗಿದ್ದ ಅಣ್ಣಾ ಅವರ ಈ ಹೇಳಿಕೆ ಈಗ ಇನ್ನೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.



ಭ್ರಷ್ಟಾಚಾರ ವಿರುದ್ಧದ ಜನಸಾಮಾನ್ಯನ ಹಕ್ಕುಗಳ ವಿವರ ಒಳಗೊಂಡ ಹಿಂದಿ ಚಲನಚಿತ್ರ `ಗಲಿ ಗಲಿ ಚೋರ್ ಹೈ~ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ, `ಜನರ ಸಹನೆಗೂ ಮಿತಿ ಇದೆ. ಸಹನೆ ಕಳೆದುಕೊಂಡ ಯಾರೇ ಆಗಲಿ, ಎದುರಿಗಿರುವವರ ಕಪಾಳಕ್ಕೆ ಹೊಡೆದಾಗಲೇ ಅವರ ಮೆದುಳಿಗೆ ಚುರುಕು ಮುಟ್ಟುವುದು. ಅದೇ ಈಗ ಉಳಿದಿ ರುವ ಮಾರ್ಗ~ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.



ಅಣ್ಣಾ ಅವರು ನೋಡಲೆಂದೇ ರಾಳೇ ಗಣಸಿದ್ಧಿಯಲ್ಲಿ ಚಲನಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.



ಕಾಂಗ್ರೆಸ್ ಟೀಕೆ: ಅಣ್ಣಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕಪಾಳಮೋಕ್ಷವನ್ನು ಸಮರ್ಥಿಸಿಕೊಂಡಿರುವ ಅಣ್ಣಾ ಹಜಾರೆ ತಮ್ಮನ್ನು ತಾವು ಗಾಂಧಿವಾದಿ ಎಂದು ಹೇಗೆ ಕರೆದುಕೊಳ್ಳುತ್ತಾರೆ? ಎಂದು ಪ್ರಶ್ನಿಸಿದೆ.



`ಇಷ್ಟೆಲ್ಲಾ ಅನುಭವವಿರುವ ವ್ಯಕ್ತಿಯೊಬ್ಬರು ಹಿಂಸೆಗೆ ಪ್ರಚೋದನೆ ನೀಡುತ್ತಿರುವುದು ದುರದೃಷ್ಟಕರ ಸಂಗತಿ. ಕಪಾಳಮೋಕ್ಷದಂತಹ ಸಂಗತಿ ಗಾಂಧಿ ತತ್ವಕ್ಕೆ ವಿರುದ್ಧವಾದುದು~ ಎಂದು ಪಕ್ಷದ ವಕ್ತಾರೆ ರೇಣುಕಾ ಚೌಧರಿ ಟೀಕಾಪ್ರಹಾರ ನಡೆಸಿದರು.



`ನಾನು ಅಣ್ಣಾ ಅವರನ್ನು ಇದುವರೆಗೆ ಗಾಂಧಿವಾದಿ ಎಂದೇ ಪರಿಗಣಿಸಿದ್ದೆ. ಆದರೆ ಹಿಂಸೆಗೆ ಕುಮ್ಮಕ್ಕು ನೀಡುವ ಇಂತಹ ಹೇಳಿಕೆಗಳಿಂದ ಅವರ ಮೇಲಿನ ಗೌರವ ಕಡಿಮೆಯಾಗಿದೆ. ಮಾತ್ರವಲ್ಲ, ಅಣ್ಣಾ ಸಂಘ ಪರಿವಾರದ ಜತೆ ಸೇರಿಕೊಂಡಿರುವುದನ್ನು ಈ ಮಾತುಗಳು ಧ್ವನಿಸುತ್ತವೆ. ಅವರ ಹೇಳಿಕೆಯನ್ನು ನಾನು ಖಂಡಿತಾ ವಿರೋಧಿಸುತ್ತೇನೆ~ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು  ಪ್ರತಿಕ್ರಿಯಿಸಿದ್ದಾರೆ.



`ಕಪಾಳ ಮೋಕ್ಷ ನಡೆಸುವುದಾಗಲಿ, ಬೂಟು ಎಸೆಯುವುದಾಗಲಿ ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು~ ಎಂದು ಕೇಂದ್ರ ಸಚಿವ ಸಚಿನ್ ಪೈಲಟ್ ಅಭಿಪ್ರಾಯಪಟ್ಟಿದ್ದಾರೆ.



`ಅಣ್ಣಾ ಅವರ ಈ ಹೇಳಿಕೆಗೆ ಜನರೇ ತಕ್ಕ ಉತ್ತರ ನೀಡುತ್ತಾರೆ~ ಎಂದು ಮಹಾರಾಷ್ಟ್ರ ಎನ್‌ಸಿಪಿ ಘಟಕದ ಮುಖ್ಯಸ್ಥ ಮಧುಕರ್ ಪಿಚಡ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)