ಶನಿವಾರ, ಜೂನ್ 6, 2020
27 °C

ಕಪಿಲಾ ಕಲುಷಿತ: ಯುಗಾದಿ ಸಂಭ್ರಮಕ್ಕೆ ಕುತ್ತು?

ಪ್ರಜಾವಾಣಿ ವಿಶೇಷ ವರದಿ/ ಎಂ.ಮಹಾದೇವ್ Updated:

ಅಕ್ಷರ ಗಾತ್ರ : | |

ಕಪಿಲಾ ಕಲುಷಿತ: ಯುಗಾದಿ ಸಂಭ್ರಮಕ್ಕೆ ಕುತ್ತು?

ತಿ.ನರಸೀಪುರ: ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹರಿದು ಹೋಗಿರುವ ಕಪಿಲಾ ನದಿಯಲ್ಲಿ ನೀರು ಬತ್ತಿ ಹೋಗುತ್ತಿದ್ದು, ಕಸಕಡ್ಡಿ ಹಾಗೂ ಜೊಂಡಿನ ರಾಶಿಯಿಂದ ಕಲುಷಿತಗೊಂಡಿದೆ. ಗುಂಜಾ ನರಸಿಂಹಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಅಪಾರ ಭಕ್ತರು ಭೇಟಿ ನೀಡುತ್ತಾರೆ. ಮೊದಲಿಗೆ ಪ್ರವಾಸಿಗರು ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದರು. ನಾಗರಿಕರು ಇಲ್ಲಿಯ ಪರಿಸರ ಸೌಂದರ್ಯ ಆಸ್ವಾದಿಸಲು ಸಂಜೆ ವೇಳೆ ವಾಯು ವಿಹಾರಕ್ಕೆ ಬರುತ್ತಿದ್ದರು. ಈಗ ಮಲಿನ ಪರಿಸರ ನೋಡಿ ಬೇಸರ ಪಡುತ್ತಿದ್ದಾರೆ. ದೇವಾಲಯದ ಮುಂಭಾಗದ ಕಪಿಲಾ ದಂಡೆಯ ಸೋಪಾನ ಕಟ್ಟೆಯ ಕಲ್ಲುಗಳು ಕಿತ್ತು ಹೋಗಿವೆ. ಸುಂದರವಾಗಿದ್ದ ನದಿಯ ದಂಡೆ ಹಾಗೂ ಸುತ್ತಲಿನ ಪರಿಸರ ಈಗ ಹೊಲಸಾಗಿದೆ. ಪಟ್ಟಣದ ಚರಂಡಿಗಳಿಂದ ಬರುವ ಕೊಳಚೆ ನೀರು ನದಿಗೆ ಸೇರುತ್ತಿದೆ. ಬಟ್ಟೆ-ಬರೆ, ಆಸು-ಪಾಸಿನ ಕಸ, ಒಣಗಿದ ಹೂವುಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿ ನೀರು ಮಲಿನವಾಗಿರುವುದಷ್ಟೇ ಅಲ್ಲ ನೀರಿನ ಹರಿವು ಸ್ಥಗಿತಗೊಂಡಿದೆ. ನೀರು ಅಲ್ಲಲ್ಲಿ ನಿಂತು ಕೊಳೆಯುತ್ತಿದೆ. ಅನಧಿಕೃತ ಮರಳು ಗಣಿಗಾರಿಕೆಯಿಂದ ನದಿಯಲ್ಲಿ ಗುಂಡಿಗಳಾಗಿದೆ. ಪ್ರತಿ ವರ್ಷ ಯುಗಾದಿ ಹಬ್ಬದ ದಿನ ಈ ಕಪಿಲಾ ಕಾವೇರಿ ನದಿಗಳ ಸಂಗಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಲು ಬರುತ್ತಾರೆ. ವಿವಿಧ ಗ್ರಾಮಗಳ ದೇವರ ಕೂಟಗಳು ಇಲ್ಲಿ ಭಾಗವಹಿಸುತ್ತವೆ. ದೇವರ ದೀಕ್ಷೆ (ಗುಡ್ಡಪ್ಪನವರು) ಪಡೆದ ನೂರಾರು ಜನರು ಇಲ್ಲಿ ದೇವರ ಸಾಮಾಗ್ರಿಗಳನ್ನಿಟ್ಟು ಪೂಜೆ ಮಾಡುತ್ತಾರೆ. ಆದರೆ ಈಗ ಇಲ್ಲಿಯ ಕಪಿಲಾ ನದಿ ನೋಡಿದರೆ ಚರಂಡಿ ನೀರಿನಂತಾಗಿದೆ. ಇಂಥ ಕಲುಷಿತ ವಾತಾವರಣ ಯುಗಾದಿ ಸಂಭ್ರಮಕ್ಕೆ ಪೆಟ್ಟು ನೀಡುವ ಸಾಧ್ಯತೆ ಇದೆ.ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿತಗೊಂಡಿರುವುದರಿಂದ ನದಿಗೆ ನೀರಿನ ಹರಿವು ಕುಸಿತಗೊಂಡಿದೆ. ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ತುರ್ತು ಗಮನಹರಿಸಿ ದೇವಾಲಯದ ಆಸುಪಾಸಿನಲ್ಲಿ ಕಸ ಕಡ್ಡಿ ಸುರಿಯದಂತೆ ಎಚ್ಚರಿಕೆಯ ನಾಮಫಲಕ ಹಾಕಿಸಬೇಕು. ದೇವಾಲಯದ ಸುತ್ತ ಸ್ವಚ್ಛತಾಕಾರ್ಯ ಮಾಡಲು ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ವಸ್ತುಗಳನ್ನು ಹಾಕಲು ಸಿಮೆಂಟ್ ತೊಟ್ಟಿಗಳನ್ನು ಇಡಬೇಕು. ನೀರಾವರಿ ಇಲಾಖೆಯಿಂದ ನದಿಯಲ್ಲಿ ಕಾಲಕಾಲಕ್ಕೆ ಹೂಳೆತ್ತಿಸಿ, ಸೋಪಾನ ಕಲ್ಲುಗಳನ್ನು ಮರು ಜೋಡಿಸಿ ನದಿ ಪರಿಸರವನ್ನು ಶುಭ್ರಗೊಳಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.