ಸೋಮವಾರ, ಮಾರ್ಚ್ 8, 2021
29 °C

ಕಪಿಲಾ ನದಿ: ಅಕ್ರಮ ಮರಳು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಪಿಲಾ ನದಿ: ಅಕ್ರಮ ಮರಳು ವಶ

ತಿ.ನರಸೀಪುರ : ನಿಷೇಧಾಜ್ಞೆ ಇದ್ದರೂ ಕೂಡ ಕಾವೇರಿ ಮತ್ತು ಕಪಿಲಾ ಸೇತುವೆಯ ಆಸುಪಾಸಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಂತಿಲ್ಲ. ಇದಕ್ಕೆ ನಿದರ್ಶನವಾಗಿ ಸೋಮವಾರ ಸಂಜೆ 10 ಲೋಡ್ ಅಕ್ರಮ ಮರಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.  ಕಾವೇರಿ ಮತ್ತು ಕಪಿಲಾ ಸೇತುವೆಗಳ ಆಸು ಪಾಸಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡಿ ಸಂಗ್ರಹಿಸಿದ್ದ, ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಜಂಟಿ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಸೋಮವಾರ ಸಂಜೆ ವಶಪಡಿಸಿಕೊಂಡಿದ್ದಾರೆ.ಎರಡು ಸೇತುವೆಗಳ  ಆಸು ಪಾಸಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸದಂತೆ ನಿಷೇದಾಜ್ಞೆ ಹೇರಿದ್ದರೂ ಸಹ ನಿರಾತಂಕವಾಗಿ ಗಣಿಗಾರಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿ ಕಾವೇರಿ ಸೇತುವೆ  ಸಮೀಪದ ಕೋಳಿ ಮಲ್ಲನಹುಂಡಿ ಹಾಗೂ ತಿರಮಕೂಡಲಿನ ಬಳಿ ನದಿ ದಂಡೆಯಲ್ಲಿ ಅಕ್ರಮ ವಾಗಿ ಶೇಖರಿಸಿದ್ದ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಫಯಾಜ್ ಮತ್ತು ಪಿಎಸ್‌ಐ ಮಹಾದೇವಯ್ಯ ವಶಪಡಿಸಿಕೊಂಡರು.`ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಪ್ರಸ್ತುತ ನಾನೋಬ್ಬನೇ ಅಧಿಕಾರಿ ಜಿಲ್ಲೆಯಲ್ಲಿದ್ದು, ಜಿಲ್ಲೆಯ ಎಲ್ಲಾ ಕಡೆ ಪ್ರವಾಸ ಮಾಡಬೇಕಿದೆ. ಸಿಬ್ಬಂದಿ ಕೊರತೆಯಿಂದಾಗಿ ಎಲ್ಲ ಕಡೆ ಏಕಕಾಲಕ್ಕೆ ದಾಳಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಇಲಾಖೆ ಅಧಿಕಾರಿಯವರ ಅಸಹಾಯಕ ಮಾತು. 

 

ಮುಂದುವರಿದ ಮರಳು ಗಣಿಗಾರಿಕೆ 

ನಿಷೇಧಾಜ್ಞೆ ಇದ್ದರೂ ಕೂಡ ಕಾವೇರಿ ಮತ್ತು ಕಪಿಲಾ ಸೇತುವೆಯ ಆಸುಪಾಸಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಮೊನ್ನೆಯಷ್ಟೆ ಕೆಡಿಪಿ ಸಭೆ ನಡೆಸಿ ಮೂರು ದಿನಗಳೊಳಗೆ ಅಕ್ರಮ ಗಣಿಗಾರಿಕೆ ನಡೆಸುವಂತೆ ಪೊಲೀಸರಿಗೆ ಸ್ಪಷ್ಟ ಸೂಚನೆ ನೀಡಿದ್ದರೂ ಮರಳು ಗಣಿಗಾರಿಕೆ ಹೆಚ್ಚಾಗಿದೆ.ಜಿಲ್ಲಾಧಿಕಾರಿ ಹರ್ಷಗುಪ್ತ ವರ್ಗಾವಣೆಯಾದ ನಂತರವಂತೂ ರಾತ್ರಿ ವೇಳೆ ನಡೆಯುತ್ತಿದ್ದ ಗಣಿಗಾರಿಕೆ ಈಗ ಹಗಲಿನಲ್ಲಿಯೇ ನಡೆಯತೊಡಗಿದೆ. ತಾಲ್ಲೂಕಿನ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಅವರಕಡೆ ಇವರ ಕಡೆ ಬೆರಳು ತೋರುತ್ತಾ ಮರಳು ಗಣಿಗಾರಿಕೆಗೆ ಪರೋಕ್ಷ ಸಹಾಯ ನೀಡುತ್ತಿರುವ ಅಧಿಕಾರಿಗಳು ಅಕ್ರಮ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದ ಕೂಗು ಮಾತ್ರ ನಿಂತಿಲ್ಲ. ಸ್ಥಳೀಯ ಅಧಿಕಾರಿಗಳ ಸಹಾಯವಿಲ್ಲದೇ ಇಷ್ಟು ರಾಜಾರೋಷವಾಗಿ ಗಣಿಗಾರಿಕೆ ನಡೆಯಲು ಸಾಧ್ಯವಿಲ್ಲ ಎಂಬುದು ಸ್ಥಳೀಯರ ಆರೋಪ. ಎಲ್ಲಿಯಾದರೂ ಮಾಡಿಕೊಳ್ಳಲಿ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೂ ಸಂಪರ್ಕ ಕೇಂದ್ರವಾಗಿರುವ ಎರಡು ಸೇತುವೆಗಳು ಈಗಾಗಲೇ ಅಪಾಯದ ಹಂಚಿನಲ್ಲಿದ್ದು, ಅವು ಮುರಿದು ಬಿದ್ದಲ್ಲಿ ಏನು ಮಾಡುವುದು ಎಂಬುದು ಇಡೀ ತಾಲ್ಲೂಕಿನ ಜನರ ಅಳಲು. ಕಾವೇರಿ ಮತ್ತು ಕಪಿಲಾ ಸೇತುವೆ ಆಸುಪಾಸಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಇನ್ನೂ ಕೆಲವೇ ವರ್ಷಗಳಲ್ಲಿ ಸೇತುವೆ ಕುಸಿಯುವುದ ನಿಶ್ಚಿತ ಎಂಬುದು ಮಾತ್ರ ಇಲ್ಲಿನ ಜನರ ಆತಂಕ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.