ಶುಕ್ರವಾರ, ಡಿಸೆಂಬರ್ 6, 2019
25 °C

ಕಪಿಲ್ಸ್ ಡೆವಿಲ್ಸ್ ವಿಶ್ವಕಪ್ ಎತ್ತಿದ ಕ್ಷಣ

Published:
Updated:
ಕಪಿಲ್ಸ್ ಡೆವಿಲ್ಸ್ ವಿಶ್ವಕಪ್ ಎತ್ತಿದ ಕ್ಷಣ

ಈಗ ಟೀವಿಯಲ್ಲಿ ನೀವು ಮತ್ತೆ ಕಪಿಲ್ ದೇವ್ ಅವರನ್ನು ನೋಡುತ್ತಿರಬಹುದು. ಅವರೀಗ ಸಂತಸದಿಂದ ಇದ್ದಾರೆ. ವಿಶ್ವ ಕಪ್ ಕ್ರಿಕೆಟ್‌ನ ನೆನಪು ಅವರ ಮುಖದಲ್ಲಿ ನಗೆ ಅರಳಿಸುತ್ತದೆ. ಜಿಂಬಾಬ್ವೆ ವಿರುದ್ಧ ಅವರು ಹೊಡೆದಿದ್ದ ಅಜೇಯ 175 ರನ್ನುಗಳು ಭಾರತ ವಿಶ್ವ ಕಪ್ ಗೆಲ್ಲುವ ಕನಸನ್ನು ಅರಳಿಸಿದ್ದವು ಎಂದು ಹೇಳುವ ಅವರು ‘ದಿಲ್ ಸೇ ಖೇಲೋ’ ಎಂದು ದೋನಿ ಅವರ ತಂಡಕ್ಕೆ ಶುಭ ಹಾರೈಸುತ್ತಾರೆ.ಅಂದು, 1983ರ ಜೂನ್ 25, ಶನಿವಾರ. ಕ್ರಿಕೆಟ್ ಕಾಶಿ ಎಂದು ಹೆಸರಾದ ಲಾರ್ಡ್ಸ್‌ನಲ್ಲಿ ಇನ್ನೂ ಕತ್ತಲಾಗಿರಲಿಲ್ಲ. ಆದರೆ ಭಾರತದಲ್ಲಿ ಮಧ್ಯರಾತ್ರಿ ಸಮೀಪಿಸುತ್ತಿತ್ತು. 1947ರ ಆಗಸ್ಟ್ 14ರ ಮಧ್ಯರಾತ್ರಿ (ಆಗಸ್ಟ್ 15) ಇಡೀ ದೇಶದ ಜನ ಸ್ವತಂತ್ರ ಭಾರತದ ಧ್ವಜ ಮೇಲೇರುವುದನ್ನು ನೋಡಲು ಕಾಯುತ್ತಿದ್ದಂತೆಯೇ 1983ರ ಜೂನ್ 25ರ ಮಧ್ಯರಾತ್ರಿಯೂ, ಕಪಿಲ್ ದೇವ್ ವಿಶ್ವ ಕಪ್ ಎತ್ತಿಹಿಡಿಯುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಆಗಷ್ಟೇ ಟೀವಿಯ ಆಗಮನವಾಗಿತ್ತು. ಆದರೆ ಹೆಚ್ಚಿನ ಜನ ಇನ್ನೂ ರೇಡಿಯೋ ವೀಕ್ಷಕ ವಿವರಣೆಯನ್ನೇ ನಂಬಿಕೊಂಡಿದ್ದರು. ಇನ್ನೂ ಹೆಚ್ಚಿನ ಜನ ಪತ್ರಿಕಾ ವರದಿಗಳನ್ನೇ ನೆಚ್ಚಿಕೊಂಡಿದ್ದರು. ಭಾರತದಲ್ಲಿ ಅಂದು ಮಧ್ಯರಾತ್ರಿ ಸಂಭ್ರಮ ರಂಗೇರಿತ್ತು. ಇಡೀ ಕ್ರಿಕೆಟ್ ವಿಶ್ವವೇ ಬೆರಳು ಕಚ್ಚುವಂತೆ ಭಾರತ ಕಪ್ ಗೆದ್ದಿತ್ತು. ದಿಢೀರ್ ಕ್ರಿಕೆಟ್‌ನ ಸಮ್ರಾಟ್ ಎನಿಸಿಕೊಂಡಿತ್ತು.ಲಾರ್ಡ್ಸ್‌ನಲ್ಲಿ ಅಂದು ಮಳೆ ಬಂದಿರಲಿಲ್ಲ. ಆದರೆ ಭಾರತದ ಕ್ರಿಕೆಟ್‌ನಲ್ಲಿ ಹೊಸ ಮಿಂಚೊಂದು ಹೊಳೆದಿತ್ತು. ಭಾರತ ಗೆಲ್ಲುವುದೆಂದು ಯಾವ ಪಂಡಿತನೂ ಎಣಿಸಿರಲಿಲ್ಲ. ‘ಪ್ರಜಾವಾಣಿ’ಯ ಈ ಕ್ರೀಡಾ ವರದಿಗಾರನಿಗೆ ಅಂದು ರಾತ್ರಿ ಪಾಳಿ. ರೇಡಿಯೋದಲ್ಲಿ ಕಾಮೆಂಟರಿ ಕೇಳುತ್ತ ಸ್ಕೋರು ಬರೆದುಕೊಳ್ಳುತ್ತಿದ್ದ. ಭಾರತವೇ ಗೆಲ್ಲುತ್ತದೆ ಎಂಬ ಒಂದು ರೀತಿಯ ಹುಚ್ಚು ಧೈರ್ಯದಿಂದ, ಕುದುರೆಬಾಲಪ್ರಿಯ ಸಹೋದ್ಯೋಗಿಯೊಡನೆ 200 ರೂ. ಬೆಟ್ ಕಟ್ಟಿದ್ದ. (ಆಗ 200 ರೂಪಾಯಿಗಳಲ್ಲಿ ಚೆನ್ನಾಗಿ ಗುಂಡು ಹಾಕಬಹುದಿತ್ತು!) ಭಾರತದ ಆಟ 183 ರನ್ನುಗಳಿಗೆ ಕೊನೆಗೊಂಡಾಗ ರೇಸಿಂಗ್ ವರದಿಗಾರನ ಮುಖದಲ್ಲಿ ನಗು ಅರಳಿತ್ತು. ತೆಗಿ ತೆಗಿ 200 ರೂಪಾಯಿ ಎಂದು ಕೈಚಾಚತೊಡಗಿದ್ದ.‘ತಡೀರಿ, ಇನ್ನೂ ಪಂದ್ಯ ಮುಗಿದಿಲ್ಲ. ನೋಡೋಣ ಏನಾಗುತ್ತದೆ’ ಎಂದು ಹೇಳುವಾಗ ‘ದುಡ್ಡು ಹೋಗುತ್ತದೆ’ ಎಂಬ ವಿಷಾದಭಾವ ಧ್ವನಿಯಲ್ಲಿತ್ತು. ರೇಡಿಯೊ ಕೇಳುತ್ತ, ಮೊದಲ ಮುದ್ರಣ ಮುಗಿಸುವ ತರಾತುರಿಯಲ್ಲಿದ್ದಾಗಲೇ ವಿವಿಯನ್ ರಿಚರ್ಡ್ಸ್ ವಿಕೆಟ್ ಬಿತ್ತು. ಮದನ್‌ಲಾಲ್ ಬೌಲಿಂಗ್‌ನಲ್ಲಿ ರಿಚರ್ಡ್ಸ್ ಪುಲ್ ಮಾಡಿದ ಚೆಂಡು ಮಿಡ್‌ವಿಕೆಟ್‌ನತ್ತ ಮೇಲಕ್ಕೆ ಹಾರಿತ್ತು. ಕಪಿಲ್ ದೇವ್ ಓಡುತ್ತ ಹೋಗಿ ಕ್ಯಾಚ್ ಹಿಡಿದರು. 30 ಓವರುಗಳಲ್ಲೇ ಪಂದ್ಯ ಮುಗಿಸುವಂತೆ ಬ್ಯಾಟಿಂಗ್ ಮಾಡುತ್ತಿದ್ದ ರಿಚರ್ಡ್ಸ್ ಅವರ ಕ್ಯಾಚನ್ನು ಕಪಿಲ್ ಹಿಡಿದಾಗ ಅವರಿಗೆ ಗೊತ್ತಿತ್ತು. ಇನ್ನು ಸ್ವಲ್ಪ ಹೊತ್ತಿನಲ್ಲಿ ತಾವು ವಿಶ್ವ ಕಪ್ ಎತ್ತಿ ಹಿಡಿಯುವುದಾಗಿ. ಇದಕ್ಕೆ ಮೊದಲು ಬಲ್ವಿಂದರ್ ಸಿಂಗ್ ಸಂಧು ಬೌಲಿಂಗ್‌ನಲ್ಲಿ ಚೆಂಡನ್ನು ಆಡದೇ ‘ವೆಲ್ ಲೆಫ್ಟ್’ ಎನ್ನುವಂತೆ ಬಿಟ್ಟಿದ್ದ ಗ್ರೀನಿಜ್ ಆಫ್‌ಸ್ಟಂಪ್ ಬುಡಮೇಲಾಗುವುದನ್ನು ವಿಸ್ಮಯದಿಂದ ನೋಡಿದ್ದರು.ರಿಚರ್ಡ್ಸ್ ನಂತರ ಲ್ಯಾರಿ ಗೋಮ್ಸ್, ಕ್ಲೈವ್ ಲಾಯ್ಡ್, ಬ್ಯಾಕಸ್ ಹತ್ತು ರನ್ನುಗಳ ಅಂತರದಲ್ಲಿ ಬಿದ್ದಾಗ ಭಾರತ ಇತಿಹಾಸ ನಿರ್ಮಿಸುವುದು ಖಚಿತವಾಗಿತ್ತು. ಸತತ ಮೂರನೇ ಸಲ ಕಪ್ ಗೆದ್ದು ಹ್ಯಾಟ್ರಿಕ್ ಸಾಧಿಸುವ ವೆಸ್ಟ್‌ಇಂಡೀಸ್ ಕನಸು ಒಡೆಯತೊಡಗಿತ್ತು. ಡೂಜಾನ್ ಹಾಗೂ ಮಾರ್ಷಲ್ ಏಳನೇ ವಿಕೆಟ್‌ಗೆ 43 ರನ್ ಸೇರಿಸಿ ಹೋರಾಟ ತೋರಿದರಾದರೂ ಅದು ಸಾಕಾಗಲಿಲ್ಲ. ವಿಂಡೀಸ್ ದೈತ್ಯರನ್ನು 140 ರನ್ನುಗಳಿಗೆ ಉರುಳಿಸಿದ ಭಾರತ 43 ರನ್ನುಗಳ ಜಯಭೇರಿಯೊಂದಿಗೆ, ಯಾವುದು ಅಸಾಧ್ಯವೆನಿಸಿತ್ತೋ ಅದನ್ನು ಸಾಧಿಸಿ ತೋರಿಸಿತ್ತು. ರೇಸಿಂಗ್ ವರದಿಗಾರ ಪೆಚ್ಚುನಗೆಯೊಂದಿಗೆ ಕೊಟ್ಟ 200 ರೂ. ಮರುದಿನವೇ ಪ್ರೆಸ್ ಕ್ಲಬ್‌ನಲ್ಲಿ ಖರ್ಚಾಗಿತ್ತು.ಹಿಂದಿನ ಎರಡೂ ವಿಶ್ವ ಕಪ್‌ಗಳಲ್ಲಿ-1975 ಮತ್ತು 1979-ಭಾರತದ ಆಟ ನಿರಾಶಾದಾಯಕವಾಗಿತ್ತು. ನಿಗದಿಯ ಓವರುಗಳ ಕ್ರಿಕೆಟ್‌ಗೆ ಭಾರತ ನಾಲಾಯಕ್ ಎಂಬ ಭಾವನೆ ಮೂಡಿತ್ತು. ಮೊದಲ ವಿಶ್ವ ಕಪ್‌ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 60 ಓವರುಗಳಲ್ಲಿ 4 ವಿಕೆಟ್‌ಗೆ 334 ರನ್ ಗಳಿಸಿತ್ತು. ಗೆಲುವಿನ ಯತ್ನವನ್ನೇ ಮಾಡದ ಭಾರತ 60 ಓವರುಗಳಲ್ಲಿ ಮಾಡಿದ್ದು 3 ವಿಕೆಟ್ ನಷ್ಟಕ್ಕೆ 132 ರನ್. ಸುನೀಲ್ ಗಾವಸ್ಕರ್ ಕೊನೆಯ ಓವರ್ ವರೆಗೂ ಔಟಾಗದೆ ಉಳಿದರಾದರೂ ಅವರು ಹೊಡೆದದ್ದು ಕೇವಲ 36 ರನ್. ಅವರು ಮುಂದೆ 1987ರ ವರೆಗೂ ವಿಶ್ವ ಕಪ್ ಟೂರ್ನಿಗಳಲ್ಲಿ (ಒಟ್ಟು ನಾಲ್ಕು) ಆಡಿದರು.ಕಪಿಲ್ ದೇವ್ ಅವರ ಭಾರತದ ತಂಡದ ಯಶಸ್ಸಿಗೆ ಮುಖ್ಯ ಕಾರಣವಾಗಿದ್ದು ಫೀಲ್ಡಿಂಗ್. ಈ ಕ್ಷೇತ್ರದಲ್ಲಿ ಯಾವಾಗಲೂ ದುರ್ಬಲ ಎನಿಸಿಕೊಂಡಿದ್ದ ಭಾರತ ನಿರೀಕ್ಷೆಗೂ ಮೀರಿದ ಪ್ರಗತಿ ತೋರಿಸಿತ್ತು. ಕಪಿಲ್ ಅವರೇ ಉಳಿದವರಿಗೆ ಮಾದರಿ ಆಗಿದ್ದರು. ವಿಶ್ವ ಕಪ್‌ಗೆ ಮೊದಲು ವೆಸ್ಟ್‌ಇಂಡೀಸ್‌ನಲ್ಲಿ ನಡೆಸಿದ್ದ ತಯಾರಿ ಎಲ್ಲ ಆಟಗಾರರ ವಿಶ್ವಾಸ  ಹೆಚ್ಚಿಸಿತ್ತು. ‘ಬಿ’ ಗುಂಪಿನ ಲೀಗ್‌ನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಭಾರತ ಸೋತಿದ್ದು ಎರಡು ಮಾತ್ರ. ಆದರೆ ಜಿಂಬಾಬ್ವೆ ವಿರುದ್ಧ ಟನ್‌ಬ್ರಿಜ್ ವೆಲ್ಸ್‌ನಲ್ಲಿ ನಡೆದ ಎರಡನೇ ಲೀಗ್ ಪಂದ್ಯದಲ್ಲಿ ಭಾರತ ಸೋತಿದ್ದರೆ ಸೆಮಿಫೈನಲ್‌ಗೆ ಮುನ್ನಡೆಯುವುದು ಕಷ್ಟವಾಗುತ್ತಿತ್ತು. ಕೇವಲ 17 ರನ್ನುಗಳಾಗುವಷ್ಟರಲ್ಲಿ ಭಾರತ ಐದು ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಬಂದ ಕಪಿಲ್ ಅವರ ಅಮೋಘ 175 ರನ್ನುಗಳ ಆಟ ಬಹುಶಃ ವಿಶ್ವ ಕಪ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮವಾದದ್ದು.138 ಎಸೆತಗಳಲ್ಲಿ ಆರು ಸಿಕ್ಸರ್, 16 ಬೌಂಡರಿ (ಸರಿಯಾಗಿ ನೂರು ರನ್) ಹೊಡೆದ ಅವರು ಆರನೇ ವಿಕೆಟ್‌ಗೆ ರಾಜರ್ ಬಿನ್ನಿ (22) ಜೊತೆ 60; ಎಂಟನೇ ವಿಕೆಟ್‌ಗೆ ಮದನ್‌ಲಾಲ್ (17) ಜೊತೆಗೆ 102 ಹಾಗೂ ಮುರಿಯದ ಒಂಬತ್ತನೇ ವಿಕೆಟ್‌ಗೆ ಕಿರ್ಮಾನಿ (ಔಟಾಗದೆ 24) ಜೊತೆ 86 ರನ್ ಸೇರಿಸಿದರು. ತಂಡದ 266 ರನ್ ಮೊತ್ತದಲ್ಲಿ ಕಪಿಲ್ ಅವರ ಕಾಣಿಕೆ 175 ಎಂದರೆ ಅವರ ಆಟ ಹೇಗಿತ್ತು ಎಂದು ಊಹಿಸಬಹುದು. ಆ ನಂತರ ಭಾರತ ಫೈನಲ್ ವರೆಗೆ ಯಾವ ಪಂದ್ಯವನ್ನೂ ಸೋಲಲಿಲ್ಲ.ಭಾರತ 1983ರ ನಂತರ ಮತ್ತೆ ವಿಶ್ವ ಕಪ್ ಗೆಲ್ಲಲಿಲ್ಲ. ಆದರೆ 83 ರ ನಂತರ ಭಾರತದ ಕ್ರಿಕೆಟ್ ಚಿತ್ರವೇ ಬದಲಾಗಿಹೋಯಿತು. ಹಣದ ಹೊಳೆ ಹರಿಯತೊಡಗಿತ್ತು. ಆಟಗಾರರು ಶ್ರೀಮಂತರಾದರು. ನಿಗದಿತ ಓವರುಗಳ ಕ್ರಿಕೆಟ್‌ನಲ್ಲಿ ಭಾರತ ದೊಡ್ಡ ಶಕ್ತಿಯಾಗಿಯೇ ರೂಪುಗೊಂಡಿತು. ಆದರೆ ‘ಕಪಿಲ್ಸ್ ಡೆವಿಲ್ಸ್’ ತೋರಿದ್ದ ಸಾಂಘಿಕ ಮನೋಭಾವ, ಗೆಲ್ಲಲೇಬೇಕೆಂಬ ಛಲ ಕಳೆದ ಎರಡು ದಶಕಗಳಲ್ಲಿ ಆಡಿರುವ ಆಟಗಾರರಲ್ಲಿ ಕಂಡುಬಂದಿಲ್ಲ.ಹಣದ ವ್ಯಾಮೋಹದಲ್ಲಿ, ಮೋಸದಾಟದ ಬಲೆಯಲ್ಲಿ ಭಾರತದ ಆಟಗಾರರೂ ಸಿಕ್ಕಿಬಿದ್ದರು. ಈಗ ಕ್ರಿಕೆಟ್ ದೊಡ್ಡ ಉದ್ಯಮ. ಭಾರತ ಮೂರನೇ ಬಾರಿಗೆ ವಿಶ್ವ ಕಪ್ ಸಂಘಟಿಸುತ್ತಿದೆ. ಭಾರತ ವಿಶ್ವ ಚಾಂಪಿಯನ್ ಆಗುವ ನೆಚ್ಚಿನ ತಂಡ ಎಂದು ಎಲ್ಲರೂ ಹೇಳುತ್ತಿದ್ದಾರೆ. ವಿಶ್ವ ಕಪ್ ಆರಂಭವಾಗಲು ಇನ್ನೇನು 26 ದಿನಗಳು ಉಳಿದಿವೆ. ಭಾರತ ಗೆಲ್ಲುವುದೆಂದು ಬೆಟ್ ಕಟ್ಟಲೋ ಬೇಡವೋ ಎಂಬ ಯೋಚನೆ ಕೊರೆಯುತ್ತಿದೆ. 83 ರಲ್ಲಿದ್ದ ಹುಚ್ಚು ಧೈರ್ಯ ಮಾತ್ರ ಈ ಸಲ ಇಲ್ಲ.

 

ಪ್ರತಿಕ್ರಿಯಿಸಿ (+)