ಸೋಮವಾರ, ಜನವರಿ 27, 2020
26 °C
ಜೀವಮಾನ ಶ್ರೇಷ್ಠ ಸಾಧನೆಗಾಗಿ ವೇಗಿಗೆ ಒಲಿದ ಬಿಸಿಸಿಐ ಗೌರವ

ಕಪಿಲ್‌ಗೆ ಸಿ.ಕೆ.ನಾಯ್ಡು ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಪಿಲ್‌ಗೆ ಸಿ.ಕೆ.ನಾಯ್ಡು ಪ್ರಶಸ್ತಿ

ನವದೆಹಲಿ (ಪಿಟಿಐ/ಐಎಎನ್‌ಎಸ್‌): 1983ರಲ್ಲಿ ಭಾರತಕ್ಕೆ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಕಪಿಲ್‌ ದೇವ್‌ ಅವರನ್ನು ಜೀವಮಾನ ಶ್ರೇಷ್ಠ ಸಾಧನೆಗಾಗಿ ಪ್ರತಿಷ್ಠಿತ ಕರ್ನಲ್‌ ಸಿ.ಕೆ.ನಾಯ್ಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಬಿಸಿಸಿಐ ಅಧ್ಯಕ್ಷ ಎನ್‌.ಶ್ರೀನಿವಾಸನ್‌, ಕಾರ್ಯದರ್ಶಿ ಸಂಜಯ್‌ ಪಟೇಲ್‌ ಹಾಗೂ ಹಿರಿಯ ಪತ್ರಕರ್ತ ಅಯಾಜ್‌ ಮೆಮನ್‌ ಅವರನ್ನೊಳಗೊಂಡ ಪ್ರಶಸ್ತಿ ಆಯ್ಕೆ ಸಮಿತಿ, ಚೆನ್ನೈನಲ್ಲಿ ಬುಧವಾರ ಸಭೆ ನಡೆಸಿ ಮಾಜಿ ಆಲ್‌ರೌಂಡರ್‌ ಕಪಿಲ್‌ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲು ತೀರ್ಮಾನಿಸಿದೆ.‘ ಸಿ.ಕೆ.ನಾಯ್ಡು ಪ್ರಶಸ್ತಿಗೆ ಈ ಬಾರಿ ವೇಗಿ ಕಪಿಲ್‌ ದೇವ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₨ 25 ಲಕ್ಷ, ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರಲಿದೆ. 2012–13ನೇ ಸಾಲಿನ ಬಿಸಿಸಿಐ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರಿಗೆ ಈ ಗೌರವ ನೀಡಲಾಗುವುದು. ಕಾರ್ಯಕ್ರಮದ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸ ಲಾಗುವುದು’ ಎಂದು ಮಂಡಳಿಯ ಕಾರ್ಯದರ್ಶಿ ಸಂಜಯ್‌ ಪಟೇಲ್‌ ತಿಳಿಸಿದ್ದಾರೆ.ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದ ಮೊದಲ ನಾಯಕ ಸಿ.ಕೆ.ನಾಯ್ಡು ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. 2012ರಲ್ಲಿ ಸುನಿಲ್‌ ಗಾವಸ್ಕರ್‌ ಅವರಿಗೆ ನೀಡಲಾಗಿತ್ತು. ಜಗತ್ತಿನ ಶ್ರೇಷ್ಠ ಆಲ್‌ರೌಂಡರ್‌ ಗಳಲ್ಲಿ ಒಬ್ಬರು ಎನಿಸಿರುವ ಕಪಿಲ್‌ 131 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 1978 ರಲ್ಲಿ ಪಾಕಿಸ್ತಾನ ಎದುರು ಪದಾರ್ಪಣೆ ಮಾಡಿದ್ದ ಅವರು 1994ರಲ್ಲಿ ನ್ಯೂಜಿಲೆಂಡ್‌ ಎದುರು ಕೊನೆಯ ಪಂದ್ಯ ಆಡಿದ್ದರು.ಟೆಸ್ಟ್‌ನಲ್ಲಿ 31.05 ಸರಾಸರಿಯಲ್ಲಿ 5248 ರನ್‌ ಗಳಿಸಿರುವ ಅವರು 29.64 ಸರಾಸರಿಯಲ್ಲಿ 434 ವಿಕೆಟ್‌ ಕಬಳಿಸಿದ್ದಾರೆ. ಅತಿ ಹೆಚ್ಚು ವಿಕೆಟ್‌ ಗಳಿಸಿದ ದಾಖಲೆಯನ್ನೂ ಅವರು ಹೊಂದಿದ್ದರು. ಐದು ಸಾವಿರ ರನ್‌ ಹಾಗೂ 400 ವಿಕೆಟ್‌ ಪಡೆದ ವಿಶ್ವದ ಮೊದಲ ಆಟಗಾರ ಕೂಡ.225 ಏಕದಿನ ಪಂದ್ಯ ಆಡಿರುವ ಅವರು ಇಂಗ್ಲೆಂಡ್‌ನಲ್ಲಿ ನಡೆದ 1983 ರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಬೌಲಿಂಗ್‌, ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ಜಿಂಬಾಬ್ವೆ ಎದುರು ಗಳಿಸಿದ್ದ ಅಜೇಯ 175 ರನ್‌ಗಳ ಆಟ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿತ್ತು.ಆದರೆ 2007ರಲ್ಲಿ ಅವರು ಬಿಸಿಸಿಐಗೆ ಸೆಡ್ಡು ಹೊಡೆದು ಇಂಡಿಯನ್‌ ಕ್ರಿಕೆಟ್‌ ಲೀಗ್‌ (ಐಸಿಎಲ್‌) ಸೇರಿದ್ದರು. ಪರ್ಯಾಯ ಬಣ ಸೇರಿದ್ದಕ್ಕಾಗಿ ಕಪಿಲ್‌ ಅವರನ್ನು ಬಿಸಿಸಿಐ ನಿಷೇಧಿಸಿತ್ತು. 2011ರಲ್ಲಿ ಕಪಿಲ್‌ ಅವರು ಐಸಿಎಲ್‌ನಿಂದ ಹೊರಬಂದು ಬಿಸಿಸಿಐನೊಂದಿಗೆ ರಾಜೀ ಮಾಡಿ ಕೊಂಡರು. ಅವರನ್ನು ಸ್ವಾಗತಿಸಿದ್ದ ಬಿಸಿಸಿಐ, ಮಾಜಿ ಆಟಗಾರರಿಗೆ ನೀಡುವ ಸಹಾಯಧನವನ್ನು ಕಪಿಲ್‌ ಅವರಿಗೂ (₨ 1.5 ಕೋಟಿ) ಕೊಟ್ಟಿತ್ತು.54 ವರ್ಷ ವಯಸ್ಸಿನ ಕಪಿಲ್‌ ಸದ್ಯ ವೀಕ್ಷಕ ವಿವರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಪ್ರತಿಕ್ರಿಯಿಸಿ (+)