ಶುಕ್ರವಾರ, ಮೇ 7, 2021
26 °C

ಕಪಿಲ್ ಮೋಹನರಿಂದ ಕಾಲುವೆ ನವೀಕರಣ ಕಾಮಗಾರಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ನಾರಾಯಣಪುರ ಎಡದಂಡೆ ಕಾಲುವೆ ನವೀಕರಣ ಪ್ರದೇಶದ 69 ಕಿ.ಮೀ.ಗೆ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ಮೋಹನ ಬುಧವಾರ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲುವೆ ನವೀಕರಣದಲ್ಲಿ ಪ್ರಥಮ ಬಾರಿಗೆ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಹರಿಯುವ ನೀರು ಬಸಿಯದಂತೆ ಪ್ಲಾಸ್ಟಿಕ್ ಪಾಲಿಮರ್ ಅಳವಡಿಸಲಾಗುವುದು.ಪ್ರತಿ ಬಾರಿ ಕಾಲುವೆ ಕುಸಿತ ಕಾಣುವ ಪ್ರದೇಶದಲ್ಲಿ 2.5 ಮೀಟರ್ ಕ್ಯೂಜನ್ ಸ್ವೆಲಿಂಗ್ ಮಣ್ಣು ತೆಗೆದು ಹೊಸ ಮರುಮ್ ಹಾಕಿ ರೂಲಿಂಗ್ ಮಾಡಲಾಗುವುದು. 8 ಎಂಎಂ ಕಬ್ಬಿಣದ ರಾಡ್ ಹಾಕಿ ಕಾಂಕ್ರಿಟ್ ಲೈನಿಂಗ್ ನಿರ್ಮಿಸಿ, 10 ಸಾವಿರ ಕ್ಯೂಸೆಕ್ ನೀರು ಹರಿಯುವಂತೆ ನೋಡಿಕೊಳ್ಳಲಾಗುವುದು ಎಂದರು.ಅಲ್ಲದೇ ಕಾಮಗಾರಿಯನ್ನು ನಿಗದಿ ಪಡಿಸಿದ 90 ದಿನಗಳಲ್ಲಿ ಮಾಡದೇ ಇದ್ದಲ್ಲಿ, ಟೆಂಡರ್ ನಿಯಮದ ಪ್ರಕಾರ ಹೆಚ್ಚುವರಿ ಹಣವನ್ನು ಹಿಡಿದುಕೊಳ್ಳಲಾಗುವುದು ಎಂದ ಅವರು, ಕಾಮಗಾರಿಯ ವೇಗ ನೋಡಿದರೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತ ಪಡೆಸಿದರು.ನಿತ್ಯ ಹಗಲು ರಾತ್ರಿ ರೂ. 2 ಕೋಟಿ ಕಾಮಗಾರಿ ನಡೆಯುತ್ತಿದೆ. ಒಂದು ಕಿ.ಮೀ. ಒಂದರಂತೆ ಪ್ಲೇಜರ್ ಯಂತ್ರ ಬಳಸಲಾಗುತ್ತಿದೆ. ನಿರ್ಮಾಣವಾದ ಕಾಲುವೆ ಮುಂದಿನ ಮೂವತ್ತು ವರ್ಷ ಬಾಳಿಕೆ ಬರಲಿದೆ ಎಂದ ಅವರು, ಕಾಲುವೆ ಕಾಮಗಾರಿಯ ಪರೀಕ್ಷೆಗೆ ಮೂರನೇ ತಂಡವನ್ನು ನೇಮಕ ಮಾಡಲಾಗಿದ್ದು, ಇಲ್ಲಿಯೇ ಠಿಕಾಣಿ ಹೂಡಿ ಗುಣಮಟ್ಟದ ಪರೀಕ್ಷೆ ಮಾಡಿ ನಿತ್ಯ ನೇರವಾಗಿ ತಮಗೆ ವರದಿ ನೀಡುತ್ತಿದ್ದಾರೆ.

 

ಅಲ್ಲದೇ ಕಾಲುವೆಯ ವಿಸ್ತಾರವೂ ಹೆಚ್ಚಿಸಲಾಗಿದೆ ಎಂದ ಅವರು, ಕಾಲುವೆಯ ಕೊನೆಯ ಭಾಗದ ಜಮೀನಿಗೂ ನೀರು ಸಿಗಲಿದೆ. ಕಾಲುವೆಯ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ಹೇಳಿದರು.ಓಲ್ವೋ(ಅಳತೆ ಮಾಪನ) ಮೀಟರ್ ಅಳವಡಿಕೆ ಇಲ್ಲ: ಕಾಲುವೆಯ ನೀರು ಪೊಲಾಗದಂತೆ ತಡೆಯಲು ಅಳವಡಿಸಬೇಕಿದ್ದ ಅತ್ಯಾಧುನಿಕ ತಂತ್ರಜ್ಞಾನದ ಓಲ್ವೋ (ಅಳತೆ ಮಾಪನ) ಮೀಟರ್ ಅಳವಡಿಕೆ ಈ ಬಾರಿಯೂ ಆಗುತ್ತಿಲ್ಲ ಎಂದು ಕಪಿಲ್ ಮೋಹನ ತಿಳಿಸಿದರು.ಈ ಯೋಜನೆಗೆ ತಾಂತ್ರಿಕ ಮಂಜೂರಾತಿ ನೀಡುತ್ತಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ಬಂದರೆ, ಯಾವ ಉಪಕಾಲುವೆಯಲ್ಲಿ ಎಷ್ಟು ನೀರು ಹರಿಯುತ್ತಿದೆ. ಹರಿದ ನೀರು ಎಷ್ಟರ ಮಟ್ಟಿಗೆ ಉಪಯೋಗವಾಗುತ್ತದೆ ಎಂಬ ವಿಷಯ ಪ್ರತಿ ಎಂಜಿನಿಯರ್‌ಗಳ ಮೊಬೈಲ್‌ಗಳಿಗೆ ಮೇಸೆಜ್ ಮೂಲಕ ತಿಳಿಯುತ್ತಿತ್ತು.ಇದರಿಂದ ನೀರು ಪೊಲಾಗುವುದನ್ನು ಕೂಡ ತಡೆಗಟ್ಟಿ ನೀರು ಸದ್ಬಳಕೆ ಆಗುತ್ತಿತ್ತು. ಅಲ್ಲದೇ ಯಾವ ಕಾಲುವೆಗಳಿಗೆ ಎಷ್ಟು ನೀರು ಹರಿಯುತ್ತಿದೆ. ಬೇಡಿಕೆ ಎಷ್ಟಿದೆ? ಅದಕ್ಕೆ ತಕ್ಕಂತೆ ನೀರು ಹರಿಸಲು ಅನುಕೂಲ ಆಗುತ್ತಿತ್ತು. ಇದೀಗ ಅದಕ್ಕಾಗಿ ಕರೆದಿದ್ದ ಟೆಂಡರ್ ಪ್ರಕ್ರಿಯೆ ಮುಂದೆ ಹೋಗಿದೆ. ಆದರೆ ಎಂಜಿನಿಯರ್‌ಗಳು ಈ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ, ಸಮಿತಿ ಒಪ್ಪಿಗೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಿಗಮದ ಜಮೀನಿನಲ್ಲಿ ಮಣ್ಣು ಇದ್ದರೂ ಅಧಿಕಾರಿಗಳು ಆ ಮಣ್ಣನ್ನು ಏಕೆ ಉಪಯೋಗಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕಪಿಲ್ ಮೋಹನ್, ರೈತರು ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಮಣ್ಣು ತೆಗೆಯಲು ಬಿಡುವುದಿಲ್ಲ. ಈ ಬಗ್ಗೆ ಯೋಚಿಸಲು ಸಮಯವಿಲ್ಲ ಎಂದು ಹೇಳಿ ಜಾರಿಕೊಂಡ ಪ್ರಸಂಗ ನಡೆಯಿತು.

ಗುತ್ತಿಗೆದಾರರಾದ ಡಿ.ವೈ. ಉಪ್ಪಾರ, ಅಮೃತಾ ಕನ್‌ಸ್ಟ್ರಕ್ಷನ್, ಮುಖ್ಯ ಎಂಜಿನಿಯರ್ ಭೋಜನಾಯಕ, ಕಾರ್ಯಪಾಲಕ ಎಂಜಿನಿಯರ್ ಸಜ್ಜನ್, ಎಇಇ ಎಸ್.ಬಿ. ಪಾಟೀಲ, ಚಂದ್ರಶೇಖರ, ರಾಜೇಂದ್ರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.