ಶುಕ್ರವಾರ, ನವೆಂಬರ್ 15, 2019
22 °C

ಕಪಿ ಸೇನೆ ಕಟ್ಟಿದ ಸೇನೇಶ್ವರ ದೇಗುಲ

Published:
Updated:

ಪ್ರಕೃತಿ ಸೌಂದರ್ಯವನ್ನೇ ಹಾಸಿಹೊದ್ದು ಮಲಗಿರುವ ನಯನ ಮನೋಹರ ಭೂಪ್ರದೇಶ ಬೈಂದೂರು. ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಬೈಂದೂರು ಮನಸೂರೆಗೊಳ್ಳುವ ಊರು. ಇದು ಪ್ರಸಿದ್ಧ ಪ್ರವಾಸಿ ಸ್ಥಳವೂ ಹೌದು. ಇಲ್ಲಿರುವುದೇ ಪುರಾತನ ಶ್ರೀ ಸೇನೇಶ್ವರ ದೇವಾಲಯ. `ಬಿಂದು ಋಷಿ' ಎನ್ನುವ ಮಹರ್ಷಿಗಳ ತಪಸ್ಸು ಮಾಡಿದ್ದರಿಂದ ಈ ಸ್ಥಳಕ್ಕೆ ಬಿಂದು ನಾಡು, ಬಿಂದುಪುರ, ಬಿಂದೂರು ಕ್ರಮೇಣವಾಗಿ ಬೈಂದೂರು ಆಗಿ ಪರಿವರ್ತನೆಯಾಯಿತು ಎಂಬುದು ತಜ್ಞರ ಅಭಿಪ್ರಾಯ. ಇಲ್ಲಿಗ ರಾಮನವಮಿ ಸಂಭ್ರಮ.



ಕಪಿ ಸೇನೆ ಸಮೇತವಾಗಿ ಸೀತಾನ್ವೇಷಣೆಗೆ ಹೊರಟಿದ್ದ ಶ್ರೀರಾಮಚಂದ್ರ ಬಿಂದು ಋಷಿಗಳ ಕೋರಿಕೆಯಂತೆ ರಾತ್ರಿ ಬೆಳಗಾಗುವವರೆಗೆ ತನ್ನ ಕಪಿ ಸೇನೆಯಿಂದ ನಿರ್ಮಿಸಿದ ದೇವಾಲಯವೇ ಈ `ಸೇನೇಶ್ವರ' ಎಂಬುದು ಐಹಿತ್ಯ. 11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಚಕ್ರವರ್ತಿಗಳ ಸಾಮಂತರಾಗಿದ್ದ ಸೇನಾ ಅರಸರು ಈ ದೇವಾಲಯ ಕಟ್ಟಿಸಿದ್ದರಿಂದ `ಸೇನೇಶ್ವರ' ಎಂದು ಪ್ರಸಿದ್ಧಿಯಾಯಿತು ಎನ್ನುವುದು ಇತಿಹಾಸ.



ಬೈಂದೂರಿನ ಹೃದಯ ಭಾಗದಲ್ಲಿರುವ ಈ ದೇವಾಲಯ ಅರಬ್ಬೀ ಸಮುದ್ರದ ಕಡಲ ತೀರದಲ್ಲಿದೆ. ಕಡಲಿನ ತೆರೆಗಳ ಭೋರ್ಗರೆತದ ನಡುವೆ ಜೋರಾಗಿ ಬೀಸುವ ಗಾಳಿಗೆ ಈ ಪವಿತ್ರವಾದ ದೇಗುಲದಲ್ಲಿ ನಿಂತ ಕ್ಷಣ ನಮ್ಮನ್ನು ನಾವೇ ಮರೆತು ಬಿಡುವಂತಿದೆ. ದೇವಾಲಯದ ಗರ್ಭಗುಡಿ ಸುಕನಾಸಿ ಮತ್ತು ಬಸವ ಮಂಟಪ ಸಂಪೂರ್ಣ ಶಿಲೆಯಿಂದಲೇ ನಿರ್ಮಿತವಾಗಿದೆ. ಸುಕನಾಸಿಯಲ್ಲಿನ ಕಂಬದ ಕೆತ್ತನೆ ಚಿತ್ತಾಕರ್ಷಕ.



ಹೀಗೆ ಬನ್ನಿ: ಬೈಂದೂರು ಕುಂದಾಪುರದಿಂದ 32 ಕಿ.ಮೀ. ದೂರದಲ್ಲಿದೆ. ಜಿಲ್ಲಾ ಕೇಂದ್ರ ಉಡುಪಿಯಿಂದ 70 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು 450 ಕಿ.ಮೀ. ದೂರದಲ್ಲಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಿನಲ್ಲಿ ಕುಂದಾಪುರಕ್ಕೆ ಬಂದರೆ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 17ರ ಮೂಲಕ ಕ್ರಮಿಸಿದರೆ 30 ನಿಮಿಷ ಅವಧಿಯ ಪ್ರಯಾಣವಿದೆ. ಅಲ್ಲದೇ ಬೆಂಗಳೂರಿನಿಂದ ಬರುವ ರಾಜ್ಯ ಸಾರಿಗೆ ಅಥವಾ ಖಾಸಗಿ ಬಸ್‌ನಲ್ಲಿ ಭಟ್ಕಳಕ್ಕೆ ಬಂದರೆ ಖಾಸಗಿ ಟೆಂಪೊ ಸೌಲಭ್ಯ ಪ್ರತಿ 10 ನಿಮಿಷಕ್ಕೆ ದೊರೆಯುತ್ತದೆ.



ಬಂಗಾರದ ಮೀನು

ಇಲ್ಲಿಯ ದೇವಿಗೆ ಹರಕೆ ಹೊತ್ತರೆ ಭರಪೂರ ಮೀನು ಮೀನುಗಾರರ ಪಾಲು. ಅದೇ ಕಾರಣಕ್ಕೆ ದೇವಿಯ ಮೈಮೇಲೆಲ್ಲ ಬಂಗಾರದ ಮೀನಿನ ನೋಟ.

ಇಂಥದ್ದೊಂದು ವಿಶಿಷ್ಠ ದೇಗುಲ ಇರುವುದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ `ಅಳ್ವೆಕೋಡಿ' ಎಂಬ ಪ್ರದೇಶದಲ್ಲಿ. ಅರಬ್ಬೀ ಸಮುದ್ರ ಮತ್ತು ವೆಂಕಟಾಪುರ ನದಿಯ ಸಂಗಮ ಸ್ಥಳದ ಕಡಲ ತಡಿಯಲ್ಲಿದೆ ಶ್ರೀ ದುರ್ಗಾಪರಮೇಶ್ವರಿ ದೇವಾಲಯ.



ದುರ್ಗಾಪರಮೇಶ್ವರಿ ದೇವಿಯು ಇಲ್ಲಿ ಬಂದು ನೆಲೆಸಿದವಳಲ್ಲ. ಇದು `ವೆಂಕಟಾಪುರ' ಎಂಬ ಹೆಸರಿನ ನದಿಯು ಅರಬ್ಬೀ ಸಮುದ್ರ ಸೇರುವ ಸಂಗಮ ಸ್ಥಳದ ದಡದಲ್ಲಿ ಈ ದೇವಾಲಯವಿದೆ. ಇಲ್ಲಿ ಮೊಗವೀರರು (ಮೀನು ಹಿಡಿಯುವ ಜನರು) ಜೀವನೋಪಾಯಕ್ಕಾಗಿ ಮೀನುಗಾರಿಕೆಯಲ್ಲಿ ನಿರತರಾಗಿರುತ್ತಿದ್ದರು. ಒಂದು ಸಲ ಈ ಸಂಗಮ ಸ್ಥಳದಲ್ಲಿ ಕೇದಿಗೆ ಹೂವಿನ ವನದಲ್ಲಿ ಈ ದೇವಿಯ ವಿಗ್ರಹ ದೊರೆಯಿತು. ಅಲ್ಲಿಯೇ ದೇವಾಲಯ ನಿರ್ಮಿಸಿದರು. ತಮ್ಮ ಬೇಡಿಕೆ ಈಡೇರಿದರೆ ಇಲ್ಲಿ ಮೀನಿನ ಆಭರಣ ಮಾಡಿಸುವ ಪರಿಪಾಠವಿದೆ.



ಹೀಗೆ ಬನ್ನಿ: ಇದು ಬೆಂಗಳೂರಿನಿಂದ ಸುಮಾರು 450 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಬರುವವರು ಭಟ್ಕಳಕ್ಕೆ ಬಂದರೆ ಅಲ್ಲಿಂದ ಅಳ್ವೆಕೋಡಿಗೆ ಸಾರಿಗೆ ಸೌಲಭ್ಯವಿದೆ. ಶಿರಾಲಿಗೆ ಬಂದರೆ ನಿರಂತರವಾಗಿ 5 ನಿಮಿಷಕ್ಕೊಮ್ಮೆ ಆಟೊ ಸಾರಿಗೆ ಸೇವೆ ಸೌಲಭ್ಯವಿದೆ. ಹೊನ್ನಾವರದಿಂದ ಶಿರಾಲಿಗೂ ಬಂದರೆ ಅಲ್ಲಿಂದ ಹೋಗಬಹುದು. ಈ ಹಿಂದೆ ಬಹಳಷ್ಟು ವರ್ಷಗಳಿಂದ ನಿಂತುಹೋಗಿದ್ದ ಮಾರಿ ಜಾತ್ರಾ ಉತ್ಸವ ಈ ವರ್ಷದಿಂದ 3 ದಿನಗಳ ಕಾಲ ಬಹಳಷ್ಟು ವಿಜೃಂಭಣೆಯಿಂದ ನಡೆಯುತ್ತಿದೆ. ಮಾಹಿತಿಗೆ: 9901643138

ಪ್ರತಿಕ್ರಿಯಿಸಿ (+)