ಶನಿವಾರ, ಏಪ್ರಿಲ್ 17, 2021
32 °C

ಕಪ್ಪತ್ತಗುಡ್ಡದತ್ತ ಕುರಿಗಳ ಪಯಣ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಮಹಾರಾಷ್ಟ್ರದಿಂದ ಕರ್ನಾಟಕದತ್ತ ಮೇವು ಅರಸುತ್ತ ಬರುವ ಸಾವಿರಾರು ಕುರಿಗಳು ಪ್ರತಿವರ್ಷ ಶ್ರಾವಣ ಮಾಸದಲ್ಲಿ ತಾಲ್ಲೂಕಿನ ಕಪ್ಪತ್ತಗುಡ್ಡದತ್ತ ಪಯಣ ಬೆಳೆಸುವುದು ಹಿಂದಿನಿಂದ ನಡೆದುಕೊಂಡ ಬಂದ ಸಂಪ್ರದಾಯ.ಮಹಾರಾಷ್ಟ್ರದ ಗಡಹಿಂಗ್ಲಜ, ಸೊಲ್ಲಾಪುರ, ರಾಜ್ಯದ ಬೈಲಹೊಂಗಲ, ಬೆಳಗಾವಿಗಳಿಂದ ಮೇವು ಅರಸುತ್ತಾ ಸಾವಿರಾರು ಕುರಿಗಳು ಗದಗ ಜಿಲ್ಲೆಗೆ ಆಗಮಿಸುವುದು ರೂಢಿ. ಹೀಗೆ ಜಿಲ್ಲೆಗೆ ಪ್ರವೇಶ ಮಾಡಿದ ಕುರಿಗಳು ರೈತರ ಹೊಲಗಳಲ್ಲಿ ಕೆಲವು ದಿನ ಬಿಡಾರ ಹೂಡುತ್ತವೆ. ಒಂದೊಮ್ಮೆ ರೈತರು ಕುರಿಗಾರರನ್ನು ಆಹ್ವಾನಿಸದಿದ್ದರೆ ಆಗ ಕುರುಬರು ತಮ್ಮ ಕುರಿಗಳನ್ನು ತಪ್ಪದೆ ಕಪ್ಪತ್ತಗುಡ್ಡಕ್ಕೆ ಹೊಡೆದುಕೊಂಡು ಹೋಗುತ್ತಾರೆ. ಶ್ರಾವಣ ಮಾಸದಲ್ಲಿ ವಿಪರೀತ ಮಳೆ ಇರುವುದರಿಂದ ಕುರಿಗಾರರು ಸುರಕ್ಷಿತ ಸ್ಥಳವಾಗಿರುವ ಕಪ್ಪತ್ತಗುಡ್ಡಕ್ಕೆ ಹೋಗುತ್ತಾರೆ. ಮಳೆಗಾಲದಲ್ಲಿ ಹೇರಳವಾಗಿ ಹುಲ್ಲು ಬೆಳೆಯುತ್ತದೆ. ಅಲ್ಲದೆ ಇಲ್ಲಿ ಬೆಳೆಯುವ ಹುಲ್ಲಿನಲ್ಲಿ ಅಪಾರ ಪ್ರಮಾಣದ ಕಬ್ಬಿಣಾಂಶ ಇದ್ದು ಇದು ಕುರಿಗಳಿಗೆ ಟಾನಿಕ್ ಇದ್ದಂತೆ. ಹೀಗಾಗಿ ವರ್ಷದಲ್ಲಿ ಒಮ್ಮೆಯಾದರೂ ಕುರಿಗಾರರು ತಮ್ಮ ಕುರಿಗಳು ಇಲ್ಲಿ ಬೆಳೆದಿರುವ ಹುಲ್ಲು ತಿನ್ನಲಿ ಎಂಬ ಆಸೆ. ಹೀಗಾಗಿ ಕುರಿಗಾರರು ಕಪ್ಪತ್ತಗುಡ್ಡಕ್ಕೆ ಬರುತ್ತಾರೆ. `ಕಪ್ಪತ್ತಗುಡ್ಡದಾಗ ಬಾಳಷ್ಟು ಹುಲ್ಲು ಬೆಳಿತೈತಿ. ಇಲ್ಲಿ ಹುಟ್ಟೋ ಹುಲ್ಲು ನಮ್ಮ ಕುರಿಗೆ ಕಸುವು ಕೊಡ್ತಾವು ಅದಕ್ಕೆ ನಾವು ಗುಡ್ಡಕ್ಕ ಹೋಕ್ಕೇವಿ~ ಎಂದು ಮಹಾರಾಷ್ಟ್ರ ಗಡಹಿಂಗ್ಲಜದ ಕುರಿಗಾರ ಸಿದ್ದೇಶ ಹೇಳುತ್ತಾರೆ.ಹೀಗೆ ಗುಡ್ಡಕ್ಕೆ ಬಂದ ಕುರಿಗಾರರು ತಿಂಗಳುಗಟ್ಟಲೆ ಕುಟುಂಬ ಸಮೇತ ಬೇಸಿಗೆ ತನಕ ಇಲ್ಲೆ ಬಿಡಾರ ಹೂಡುತ್ತಾರೆ. ಕುರಿಗಳು ಇಲ್ಲಿ ಸಂತಾನ ಅಭಿವೃದ್ಧಿ ಮಾಡುತ್ತವೆ.ಗುಡ್ಡಕ್ಕೆ ಆಪತ್ತು: ನೂರಾರು ವರ್ಷಗಳಿಂದ ಲಕ್ಷಾಂತರ ಕುರಿಗಳಿಗೆ, ಸಾವಿರಾರು ಪ್ರಾಣಿ ಪಕ್ಷಿಗಳಿಗೆ ಅಷ್ಟೇ ಸಂಖ್ಯೆಯ ಔಷಧ ಸಸ್ಯಗಳಿಗೆ ಜೀವ ನೀಡಿರುವ ಕಪ್ಪತ್ತಗುಡ್ಡ ಈಗ ಆಪತ್ತಿಗೆ ಸಿಲುಕಿದೆ. ಈಚಿನ ದಿನಗಳಲ್ಲಿ ಕಪ್ಪತ್ತಗುಡ್ಡದಲ್ಲಿ ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ಆರಂಭವಾಗಿದ್ದು ಪರಿಸರ ಪ್ರಿಯರಲ್ಲಿ ಕಳವಳ ಹುಟ್ಟಿಸಿದೆ.ಅಲ್ಲದೆ ಬೇಸಿಗೆಯಲ್ಲಿ ಮೇಲಿಂದ ಮೇಲೆ ಗುಡ್ಡಕ್ಕೆ ಬೆಂಕಿ ಬೀಳುತ್ತಿದ್ದು ಅಮೂಲ್ಯ ಔಷಧ ಸಸ್ಯರಾಶಿ ನಾಶವಾಗುತ್ತಿದೆ. ಕಪ್ಪತ್ತಗುಡ್ಡ ಜೀವ ರಕ್ಷಕ ಔಷಧ ಸಸ್ಯಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡಿದ್ದು ಇಂದಿಗೂ ಹತ್ತಾರು ಋಷಿ ಮುನಿಗಳು ಆಯುರ್ವೇದ ಪಂಡಿತರು ನಿತ್ಯ ಔಷಧ ಸಸ್ಯಗಳ ಶೋಧನೆಯಲ್ಲಿ ತೊಡಗಿರುವುದನ್ನು ನಾವಿಲ್ಲಿ ಕಾಣಬಹುದು. ಪ್ರತಿ ಬಾರಿ ಬೆಂಕಿ ಬಿದ್ದಾಗ ಅಪಾರ ಪ್ರಮಾಣದ ಪ್ರಾಣಿ ಪಕ್ಷಿಗಳು ಗುಡ್ಡ ತೊರೆಯುತ್ತಿವೆ. ಅಲ್ಲದೆ ಔಷಧ ಸಸ್ಯಗಳು ಸುಟ್ಟು ಕರಕಲಾಗುತ್ತಿವೆ. ಕಾರಣ ಸರ್ಕಾರ ಕಪ್ಪತ್ತಗುಡ್ಡವನ್ನು ರಕ್ಷಿಸಲು ಯೋಗ್ಯ ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.