ಸೋಮವಾರ, ಏಪ್ರಿಲ್ 12, 2021
23 °C

ಕಪ್ಪತ್ತಗುಡ್ಡ ಅಭಯಾರಣ್ಯ ಮರೀಚಿಕೆ

ಪ್ರಜಾವಾಣಿ ವಾರ್ತೆ ವೆಂಕಟೇಶ ಜಿ.ಎಚ್. Updated:

ಅಕ್ಷರ ಗಾತ್ರ : | |

ಕಪ್ಪತ್ತಗುಡ್ಡ ಅಭಯಾರಣ್ಯ ಮರೀಚಿಕೆ

ಹುಬ್ಬಳ್ಳಿ: ಅಮೂಲ್ಯ ಖನಿಜ ಸಂಪತ್ತು, ವನ್ಯಜೀವಿಗಳು ಹಾಗೂ ಔಷಧೀಯ ಸಸ್ಯಗಳ ತಾಣವಾದ ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶವನ್ನು ಅಭಯಾರಣ್ಯವಾಗಿ ಘೋಷಿಸುವ ಪ್ರಕ್ರಿಯೆ ಎರಡು ವರ್ಷಗಳಿಂದ ಕಡತದಲ್ಲಿಯೇ ಉಳಿದಿದೆ.ಕಪ್ಪತ್ತಗುಡ್ಡದ ಸುಮಾರು 100 ಎಕರೆ ಪ್ರದೇಶವನ್ನು ರಾಜ್ಯ ಸರ್ಕಾರ 2001-02ರಲ್ಲಿ ಔಷಧಿ ವನ ಎಂದು ಘೋಷಿಸಿತ್ತು. ಮುಂದೆ ಬಳ್ಳಾರಿಯ ಅಕ್ರಮ ಗಣಿಗಾರಿಕೆಯ ಕರಿನೆರಳು ಕಪ್ಪತ್ತಗುಡ್ಡಕ್ಕೆ ವ್ಯಾಪಿಸಿದಾಗ ಪ್ರತಿಭಟನೆ ನಡೆಸಿದ್ದ ಸ್ಥಳೀಯರು, ಇಡೀ ಪ್ರದೇಶವನ್ನು ರಕ್ಷಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿದ್ದರು. ಅದಕ್ಕೆ ಈ ಭಾಗದ ಧಾರ್ಮಿಕ ಮುಖಂಡರು ಹಾಗೂ ಪರಿಸರವಾದಿಗಳು  ಕೂಡ ದನಿಗೂಡಿಸಿದ್ದರು. ಹೋರಾಟಕ್ಕೆ ಮಣಿದ ಸರ್ಕಾರ ಅಭಯಾರಣ್ಯ ರಚನೆಗೆ ಯೋಜನಾ ವರದಿ ನೀಡುವಂತೆ ಧಾರವಾಡ ವೃತ್ತದ ಮುಖ್ಯ ಅರಣ್ಯಾಧಿಕಾರಿ ಮಹೇಶ್ ಶಿರೂರು ಅವರಿಗೆ ಸೂಚನೆ ನೀಡಿತ್ತು.ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕಡಕೋಳ-ಜಲ್ಲಿಗೇರಿ ಅರಣ್ಯ ವಲಯದಲ್ಲಿ 5,938 ಹೆಕ್ಟೇರ್, ಮುಂಡರಗಿ ಹಾಗೂ ಗದಗ ತಾಲ್ಲೂಕಿನ 12,000 ಹೆಕ್ಟೇರ್ ಪ್ರದೇಶವನ್ನು ಅಭಯಾರಣ್ಯ ಯೋಜನೆಗೆ ಮಹೇಶ್ ಶಿರೂರು ಗುರುತಿಸಿ, 2010ರ ಡಿಸೆಂಬರ್‌ನಲ್ಲಿ ಆಗಿನ ಅರಣ್ಯ ಸಚಿವ ಸಿ.ಎಚ್. ವಿಜಯಶಂಕರ್ ಅವರಿಗೆ ವರದಿ ಸಲ್ಲಿಸಿದ್ದರು.ಯೋಜನೆಯ ಜಾರಿಗೆ ಮುಂದಾಗಿದ್ದ ಸರ್ಕಾರ ಅದರ ಪೂರ್ವ ಸಿದ್ಧತೆ ಜವಾಬ್ದಾರಿಯನ್ನು ರಾಜ್ಯ ವನ್ಯಜೀವಿ ಮಂಡಳಿಗೆ ವಹಿಸಿತ್ತು.ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಲು 2011ರ ಜನವರಿ 24 ರಂದು ಗದಗ ನಗರ ಹಾಗೂ ಕಪ್ಪತ್ತಗುಡ್ಡದ ತಪ್ಪಲಿನಲ್ಲಿರುವ ಡೋಣಿ ಗ್ರಾಮಕ್ಕೆ  ಮಂಡಳಿ ಉಪಾಧ್ಯಕ್ಷ ಅನಿಲ್ ಕುಂಬ್ಳೆ ಆಗಮಿಸಿದ್ದರು. ಅದೇ ದಿನ ಪಂಡಿತ್ ಭೀಮಸೇನ ಜೋಶಿ ನಿಧನರಾದ ಕಾರಣ ಸರ್ಕಾರಿ ರಜೆ ಘೋಷಣೆಯಾಗಿ ಪೂರ್ವನಿಗದಿತ ಕಾರ್ಯಕ್ರಮ ರದ್ದುಗೊಂಡು ಕುಂಬ್ಳೆ ವಾಪಸ್ ಮರಳಿದ್ದರು. ನಂತರ ಜನಸಂಪರ್ಕ ಸಭೆ ನಡೆದಿಲ್ಲ.ಈ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಸಿಸಿಎಫ್ ಮಹೇಶ್ ಶಿರೂರು, `ಅಭಯಾರಣ್ಯ ರಚನೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ನಮ್ಮ ಕೆಲಸ ಮಾಡಿದ್ದೇವೆ. ಮುಂದಿನ ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು~ ಎನ್ನುತ್ತಾರೆ.ಕಪ್ಪತ್ತ ಗುಡ್ಡದಲ್ಲಿ ಚಿನ್ನದ ನಿಕ್ಷೇಪ ತೆಗೆಯುವ ನಿಟ್ಟಿನಲ್ಲಿ ಸರ್ವೆ ನಡೆಸಲು ಸರ್ಕಾರ ಇತ್ತೀಚೆಗೆ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿದೆ. ಸರ್ಕಾರದ ಈ ನಡೆ ಗಮನಿಸಿದರೆ `ಅಭಯಾರಣ್ಯ~ ಯೋಜನೆ ಕಡತದಲ್ಲಿಯೇ ಉಳಿಯುವ ಸಾಧ್ಯತೆ ಇದೆ ಎಂದು ಮುಂಡರಗಿ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ವೈ.ಎನ್.ಗೌಡರ್ ಆತಂಕ ವ್ಯಕ್ತಪಡಿಸುತ್ತಾರೆ.`ಯೋಜನೆಗೆ ಗಣಿಗಾರಿಕೆ ಮಾಫಿಯಾ ಮೊದಲಿನಿಂದಲೂ ಅಡ್ಡಿಪಡಿಸುತ್ತಿದೆ~ ಎಂದು ಆರೋಪಿಸುವ ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, `ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಅಭಯಾರಣ್ಯ ಘೋಷಣೆಗೆ ಚಾಲನೆ ನೀಡುವಂತೆ ಒತ್ತಾಯಿಸಿ ಅವರಿಗೆ ಪತ್ರ ಬರೆದಿದ್ದೇನೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. ಶೀಘ್ರ ಯೋಜನೆ ಜಾರಿಗೊಳಿಸಲಿ~ ಎಂದು ಆಗ್ರಹಿಸುತ್ತಾರೆ.                                                                               

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.