ಕಪ್ಪುತಲೆ ಹುಳು ಬಾಧೆ: ತೆಂಗು ಉತ್ಪಾದನೆ ಕುಸಿತ

7

ಕಪ್ಪುತಲೆ ಹುಳು ಬಾಧೆ: ತೆಂಗು ಉತ್ಪಾದನೆ ಕುಸಿತ

Published:
Updated:

ಚಾಮರಾಜನಗರ: ಜಿಲ್ಲೆಯಲ್ಲಿ ಕಪ್ಪುತಲೆ ಹುಳು ಬಾಧೆಯಿಂದ ತೆಂಗು ಬೆಳೆಗಾರರು ಕಂಗಾಲಾಗಿದ್ದು, ಪ್ರತಿವರ್ಷವೂ ತೆಂಗಿನ ಉತ್ಪಾದನೆ ಕುಸಿಯುತ್ತಿದೆ.ತಾಲ್ಲೂಕಿನ ವೆಂಕಟಯ್ಯನಛತ್ರ ಹಾಗೂ ಹರವೆ ಭಾಗದಲ್ಲಿ ತೆಂಗು ಬೆಳೆ ಕಪ್ಪುತಲೆ ಹುಳು ಬಾಧೆಗೆ ಹೆಚ್ಚು ತುತ್ತಾಗಿದೆ. ತೋಟದ ನಿರ್ವಹಣೆಯಲ್ಲಿ ಬೆಳೆಗಾರರು ತಳೆಯುವ ನಿರಾಸಕ್ತಿ ಹಾಗೂ ತೋಟಗಾರಿಕೆ ಇಲಾಖೆಯ ಮುಂಜಾಗ್ರತಾ ಕ್ರಮದ ವೈಫಲ್ಯದ ಪರಿಣಾಮ ಜಿಲ್ಲೆಯಲ್ಲಿ ತೆಂಗಿನ ಕೃಷಿಗೆ ತೀವ್ರ ಹಿನ್ನಡೆ   ಉಂಟಾಗುತ್ತಿದೆ.ಕಪ್ಪುತಲೆ ಹುಳು ತೆಂಗಿನ ಗರಿಯ ರಸ ಹೀರುತ್ತದೆ. ಹೀಗಾಗಿ, ಗರಿಗಳು ಒಣಗುತ್ತವೆ. ಹುಳು ಕಾಣಿಸಿಕೊಂಡ ತಕ್ಷವೇ ಪರಿಹಾರ ಕಾರ್ಯ ಕೈಗೊಳ್ಳದಿದ್ದರೆ ವರ್ಷದೊಳಗೆ ಇಡೀ ತೋಟ ಅಸ್ಥಿಪಂಜರದಂತೆ ಗೋಚರಿಸುತ್ತದೆ.ಹುಳು ಬಾಧೆಗೆ ತುತ್ತಾದ ತೆಂಗಿನಮರ ಕಾಯಿ ಬಿಡುವುದಿಲ್ಲ. ಈ ಗರಿಗಳನ್ನೂ ಕೂಡ ಬಳಸಲು ಬರುವುದಿಲ್ಲ. ಸಕಾಲದಲ್ಲಿ ಅವುಗಳನ್ನು ಸುಟ್ಟು ಹಾಕದಿದ್ದರೆ ಹುಳು ಪುನಃ ಉತ್ಪತ್ತಿಯಾಗಿ ಇತರೇ ತೋಟಗಳಿಗೂ ಸಂಚಕಾರ ತರುತ್ತದೆ.ಜಿಲ್ಲೆಯಲ್ಲಿರುವ ತೆಂಗು ಬೆಳೆಯ ಒಟ್ಟು ವಿಸ್ತೀರ್ಣ 11,365 ಹೆಕ್ಟೇರ್. ಚಾಮರಾಜನಗರ- 7,274 ಹೆಕ್ಟೇರ್, ಗುಂಡ್ಲುಪೇಟೆ- 2,676 ಹೆಕ್ಟೇರ್, ಕೊಳ್ಳೇಗಾಲ- 735 ಹೆಕ್ಟೇರ್ ಹಾಗೂ ಯಳಂದೂರು ತಾಲ್ಲೂಕಿನ 680 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದೆ. ಇದರಲ್ಲಿ ಈಗಾಗಲೇ 2,500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೆಂಗು ಸಂಪೂರ್ಣವಾಗಿ ಹಾನಿಗೀಡಾಗಿದೆ.ಮಳೆಗಾಲ ಹಾಗೂ ಚಳಿಗಾಲದಲ್ಲಿ ಕಪ್ಪುತಲೆ ಹುಳು ಬಾಧೆ ಕಡಿಮೆ. ಬೇಸಿಗೆಯಲ್ಲಿ ಇವುಗಳು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತವೆ. ಜೈವಿಕ ವಿಧಾನ ಬಳಸಿ ಹುಳುಗಳ ಹತೋಟಿಗೆ ಕ್ರಮಕೈಗೊಳ್ಳಬಹುದು.

`ನಾನು ಉತ್ತಮವಾಗಿಯೇ ತೋಟ ನಿರ್ವಹಣೆ ಮಾಡಿದ್ದೇನೆ. ಆದರೆ, ಅಕ್ಕಪಕ್ಕದ ತೋಟಗಳಲ್ಲಿ ಕಾಣಿಸಿಕೊಂಡ ಕಪ್ಪುತಲೆ ಹುಳು ನಮ್ಮ ತೆಂಗಿನ ತೋಟವನ್ನು ಬಾಧಿಸುತ್ತಿದೆ. ಸಕಾಲದಲ್ಲಿ ತೋಟಗಾರಿಕೆ ಇಲಾಖೆಯಿಂದ ಮುಂಜಾಗ್ರತಾ ಕ್ರಮಕೈಗೊಳ್ಳಲಿಲ್ಲ. ಈ ಬಗ್ಗೆ ವ್ಯಾಪಕ ಪ್ರಚಾರದೊಂದಿಗೆ ಅರಿವು ಮೂಡಿಸಿದ್ದರೆ ತೆಂಗಿನ ತೋಟ ಉಳಿಯುತಿತ್ತು~ ಎಂದು ಹರವೆಯ ರೈತ ಮಹದೇವಪ್ಪ ಅಳಲು ತೋಡಿಕೊಳ್ಳುತ್ತಾರೆ.16 ಲಕ್ಷ ಪರತಂತ್ರ ಜೀವಿ ಉತ್ಪಾದನೆ:

ಕಪ್ಪುತಲೆ ಹುಳು ಬಾಧೆ ತಡೆಗೆ ಚಾಮರಾಜನಗರ ಮತ್ತು ಗುಂಡ್ಲುಪೇಟೆಯಲ್ಲಿರುವ ತೋಟಗಾರಿಕೆ ಇಲಾಖೆಯ ಪ್ರಯೋಗಾಲದಲ್ಲಿ 16 ಲಕ್ಷ `ಗೋನಿಯೊಜಸ್~ ಪರತಂತ್ರ ಜೀವಿ ಉತ್ಪಾದಿಸಲಾಗಿದೆ. ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ.ಇಷ್ಟು ಜೀವಿಗಳಿಂದ ಕೇವಲ 100 ಹೆಕ್ಟೇರ್‌ನಲ್ಲಿ ಕಾಡುತ್ತಿರುವ ಹುಳುಗಳನ್ನು ಮಾತ್ರ ಹತೋಟಿ ಮಾಡಲು ಸಾಧ್ಯ. ಪ್ರತಿಯೊಂದು ಪರತಂತ್ರ ಜೀವಿಯ ಉತ್ಪಾದನೆಗೂ 12 ಪೈಸೆಯಷ್ಟು ವೆಚ್ಚವಾಗುತ್ತದೆ. ಶೇ. 25ರಷ್ಟು ಹುಳು ಬಾಧೆ ಇರುವ ತೆಂಗಿನ ತೋಟಗಳನ್ನು ಜೈವಿಕ ವಿಧಾನದ ಮೂಲಕ ರಕ್ಷಿಸಲು ಸಾಧ್ಯ. ಆದರೆ, ಶೇ. 50ಕ್ಕಿಂತ ಹೆಚ್ಚು ಹಾನಿಯಾಗಿದ್ದರೆ ಹತೋಟಿ ಕಷ್ಟಕರ ಎನ್ನುವುದು ಅಧಿಕಾರಿಗಳ ವಿವರಣೆ.`ಇಲಾಖೆಯಿಂದಲೂ ಕಪ್ಪುತಲೆ ಹುಳು ಹತೋಟಿ ಬಗ್ಗೆ ತೆಂಗು ಬೆಳೆಗಾರರಿಗೆ ಅರಿವು ಮೂಡಿಸಲಾಗುತ್ತಿದೆ. ಹುಳುಗಳು ಕಾಣಿಸಿಕೊಂಡ ತಕ್ಷಣವೇ ತೆಂಗಿನ ಗರಿ ಕತ್ತರಿಸಿ ಸುಡಬೇಕು. ಆದರೆ, ರೈತರು ಅವುಗಳನ್ನು ಒಂದೆಡೆ ಹಾಕುತ್ತಾರೆ. ಇದರಿಂದ ಹುಳು ಸಾಯುವುದಿಲ್ಲ. ಮತ್ತೆ ಉತ್ಪತ್ತಿಯಾಗಿ ತೋಟಕ್ಕೆ ಹಾನಿ ಮಾಡುತ್ತವೆ~ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ.ಆರ್. ಗಿರೀಶ್ `ಪ್ರಜಾವಾಣಿ~ಗೆ ತಿಳಿಸಿದರು.`ಜೈವಿಕ ವಿಧಾನದ ಮೂಲಕ ಹುಳು ಬಾಧೆ ತಡೆಗೆ ಕ್ರಮವಹಿಸಲಾಗಿದೆ. ಪ್ರಾತ್ಯಕ್ಷಿಕೆಗಳ ಮೂಲಕ ಬೆಳೆಗಾರರಿಗೆ ಅರಿವು ಮೂಡಿಸಲಾಗುತ್ತಿದೆ. ತೆಂಗಿನ ತೋಟದ ನಿರ್ವಹಣೆ ಸಮರ್ಪಕವಾಗಿದ್ದರೆ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ. ಸಮಗ್ರ ಕೀಟ ನಿರ್ವಹಣೆ ಕಾರ್ಯಕ್ರಮದಡಿಯೂ ಹುಳುಗಳ ಹತೋಟಿಗೆ ಕಾರ್ಯಕ್ರಮ ರೂಪಿಸಲಾಗಿದೆ~ ಎಂದರು.`ತೆಂಗಿನ ಮರಗಳ ಬೇರಿಗೆ ಬೇವಿನಎಣ್ಣೆ ಹಾಕುವ ಮೂಲಕವೂ ಹುಳು ಬಾಧೆ ನಿಯಂತ್ರಿಸಬಹುದು. ಇಲಾಖೆಯಿಂದ ಬೇವಿನಎಣ್ಣೆ ಖರೀದಿಗೆ ಸಹಾಯಧನದ ಸೌಲಭ್ಯ ಉಂಟು. 1 ಎಕರೆಗೆ ಬೇವಿನಎಣ್ಣೆ ಖರೀದಿಸಲು 400 ರೂ ಸಹಾಯಧನ ನೀಡಲಾಗುತ್ತದೆ. ತೆಂಗು ಬೆಳೆಗಾರರು ಇದರ ಸದುಪಯೋಗ ಪಡೆಯಬಹುದು~ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry