ಕಪ್ಪುಹಣ ಕೇಂದ್ರಕ್ಕೆ ಮಾಹಿತಿ ಇದೆ

7

ಕಪ್ಪುಹಣ ಕೇಂದ್ರಕ್ಕೆ ಮಾಹಿತಿ ಇದೆ

Published:
Updated:

ಬೆಂಗಳೂರು: ‘ಕೇಂದ್ರ ಸರ್ಕಾರಕ್ಕೆ ವಿದೇಶಿ ಬ್ಯಾಂಕಿನಲ್ಲಿರುವ ಕಪ್ಪು ಹಣದ ಕುರಿತು ಪೂರ್ಣ ಮಾಹಿತಿಯಿದೆ. ಆದರೆ ಈ ಕುರಿತು ಸುಪ್ರೀಂ ಕೋರ್ಟ್‌ಗೂ ಮಾಹಿತಿ ನೀಡುತ್ತಿಲ್ಲ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಗುರುವಾರ ಆಪಾದಿಸಿದರು.ಐ-ಟೆಕ್ ಲಾ ಸಂಘವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 7ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುತ್ತಾ, ‘60 ವರ್ಷಗಳಲ್ಲಿ ದೇಶದಲ್ಲಿ ಭ್ರಷ್ಟಾಚಾರ ಗಣನೀಯವಾಗಿ ಹೆಚ್ಚಾಗಿದ್ದು, ನ್ಯಾಯಾಧೀಶರು ಇವುಗಳನ್ನು ನಿಯಂತ್ರಿಸುವಲ್ಲಿ ತಮ್ಮದೇ ಪಾತ್ರ ವಹಿಸಬೇಕು’ ಎಂದು ಕರೆ ನೀಡಿದರು.‘ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಭ್ರಷ್ಟಾಚಾರದ ವಿರುದ್ಧ ಪ್ರತಿಯೊಬ್ಬ ನಾಗರಿಕರು ಹೋರಾಡಬೇಕಿದೆ. ನಾನು ಅಧಿಕಾರಿದಲ್ಲಿರುವವರೆಗೂ ವಿದ್ಯಾರ್ಥಿ ಮತ್ತು ಯುವಶಕ್ತಿಯನ್ನು ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ತೊಡಗುವಂತೆ ಪ್ರೇರೇಪಿಸುತ್ತೇನೆ’ ಎಂದರು.‘ಹೋರಾಟಗಾರರಿಗೆ ಕಷ್ಟಗಳು ಧುತ್ತನೆ ಎದುರಾಗುತ್ತದೆ. ಆದರೆ ಹೋರಾಡುವವರ ಸಂಖ್ಯೆ ಹೆಚ್ಚಾದಂತೆ ಕೆಲವೇ ವರ್ಷಗಳಲ್ಲಿ ಬದಲಾವಣೆ ತರಲು ಸಾಧ್ಯ’ ಎಂದು ಭರವಸೆ ವ್ಯಕ್ತಪಡಿಸಿದರು. ಐಟೆಕ್-ಲಾ ಸಂಘದ ಅಧ್ಯಕ್ಷೆ ಸಂದ್ರಾ ಎ. ಜೆಸ್ಕಿ ಮಾತನಾಡಿದರು. ಕಾರ್ಪೋರೇಟ್ ಕಂಪೆನಿಗಳ ವಕೀಲರು ಮತ್ತು ಅಂತರರಾಷ್ಟ್ರೀಯ ವಕೀಲರ ನಡುವಿನ ಬಾಂಧವ್ಯದ ಕುರಿತು ವಿಚಾರಗೋಷ್ಠಿಗಳು ನಡೆದವು.‘ಹುರುಳಿದ್ದರೆ ವಿಚಾರಣೆ’

‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಇತ್ತೀಚೆಗೆ ದಾಖಲಾಗಿರುವ ಭ್ರಷ್ಟಾಚಾರದ ದೂರಿನಲ್ಲಿ ಹುರುಳಿದ್ದರೆ ಲೋಕಾಯುಕ್ತ ನ್ಯಾಯಮೂರ್ತಿಗಳು ವಿಚಾರಣೆ ನಡೆಸಲಿದ್ದಾರೆ. ಆರೋಪದಲ್ಲಿ ಸತ್ಯಾಂಶ ಕಂಡುಬಂದ ನಂತರವೇ ತನಿಖೆ ನಡೆಸಲಾಗುವುದು’ ಎಂದು  ಎನ್. ಸಂತೋಷ್ ಹೆಗ್ಡೆ ಹೇಳಿದರು.ಕುಮಾರಸ್ವಾಮಿ ಆಡಳಿತ ಅವಧಿಯಲ್ಲಿ ಡಿನೋಟಿಫಿಕೇಷನ್ ಮತ್ತು ಕೋಟ್ಯಂತರ ಹಣ ದುರುಪಯೋಗವಾಗಿದೆ ಎಂದು ವಕೀಲ ತುಳಸಿದಾಸ ಹಾವನೂರು ಇತ್ತೀಚೆಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry