ಕಪ್ಪುಹಣ ಪತ್ತೆಗೆ ಮಾರಿಷಸ್ ನೆರವು

7

ಕಪ್ಪುಹಣ ಪತ್ತೆಗೆ ಮಾರಿಷಸ್ ನೆರವು

Published:
Updated:

ನವದೆಹಲಿ (ಪಿಟಿಐ):  ತನ್ನ ‘ತೆರಿಗೆ ಸ್ನೇಹಿ’ ನಿಲುವಿನಿಂದ ಕಪ್ಪುಹಣದ ಮಾರ್ಗವನ್ನು ಸುಲಲಿತಗೊಳಿಸಿ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಮಾರಿಷಸ್, ಅಕ್ರಮ ಹಣದ ಮೂಲ ಪತ್ತೆ ವಿಷಯದಲ್ಲಿ ಭಾರತಕ್ಕೆ ಸಂಪೂರ್ಣ ನೆರವಿನ ಹಸ್ತ ಚಾಚುವ ಭರವಸೆ ನೀಡಿದೆ.ಆದರೆ ಇದೇ ವೇಳೆ, ಭಾವನಾತ್ಮಕ ಸಾಹಸಗಳ ಸಲುವಾಗಿ ಬಲೆ ಬೀಸುವ ಯಾವುದೇ ಉದ್ದೇಶಗಳಿಗೆ ಅವಕಾಶ ನೀಡುವುದಿಲ್ಲ ಮತ್ತು ಪ್ರತಿ ಹಣಕಾಸು ಹಗರಣದಲ್ಲೂ ತನ್ನ ಹೆಸರನ್ನು ಥಳಕು ಹಾಕುವುದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.ಇ-ಮೇಲ್ ಮೂಲಕ ಸುದ್ದಿಸಂಸ್ಥೆ ಕೇಳಿದ ಪ್ರಶ್ನೆಗಳಿಗೆ ಈ ಪ್ರತಿಕ್ರಿಯೆ ನೀಡಿರುವ ಹಣಕಾಸು ಮತ್ತು ಆರ್ಥಿಕ ಅಭಿವೃದ್ಧಿ ಸಚಿವಾಲಯ, ಅಕ್ರಮ ಹಣ ಸಕ್ರಮ ಹಾಗೂ ತೆರಿಗೆ ವಂಚನೆ ತಡೆಗೆ ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದೆ.ಭಾರತೀಯರು ಅಕ್ರಮ ಹಣವನ್ನು ಮಾರಿಷಸ್ ಮೂಲಕ ದೇಶಕ್ಕೆ ಮರಳಿ ತರುತ್ತಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಕೇಳಿಬಂದಿವೆ. ಭಾರತದ ದೂರಸಂಪರ್ಕ, ರಿಯಲ್ ಎಸ್ಟೇಟ್‌ನಂತಹ ಕ್ಷೇತ್ರಗಳಿಗೆ ಆ ದೇಶದಿಂದ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಾಗಿ ಹರಿದುಬರುತ್ತಿರುವುದು ತನಿಖಾ ಸಂಸ್ಥೆಗಳ ಕಣ್ಣಿಗೆ ಬಿದ್ದಿದೆ. ಇದು ಅಕ್ರಮ ಹಣ ಸಕ್ರಮಕ್ಕೆ ದಾರಿ ಮಾಡಿಕೊಟ್ಟಿರಬಹುದು ಎಂಬಂತಹ ಆತಂಕಗಳಿಗೆ ಪುಷ್ಟಿ ನೀಡಿದೆ.ಹಿಂದೂ ಮಹಾಸಾಗರದ ಈ ದ್ವೀಪರಾಷ್ಟ್ರದಲ್ಲಿ ಮಳಿಗೆ ತೆರೆಯುವ ಸಲುವಾಗಿ ಭಾರತದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಸಂಸ್ಥೆಗಳಿಗೆ ದೇಶದ ತೆರಿಗೆ ಸ್ನೇಹಿ ಆಡಳಿತ ಉತ್ತಮ ಅವಕಾಶ ಕಲ್ಪಿಸಿದೆ.ಮಾರಿಷಸ್‌ನ ಉಪ ಪ್ರಧಾನಿ ಹಾಗೂ ಹಣಕಾಸು ಸಚಿವ ಪ್ರವಿಂದ್ ಕುಮಾರ್ ಜುಗ್‌ನಾಥ್, ಕಪ್ಪುಹಣ ಮತ್ತು ಅಕ್ರಮ ಹಣ ಭಾರತಕ್ಕೆ ಹರಿದುಹೋಗದಂತೆ ನೋಡಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಈಚೆಗೆ ತಿಳಿಸಿದ್ದರು.ಭಾರತದ ಜೊತೆಗಿನ ‘ದುಪ್ಪಟ್ಟು ತೆರಿಗೆ ತಪ್ಪಿಸುವ ಒಪ್ಪಂದ’ ಸುಗಮವಾಗಿ ಸಾಗಿದೆ. ಆದರೆ ತೆರಿಗೆ ಮತ್ತು ಇತರ ವಿಷಯಗಳ ಜಾರಿಯಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಪರಿಶೀಲಿಸುವ ಜಾಗತಿಕ ಸಂಸ್ಥೆಯಾದ ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ’ ಕೆಲ ದೋಷಗಳನ್ನು ಪತ್ತೆ ಹಚ್ಚಿದೆ ಎಂದು ಹೇಳಿದ್ದರು.ತೆರಿಗೆ ಕಾನೂನು ಮತ್ತು ಮಾಹಿತಿ ವಿನಿಮಯ ವ್ಯವಸ್ಥೆಯು ಜಾಗತಿಕ ಮಾನದಂಡಗಳಿಗೆ ಪೂರಕವಾಗಿಲ್ಲದ ರಾಷ್ಟ್ರಗಳ ಪಟ್ಟಿಯಲ್ಲಿ ಮಾರಿಷಸ್ ಸಹ ಸೇರಿರುವುದಕ್ಕೆ ಪ್ರತಿಕ್ರಿಯಿಸಿರುವ ಸಚಿವಾಲಯ, ಮಾಹಿತಿ ವಿನಿಮಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲು ರಾಷ್ಟ್ರೀಯ ಕಾರ್ಯತಂತ್ರವೊಂದನ್ನು ರೂಪಿಸಲಾಗುತ್ತಿದೆ. ಬಹುತೇಕ ಮನವಿಗಳಿಗೆ 90 ದಿನಗಳೊಳಗೆ ಉತ್ತರ ನೀಡಲಾಗುತ್ತಿದೆ. ಅಕ್ರಮ ತಡೆಯುವ ಇಂತಹ ಎಲ್ಲ ಪ್ರಯತ್ನಗಳ ನಡುವೆಯೂ ಕೆಲ ನಿರ್ಲಜ್ಜ ವ್ಯಕ್ತಿಗಳು ವ್ಯವಸ್ಥೆಯನ್ನು ಉಲ್ಲಂಘಿಸುವ ಯೋಜನೆಗಳನ್ನು ಕಂಡುಕೊಳ್ಳುತ್ತಾರೆ ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry