ಕಪ್ಪುಹಣ: ಶ್ವೇತಪತ್ರಕ್ಕೆ ಹೋರಾಟ

7

ಕಪ್ಪುಹಣ: ಶ್ವೇತಪತ್ರಕ್ಕೆ ಹೋರಾಟ

Published:
Updated:
ಕಪ್ಪುಹಣ: ಶ್ವೇತಪತ್ರಕ್ಕೆ ಹೋರಾಟ

ಕುಮಟಾ (ಉ.ಕ ಜಿಲ್ಲೆ): ವಿದೇಶಿ ಬ್ಯಾಂಕುಗಳಲ್ಲಿ ಇರುವ ಕಪ್ಪು ಹಣವನ್ನು ವಾಪಸ್ ತರಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ತಮ್ಮ ಪಕ್ಷ ಹೋರಾಟ ನಡೆಲಿದೆ ಎಂದು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಮಂಗಳವಾರ ಘೋಷಿಸಿದರು.`ಜನ ಚೇತನ~ ಯಾತ್ರೆಯ ಅಂಗವಾಗಿ ಇಲ್ಲಿನ ಮಹಾತ್ಮಾ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಪ್ರಧಾನಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ರಾಜ್ಯಪಾಲರ ಸಭೆ ಕುರಿತು ಪ್ರಸ್ತಾಪಿಸಿದ ಅಡ್ವಾಣಿ `ರಾಜ್ಯಪಾಲರ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಭ್ರಷ್ಟಾಚಾರದ ಕುರಿತು ಚಿಂತನೆ ನಡೆಸುವ ಕಾಲ ಈಗ ಬಂದಿದೆ ಎಂದಿದ್ದಾರೆ; ಅಂದರೆ ಇದುವರೆಗೆ ಆ ಕಾಲ ಬಂದಿರಲಿಲ್ಲವೇ~ ಎಂದು ವ್ಯಂಗ್ಯವಾಡಿದರು.ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ಮರಳಿ ತರಲು ಕೇಂದ್ರ ಸರ್ಕಾರ ಮಾಡಿರುವ ಯತ್ನದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಹಾಗೂ ಕಪ್ಪು ಹಣ ಇಟ್ಟವರ ಹೆಸರುಗಳನ್ನು ಬಹಿರಂಗಗೊಳಿಸಬೇಕು ಎಂಬ ಅಂಶಗಳೇ ಮುಂದಿನ ಅಧಿವೇಶನದ ಹೋರಾಟ ವಿಷಯಗಳು ಎಂದು ಅವರು ತಿಳಿಸಿದರು.ಒಟ್ಟಿಗೆ ಸಾಧ್ವವಿಲ್ಲ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರ ಮತ್ತು ಭ್ರಷ್ಟಾಚಾರ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ. ಹೋಗಬಾರದು. ಹೀಗೆ ಭ್ರಷ್ಟಾಚಾರದೊಂದಿಗೆ ಸರ್ಕಾರ ಹೊಂದಿಕೊಂಡರೆ ದೇಶ ಬಡವಾಗುತ್ತದೆ. ಈಗ ಆಗಿರುವುದೇ ಅದು ಎಂದು ವಿಶ್ಲೇಷಿಸಿದರು.`ಹಾಗೆಯೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಂಶಪಾರಂಪರ‌್ಯ ಮತ್ತು ಜನತಂತ್ರ ಕೂಡ ಒಟ್ಟಿಗೆ ಸಾಗಬಾರದು. ಈ ದೇಶವನ್ನು ಈಗ ಆಳುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಇದೂ ನಡೆಯುತ್ತಿದೆ. ಕಾಂಗ್ರೆಸ್ ಸ್ವಾತಂತ್ರ್ಯದ ಉದ್ದೇಶವನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹೀಗಾದರೆ ನಾವು ಉದ್ಧಾರ ಆಗುವುದಿಲ್ಲ~ ಎಂದರು.ಭ್ರಷ್ಟಾಚಾರ ತೊಲಗಿಸುತ್ತೇವೆ, ಕಪ್ಪು ಹಣ ಮರಳಿ ತರುತ್ತೇವೆ ಹಾಗೂ ಹೊಸ ಭಾರತ ಕಟ್ಟುತ್ತೇವೆ ಎಂಬ ಘೋಷಣೆಗಳನ್ನು ಅವರು ಜನರೊಂದಿಗೆ ಕೂಗಿದರು. ಆದರೆ ಕರ್ನಾಟಕದ ಭ್ರಷ್ಟಾಚಾರ ವಿಷಯವನ್ನು ಅವರು ಪ್ರಸ್ತಾಪಿಸಲಿಲ್ಲ.ಕನ್ನಡಕ್ಕೆ ನಮನ: ರಾಜ್ಯೋತ್ಸವ ದಿನವಾಗಿದ್ದರಿಂದ, ವೇದಿಕೆಗೆ ಬರುವ ಮುನ್ನ ಮೈದಾನದಲ್ಲಿದ್ದ ಧ್ವಜಕಂಬದಲ್ಲಿ ಕನ್ನಡ ಧ್ವಜಾರೋಹಣ ಮಾಡಿದ ಅಡ್ವಾಣಿ, `ಕನ್ನಡದ ಬಂಧು-ಭಗಿನಿಯರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು~ ಎಂದು ಕನ್ನಡದಲ್ಲಿ ಹೇಳಿ ನಂತರ ಹಿಂದಿಯಲ್ಲಿ ಭಾಷಣ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry