ಕಪ್ಪುಹಣ ಸಿಕ್ಕರೆ ರಾಷ್ಟ್ರೀಯ ಸಂಪತ್ತುಎಂದು ಘೋಷಿಸಿ

ನವದೆಹಲಿ (ಪಿಟಿಐ): ಅಕ್ರಮ ಸಂಪತ್ತು ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರದ ಕೆಲ ನಾಯಕರಿಂದ ಆರೋಪಕ್ಕೆ ಗುರಿಯಾಗಿರುವ ಬಾಬಾ ರಾಮ್ದೇವ್, ತಮ್ಮ ಬಳಿ ಕಪ್ಪುಹಣ ಕಂಡು ಬಂದರೆ ಅದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬಹುದು ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ರಾಮಲೀಲಾ ಮೈದಾನದಲ್ಲಿನ ಘಟನೆ ನಡೆದ 20 ದಿನಗಳ ಬಳಿಕ ಭಾನುವಾರ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿದ ರಾಮ್ದೇವ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಮಲೀಲಾ ಮೈದಾನದಲ್ಲಿ ತಮ್ಮ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕಾರ್ಯಾಚರಣೆಯನ್ನು ಖಂಡಿಸಿದ ಅವರು, `ಈ ಸರ್ಕಾರ ಭ್ರಷ್ಟ ಮಾತ್ರವಲ್ಲ ಕ್ರೂರಿ ಕೂಡ. ಒಂದು ವೇಳೆ ನಾನು ಜನರಿಗೆ ಶಾಂತಿಯಿಂದ ಇರಲು ಮನವಿ ಮಾಡದಿದ್ದರೆ ಅಲ್ಲಿ ಅಂದು ಮೃತದೇಹಗಳ ರಾಶಿಯೇ ಇರುತ್ತಿತ್ತು~ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯರಾತ್ರಿ ನಡೆದ ಆ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರತಿಭಟನಾ ನಿರತ ಮಹಿಳೆಯರ ಮೇಲೆ ಅತ್ಯಾಚಾರ ಯತ್ನವೂ ನಡೆದಿತ್ತು ಎಂದು ಆಪಾದಿಸಿದ ಅವರು, ಒಂದು ವೇಳೆ ನಾನು ಅಲ್ಲಿಂದ ಓಡಿಹೋಗದಿದ್ದರೆ ನನ್ನನ್ನು ಕೊಂದು ಹಾಕಲಾಗುತ್ತಿತ್ತು ಎಂದು ಹೇಳಿದರು.
ಯೋಗಕ್ಷೇಮ ವಿಚಾರಣೆ: ಪೊಲೀಸರ ದಾಳಿಯಲ್ಲಿ ಗಾಯಗೊಂಡು ಜಿ.ಬಿ ಪಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ರಾಜ್ ಬಾಲಾ ಅವರನ್ನು ಭೇಟಿ ಮಾಡಿದ ರಾಮ್ದೇವ್, ಅವರ ಯೋಗಕ್ಷೇಮ ವಿಚಾರಿಸಿದರು.
`ರಾಜ್ ಬಾಲಾ ಅವರ ಆರೋಗ್ಯದ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಒಮ್ಮೆ ವೆಂಟಿಲೇಟರ್ ತೆಗೆದು ಅವರು ಬದುಕುಳಿದರೆ ಅದು ಪವಾಡವೇ ಸರಿ~ ಎಂದು ವಿಷಾದ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.