ಕಪ್ಪು ಕೋಟಿನೊಳಗಿನ ರಾಜಪ್ರೇಮ

7

ಕಪ್ಪು ಕೋಟಿನೊಳಗಿನ ರಾಜಪ್ರೇಮ

Published:
Updated:

ಕಾನೂನು ಕಲಿಯಲು ವಯೋಮಿತಿ ಹೇರುವ ಸರ್ಕಾರದ ಪ್ರಸ್ತಾಪ ಕಾನೂನು ಕಾಲೇಜುಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಪರ- ವಿರೋಧ ವಾದಗಳು ಪ್ರಬಲವಾಗಿ ಮಂಡನೆಯಾಗುತ್ತಿದೆ. ಪ್ರಸ್ತುತ ಈ ವಿಚಾರ ನ್ಯಾಯಾಲಯದ ಕಟಕಟೆಯನ್ನೂ ಹತ್ತಿದೆ.ಈಚೆಗೆ ತುಮಕೂರು ವಿದ್ಯೋದಯ ಕಾನೂನು ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲೂ ಈ ಅಂಶ ಹೆಚ್ಚು ಚರ್ಚೆಯಾಯಿತು. ಆದರೆ ಅದಕ್ಕಿಂತಲೂ ಕುತೂಹಲ ಕೆರಳಿಸಿದ್ದು ಕಾನೂನು ಸಚಿವರೊಂದಿಗೆ ಭವಿಷ್ಯದ ವಕೀಲರು ನಡೆಸಿದ ಹೃದಯಸ್ಪರ್ಶಿ ಸಂವಾದ.`ನೀವೇಕೆ ಕಾನೂನು ಅಭ್ಯಾಸ ಮಾಡುತ್ತಿದ್ದೀರಿ? ನೀವೇಕೆ ವಕೀಲರಾಗಬೇಕು?~ ಎಂಬ ಎರಡೇ ಪ್ರಶ್ನೆಗೇ ಹಲವು ಬಗೆಯ ಉತ್ತರಗಳು ತೇಲಿ ಬಂದವು. ಬಹುತೇಕ ವಿದ್ಯಾರ್ಥಿಗಳ ಮಾತು ರಾಜಕಾರಣದ ಸುತ್ತ ಗಿರಕಿ ಹೊಡೆಯುತ್ತಿತ್ತು.`ನಾನು ಕ್ರಿಮಿನಲ್ ಲಾಯರ್ ಆಗಿ ಒಳ್ಳೇ ಹೆಸರು ಮಾಡಬೇಕು, ಆಮೇಲೆ ರಾಜಕಾರಣಕ್ಕೆ ಬರಬೇಕು~ ಎಂದು ವಿದ್ಯಾರ್ಥಿಯೊಬ್ಬ ತನ್ನ ಆಶಯ ಹಂಚಿಕೊಂಡ.ಈ ಮಾತು ಕೇಳಿ ಆವಕ್ಕಾದ ಸಚಿವ ಎಸ್.ಸುರೇಶ್‌ಕುಮಾರ್, `ಕ್ರಿಮಿನಲ್ ಲಾಯರ್‌ಗೂ ರಾಜಕಾರಣಕ್ಕೂ ಏನ್ರೀ ಸಂಬಂಧ?~ ಎಂದು ಮುಗುಳ್ನಕ್ಕರು.`ಈಗಿನ ರಾಜಕಾರಣದಲ್ಲಿ ಶೇ 97ರಷ್ಟು ಮಂದಿ ಅಪ್ರಾಮಾಣಿಕರು. ರಾಜಕಾರಣದಲ್ಲಿ ಬದಲಾವಣೆ ತರಲು ಕಾನೂನು ಕಲಿತವರು ಮುಂದಾಗಬೇಕು~ ಎಂದು ಮತ್ತೊಬ್ಬ ವಿದ್ಯಾರ್ಥಿಯ ಸಲಹೆ.ಒಬ್ಬ ವಿದ್ಯಾರ್ಥಿ ಮಾತ್ರ `ದಮನಿತರ ಹಕ್ಕುಗಳ ಸಂರಕ್ಷಣೆಗೆ ಹೋರಾಡಲು ಕಾನೂನು ಕಲಿಯುತ್ತಿದ್ದೇನೆ~ ಎಂದು ತನ್ನ ಭವಿಷ್ಯದ ದಾರಿ ಸ್ಪಷ್ಟಪಡಿಸಿದ. ಆದರೆ ಮಾತನಾಡಿದ ಹಲವು ವಿದ್ಯಾರ್ಥಿಗಳು ರಾಜಕಾರಣ ಪ್ರವೇಶಕ್ಕೆ ವಕೀಲಿ ಕಲಿಕೆ ಒಂದು `ವೀಸಾ~ ಎಂಬ ಅರ್ಥದಲ್ಲಿಯೇ ಮಾತನಾಡಿದರು.ವಿದ್ಯಾರ್ಥಿಗಳ ಮನಸ್ಥಿತಿ ಅರಿತು ಹೌಹಾರಿದ ಪ್ರಾಚಾರ್ಯ ವೆಂಕಟಾಚಲಪತಿಸ್ವಾಮಿ `ನಾವು ಓದುವ ಕಾಲಕ್ಕೆ ಒಳ್ಳೆ ವಕೀಲರಾಗುವ, ನ್ಯಾಯಾಧೀಶರಾಗುವ, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾಗುವ ಗುರಿ ಇತ್ತು. ಅದೇಕೋ ಗೊತ್ತಿಲ್ಲ. ಇಂದಿನ ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ರಾಜಕಾರಣದ ಬಗ್ಗೆಯೇ ಸೆಳೆತ. ಇದನ್ನು ತಪ್ಪು ಎಂದು ನಾನು ಹೇಳುವುದಿಲ್ಲ. ಆದರೆ ಅನೇಕ ವಿದ್ಯಾರ್ಥಿಗಳಲ್ಲಿ ವಕೀಲಿಕೆಯ ಮೊದಲ ಪಾಠವಾದ `ತಾಳ್ಮೆ~ಯೇ ನಾಪತ್ತೆಯಾಗಿದೆ. ಅವರಲ್ಲಿ ಕಾಣಿಸುತ್ತಿರುವ ಆಕ್ರಮಣಕಾರಿ ಮನೋಭಾವ ಆತಂಕ ಹುಟ್ಟಿಸುತ್ತದೆ~ ಎಂದು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.ಸಾಮಾಜಿಕ ಚಳವಳಿಗಳೊಂದಿಗೆ ಗುರುತಿಸಿಕೊಂಡಿರುವ ವಕೀಲ ಮತ್ತು ಕಾನೂನುಶಾಸ್ತ್ರದ ಉಪನ್ಯಾಸಕ ಎಸ್.ರಮೇಶ್ ಸಹ ವೆಂಕಟಾಚಲಪತಿ ಅವರ ಮಾತನ್ನೇ ಪುಷ್ಟೀಕರಿಸಿದರು. `ರಾಜಕಾರಣದಲ್ಲಿ ಪ್ರಜ್ವಲಿಸಲು ವಕೀಲಿಕೆಯನ್ನು ಚಿಮ್ಮು ಹಲಗೆಯಾಗಿ ಮಾಡಿಕೊಳ್ಳುವ ಪ್ರವೃತ್ತಿಯಿಂದ ಎರಡೂ ರಂಗಗಳಿಗೆ ನಷ್ಟ. ವಿದ್ಯಾರ್ಥಿಗಳ ಮನೋಭಾವ ಬದಲಾಗಬೇಕು. ಯಾವುದನ್ನು ಏಕೆ ಓದಬೇಕು ಎಂಬುದನ್ನು ಮೊದಲೇ ನಿರ್ಧರಿಸಿ ನಂತರ ಕಾನೂನು ಅಧ್ಯಯನ ಪ್ರಾರಂಭಿಸಬೇಕು~ ಎಂದು ಕಿವಿಮಾತು ಹೇಳಿದರು.ವಕೀಲರಿಗೆ ಸಹಜವಾಗಿಯೇ ಜನರ ಒಡನಾಟ ಹೆಚ್ಚಿರುತ್ತದೆ. ಜನರ ನಾಡಿಮಿಡಿತ ಅರಿತುಕೊಳ್ಳಲು ಇದು ಉತ್ತಮ ವೇದಿಕೆ. ಅದು ಜನಹಿತಕ್ಕಾಗಿ ಬಳಕೆಯಾಗಬೇಕು. ಕಾನೂನು ಅರಿವಿಲ್ಲದೆ ಶೋಷಣೆಗೆ ಒಳಗಾಗುವವರಿಗೆ ನ್ಯಾಯ ದೊರಕಿಸಿಕೊಡಲು ವಕೀಲ ಸಮಾಜದ ದನಿಯಾಗಬೇಕು. ರಾಜಕಾರಣಕ್ಕೆ ಬರಲು ಇಚ್ಛಿಸುವವರು ಚಳವಳಿಗಳ ಮಾರ್ಗ ಹಿಡಿಯುವುದು ಸೂಕ್ತ.ಇತಿಹಾಸ, ಭೌತಶಾಸ್ತ್ರ, ಭೂಗೋಳದಂತೆ ಕಾನೂನು ಸಹ ವಿದ್ಯಾಭ್ಯಾಸದ ಒಂದು ಮಾರ್ಗ ಮತ್ತು ಸೇವೆಗೆ ಒಂದು ಅವಕಾಶ. ಕಾನೂನು ವಿದ್ಯಾರ್ಥಿಗಳ ರಾಜಕೀಯ ಅಸಕ್ತಿ ಇದೇ ರೀತಿ ಮುಂದುವರಿದರೆ ಮುಂದಿನ ತಲೆಮಾರಿನ ಸಮಾಜ ಉತ್ತಮ ವಕೀಲರ ತೀವ್ರ ಕೊರತೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.`ಮಹಾತ್ಮಾಗಾಂಧಿ, ಜವಾಹರ್‌ಲಾಲ್ ನೆಹರೂ, ವಲ್ಲಭ್‌ಬಾಯಿ ಪಟೇಲ್ ಸೇರಿದಂತೆ ನೂರಾರು ಯಶಸ್ವಿ ರಾಜಕಾರಣಿಗಳು ಕಾನೂನು ಪದವೀಧರರು. ಹಿಂದಿನಿಂದಲೂ ಅನೇಕ ವಕೀಲರು ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಆದರೆ ಹೆಸರು ಮಾಡಲು ವಕೀಲಕೆ ಬಳಸಿಕೊಂಡು ರಾಜಕಾರಣಿಯಾಗೋದು ಬೇರೆ, ಸೇವೆ ಮಾಡಲು ವಕೀಲಿಕೆ ಬಳಸಿಕೊಂಡು ರಾಜಕಾರಣಿಯಾಗೋದು ಬೇರೆ~ ಎಂಬ ಸಚಿವ ಸುರೇಶ್‌ಕುಮಾರ್ ಮಾತಿನಲ್ಲಿ ಹಲವು ಅರ್ಥಗಳಿದ್ದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry