ಕಪ್ಪು ಜನರ ಆತ್ಮಗೌರವಕ್ಕೆ ದನಿಯಾದ ಓಫ್ರಾ

7

ಕಪ್ಪು ಜನರ ಆತ್ಮಗೌರವಕ್ಕೆ ದನಿಯಾದ ಓಫ್ರಾ

Published:
Updated:
ಕಪ್ಪು ಜನರ ಆತ್ಮಗೌರವಕ್ಕೆ ದನಿಯಾದ ಓಫ್ರಾ1492ರ ಅಕ್ಟೋಬರ್ 12ರಂದು ಇಟಲಿ - ಪೋರ್ಚುಗಲ್ ಮೂಲದ ಸ್ಪೇನ್ ನಾವಿಕ ಕ್ರಿಸ್ಟೋಫರ್ ಕೊಲಂಬಸ್ ಬಹಾಮಾದ ಪುಟ್ಟ ದ್ವೀಪವೊಂದಕ್ಕೆ ಕಾಲಿಟ್ಟ ಪ್ರಸಂಗ ಮಾನವ ಕುಲದ ಇತಿಹಾಸಕ್ಕೆ ತಿರುವು ಕೊಟ್ಟ ಘಟನೆ ಎಂದೇ ಬಣ್ಣಿಸಲಾಗುತ್ತದೆ.ಈ ಸಂಭ್ರಮದ ಹಿಂದೆಯೇ ಕೊಲಂಬಸ್ ಹೊಸ ಜಗತ್ತು ಕಂಡುಹಿಡಿದಿದ್ದು ಮುಂದಿನ ನಾಲ್ಕು ಶತಮಾನಗಳ ಕಾಲ ಐರೋಪ್ಯ ವಸಾಹತುಶಾಹಿಗೆ, ಸ್ಥಳೀಯ ಬುಡಕಟ್ಟು ಜನರ ವಿನಾಶಕ್ಕೆ, ಆಫ್ರಿಕಾದ ಮುಗ್ಧ ಜನರ ಮಾರಾಟಕ್ಕೆ, ಗುಲಾಮಗಿರಿಗೆ ಕಾರಣವಾಯಿತು ಎಂಬ ಅಂಶ ಎದೆಯಲ್ಲಿ ಮುಳ್ಳಿನಂತೆ ಚುಚ್ಚುತ್ತದೆ.ಇಂದಿನ ಸೂಪರ್-ಪವರ್ ಅಮೆರಿಕದ ಸಾಧನೆಯ ಹಿಂದೆ 300-400 ವರ್ಷಗಳ ಹಿಂದೆ ತಾಯ್ನಾಡು ಬಿಟ್ಟು ಪಶ್ಚಿಮದ ಹೊಸ ಜಗತ್ತು ಕಟ್ಟಲು ಕಾರಣರಾದ ಕಪ್ಪು ಜನರ ಕಣ್ಣೀರ ಕಥೆಯ ಕರಾಳ ಇತಿಹಾಸವಿದೆ.21ನೇ ಶತಮಾನದ ಅಮೆರಿಕದ ಜೀವನದಲ್ಲಿ ಒಂದಾಗಿ ಬೆರೆತುಹೋಗಿರುವ ಈ ಆಫ್ರಿಕನ್ ಅಮೆರಿಕನ್ನರ ನಾಯಕರನ್ನು ನೆನಪಿಸಿಕೊಳ್ಳಲು ಪ್ರತಿವರ್ಷ ಫೆಬ್ರುವರಿಯಲ್ಲಿ `ಬ್ಲಾಕ್ ಹಿಸ್ಟರಿ ಮಂತ್~ ಆಚರಿಸಲಾಗುತ್ತದೆ. ಆಫ್ರಿಕನ್ ಅಮೆರಿಕನ್ನರಿಗೆ ಆತ್ಮವಿಶ್ವಾಸ ಮರಳಿಸಿಕೊಟ್ಟವರ ಸಾಲಿನಲ್ಲಿ ಮಾರ್ಟಿನ್ ಲೂಥರ್ ಕಿಂಗ್  ಜೂನಿಯರ್‌ನಿಂದ ಹಿಡಿದು ಬಸ್‌ನಲ್ಲಿ ಬಿಳಿಯರಿಗೆ ಸೀಟು ಬಿಟ್ಟುಕೊಡಲು ನಿರಾಕರಿಸಿದ ರೋಸಾ ಪಾರ್ಕ್‌ವರೆಗೆ ದೊಡ್ಡದೊಂದು ಪಟ್ಟಿಯೇ ಸಿಗುತ್ತದೆ.ಎಲ್ಲ ಆಫ್ರಿಕನ್ ಅಮೆರಿಕನ್ನರು ಹೆಮ್ಮೆ ಪಡುವಂತೆ ಆಫ್ರಿಕಾ ವಂಶವಾಹಿ ಹೊತ್ತಿರುವ ಬರಾಕ್ ಒಬಾಮ ಈಗ ಅಧ್ಯಕ್ಷರು. ಇದೇ ಹೊತ್ತಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಡೀ ಜಗತ್ತಿನ ಮೇಲೆ ಪ್ರಭಾವ ಬೀರಿದ ಇಬ್ಬರು ಆಫ್ರಿಕನ್- ಅಮೆರಿಕನ್ ಮಹಿಳೆಯರು ನೆನಪಾಗುತ್ತಾರೆ.ಒಬ್ಬಾಕೆ ಜಾರ್ಜ್ ಬುಷ್ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಅಮೆರಿಕದ ವಿದೇಶಾಂಗ ನೀತಿ ಬದಲಿಸಿದ, ಪ್ರಜಾಪ್ರಭುತ್ವವಾದಿ ನಿಲುವು ಎತ್ತಿ ಹಿಡಿದ ಕಾಂಡೋಲಿಸಾ ರೈಸ್. ಮತ್ತೊಬ್ಬಾಕೆ ಅಮೆರಿಕ ಹಾಗೂ ಇತರ ದೇಶಗಳನ್ನು ಸಾಂಸ್ಕೃತಿಕವಾಗಿ ಪ್ರಭಾವಿಸಿದ ಓಫ್ರಾ ವಿನ್‌ಫ್ರೆ. ನೀವು ಎಲ್ಲಿಂದ ಬಂದಿದ್ದೀರಿ, ಎಲ್ಲಿಂದ ಆರಂಭಿಸಿದ್ದೀರಿ ಎಂಬುದು ಯಾವತ್ತೂ ಮುಖ್ಯವಲ್ಲ. ಯಶಸ್ಸಿನ ಬೀಜಮಂತ್ರ ನಿಮ್ಮಳಗೆ ಅಡಗಿರುತ್ತದೆ ಎನ್ನುವ ಓಫ್ರಾ ಮಾತು ಸ್ವತಃ ಆಕೆಗೂ ಅನ್ವಯಿಸುವಂತಹದ್ದು.20 ವರ್ಷಗಳ ಹಿಂದೆ ಟಾಕ್ ಷೊ ನಿರೂಪಕಿಯಾಗಿದ್ದ ಓಫ್ರಾ ಈಗ ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ. ಅವರೊಬ್ಬ ಸಾಂಸ್ಕೃತಿಕ ದಿಕ್ಸೂಚಿ. ಓಫ್ರಾ ಮಾತನಾಡಿದ್ದು, ಮಾತನಾಡಿಸಿದವರು, ಮೆಚ್ಚಿದ ಪುಸ್ತಕ ಎಲ್ಲವೂ ಅಮೆರಿಕದಲ್ಲಿ ಮನೆಮಾತಾಗುತ್ತದೆ.ಹಾಗೆಯೇ ಜಗತ್ತಿನ ಎಲ್ಲ ದೇಶಗಳಲ್ಲೂ ಅದರ ಪರಿಣಾಮ ಕಾಣುತ್ತದೆ. 20ನೇ ಶತಮಾನದ ಅತಿ ಸಿರಿವಂತ ಆಫ್ರಿಕನ್ ಅಮೆರಿಕನ್ ಪ್ರಜೆ. ಅತಿ ಶ್ರೇಷ್ಠ ದಾನಿ. ಅತ್ಯಂತ ಪ್ರಭಾವಿ ಮಹಿಳೆ ಎಂಬೆಲ್ಲ ಹಿರಿಮೆ ಓಫ್ರಾಗಿದೆ. ಫೋಬ್ಸ್ ಪಟ್ಟಿಯಲ್ಲೂ ಆಕೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಟಾಕ್ ಷೊ ನಿರೂಪಕಿಯಾಗಿದ್ದ ಓಫ್ರಾ ಅದಕ್ಕೆ ಸೀಮಿತಗೊಂಡಿದ್ದರೆ ಬರೀ ಟಿವಿ ತಾರೆಯಾಗಿ ಮಾತ್ರ ಉಳಿಯುತ್ತಿದ್ದರೇನೋ? ಆದರೆ, ಅವರು ಅದಕ್ಕಿಂತ ಹತ್ತಾರು ಹೆಜ್ಜೆ ಮುಂದೆ ಹೋಗಿದ್ದಾರೆ.

 

ಇಡೀ ಜಗತ್ತಿನ ಮೇಲೆ ತನ್ನ ಅಭಿಪ್ರಾಯ ಹೇರುವ ಅಮೆರಿಕ ಸಮಾಜದೊಳಗೆ ಅಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಲಿಂಗಕಾಮಿಗಳು, ದ್ವಿಲಿಂಗಿಗಳು ಅಂದರೆ ಆಧುನಿಕ ಅಮೆರಿಕ ಸಮಾಜವೂ ಮೂಗುಮುರಿಯುತ್ತಿದ್ದ ದಿನಮಾನಗಳವು.

 

ಓಫ್ರಾ ತಮ್ಮ `ಷೊ~ನಲ್ಲಿ ಭಿನ್ನ ಲೈಂಗಿಕ ನಡವಳಿಕೆ ಹೊಂದಿದ ಅಮೆರಿಕದ ಗಣ್ಯರನ್ನೆಲ್ಲ ಕರೆಯಿಸಿದರು. ಚಿತ್ರನಟರು, ಲೇಖಕರು, ಟಿವಿ ತಾರೆಯರು ಎಲ್ಲ ಬಂದು ಓಫ್ರಾ ಮುಂದೆ ತಮ್ಮ ಹೃದಯ ಬಿಚ್ಚಿಟ್ಟರು. ಅಮೆರಿಕ ಏಕೆ, ಭಾರತದಲ್ಲೂ ಈಗ ಸಲಿಂಗಕಾಮ ಒಪ್ಪಿತ ಸತ್ಯ.ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ ನಡೆದ ಮತ್ತೊಂದು ವಿದ್ಯಮಾನ. ಎಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗುತ್ತಿದ್ದ ಮೃಗೀಯ ಪುರುಷರನ್ನು ಗುರುತಿಸಲು, ಹಿಡಿದು ಶಿಕ್ಷಿಸಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಮುದುಡಿ ಹೋದವರನ್ನು ತಮ್ಮ ಷೊ ನಲ್ಲಿ ಓಫ್ರಾ ತೋರಿಸಿದರು.ಅದೇ ಷೊನಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವವರ ರಾಷ್ಟ್ರೀಯ ದಾಖಲಾತಿ ಪಟ್ಟಿ ಸಿದ್ಧಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಓಫ್ರಾರ ಈ ಕರೆಗೆ ಅಮೆರಿಕ ಸಮಾಜ ವರ್ಗಭೇದ ಮರೆತು ಸ್ಪಂದಿಸಿತು. ಒತ್ತಡಕ್ಕೆ ಮಣಿದ ಕ್ಲಿಂಟನ್ ಕಾಯ್ದೆಯೊಂದನ್ನು ರೂಪಿಸಿದರು.ಈಗ ಅಮೆರಿಕದ ಪ್ರತಿ ಪೊಲೀಸ್ ಠಾಣೆಯಲ್ಲೂ ಈ ರಾಷ್ಟ್ರೀಯ ದಾಖಲಾತಿ ಪಟ್ಟಿ ಲಭ್ಯ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರು ಯಾವ ರಾಜ್ಯಕ್ಕೂ ಹೋಗಿ ಅಡಗಿಕೊಳ್ಳಲಾರರು.ಓಫ್ರಾ ಎಫೆಕ್ಟ್

2008ರ ಆರಂಭದ ದಿನಗಳವು. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದಿಂದ ಭಾರಿ ವರ್ಚಸ್ಸಿನ ಹಿಲರಿ ಕ್ಲಿಂಟನ್ ಅವರನ್ನು ಹೆಸರಿಸಲಾಗಿತ್ತು. ಡೆಮಾಕ್ರಾಟಿಕ್ ಪಕ್ಷ ತನ್ನ ಅಭ್ಯರ್ಥಿಯ ಹೆಸರು ಘೋಷಿಸುವ ಮುನ್ನ ಪಕ್ಷದೊಳಗೆ ಮತದಾನ ನಡೆಯಬೇಕಿತ್ತು.ಹಿಲರಿಗೆ  ಎದುರಾಳಿಯಾಗಿದ್ದುದು ಷಿಕಾಗೋದ ಯುವ ಸೆನೆಟರ್ ಬರಾಕ್ ಒಬಾಮ. ಷಿಕಾಗೊ,ಇಲಿನಾಯ್ ಹೊರಗೆ ಅವರ ಹೆಸರು ಸ್ವತಃ ಡೆಮಾಕ್ರಾಟಿಕ್ ಸದಸ್ಯರಿಗೆ ಸರಿಯಾಗಿ ಗೊತ್ತಿರಲಿಲ್ಲ. ಓಫ್ರಾ ತಮ್ಮ ಕಾರ್ಯಕ್ರಮವೊಂದರಲ್ಲಿ ಯುವ ಒಬಾಮ ಪರವಾಗಿ ಮಾತನಾಡಿದ್ದೇ ಬಂತು. ಜನಪ್ರಿಯತೆಯ ಅಲೆ ಒಬಾಮ ಪರ ಎದ್ದಿತ್ತು. ನಂತರ ನಡೆದದ್ದು ಇತಿಹಾಸ. ಇದು ಓಫ್ರಾ ಎಫೆಕ್ಟ್...!ಹಾಗೆಯೇ ಸುಪ್ರಸಿದ್ಧರೆಲ್ಲ ಆಕೆಯ ಷೊನಲ್ಲಿ ಬಂದು ತಪ್ಪೊಪ್ಪಿಕೊಳ್ಳುವುದು, ಗುಟ್ಟು ಬಿಚ್ಚಿಡುವುದು, ಕಣ್ಣೀರು ಹಾಕುವುದಕ್ಕೆ ವಾಲ್ ಸ್ಟ್ರೀಟ್ ಜರ್ನ `ಓಫ್ರಾಫಿಕೇಶನ್~ ಎಂಬ ಶಬ್ದವನ್ನೇ ಹುಟ್ಟುಹಾಕಿದೆ. ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ವಾರನ್ ಬಫೆಟ್, ಬರಾಕ್ ಒಬಾಮ ಅವರಂತೆಯೇ ಅಮೆರಿಕ ಸಮಾಜದಲ್ಲಿ ಯಶಸ್ಸಿನ ಮಾನದಂಡವಾಗಿ ಓಫ್ರಾ ನಿಲ್ಲುತ್ತಾರೆ. ಗುಲಾಮಗಿರಿ, ವರ್ಣಭೇದದ ಹಿಡಿತದಲ್ಲಿ ನರಳಿದ್ದ ಪೂರ್ವಜರ ನೆನಪಿನಿಂದ ಹೊರಬಂದು ಹೊಸ ಬದುಕು ಕಟ್ಟಿಕೊಳ್ಳುತ್ತಿರುವ ಈ ತಲೆಮಾರಿನ ಆಫ್ರಿಕನ್-ಅಮೆರಿಕನ್ನರಿಗೆ ಆದರ್ಶಪ್ರಾಯರಾಗಿ ಕಾಣುತ್ತಾರೆ.ಬಾಲ್ಯದಲ್ಲೇ ಲೈಂಗಿಕ ಕಿರುಕುಳ ಅನುಭವಿಸಿದ್ದ, ಅಂಗಿ ಕೊಳ್ಳಲು ಹಣವಿಲ್ಲದೇ ಆಲೂಗಡ್ಡೆ ಚೀಲದಿಂದ ಮಾಡಿದ ಉಡುಪು ಧರಿಸುತ್ತಿದ್ದ, 14ಕ್ಕೆ ಅವಿವಾಹಿತ ತಾಯಿಯಾಗಿ, ನಂತರ ಓದು ಮುಂದುವರಿಸಿ, ಟಿವಿ ಷೊ ಮೂಲಕ ಕೀರ್ತಿಯ ಶಿಖರಾಗ್ರ ಏರಿರುವ ಓಫ್ರಾ  ಅದೇ ಕಾಲಕ್ಕೆ ಸಂಪ್ರದಾಯದ ಸಂಕೋಲೆ, ಧಾರ್ಮಿಕ ಕಟ್ಟಳೆಗಳಲ್ಲಿ ಬಂಧಿತರಾಗಿ ಮುದುಡಿಹೋಗುತ್ತಿರುವ ಜಗತ್ತಿನ ಮಹಿಳಾ ಸಮುದಾಯಕ್ಕೆ ಆಶಾಕಿರಣದಂತೆ ಗೋಚರಿಸುತ್ತಾರೆ.ಇಂತಹ ಓಫ್ರಾ ಕಳೆದ ತಿಂಗಳು ಭಾರತಕ್ಕೆ ಬಂದಿದ್ದರು. ಜೈಪುರ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಟಿವಿ ಷೊ ಚಿತ್ರೀಕರಣದ ನೆಪದಲ್ಲಿ ಇವರು ಇಲ್ಲಿಗೆ ಬಂದಿದ್ದರಾದರೂ ಸಂಕೀರ್ಣ ಭಾರತೀಯ ಸಮಾಜದ ಸೂಕ್ಷ್ಮ ಗ್ರಹಿಸುವ ಹಂಬಲ ಅವರಲ್ಲಿತ್ತು.ಮುಂಬೈನಲ್ಲಿ ಅವರಿಗಾಗಿ ಪರಮೇಶ್ವರ್ ಗೋದ್ರೆಜ್ ಔತಣಕೂಟ ಏರ್ಪಡಿಸಿದಾಗ ಬಚ್ಚನ್ ಕುಟುಂಬ ಸೇರಿದಂತೆ ಬಾಲಿವುಡ್‌ನ ಖ್ಯಾತನಾಮರೆಲ್ಲ ಅಲ್ಲಿಗೆ ಧಾವಿಸಿದ್ದರು. ಚಿಕ್ಕ ಮಕ್ಕಳಂತೆ ಆಟೋಗ್ರಾಫ್ ಹಾಕಿಸಿಕೊಂಡರು. ಓಫ್ರಾ ನಡೆದುಬಂದ ಹಾದಿ, ಆಕೆಯ ಪ್ರಭಾವ, ವ್ಯಕ್ತಿತ್ವ ಗಮನಿಸಿದಾಗ ಇದು ಅಸಹಜ ಅನಿಸುವುದಿಲ್ಲ ಬಿಡಿ..!

  

ತಾಯಿ ಹೃದಯ

ಎಚ್‌ಐವಿ/ ಏಡ್ಸ್ ಸೋಂಕಿತರನ್ನು ಮಾನವೀಯತೆಯ ಕಣ್ಣುಗಳಿಂದ ಕಾಣಿ ಎಂದು ಅಮೆರಿಕ ಸಮಾಜಕ್ಕೆ ಮನದಟ್ಟು ಮಾಡಿಕೊಟ್ಟಿದ್ದು ಓಫ್ರಾ. 80ರ ದಶಕದಲ್ಲಿ ಪಶ್ಚಿಮ ವರ್ಜಿನಿಯಾದಲ್ಲಿ ಎಚ್‌ಐವಿ ಸೋಂಕಿತ ವ್ಯಕ್ತಿಯೊಬ್ಬನಿಗೆ ಪರೋಕ್ಷ ಬಹಿಷ್ಕಾರ ಹಾಕಲಾಗಿದೆ ಎಂಬ ಸುದ್ದಿ ತಿಳಿದಾಗ ಅಲ್ಲಿ ಹೋಗಿ ಆತನ ಸಂದರ್ಶನ ಮಾಡಿದರು.ಅಲ್ಲಿನ ಜನರ ಮನವೊಲಿಸಿದರು. ಆಫ್ರಿಕಾದ ಎಚ್‌ಐವಿ/ಏಡ್ಸ್ ಸೋಂಕಿತ ಬಡ ಮಕ್ಕಳಿಗಾಗಿ ದೊಡ್ಡ ನಿಧಿಯನ್ನೇ ಸ್ಥಾಪಿಸಿ ನಿರಂತರ ನೆರವು ನೀಡುತ್ತಿದ್ದಾರೆ.ದಕ್ಷಿಣ ಆಫ್ರಿಕಾದಲ್ಲಿ  ಓಫ್ರಾ ವಿನ್‌ಫ್ರೆ ಲೀಡರ್‌ಶಿಪ್ ಅಕಾಡೆಮಿ~ ಸ್ಥಾಪಿಸಿ ಬಡ ಕರಿಯ ಹೆಣ್ಣು ಮಕ್ಕಳು ಶಿಕ್ಷಣದ ಜತೆ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

ಆ ಮಕ್ಕಳಲ್ಲಿ ಆತ್ಮಗೌರವದ ಕಿಡಿ ಹೊತ್ತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry