ಕಪ್ಪು ಪಟ್ಟಿಗೆ ಮಾನ್ಸಂಟೊ-ಆಗ್ರಹ

7

ಕಪ್ಪು ಪಟ್ಟಿಗೆ ಮಾನ್ಸಂಟೊ-ಆಗ್ರಹ

Published:
Updated:

ಬೆಂಗಳೂರು: ಯೂರೋಪ್ ಮೂಲದ ಮಾನ್ಸಂಟೊ ಕಂಪೆನಿಯು ಭಾರತದ ಜೈವಿಕ ತಂತ್ರಜ್ಞಾನ ನಿಯಮಗಳನ್ನು ಉಲ್ಲಂಘಿಸಿ ಕಳೆನಾಶಕ ನಿರೋಧಕ ಮೆಕ್ಕೆಜೋಳದ ಬೆಳೆ ಬೆಳೆದಿರುವುದರಿಂದ ಮಾನ್ಸಂಟೊ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಕುಲಾಂತರಿ ಮುಕ್ತ ಭಾರತ ಒಕ್ಕೂಟವು ಒತ್ತಾಯಿಸಿದೆ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಾಂತರಿ ಮುಕ್ತ ಭಾರತ ಒಕ್ಕೂಟದ ಸದಸ್ಯೆ ಕವಿತಾ ಕುರುಗಂಟಿ ಇದರ ಬಗ್ಗೆ ಮಾಹಿತಿ ನೀಡಿದರು.`ಯೂರೋಪ್ ಮೂಲದ ಮಾನ್ಸಂಟೊ ಕಂಪೆನಿಯು ಭಾರತದ ಜೈವಿಕ ತಂತ್ರಜ್ಞಾನ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಳೆನಾಶಕ ನಿರೋಧಕ ಮೆಕ್ಕೆಜೋಳದ ಬೆಳೆ ಬೆಳೆದಿರುವುದು ಬೆಳಕಿಗೆ ಬಂದಿದೆ.ಕಂಪೆನಿಯು ಯಾವುದೇ ಅನುಮತಿ ಪಡೆಯದೆ, ಕಾನೂನನ್ನು ಉಲ್ಲಂಘಿಸಿ ಮೆಕ್ಕೆಜೋಳವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬೆಳೆದಿದೆ. ಕಂಪೆನಿಯು ಈ ರೀತಿ ಕಾನೂನು  ಉಲ್ಲಂಘಿಸಿದ್ದರೂ ಜೈವಿಕ ತಂತ್ರಜ್ಞಾನ ಅನುಮೋದನಾ ಸಮಿತಿಯು ಯಾವುದೇ ಕ್ರಮ ತೆಗೆದುಕೊಂಡಿಲ್ಲ~ ಎಂದು ಹೇಳಿದರು.`ಇನ್ನು ಎರಡು ದಿನಗಳಲ್ಲಿ ಜೈವಿಕ ತಂತ್ರಜ್ಞಾನ ಅನುಮೋದನಾ ಸಮಿತಿಯ ಸಭೆ ನಡೆಯಲಿದೆ. ಅಲ್ಲಿ ನಡೆಯುವ ಚರ್ಚೆಯಲ್ಲಿ ಈ ವಿಷಯವು ಚರ್ಚಿತವಾಗಬೇಕು~ ಎಂದು ಒತ್ತಾಯಿಸಿದರು.`ಮೆಕ್ಕೆಜೋಳ ಸಂಶೋಧನಾ ನಿರ್ದೇಶನಾಲಯದ ಡಾ.ಪ್ರದ್ಯುಮ್ನ ಕುಮಾರ್ ನೇತೃತ್ವದ ತಂಡ 2011 ರ ಮೇ 5 ರಂದು ಕ್ಷೇತ್ರ ಪರಿವೀಕ್ಷಣೆಗೆ ಬಂದಿತ್ತು. ಆಗ ತಂಡವು ಮುಂದೆ ಭವಿಷ್ಯದಲ್ಲಿ ಕಳೆನಾಶಕ ನಿರೋಧಕ ಮೆಕ್ಕೆಜೋಳವನ್ನು ಪರೀಕ್ಷಾರ್ಥವಾಗಿ ಬೆಳೆಯುವ ಮೊದಲು ಸಂಬಂಧಿಸಿದ ಸಮಿತಿಯಿಂದ ಅನುಮತಿ ಪಡೆಯಬೇಕೆಂದು ಸ್ಪಷ್ಟವಾಗಿ ನಮೂದಿಸಿದ್ದ ಅಂಶ ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದು ಬಂದಿದೆ~ ಎಂದರು.`ಬಹುರಾಷ್ಟ್ರೀಯ ಬೀಜ ಕಂಪೆನಿಗಳು ನಿಯಮ ಬಾಹಿರವಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದರೂ ಸಹ ನಿಯಂತ್ರಣ ಸಮಿತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಭಾರತದಲ್ಲಿ ಕುಲಾಂತರಿ ಬೆಳೆಗಳು ಬಂದ ದಿನದಿಂದಲೂ ಕಾನೂನು ಮತ್ತು ನಿಯಮಬಾಹಿರವಾಗಿ ಕ್ಷೇತ್ರ ಪ್ರಯೋಗಗಳು ನಡೆಯುತ್ತಿವೆ. ಆದರೆ, ಇದನ್ನು ತಡೆಯುವ ಯಾವುದೇ ಕ್ರಮಗಳು ಇದುವರೆಗೂ ನಡೆದಿಲ್ಲ~ ಎಂದು ಆರೋಪಿಸಿದರು.`ಪರಿಸರ ಮತ್ತು ಅರಣ್ಯ ಖಾತೆ ಸಚಿವೆ ಜಯಂತಿ ನಟರಾಜನ್ ಅವರು ಮಾನ್ಸೊಂಟೊ ಕಂಪೆನಿಯು ನಿಯಮ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಚಂದೇಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry