ಕಪ್ಪು ವಸ್ತ್ರಧಾರಿ ಮಹಿಳೆ ಶಾಮೀಲು

7

ಕಪ್ಪು ವಸ್ತ್ರಧಾರಿ ಮಹಿಳೆ ಶಾಮೀಲು

Published:
Updated:

ಮಾಸ್ಕೊ (ಐಎಎನ್‌ಎಸ್, ರಿಯಾನೊವೊಸ್ಟಿ): ಮಾಸ್ಕೊದ ಡೊಮೊಡೆಡೊವೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಆತ್ಮಾಹುತಿ ಬಾಂಬ್‌ದಾಳಿಕೋರರು ನಡೆಸಿದ ದಾಳಿಯಲ್ಲಿ ಮಹಿಳೆಯೂ ಸೇರಿದಂತೆ ಇಬ್ಬರು ಭಯೋತ್ಪಾದಕರು ಪಾಲ್ಗೊಂಡಿದ್ದರು  ಎಂದು ಅಧಿಕೃತ ಮೂಲಗಳು ತಿಳಿಸಿವೆ.ವಿಮಾನ ನಿಲ್ದಾಣದ ಆಗಮನ ವಿಭಾಗದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಆತ್ಮಹತ್ಯಾ ದಳದ ಇಬ್ಬರೂ ಸತ್ತಿದ್ದಾರೆ. ಬಾಂಬ್ ಅನ್ನು ಲೋಹದ ವಸ್ತುವಿನಲ್ಲಿ ಇಟ್ಟಿದ್ದರಿಂದ ಗರಿಷ್ಠ ಮಟ್ಟದ ಹಾನಿಯಾಗಿದೆ.ಕಪ್ಪು ಬಟ್ಟೆ ದರಿಸಿದ್ದ ಮಹಿಳೆಯೊಬ್ಬಳು ತಂದಿದ್ದ ಚೀಲವನ್ನು ತೆರೆದಾಗ ಬಾಂಬ್ ಸ್ಫೋಟಗೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತನಿಖಾ ಅಧಿಕಾರಿಗಳಿಗೆ ತಿಳಿಸಿದ್ದಾರೆ. 2010ರಲ್ಲಿ ಮಾಸ್ಕೊ ಮೆಟ್ರೊ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿ ಸತ್ತಿದ್ದ ಭಯೋತ್ಪಾದಕನ ವಿಧವಾ ಪತ್ನಿ ಭಯೋತ್ಪಾದಕ ಚಟುವಟಿಕೆ ನಡೆಸುವ ಸಾಧ್ಯತೆ ಇದೆ ಎಂಬ ಶಂಕೆಯಿಂದ ಅಧಿಕಾರಿಗಳು ಕಪ್ಪು ವರ್ಣದ ಮಹಿಳೆಗಾಗಿ ಹುಡುಕಾಟ ನಡೆಸಿದ್ದರು. ಆದರೆ ಅಷ್ಟರಲ್ಲೇ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ.ಬಾಂಬ್ ಸ್ಫೋಟದಲ್ಲಿ ಶಂಕಿತ ಮಹಿಳೆಯೂ ಸತ್ತಿದ್ದಾಳೆ. ಅಲ್ಲದೇ ಅವಳ ಜತೆಯಲ್ಲಿದ್ದ ಭಯೋತ್ಪಾದಕನ ತಲೆಯೂ ಛಿದ್ರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಿಸಿಟಿವಿಯಲ್ಲಿ ದಾಖಲಾಗಿರುವ ಇತರ ನಾಲ್ವರು ಶಂಕಿತ ಭಯೋತ್ಪಾದಕರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ ಎಂದು ಸರ್ಕಾರಿ ಒಡೆತನದ ರೊಸ್ಸಿಯಾ ಚಾನೆಲ್ ವರದಿ ಮಾಡಿದೆ.ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಭದ್ರತೆ ಇಲ್ಲದ ಕಾರಣ ಭಯೋತ್ಪಾದಕರು ಸುಲಭವಾಗಿ ಈ ಕೃತ್ಯವೆಸಗಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ.ವಿಮಾನ ನಿಲ್ದಾಣದಲ್ಲಿ  ಭದ್ರತಾ ಲೋಪ ಆಗಿರುವುದನ್ನು ರಷ್ಯ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಒಪ್ಪಿಕೊಂಡಿದ್ದಾರೆ. ಸೋಮವಾರದ ಘಟನೆಯಲ್ಲಿ 35 ಜನರು ಮೃತಪಟ್ಟು 180 ಜನರು ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry