ಕಪ್ಪು ಹಣ ಮರಳಿ ಬಂದರೆ ದೇಶ ಸಮೃದ್ಧಿ

7
ಆರ್ಯ ವೈಶ್ಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಲ್ಲಿ ಗುರೂಜಿ

ಕಪ್ಪು ಹಣ ಮರಳಿ ಬಂದರೆ ದೇಶ ಸಮೃದ್ಧಿ

Published:
Updated:

ಬಳ್ಳಾರಿ: ‘ರಾಜಕಾರಣಿಗಳು ಹಾಗೂ ಉದ್ಯಮಿಗಳು ವಿದೇಶಿ ಬ್ಯಾಂಕ್‌ಗಳಲ್ಲಿ ಇರಿಸಿರುವ ಕಪ್ಪುಹಣದ ಮೊತ್ತ 1.3 ಟ್ರಿಲಿಯನ್ ಡಾಲರ್‌ಗಳಿಷ್ಟಿದೆ. ಈ ಹಣವನ್ನು ಕೇಂದ್ರ ಸರ್ಕಾರ ಮರಳಿ ತಂದಲ್ಲಿ ಬಡತನ ನಿವಾರಣೆಯಾಗಿ ಭಾರತ ಆರ್ಥಿಕವಾಗಿ ಸದೃಢವಾಗಲಿದೆ’ ಎಂದು ಆರ್ಟ್‌ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅಭಿಪ್ರಾಯ ಪಟ್ಟರು.ಜಿಲ್ಲಾ ಆರ್ಯ ವೈಶ್ಯ ಸಮಾಜ ಮತ್ತು ರಾಜ್ಯ ಆರ್ಯ ವೈಶ್ಯ ಮಹಾಸಭಾ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.‘ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಬದಲಿಗೆ, ಪ್ರೋತ್ಸಾಹದ ಕೊರತೆ ಇದೆ. ಯಾವುದೇ ಮೀಸಲಾತಿ ಸೌಲಭ್ಯ ಇಲ್ಲದಿದ್ದರೂ ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರಿರುವ ಆರ್ಯ ವೈಶ್ಯ ಸಮಾಜದ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ದೊರೆಯುತ್ತಿರುವುದು ಶ್ಲಾಘನೀಯ’ ಎಂದರು.‘ದಕ್ಷಿಣ ಭಾರತದಲ್ಲಿ ವ್ಯಾಪಾರ, ಉದ್ಯಮ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ವೈಶ್ಯ ಸಮುದಾಯ, ದೇಶದ ಆರ್ಥಿಕ ಭದ್ರತೆಗೆ ಭದ್ರ ಅಡಿಪಾಯ ಹಾಕಿದೆ’ ಎಂದರು.‘ಆರ್ಯವೈಶ್ಯ ಸಮುದಾಯದ ಯುವಪೀಳಿಗೆ ಕೇವಲ ವ್ಯಾಪಾರ-, ವ್ಯವಹಾರ ಕ್ಷೇತ್ರಕ್ಕೆ ಸೀಮಿತವಾಗದೆ, ಶೈಕ್ಷಣಿಕ ಹಾಗೂ ಸಮಾಜಸೇವಾ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿರು ವುದು ಅಭಿನಂದನೀಯ’ ಎಂದರು.ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಹೆಚ್ಚು ಅಂಕ ಗಳಿಸಿದ ರಾಜ್ಯದ ವಿವಿಧ ಜಿಲ್ಲೆಗಳ 800 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್, ಹೆಬ್ಬಾಳ ಶಾಸಕ ಆರ್.ಜಗದೀಶಕುಮಾರ್, ಉದ್ಯಮಿ ನಾಮಾ ರತ್ನಯ್ಯ ಅವರನ್ನು ಸನ್ಮಾನಿಸಲಾಯಿತು.ಐಪಿಎಸ್ ಅಧಿಕಾರಿ ಕೆ.ಎಲ್. ಸುಧೀರ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಬಿ.ಜಿ. ನಂದಕುಮಾರ್, ಉದ್ಯಮಿ ಡಾ.ಡಿ.ಎಲ್. ರಮೇಶ ಗೋಪಾಲ್, ಸೊಂತ ಗಿರಿಧರ್, ದೊಡ್ಡಮನಿ ಪಾಂಡುರಂಗ, ಗಿರೀಶ್ ಪೆಂಡಕೂರು ಮುಂತಾದವರು ಉಪಸ್ಥಿತರಿದ್ದರು.ಆರ್ಯ ವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ಸ್ವಾಗತಿಸಿದರು. ಸಂಜೀವ ಪ್ರಸಾದ್, ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry