ಭಾನುವಾರ, ಮೇ 22, 2022
22 °C

ಕಪ್ಪು ಹಣ ವಾಪಸ್ ತರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ : ದೇಶದ ಸುಮಾರು ರೂ 400 ಲಕ್ಷ ಕೋಟಿ ಕಪ್ಪುಹಣ ವಿದೇಶಗಳಲ್ಲಿ ಜಮೆಯಾಗಿದೆ. ಕೂಡಲೇ, ಅದನ್ನು ವಾಪಸ್ ತರಿಸಬೇಕು ಎಂದು ಬಾಬಾ ರಾಮದೇವ್ ಬೆಂಬಲಿಗರು ಆಗ್ರಹಿಸಿದರು.ನಗರದ ನೆಹರು ಕ್ರೀಡಾಂಗಣದ ಎದುರಿನ ಅಣ್ಣಾ ಹಜಾರೆ ಮಂಟಪದಲ್ಲಿ ಭಾನುವಾರ ಭಾರತ ಸ್ವಾಭಿಮಾನ್, ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್ ಹಾಗೂ ಕಿಸಾನ್ ಪಂಚಾಯತ್ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬಾಬಾ ರಾಮ್‌ದೇವ್ ದೆಹಲಿಯಲ್ಲಿ ನಡೆಸುತ್ತಿರುವ ಸತ್ಯಾಗ್ರಹವನ್ನು ಬೆಂಬಲಿಸಿ ಧರಣಿ ಸತ್ಯಾಗ್ರಹ ನಡೆಸಿದರು.ದೇಶದ 121 ಕೋಟಿ ಪ್ರಜೆಗಳ ತೆರಿಗೆ ಹಣವನ್ನು ದೇಶದ ಉನ್ನತ ಸಾಂವಿಧಾನಿಕ ಅಧಿಕಾರ ಸ್ಥಾನದಲ್ಲಿ ಕುಳಿತಿರುವವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ, ಅಕ್ರಮವಾಗಿ ಲೂಟಿಹೊಡೆದು ವಿದೇಶಗಳಲ್ಲಿ ಕೂಡಿಸಿಟ್ಟಿದ್ದಾರೆ ಎಂದು ಆರೋಪಿಸಿದರು.ದೇಶದಲ್ಲಿನ ವಿವಿಧ ಜಾತಿ, ವರ್ಗ ಹಾಗೂ ಪಂಥಗಳಲ್ಲಿನ ಜನಸಾಮಾನ್ಯರು ಪ್ರಸ್ತುತ ಭ್ರಷ್ಟಾಚಾರದಿಂದಾಗಿ ಬೇಸತ್ತಿದ್ದಾರೆ. ಒಂದು ದೊಡ್ಡ ಸಂಕಟದ ಪರಿಸ್ಥಿತಿಯಲ್ಲಿ ದೇಶ ಸಿಲುಕಿದೆ. ಇಂದು ದೇಶದೆಲ್ಲೆಡೆ ಹಾಹಾಕಾರ ಕೇಳಿಬರುತ್ತಿದ್ದು, ಬಡತನ, ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳನ್ನು ನಿವಾರಿಸಲು ಈ ಕಪ್ಪು ಹಣವನ್ನು ವಾಪಸ್ ತರಿಸಿ ವಿನಿಯೋಗಿಸುವಂತಾಗಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಮುಖಂಡರು,  ಶಿಕ್ಷಣದಲ್ಲಿನ ಪಕ್ಷಪಾತವನ್ನು ಖಂಡಿಸಿದರು.ಡಾ.ಎನ್.ಎಲ್. ನಾಯಕ್, ಸ್ವಾತಂತ್ರ್ಯ ಹೋರಾಟಗಾರ ಶ್ರೀರಂಗರಾಜು, ಡಾ.ಚಿಕ್ಕಸ್ವಾಮಿ, ಕೆ.ವಿ. ವಸಂತಕುಮಾರ್, ಕೃಷ್ಣಮೂರ್ತಿ ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.