ಕಪ್ಪು ಹಣ ವಾಪಸ್- ಬಿಜೆಪಿ ಗುರಿ

7

ಕಪ್ಪು ಹಣ ವಾಪಸ್- ಬಿಜೆಪಿ ಗುರಿ

Published:
Updated:

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಅಭಿವೃದ್ಧಿಗೆ ಬಳಸುವುದೇ ಪಕ್ಷದ ಮುಖ್ಯ ಗುರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದರು.ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ವಿದೇಶಿ ಬ್ಯಾಂಕ್‌ಗಳಲ್ಲಿ ದೇಶದ 25 ಲಕ್ಷ ಕೋಟಿ ರೂಪಾಯಿ ಕಪ್ಪು ಹಣ ಕೊಳೆಯುತ್ತಿದೆ. ಇಷ್ಟು ಹಣವನ್ನು ದೇಶಕ್ಕೆ ತಂದರೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಿಸಲು ಸಾಧ್ಯ’ ಎಂದರು.‘ಕಪ್ಪು ಹಣ ದೇಶಕ್ಕೆ ಬಂದರೆ ಅದನ್ನು ರೈತರು ಮತ್ತು ಬಡವರ ಕಲ್ಯಾಣಕ್ಕೆ ಬಳಸುತ್ತೇವೆ. ಗಂಗಾ ನದಿಯ ನೀರನ್ನು ಕಾವೇರಿ ತೀರದವರೆಗೆ ತಂದು ದೇಶದ ಎಲ್ಲ ಪ್ರದೇಶವನ್ನೂ ಸಮೃದ್ಧಗೊಳಿಸುವ ಪ್ರಯತ್ನಕ್ಕೆ ಚಾಲನೆ ನೀಡುತ್ತೇವೆ. ಕಪ್ಪುಹಣದ ಸಮಸ್ಯೆಯನ್ನು ಕೊನೆಗೊಳಿಸುವುದೇ ನಮ್ಮ ಗುರಿ’ ಎಂದು ಹೇಳಿದರುಆತಂಕವಾದಿಗಳ ತುಷ್ಠೀಕರಣ:

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶದಲ್ಲಿ ಆತಂಕ ಸೃಷ್ಟಿಸುತ್ತಿರುವ ಭಯೋತ್ಪಾದಕರ ತುಷ್ಠೀಕರಣ ಮಾಡುತ್ತಿದೆ. ಇದರಿಂದಾಗಿ ನಕ್ಸಲ್‌ವಾದ ಮತ್ತು ಭಯೋತ್ಪಾದನೆ ಹೆಚ್ಚುತ್ತಿದೆ. ಯುಪಿಎ ಸರ್ಕಾರದ ನೀತಿಗಳಿಂದಾಗಿ ದೇಶ ಅಭದ್ರತೆಯಲ್ಲಿ ನರಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.‘ಗಡಿಯುದ್ದಕ್ಕೂ ಚೀನಾ ಆಕ್ರಮಣಕಾರಿ ಚಟುವಟಿಕೆಯಲ್ಲಿ ತೊಡಗಿದೆ. ಈಶಾನ್ಯ ರಾಜ್ಯಗಳಲ್ಲಿ ವಿಧ್ವಂಸಕ ಶಕ್ತಿಗಳು ಪದೇ ಪದೇ ಹಿಂಸಾಕೃತ್ಯ ನಡೆಸುತ್ತಿವೆ. ಮಾವೊವಾದಿಗಳು ನೇಪಾಳದ ಪಶುಪತಿಯಿಂದ ಆಂಧ್ರಪ್ರದೇಶದ ತಿರುಪತಿವರೆಗೂ ಕೆಂಪುಪಥ ರಚಿಸುವ ಪ್ರಯತ್ನದಲ್ಲಿದ್ದಾರೆ. ಇದು ಕಾಂಗ್ರೆಸ್‌ನ ತುಷ್ಠೀಕರಣ ರಾಜಕಾರಣದ ಫಲ’ ಎಂದು ಆರೋಪಿಸಿದರು.ಹಗರಣಗಳ ಸರಮಾಲೆ: ಯುಪಿಎ ಸರ್ಕಾರ ಹಗರಣಗಳ ಸುಳಿಯಲ್ಲಿ ಸಿಲುಕಿದೆ. 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣ, ರೂ 70 ಸಾವಿರ ಕೋಟಿ ಮೊತ್ತದ ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣ, ಎರಡು ಲಕ್ಷ ಕೋಟಿ ರೂಪಾಯಿ ಮೊತ್ತದ ಎಸ್-ಬ್ಯಾಂಡ್ ಹಗರಣಗಳಿಂದ ಯುಪಿಎ ಸರ್ಕಾರ ಆಡಳಿತ ನಡೆಸುವ ನೈತಿಕತೆ ಕಳೆದುಕೊಂಡಿದೆ ಎಂದು ಗಡ್ಕರಿ ಟೀಕಿಸಿದರು.‘ಹಗರಣಗಳ ವಿಷಯದಲ್ಲಿ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಈಗ ಮೈತ್ರಿಧರ್ಮದ ಮಾತನ್ನಾಡುತ್ತಿದೆ. ದೇಶದ ಖಜಾನೆ ಲೂಟಿಮಾಡಲು ಅವಕಾಶ ನೀಡುವುದು ಮೈತ್ರಿಧರ್ಮವೇ? ಇಂತಹವರು ಅಧಿಕಾರದಲ್ಲಿ ಮುಂದುವರಿಯಲು ಅರ್ಹರೇ?’ ಎಂದು ಪ್ರಶ್ನಿಸಿದರು.‘ನಾನು ನೀವು ಹೇಳಿರುವಷ್ಟು ದೊಡ್ಡ ತಪ್ಪು ಮಾಡಿಲ್ಲ ಎಂದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿಕೆ ನೀಡಿದ್ದಾರೆ. ಇದರ ಅರ್ಥ ಏನು ಎಂಬುದು ದೇಶದ ಜನತೆಗೆ ಇನ್ನೂ ತಿಳಿದಿಲ್ಲ. ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ.ರಾಜಾ ಬೊಕ್ಕಸವನ್ನು ಲೂಟಿ ಮಾಡುತ್ತಿದ್ದಾಗ ಸುಮ್ಮನೆ ಕುಳಿತಿದ್ದು ದೊಡ್ಡ ತಪ್ಪಲ್ಲವೇ’ ಎಂದರು.ನಾಯಕರಿಲ್ಲದ ಪಕ್ಷ: ‘ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಶಕ್ತಿ ಬಿಜೆಪಿಗೆ ಇದೆ. ಆದ್ದರಿಂದಲೇ ನನ್ನಂತಹ ವ್ಯಕ್ತಿ ಅಧ್ಯಕ್ಷನಾಗಲು ಸಾಧ್ಯವಾಯಿತು. ಆದರೆ ಕಾಂಗ್ರೆಸ್‌ನಲ್ಲಿ ಪಕ್ಷದ ನಾಯಕತ್ವ ವಹಿಸಿಕೊಳ್ಳಲು ಸೂಕ್ತ ವ್ಯಕ್ತಿಗಳೇ ಇಲ್ಲ’ ಎಂದು ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry