ಮಂಗಳವಾರ, ಏಪ್ರಿಲ್ 13, 2021
29 °C

ಕಪ್ಪು ಹಣ ಸಂಗ್ರಹ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಪ್ಪು ಹಣ ಹೊಂದಿದ ವಾಣಿಜ್ಯೋದ್ಯಮಿಗಳು ತಮ್ಮ ವಶದಲ್ಲಿದ್ದಾಗಲೇ ವಿಚಾರಣೆ ನಡೆಸಲು ವಿಫಲವಾದ ಬಗ್ಗೆ  ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.ಪುಣೆಯ ವಾಣಿಜ್ಯೋದ್ಯಮಿ ಹಸನ್ ಅಲಿ ಖಾನ್ ಅವರು ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ವಿಚಾರಣೆ ಅವಧಿಯಲ್ಲೇ ವರ್ಗಾವಣೆ ಮಾಡಿದ ಜಾರಿ ನಿರ್ದೇಶನಾಲಯದ ಮೂವರು ಪ್ರಮುಖ ಅಧಿಕಾರಿಗಳನ್ನು ತಕ್ಷಣದಿಂದ ಹಿಂದಿನ ಸ್ಥಾನದಲ್ಲೇ ಮುಂದುವರಿಸಬೇಕು ಎಂದೂ ಕೋರ್ಟ್ ಆದೇಶಿಸಿತು.ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾದರೆ ತಪ್ಪಿತಸ್ಥರ ವಿರುದ್ಧದ ತನಿಖೆ ಮೇಲ್ವಿಚಾರಣೆಗೆ ವಿಶೇಷ ಅಧಿಕಾರಿಯನ್ನು ತಾನೇ ನೇಮಿಸುವುದು ಅನಿವಾರ್ಯ ಆಗುತ್ತದೆ ಎಂದು ನ್ಯಾಯಮೂರ್ತಿ ಬಿ. ಸುದರ್ಶನ್‌ರೆಡ್ಡಿ ಮತ್ತು ಎಸ್.ಎಸ್. ನಿಜ್ಜಾರ್ ಅವರನ್ನು ಒಳಗೊಂಡ ಪೀಠ ಸೂಚಿಸಿತು.ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಮಂಗಳವಾರದವರೆಗೆ ಕಾಲಾವಕಾಶ ನೀಡಿ ವಿಫಲವಾದರೆ ಅಗತ್ಯ ಆದೇಶ ಹೊರಡಿಸುವುದು ಕಡ್ಡಾಯವಾಗುತ್ತದೆ ಎಂದು ಹೇಳಿತು. ಖಾನ್ ಮತ್ತು ಕಪ್ಪು ಹಣ ಲೇವಾದೇವಿಯಲ್ಲಿ ತೊಡಗಿದ್ದರೆನ್ನಲಾದ ಇತರರನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರಕ್ಕೆ ಯಾವ ಅಡ್ಡಿ ಇತ್ತು ಎಂಬುದನ್ನು ತಿಳಿಸಬೇಕು ಎಂದೂ ಕೋರ್ಟ್ ಕೇಳಿತು.ವಿದೇಶಿ ಬ್ಯಾಂಕುಗಳಲ್ಲಿ ಸುಮಾರು 800 ಕೋಟಿ ಡಾಲರ್ ಹಣ ಸಂಗ್ರಹಿಸಿರುವ ಆರೋಪ ಹೊತ್ತಿರುವ ಖಾನ್ ಅವರಿಗೆ ಈ ಹಿಂದೆ ಸುಮಾರು ರೂ 50 ಕೋಟಿವರೆಗೆ ತೆರಿಗೆ ನೋಟಿಸ್ ಜಾರಿಯಾಗಿತ್ತು.ತನಿಖೆ ನಡೆಸುವವರ ಬಳಿ ಸಾಕಷ್ಟು ಮಾಹಿತಿ ಇದ್ದರೂ ತಪ್ಪಿತಸ್ಥರೆನ್ನಲಾದ ಖಾನ್ ಮತ್ತು ಇತರರ ವಿಚಾರಣೆ ನಡೆಸಲು ವಿಫಲವಾಗಿದ್ದಕ್ಕೆ ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿತು.‘ಸಿಆರ್‌ಪಿಸಿಯ 144 ಸೆಕ್ಷನ್ ಉಲ್ಲಂಘಿಸಿದ ಪ್ರಕರಣದಲ್ಲಿ ಸಣ್ಣ ಪ್ರಮಾಣದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡ ನಿದರ್ಶನಗಳಿವೆ. ಆದರೆ ನೀವು ಈ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ವಿಷಾದನೀಯ. ಈ ಎಲ್ಲಾ ವ್ಯಕ್ತಿಗಳು ಈಗ ಮುಕ್ತರಾಗಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿತು.ಈ ಹಂತದಲ್ಲಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಅವರು ಮಾತನಾಡಲು ಬಯಸಿದರೂ ಅದಕ್ಕೆ ಅವಕಾಶ ನೀಡದೆ, ‘ಈ ರಾಷ್ಟ್ರದಲ್ಲಿ ಏನೆಲ್ಲ ಅವಾಂತರಗಳು ನಡೆಯುತ್ತಿವೆ’? ಎಂದು ಅಚ್ಚರಿ ವ್ಯಕ್ತಪಡಿಸಿತು.ಕಪ್ಪು ಹಣ ಹಗರಣ ಬಗ್ಗೆ ತನಿಖೆ ಅವಧಿಯಲ್ಲೇ ಜಾರಿ ನಿರ್ದೇಶನಾಲಯದ ಮೂವರು ಪ್ರಮುಖ ಅಧಿಕಾರಿಗಳನ್ನು ವರ್ಗಾಯಿಸಿರುವುದು ತೀರಾ ದುರದೃಷ್ಟಕರ ಎಂದೂ ಪೀಠ ಅಭಿಪ್ರಾಯ ಪಟ್ಟಿತು.ವಿದೇಶದಲ್ಲಿ ಸಂಗ್ರಹವಾಗಿರುವ ಭಾರತೀಯರ ಕಪ್ಪು ಹಣ  ಮತ್ತು ಅದನ್ನು ಸ್ವದೇಶಕ್ಕೆ ಮರಳಿ ತರುವ ಬಗ್ಗೆ ಸುಪ್ರಸಿದ್ಧ ವಕೀಲ ರಾಮ್ ಜೇಠ್ಮಲಾನಿ ಮತ್ತು ಇತರ ಕೆಲವು ಮಾಜಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಫೆ. 10ರಂದು ಕೋರ್ಟ್ ಖಾನ್ ದೇಶ ಬಿಡದಂತೆ ನೋಡಿಕೊಳ್ಳುವಂತೆ ಸೂಚಿಸಿತ್ತು.ಖಾನ್ ಭಾರತದಲ್ಲಿ ಇದ್ದಾನೆ ಮತ್ತು ಸರ್ಕಾರ ಆತನ ವಿರುದ್ಧ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸುಬ್ರಮಣಿಯಂ ಮಾಹಿತಿ ನೀಡಿದಾಗ ಕೋರ್ಟು  ‘ಕಾನೂನು ಕ್ರಮ ಎದುರಿಸಲು ಆತ ಲಭ್ಯವಾಗುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ ಆಗಿತ್ತು’ ಎಂದು ಹೇಳಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.