ಕಪ್ಪು ಹಲಗೆಗೆ ಬೈ; ಇ-ಬೋರ್ಡ್‌ಗೆ ಜೈ!

7

ಕಪ್ಪು ಹಲಗೆಗೆ ಬೈ; ಇ-ಬೋರ್ಡ್‌ಗೆ ಜೈ!

Published:
Updated:

ಧಾರವಾಡ: ವಿವಿ ತುಂಬ ಹೈಫೈ ಸಂಪರ್ಕ, ಕೇಂದ್ರ ಗ್ರಂಥಾಲಯದ ಹೊರಗಡೆ ದಿನದ 24 ಗಂಟೆಯೂ ಕುಳಿತು ಓದಬಹುದಾದ ಸೌಕರ್ಯ, ಹಾಸ್ಟೆಲ್‌ಗಳಿಗೆ ಸುಣ್ಣ ಬಣ್ಣ, ಎಲ್ಲ ಕ್ಲಾಸ್‌ರೂಂಗಳಿಗೆ ಸ್ಮಾರ್ಟ್ ಬೋರ್ಡ್, ಅಂತರ್ಜಲ ವೃದ್ಧಿಸಲು ಚೆಕ್‌ಡ್ಯಾಂಗಳ ನಿರ್ಮಾಣ, ಮೂರು ಕೆರೆಗಳ ನಿರ್ಮಾಣ... ಹೀಗೆ ಇನ್ನೂ ಹಲವು ಸೌಕರ್ಯಗಳು ನಗರದ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ತುಂಬಲಿವೆ.ಸಂಶೋಧನೆಯಲ್ಲಿ ಸಾಧನೆ ಮಾಡಿದ ವಿವಿಗಳಿಗೆ ನೀಡಲಾಗುವ ರೂ 50 ಕೋಟಿ ಅನುದಾನ ಪಡೆದ ರಾಜ್ಯದ ಎರಡೇ ಎರಡು ವಿವಿಗಳಲ್ಲಿ ನಮ್ಮ ವಿವಿಯೂ ಒಂದು. ಅದಕ್ಕಾ ಗಿಯೇ ವಿಶ್ವವಿದ್ಯಾಲಯ ಧನಸಹಾಯ ಆಯೋ ಗವು (ಯುಜಿಸಿ) `ಪೊಟೆನ್ಶಿಯಲ್ ಫಾರ್ ಎಕ್ಸ್ ಲೆನ್ಸ್~ಗಾಗಿ ನೀಡಲಿರುವ 50 ಕೋಟಿಯಲ್ಲಿ ಈಗಾಗಲೇ ಮೊದಲ ಕಂತಾಗಿ ರೂ 25 ಕೋಟಿ ಬಿಡುಗಡೆಯಾಗಿದೆ. ಆದ್ದರಿಂದಲೇ ಈ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದ್ದಾರೆ ವಿವಿ ಕುಲಪತಿ ಪ್ರೊ.ಎಚ್.ಬಿ. ವಾಲೀಕಾರ.ಈ ಅನುದಾನವನ್ನು ಪಡೆಯಲು ರಾಷ್ಟ್ರದ 36 ವಿವಿಗಳು ತೀವ್ರ ಪೈಪೋಟಿ ನಡೆಸಿದ್ದವು. ಅದರಲ್ಲಿ 10 ವಿವಿಗಳು ಆಯ್ಕೆಯಾಗಿದ್ದು, ರಾಜ್ಯದ ಮೈಸೂರು ವಿವಿ ಹಾಗೂ ಧಾರವಾಡದ ಕರ್ನಾಟಕ ವಿವಿಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು.ಈಗ ಬಿಡುಗಡೆಯಾಗಿರುವ ಹಣದಲ್ಲಿ ವಿವಿ ಕ್ಯಾಂಪಸ್‌ನಲ್ಲಿ ಮೂಲಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದ್ದು, ನಾಲ್ಕು ಕೋಟಿ ರೂ ವೆಚ್ಚದಲ್ಲಿ ವಿವಿಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 2.50 ಕೋಟಿ ರೂ ವೆಚ್ಚದಲ್ಲಿ ಮಳೆ ನೀರು ಸಂಗ್ರಹಣೆ ಯೋಜನೆ ಕಾರ್ಯಗತಗೊಳ್ಳಲಿದೆ.ಅಂತರ್ಜಲ ಮಟ್ಟ ಸುಧಾರಿಸಲು ಮೂರು ಕೆರೆಗಳನ್ನು ವಿವಿಯ ಕ್ಯಾಂಪಸ್‌ನಲ್ಲಿ ನಿರ್ಮಾಣ ಮಾಡಲಾಗುತ್ತದೆ. ಶಾಲ್ಮಲೆಯು ಗುಪ್ತಗಾಮಿನಿಯಾಗಿ ಹರಿಯುತ್ತಿದ್ದಾಳೆ ಎನ್ನಲಾದ ಶಾಲ್ಮಲಾ ಹಾಸ್ಟೆಲ್ ಹಿಂಭಾಗದ ಕಣಿವೆಯ ಮಧ್ಯೆ ಚೆಕ್‌ಡ್ಯಾಂಗಳನ್ನು ಕಟ್ಟುವುದಕ್ಕೆ ನಿರ್ಧರಿಸಲಾಗಿದೆ.ಈಗ ಇರುವ ವಿವಿಯ ಕೇಂದ್ರ ಗ್ರಂಥಾಲಯ ಇನ್ನು ಮುಂದೆ 24 ಗಂಟೆಯೂ ಕಾರ್ಯನಿರ್ವ ಹಿಸಲಿದ್ದು, ವಿದ್ಯಾರ್ಥಿಗಳು ತಂಗಾಳಿಗೆ ಮೈಯೊಡ್ಡಿ ಓದಲು ಹೊರಗಡೆಯೇ ಒಂದಷ್ಟು ಕಾಯಂ ಬೆಂಚುಗಳನ್ನು ಅಳವಡಿಸಲಾಗುತ್ತಿದೆ. ಗ್ರಂಥಾಲಯಕ್ಕೆ ಆಧುನಿಕ ಸ್ಪರ್ಷ ನೀಡಬೇಕೆಂಬ ಉದ್ದೇಶದಿಂದ ಒಟ್ಟು 100 ಕಿಂಡಲ್ ರೀಡರ್‌ಗಳನ್ನು ಖರೀದಿಸಲಾಗುತ್ತಿದೆ. ಒಂದು ಕಿಂಡಲ್ ರೀಡರ್‌ನಲ್ಲಿ 1400 ಪುಸ್ತಕಗಳನ್ನು ಸಂಗ್ರಹಿಸಿ ಇಡಬಹುದು.ಸ್ಮಾರ್ಟ್ ಬೋರ್ಡ್: ಕವಿವಿ ಕ್ಯಾಂಪಸ್‌ನಲ್ಲಿರುವ ಎಲ್ಲ ವಿಭಾಗಗಳ ಸುಮಾರು 150 ಬೋಧನಾ ಕೊಠಡಿಗಳಿಗೆ ತಲಾ 1.5 ಲಕ್ಷ ವೆಚ್ಚದ ಸ್ಮಾರ್ಟ್ ಬೋರ್ಡ್‌ಗಳನ್ನು ಅಳವಡಿಸ ಲಾಗುತ್ತಿದ್ದು, ಇವುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಸ್ಮಾರ್ಟ್ ಬೋರ್ಡ್‌ಗಳನ್ನು ಪೂರೈಕೆ ಮಾಡುವ ಕಂಪೆನಿಯೊಂದಿಗೆ ಮಾತುಕತೆ ನಡೆಸಿದ್ದು, ಸಗಟು ಖರೀದಿ ಮಾಡುತ್ತಿರುವುದರಿಂದ ಬೋರ್ಡ್ ಒಂದಕ್ಕೆ 95 ಸಾವಿರ ರೂಪಾಯಿಗೆ ಪೂರೈಕೆ ಮಾಡಲು ಕಂಪನಿ ಸಮ್ಮತಿಸಿದೆ. ಆ ಮೂಲಕ ಕಪ್ಪು ಹಲಗೆ, ಬಿಳಿ ಚಾಕ್‌ಪೀಸ್  ಮೂಲಕ ಪಾಠ ಹೇಳುವ ಕ್ರಮ ಇನ್ನು ಇತಿಹಾಸ ಸೇರಲಿದೆ ಎನ್ನುತ್ತಾರೆ ವಿವಿ ಕುಲಪತಿ ಪ್ರೊ.ಎಚ್. ಬಿ.ವಾಲೀಕಾರ.ಈ ಬೋರ್ಡ್ ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಲಿದ್ದು, ಬರೆಯುವ ಹಾಗೂ ಅಳಿಸುವ ಪ್ರಕ್ರಿಯೆಯನ್ನು ಎಲೆಕ್ಟ್ರಾನಿಕ್ ಸಾಧನದ ಮೂಲಕವೇ ನಿರ್ವಹಿಸಲಾಗುತ್ತದೆ. ಇದಕ್ಕಾಗಿ ಕವಿವಿ ಎರಡು ಕೋಟಿ ರೂಪಾಯಿಗಳನ್ನು  ವ್ಯಯಿಸಲಿದೆ.ಹೊಸ ಕಾಟ್ ಬರ‌್ತಾವ...

ಅತ್ಯಂತ ಹಳೆಯದಾದ ಹಾಸ್ಟೆಲ್‌ಗಳ ಗೋಡೆಗಳು ಸುಣ್ಣ ಬಣ್ಣದ ಭಾಗ್ಯವನ್ನು ಕಾಣಲಿವೆ.  ಬಿಡುಗಡೆಯಾದ 25 ಕೋಟಿಯಲ್ಲಿ 3.5 ಕೋಟಿ ರೂ ಗಳನ್ನು ಹಾಸ್ಟೆಲ್‌ಗಳ ಆಧುನೀಕರಣಕ್ಕೆ ವ್ಯಯಿಸಲಾಗುತ್ತಿದೆ. ಕಾಟ್ ಸರಿ ಇಲ್ಲ, ಕುರ್ಚಿ ಕುಳಿತುಕೊಳ್ಳಲು ಯೋಗ್ಯವಿಲ್ಲ, ರೂಂಗೆ ಕೀಲಿಯೇ ಇಲ್ಲ ಎಂಬ ದೂರುಗಳಿಗೆ ಬ್ರೇಕ್ ಬೀಳಲಿದೆ.

 

ವಿವಿಯ ಕಾರ್ಯಾಗಾರದಲ್ಲಿಯೇ ಕಾಟ್‌ಗಳನ್ನು ತಯಾರಿಸಲು ನಿರ್ಧರಿಸಿರುವುದರಿಂದ ಕಾರ್ಯಾಗಾರದ ಸಿಬ್ಬಂದಿಗೆ ಕೆಲಸವೂ ದೊರೆಯುತ್ತದೆ. ಇ ಆಡಳಿತದಲ್ಲಿ ತೀವ್ರ ಆಸಕ್ತಿ ಹೊಂದಿರುವ ವಿವಿಯ ಆಡಳಿತ ತನ್ನ ವ್ಯಾಪ್ತಿಯ ಎಲ್ಲ 300 ಕಾಲೇಜುಗಳಿಗೆ ವಿಡಿಯೊ ಕಾನ್ಫರೆನ್ಸ್ ಮಾಡಲು ಮೂರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry