ಕಪ್ ಗೆಲ್ಲುವ ಸಾಮರ್ಥ್ಯ ಇರಲಿಲ್ಲ

7

ಕಪ್ ಗೆಲ್ಲುವ ಸಾಮರ್ಥ್ಯ ಇರಲಿಲ್ಲ

Published:
Updated:

ಪಳ್ಳೆಕೆಲೆ (ಎಎಫ್‌ಪಿ): ಯುವ ಆಟಗಾರರನ್ನು ಒಳಗೊಂಡಿರುವ ಇಂಗ್ಲೆಂಡ್ ತಂಡ ವಿಶ್ವಕಪ್ ಟ್ವೆಂಟಿ-20 ಟೂರ್ನಿಯನ್ನು ಗೆಲ್ಲಲು ಅಗತ್ಯವಿದ್ದ ಸಾಮರ್ಥ್ಯ ಹೊಂದಿರಲಿಲ್ಲ ಎಂದು ನಾಯಕ ಸ್ಟುವಟ್ ಬ್ರಾಡ್ ಹೇಳಿದ್ದಾರೆ.ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೋಮವಾರ ನಡೆದ `ಸೂಪರ್ ಎಂಟ~ರ ಹಂತದ ಪಂದ್ಯದಲ್ಲಿ ಶ್ರೀಲಂಕಾ ಎದುರು 19 ರನ್‌ಗಳ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿತ್ತು. `ಟೂರ್ನಿಯುದ್ದಕ್ಕೂ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ~ ಎಂದು ಬ್ರಾಡ್ ಪ್ರತಿಕ್ರಿಯಿಸಿದ್ದಾರೆ.`ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿರುವುದು ನಿರಾಸೆ ಉಂಟುಮಾಡಿದೆ. ಇನ್ನಷ್ಟು ಹೆಚ್ಚಿನ ಪ್ರಯತ್ನ ನಡೆಸಬೇಕಿತ್ತು~ ಎಂದು ಇಂಗ್ಲೆಂಡ್ ನಾಯಕ ತಿಳಿಸಿದ್ದಾರೆ.2010 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಪಾಲ್ ಕಾಲಿಂಗ್‌ವುಡ್ ನೇತೃತ್ವದ ಇಂಗ್ಲೆಂಡ್ ಟ್ರೋಫಿ ಜಯಿಸಿತ್ತು. ಆದರೆ ಈ ಬಾರಿ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಸೂಪರ್ ಎಂಟರ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಮಾತ್ರ ಗೆಲುವು ಪಡೆದಿದೆ.`ತಂಡದ ಹೆಚ್ಚಿನ ಆಟಗಾರರು ಅನನುಭವಿಗಳು. ಈ ಟೂರ್ನಿಯಲ್ಲಿ ಯುವ ಆಟಗಾರರು ಸಾಕಷ್ಟು ಕಲಿತಿದ್ದಾರೆ. ಇಲ್ಲಿ ದೊರೆತ ಅನುಭವ ಮುಂದಿನ ದಿನಗಳಲ್ಲಿ ನೆರವಿಗೆ ಬರಬಹುದು~ ಎಂದು ಬ್ರಾಡ್ ಹೇಳಿದ್ದಾರೆ.`ತಂಡದಲ್ಲಿ ಪ್ರತಿಭೆಗಳಿದ್ದರು. ಆದರೆ ಸಂಘಟಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದು ಮುಳುವಾಗಿ ಪರಿಣಮಿಸಿತು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry