ಬುಧವಾರ, ಅಕ್ಟೋಬರ್ 16, 2019
21 °C

ಕಬಡ್ಡಿ: ಫೈನಲ್‌ಗೆ ಕರ್ನಾಟಕ

Published:
Updated:
ಕಬಡ್ಡಿ: ಫೈನಲ್‌ಗೆ ಕರ್ನಾಟಕ

ಧಾರವಾಡ: ಕರ್ನಾಟಕ ಹಾಗೂ ಹರಿಯಾಣದ ಬಾಲಕ-ಬಾಲಕಿಯರ ತಂಡಗಳೆರಡೂ ಇಲ್ಲಿಯ ಪೊಲೀಸ್ ವಸತಿ ಶಾಲೆ ಮೈದಾನದಲ್ಲಿ ನಡೆದಿರುವ 57ನೇ ರಾಷ್ಟ್ರೀಯ 17 ವರ್ಷದೊಳಗಿನವರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟವು.ಕರ್ನಾಟಕದ ಬಾಲಕಿಯರು ತೀವ್ರ ತುರುಸಿನಿಂದ ಕೂಡಿದ್ದ ಸೆಮಿ ಫೈನಲ್ ಪಂದ್ಯದಲ್ಲಿ 7-4 (3-1)ರಿಂದ ಪಶ್ಚಿಮ ಬಂಗಾಲ ತಂಡವನ್ನು ಪರಾಭವಗೊಳಿಸಿದರು. ಎರಡೂ ತಂಡಗಳು ರಕ್ಷಣೆಗೆ ಒತ್ತು ನೀಡಿದ್ದರಿಂದ ಪಾಯಿಂಟ್ ಗಳಿಕೆಗೆ ತೀವ್ರ ತಿಣುಕಾಟ ನಡೆಯಿತು.ವಿರಾಮದ ವೇಳೆಗೆ ಕೇವಲ 3-1ರಿಂದ ಮುಂದಿದ್ದ ಕರ್ನಾಟಕ, ಅಂತಿಮವಾಗಿ 7-4ರಿಂದ ಪಂದ್ಯವನ್ನು ಜಯಿಸಿದಾಗ ರಾಜ್ಯದ ಆಟಗಾರ್ತಿಯರ ಸಂಭ್ರಮ ಎಲ್ಲೆ ಮೀರಿತ್ತು. ಕರ್ನಾಟಕ ತಂಡದ ಗೆಲುವಿನಲ್ಲಿ ಶರಧಿ ಮತ್ತು ರಕ್ಷಿತಾ ಮಿಂಚಿದರು.ಇನ್ನೊಂದು ಸೆಮಿ ಫೈನಲ್‌ನಲ್ಲಿ ಹರಿಯಾಣ ತಂಡ 11-10 (4-2)ರಿಂದ ಮಹಾರಾಷ್ಟ್ರ ವಿರುದ್ಧ ರೋಚಕ ಗೆಲುವು ಸಾಧಿಸಿತು. ಶುಕ್ರವಾರ ಬೆಳಿಗ್ಗೆ ನಡೆಯಲಿರುವ ಫೈನಲ್‌ನಲ್ಲಿ ಕರ್ನಾಟಕ ತಂಡ ಹರಿಯಾಣ ತಂಡದೊಂದಿಗೆ ಮುಖಾಮುಖಿಯಾಗಲಿದೆ.ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ 27-10 (16-4)ರಿಂದ ಪಶ್ಚಿಮ ಬಂಗಾಲ ತಂಡಕ್ಕೆ ಸೋಲುಣಿಸಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಹರಿಯಾಣ ತಂಡ 18-15 (12-8)ರಿಂದ ಛತ್ತೀಸ್‌ಗಡ ತಂಡದ ವಿರುದ್ಧ ಜಯ ಸಾಧಿಸಿತು. ಕರ್ನಾಟಕ ಮತ್ತು ಹರಿಯಾಣ ತಂಡಗಳು ಶುಕ್ರವಾರ ಪ್ರಶಸ್ತಿಗಾಗಿ ಸೆಣಸಲಿವೆ.ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕರ್ನಾಟಕ ತಂಡ 41-15 (27-7)ರಿಂದ ಕೇರಳ ತಂಡವನ್ನು; ಹರಿಯಾಣ ತಂಡ 26-4 (4-1)ರಿಂದ ಹಿಮಾಚಲ ಪ್ರದೇಶ ತಂಡವನ್ನು ಸೋಲಿಸಿದ್ದವು.

Post Comments (+)