ಭಾನುವಾರ, ಮಾರ್ಚ್ 7, 2021
27 °C
ತಿ.ನರಸೀಪುರ ತಾಲ್ಲೂಕಿನ ರೈತರ ಸಭೆಯಲ್ಲಿ ಇಲಾಖೆಯ ಎಸ್‌ಇ ಮಂಜುನಾಥ್‌ ಭರವಸೆ

ಕಬಿನಿ ನಾಲೆಗಳಿಗೆ 45 ದಿನ ನೀರು ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬಿನಿ ನಾಲೆಗಳಿಗೆ 45 ದಿನ ನೀರು ಪೂರೈಕೆ

ತಿ.ನರಸೀಪುರ: ಕಬಿನಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನಿರಂತರವಾಗಿ 45 ದಿನ ನೀರು ಪೂರೈಕೆ ಮಾಡುವುದಾಗಿ ನೀರಾವರಿ ಇಲಾಖೆಯ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಮಂಜುನಾಥ್‌ ಭರವಸೆ ನೀಡಿದರು.ಕಬಿನಿ ನಾಲೆಗಳಿಗೆ ಅರೆ ನೀರಾವರಿ ಪೂರೈಕೆ ಖಂಡಿಸಿ ರೈತ ಹಿತರಕ್ಷಣಾ ಸಮಿತಿ ಹಾಗೂ ಕಬ್ಬು ಬೆಳೆಗಾರರ ಸಂಘಟನೆಗಳು ಕಳೆದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ತಹಶೀಲ್ದಾರ್‌ ಶೂಲದಯ್ಯ ನೀರಾವರಿ ಇಲಾಖೆ ಅಧಿಕಾರಿಗಳ ಸಮಕ್ಷಮ ರೈತರ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರು. ಅದರಂತೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ರೈತರ ಸಭೆಯಲ್ಲಿ ಅಧಿಕಾರಿಗಳು ಈ ಭರವಸೆ ನೀಡಿದರು.ಕಬ್ಬು ಬೆಳೆಗಾರರ ಸಂಘ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ಸ್ಥಳೀಯವಾಗಿ ರೈತರ ಸಮಸ್ಯೆ ಅರಿಯದೆ ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.‘ಮೊದಲು ರೈತರ ಸಮಸ್ಯೆ ಆಲಿಸಿ. ಯಾವುದೇ ಸಬೂಬು ಹೇಳದೇ ಕಟ್ಟಕಡೆಯ ರೈತರ ಜಮೀನಿಗೂ ನೀರು ಹರಿಯುವಂತೆ ನೋಡಿಕೊಳ್ಳಿ, ನಿರಂತರವಾಗಿ ನೀರು ಪೂರೈಕೆ ಮಾಡಿ. ಮಧ್ಯದಲ್ಲಿ ತೊಂದರೆ ಮಾಡಿದರೆ ರೈತರು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.ಇದೇ ವೇಳೆ ನೀರಾವರಿ ಇಲಾಖೆ ಅಧಿಕಾರಿಗಳ ಕ್ರಮದ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತರ ಪರಿಸ್ಥಿತಿ ಕಂಡ ತಹಶೀಲ್ದಾರ್‌ ಶೂಲದಯ್ಯ, ಸಭೆಯಲ್ಲಿದ್ದ ಎಇಇ ಮರಿಸ್ವಾಮಿ ಜತೆ ಚರ್ಚಿಸಿ ಆ. 3ರಿಂದಲೇ 45 ದಿನಗಳ ಕಾಲ ನಿರಂತರ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು.ಬಳಿಕ ಮಾತನಾಡಿದ ಅವರು, ತಾಲ್ಲೂಕಿನ 36 ಗ್ರಾಮ ಪಂಚಾಯಿತಿ ಗಳಲ್ಲಿ ರೈತರಿಗೆ ಆರ್‌ಟಿಸಿ ಸಿಗುವಂತೆ ಕ್ರಮ ವಹಿಸಲಾಗಿದೆ. ಪಂಚಾಯಿತಿ ಕಚೇರಿ ಹಾಗೂ ಪಿಡಿಒಗಳನ್ನು ಭೇಟಿ ಮಾಡಿ ಆರ್‌ಟಿಸಿ ಪಡೆಯಬಹುದಾಗಿದೆ ಎಂದು ತಿಳಿಸಿದರು.ತಾ.ಪಂ. ಇಒ ಬಿ.ಎಸ್‌. ರಾಜು, ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಕಿರಗಸೂರು ಶಂಕರ್‌, ಹಳ್ಳಿಕೆರೆ ಹುಂಡಿ ಭಾಗ್ಯರಾಜು, ಶಂಕರ್‌ಗುರು, ಬನ್ನೂರು ನಾರಾಯಣ್‌, ಸೀಹಳ್ಳಿ ಗುರುಮೂರ್ತಿ, ಕುರುಬೂರು ಸಿದ್ದೇಶ್‌, ಶಿವಪ್ರಸಾದ್‌, ಮಹದೇವಪ್ಪ, ಆಲಗೂಡು ಮಹಾದೇವ್‌, ಕುಮಾರ್‌, ಪರಶಿವಮೂರ್ತಿ, ನಂಜುಂಡಸ್ವಾಮಿ, ಗಿರೀಶ್‌, ಮಹಾದೇವಸ್ವಾಮಿ, ಕೊತ್ತೇಗಾಲ ಬಸವರಾಜು, ಜಯಸ್ವಾಮಿ, ರೈತರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.