ಮಂಗಳವಾರ, ಏಪ್ರಿಲ್ 20, 2021
24 °C

ಕಬಿನಿ ನಾಲೆಯಿಂದ 17 ಕೆರೆಗೆ ನೀರು: ನಿರ್ಧಾರ:ಉಬ್ಬೆಹುಣಿಸೆ ನೀರಾವರಿ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕೊಳ್ಳೇಗಾಲ ವಿಭಾಗಕ್ಕೆ ಸೇರಿದ 17 ಕೆರೆಗಳಿಗೆ ಕುಡಿಯುವ ನೀರು ಹಾಗೂ ಅರೆನೀರಾವರಿಗಾಗಿ ಕಬಿನಿ ನಾಲೆಯಿಂದ ನೀರು ತುಂಬಿಸಲು ನಿರ್ಧರಿಸಲಾಗಿದೆ.ನಗರದ ಕೆಡಿಪಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯಿತಿಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು.ಉಪಾಧ್ಯಕ್ಷ ಕೆ. ಈಶ್ವರ್ ಸೇರಿದಂತೆ ಸ್ಥಾಯಿಸಮಿತಿ ಅಧ್ಯಕ್ಷರು ಕಾವೇರಿ ನೀರಾವರಿ ನಿಗಮದಿಂದ ಕೈಗೆತ್ತಿಕೊಂಡಿರುವ ಕಾಮಗಾರಿ ಬಗ್ಗೆ ಚರ್ಚಿಸಿದರು. ಕೊಳ್ಳೇಗಾಲ ತಾಲ್ಲೂಕಿನ ಉಬ್ಬೆಹುಣಿಸೆ ನೀರಾವರಿ ಯೋಜನೆ, ಉಡುತೊರೆ ಜಲಾಶಯದ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.ನಿಗಮದ ಕಾರ್ಯಪಾಲಕ ಎಂಜಿನಿಯರ್ ಎಲ್. ವೆಂಕಟಾಲಯ್ಯ ಮಾತನಾಡಿ, `ಕುಡಿಯುವ ನೀರಿಗಾಗಿ ಕೆರೆಗಳಿಗೆ ನಾಲೆಯಿಂದ ನೀರು ತುಂಬಿಸಲಾಗುತ್ತಿದೆ. ಸಂತೇಮರಹಳ್ಳಿ ಬಳಿಯಲ್ಲಿ ನಾಲೆಯ ತೂಬು ಬಿರುಕು ಬಿಟ್ಟಿತ್ತು. ಪ್ರಸ್ತುತ ದುರಸ್ತಿಪಡಿಸಿ ನೀರು ಬಿಡಲಾಗಿದೆ. ರೈತರು ನೀರಾವರಿಗಾಗಿ ಕೆರೆಗಳಿಗೆ ನೀರು ಭರ್ತಿ ಮಾಡಲು ಒತ್ತಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಬಂದರೆ ನೀರಾವರಿ ಉದ್ದೇಶಕ್ಕೂ ನಾಲೆಯಿಂದ ನೀರು ಪೂರೈಸಬಹುದು~ ಎಂದರು.2008ರೊಳಗೆ ಉಬ್ಬೆಹುಣಿಸೆ ಯೋಜನೆಯಡಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರ ರಂಗೇಗೌಡ ಅವರಿಗೆ ಸೂಚಿಸಲಾಗಿತ್ತು. ಆದರೆ, ಕಾಮಗಾರಿ ಪೂರ್ಣವಾಗಲಿಲ್ಲ. ಜತೆಗೆ, ಹೊಸದಾಗಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲು ನಿರ್ಧರಿಸಲಾಗಿತ್ತು.

 

ಆದರೆ, ಗುತ್ತಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದರು. ಕೊನೆಗೆ, ನ್ಯಾಯಾಲಯ ಅವರ ಗುತ್ತಿಗೆ ರದ್ದುಪಡಿಸಿತು. ಬಳಿಕ 2010ರಲ್ಲಿ ಹೊಸ ಟೆಂಡರ್ ಕರೆಯಲಾಯಿತು. ಆದರೆ, ಗುತ್ತಿಗೆದಾರರು ತಮಗೆ ಗುತ್ತಿಗೆ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಹೀಗಾಗಿ, ಪ್ರಕರಣ ಇತ್ಯರ್ಥವಾಗುವವರೆಗೂ ಕಾಮಗಾರಿಗೆ ಚಾಲನೆ ನೀಡಲು ಬರುವುದಿಲ್ಲ. ಉಡುತೊರೆ ಜಲಾಶಯದ ವ್ಯಾಪ್ತಿ 43 ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಭೆಗೆ ವಿವರಿಸಿದರು.ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ಸೋಮಶೇಖರಪ್ಪ ಮಾತನಾಡಿ, `ಬಿಡುಗಡೆಯಾಗಿರುವ ಅನುದಾನ ಬಳಸಿಕೊಂಡು ಕಬಿನಿ ನಾಲೆ ವ್ಯಾಪ್ತಿ ಅಗತ್ಯವಿರುವೆಡೆ ಲೈನಿಂಗ್ ಮಾಡಬೇಕು. ಆಗಮಾತ್ರ ನೀರು ಸರಾಗವಾಗಿ ಹರಿಯುಲಿದೆ. ಜತೆಗೆ, ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಪೂರೈಸಲು ಕ್ರಮವಹಿಸಬೇಕು~ ಎಂದು ಸೂಚಿಸಿದರು.`ಅರ್ಹರಿಗೆ ಪಡಿತರ ಚೀಟಿ ವಿತರಿಸಿ~

`ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ಗ್ರಾಮೀಣರಿಗೆ ಯಾವುದೇ ಲೋಪವಾಗದಂತೆ ಪಡಿತರ ಚೀಟಿ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲವಾದರೆ ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು~ ಎಂದು ಸಿಇಒ ಸೋಮಶೇಖರಪ್ಪ ಎಚ್ಚರಿಕೆ ನೀಡಿದರು.ಸಭೆಯಲ್ಲಿ ಮಾತನಾಡಿದ ಅವರು, ತಾತ್ಕಾಲಿಕ ಪಡಿತರ ಚೀಟಿದಾರರು ಕಾಯಂ ಪಡಿತರ ಚೀಟಿ ಪಡೆಯಲು ಈ ತಿಂಗಳ 31ಕ್ಕೆ ಅಂತಿಮ ಗಡುವು ನಿಗದಿಯಾಗಿದೆ. ಜಿಲ್ಲೆಯಲ್ಲಿ 40,439 ಮಂದಿ ತಾತ್ಕಾಲಿಕ ಪಡಿತರ ಚೀಟಿ ಪಡೆದಿದ್ದಾರೆ. 31,685 ಮಂದಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿ ಸಂಬಂಧ ಪ್ರಕ್ರಿಯೆಯು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು ಎಂದರು.ಪಡಿತರ ಚೀಟಿ ವಿತರಣೆ, ಅರ್ಜಿ ಪ್ರಕ್ರಿಯೆಯ ನಿರ್ವಹಣೆ ಬಗ್ಗೆ ಜಿಲ್ಲೆಗೆ ಈಚೆಗೆ ಭೇಟಿ ನೀಡಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರು ಪರಿಶೀಲಿಸಿ ಅಗತ್ಯ ಸೂಚನೆ ನೀಡಿದ್ದಾರೆ. ಯಾವುದೇ, ಅರ್ಹ ಫಲಾನುಭವಿ ಅರ್ಜಿದಾರರು ಪಡಿತರ ಚೀಟಿಯಿಂದ ವಂಚಿತರಾಗದಂತೆ ಎಚ್ಚರಿಕೆವಹಿಸಬೇಕು. ಈ ನಿಟ್ಟಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ ಎಂದರು.ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷೆ ಆರ್. ಅಂಬಿಕಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.ಅಕ್ರಮ ನಲ್ಲಿ ಸಂಪರ್ಕ ತೆರವಿಗೆ ಸೂಚನೆ

ಚಾಮರಾಜನಗರ:
`ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿ ಕಿರುನೀರು ಸರಬರಾಜು ಯೋಜನೆಯಡಿ ತೊಂಬೆಗಳಿಗೆ ನೀರು ಪೂರೈಸುವ ಮುಖ್ಯ ಪೈಪ್‌ಲೈನ್‌ನಿಂದಲೇ ಅಕ್ರಮವಾಗಿ ನಲ್ಲಿಗಳಿಗೆ ಸಂಪರ್ಕ ಪಡೆದಿರುವ ಪ್ರಕರಣ ಹೆಚ್ಚಿವೆ. ಇದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಕೂಡಲೇ, ತೆರವಿಗೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಕ್ರಮಕೈಗೊಳ್ಳಬೇಕು~ ಎಂದು ಸಿಇಒ ಸೋಮಶೇಖರಪ್ಪ ಸೂಚಿಸಿದರು.ಮುಖ್ಯ ಪೈಪ್‌ಲೈನ್‌ನಿಂದ ನಲ್ಲಿ ಸಂಪರ್ಕ ಪಡೆಯುವುದು ಅಕ್ಷಮ್ಯ. ತಾವು ಹನೂರು ಭಾಗದಲ್ಲಿ ಭೇಟಿ ನೀಡಿದ ವೇಳೆ ಈ ಕುರಿತು ಗಮನಿಸಿದ್ದೇನೆ. ಕಾರ್ಯದರ್ಶಿಯಿಂದ ತೆರವು ಕಾರ್ಯಾಚರಣೆ ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿ ನಿಗದಿತ ದಿನದಂದು ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಬೇಕು. ಸ್ಥಳೀಯ ಆಡಳಿತದ ಸದಸ್ಯರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಸಹಕಾರದೊಂದಿಗೆ ಒಂದು ವಾರದೊಳಗೆ ನಲ್ಲಿ ಸಂಪರ್ಕ ತೆರವುಗೊಳಿಸಬೇಕು ಎಂದು ತಾಕೀತು ಮಾಡಿದರು.`ಮೊಬೈಲ್ ಟವರ್‌ಗೆ ಶುಲ್ಕ ವಿಧಿಸಿ~

ಗ್ರಾಮ ಪಂಚಾಯಿತಿ ವ್ಯಾಪ್ತಿ ಖಾಸಗಿ ಕಂಪೆನಿಗಳು ಅಳವಡಿಸುತ್ತಿರುವ ಮೊಬೈಲ್ ಟವರ್‌ಗಳಿಗೆ ನಿಗದಿತ ಶುಲ್ಕ ವಿಧಿಸಿ ವಸೂಲಿ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.ಒಂದು ಟವರ್‌ಗೆ ತಿಂಗಳಿಗೆ 5 ಸಾವಿರ ರೂ ಶುಲ್ಕ ನಿಗದಿಪಡಿಸಲಾಗುತ್ತಿತ್ತು. ಇದನ್ನು ಪ್ರಶ್ನಿಸಿ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಜತೆಗೆ, ನಿಯಮಿತವಾಗಿ ಶುಲ್ಕ ಪಾವತಿಸುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಸಭೆಯ ಗಮನ ಸೆಳೆದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ, `ಟವರ್‌ವೊಂದಕ್ಕೆ 20 ಸಾವಿರ ರೂ ಶುಲ್ಕ ನಿಗದಿಪಡಿಸುವಂತೆ ಹೈಕೋರ್ಟ್ ಸೂಚಿಸಿದೆ. ನ್ಯಾಯಾಲಯದ ಸೂಚನೆ ಅನ್ವಯವೇ ಗ್ರಾಮ ಪಂಚಾಯಿತಿ ಆಡಳಿತಗಳು ಶುಲ್ಕ ವಸೂಲಿ ಮಾಡಬೇಕು~ ಎಂದರು.ಸಿಇಒ ಸೋಮಶೇಖರಪ್ಪ ಮಾತನಾಡಿ, `ಯಾವುದೇ, ಕಂಪೆನಿ ಮೊಬೈಲ್ ಟವರ್ ಸ್ಥಾಪಿಸುವ ಮೊದಲು ಗ್ರಾಮ ಪಂಚಾಯಿತಿಯಿಂದ ನಿರಾಪೇಕ್ಷಣಾ ಪತ್ರ ಪಡೆಯಬೇಕು. ನಿಗದಿತ ಶುಲ್ಕ ಪಾವತಿಸುವ ಕಂಪೆನಿಗಳಿಗೆ ಅನುಮತಿ ನೀಡಬೇಕು. ಇಲ್ಲವಾದರೆ ಕಡ್ಡಾಯವಾಗಿ ಅನುಮತಿ ನಿರಾಕರಿಸಿ ಟವರ್ ತೆರವುಗೊಳಿಸಬೇಕು~ ಎಂದು ಸೂಚಿಸಿದರು.ಕರ ವಸೂಲಿಗೆ ನಿರ್ಲಕ್ಷ್ಯ ಸಲ್ಲ

`ಈ ತಿಂಗಳಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಕರ ವಸೂಲಿಯಡಿ ಶೇ. 20ರಷ್ಟು ಗುರಿ ಸಾಧಿಸಬೇಕು. ಜತೆಗೆ, ಬಾಕಿ ಇರುವ ಕರ ವಸೂಲಿಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಕ್ರಮಕೈಗೊಳ್ಳಬೇಕು~ ಎಂದು ಅಧ್ಯಕ್ಷೆ ಕೆ. ರಾಜೇಶ್ವರಿ ಸೂಚಿಸಿದರು.ಸಿಇಒ ಸೋಮಶೇಖರಪ್ಪ ಮಾತನಾಡಿ, `ನೀರು, ಮನೆ ಕಂದಾಯ ವಸೂಲಿಗೆ ನಿರ್ಲಕ್ಷ್ಯವಹಿಸಬಾರದು. ವಸೂಲಿಯಾಗಿರುವ ಹಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ. 25ರಷ್ಟು ಅನುದಾನ ಮೀಸಲಿಡಬೇಕು. ಆ ಅನುದಾನದ ಸದ್ವಿನಿಯೋಗಕ್ಕೂ ಒತ್ತು ನೀಡಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ನಿಗದಿಪಡಿಸಿರುವ ತೆರಿಗೆ, ಮುಂಗಡ ಪತ್ರದ ವಿವರ ಹಾಗೂ ಪರಿಶಿಷ್ಟರಿಗೆ ಮೀಸಲಿಟ್ಟಿರುವ ಅನುದಾನದ ಬಗ್ಗೆ ವರದಿ ಸಲ್ಲಿಸಬೇಕು~ ಎಂದು ಸೂಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.